ಕಣಿವೆ , ಫೆ. ೯: ಕುಶಾಲನಗರ ರೋಟರಿ ಸಂಸ್ಥೆಯ ವತಿಯಿಂದ ಹಮ್ಮಿಕೊಂಡಿರುವ ರೋಟರಿ ಸುವರ್ಣ ಸಂಭ್ರಮೋತ್ಸವಕ್ಕೆ ಚಾಲನೆ ನೀಡಲಾಯಿತು.

ಕುಶಾಲನಗರ ಪಟ್ಟಣವನ್ನು ಕ್ಲೀನ್ ಸಿಟಿಯಾಗಿಸುವ ಮಹತ್ತರ ಉದ್ದೇಶದೊಂದಿಗೆ ಹಮ್ಮಿಕೊಂಡಿರುವ ಸ್ವಚ್ಛ ಕುಶಾಲನಗರ ನಮ್ಮೆಲ್ಲರ ಹೊಣೆ. ನಗರದ ಪರಿಸರ ರಕ್ಷಣೆಗೆ ಎಲ್ಲರೂ ಪಣತೊಡಿ. ಇಲ್ಲಿ ಜೀವ ನದಿ ಕಾವೇರಿ ಹರಿದಿಹಳು. ಕೈ ಮುಗಿದು ನಗರದೊಳಗೆ ಪ್ರವೇಶಿಸಿ. ಹಸಿ ಕಸ - ಒಣ ಕಸ ಬೇರ್ಪಡಿಸಿ ವಿಂಗಡಿಸಿ. ಪುರಸಭೆ ಹಾಗೂ ರೋಟರಿ ಸಂಸ್ಥೆಯ ಸ್ವಚ್ಛತಾ ಆಂದೋಲನದೊAದಿಗೆ ಸಾರ್ವಜನಿಕರು ಕೈಜೋಡಿಸಿ ಎಂಬಿತ್ಯಾದಿ ಜನ ಜಾಗೃತಿಯ ಬರಹಗಳೊಂದಿಗೆ ಪ್ಲಾಸ್ಟಿಕ್ ತ್ಯಾಜ್ಯ ಹಾಗೂ ಖಾಲಿ ಬಾಟಲಿಗಳನ್ನು ಸಂಗ್ರಹಿಸುವ ಕಸದ ತೊಟ್ಟಿಯನ್ನು ರೋಟರಿ ರಾಜ್ಯಪಾಲ ಪಿ.ಕೆ. ರಾಮಕೃಷ್ಣ ಲೋಕಾರ್ಪಣೆ ಮಾಡಿದರು. ಬಳಿಕ ಮಾತನಾಡಿದ ಅವರು, ಕೊಡಗು ಭುವಿಯ ಮೇಲಿನ ಸ್ವರ್ಗದಂತಿರುವ ಪ್ರದೇಶ. ಇಲ್ಲಿಗೆ ದೂರದ ಪ್ರದೇಶಗಳಿಂದ ನಿತ್ಯವೂ ಆಗಮಿಸುವ ಪ್ರವಾಸಿಗರು ಕೊಡಗಿನ ಪ್ರವೇಶ ದ್ವಾರದಲ್ಲಿ ಕೈಮುಗಿದು ಜಿಲ್ಲೆಯೊಳಗೆ ಪದಾರ್ಪಣೆ ಮಾಡಬೇಕು. ಏಕೆಂದರೆ, ಕೊಡಗಿನ ಸುಂದರ ಪ್ರಕೃತಿ- ಪರಿಸರದ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯವಾಗಬೇಕಿದೆ ಎಂದರು.

ಪುರಸಭೆ ಮುಖ್ಯಾಧಿಕಾರಿ ಗಿರೀಶ್ ಕುಮಾರ್ ಮಾತನಾಡಿ, ನಗರದ ಪರಿಸರಕ್ಕೆ ಧಕ್ಕೆಯಾಗದಂತೆ ಸ್ವಚ್ಛ ಸುಂದರ ನಗರವಾಗಿಸಲು ಪಣ ತೊಟ್ಟಿರುವ ರೋಟರಿಯೊಂದಿಗೆ ಪುರಸಭೆ ಸದಾ ಇರುತ್ತದೆ ಎಂದರು.

ಕುಶಾಲನಗರ ರೋಟರಿ ಅಧ್ಯಕ್ಷ ಮನು ಪೆಮ್ಮಯ್ಯ ಮಾತನಾಡಿ, ರೋಟರಿ ಸಂಸ್ಥೆಗೆ ೫೦ ವರ್ಷ ತುಂಬುತ್ತಿರುವ ಹಿನ್ನೆಲೆ ಆರಂಭಿಕವಾಗಿ ಇಂತಹ ಸ್ವಚ್ಛತಾ ಯೋಜನೆಗೆ ಮುಂದಾಗಿರುವುದಾಗಿ ತಿಳಿಸಿದರಲ್ಲದೆ ಬ್ರಿಟಿಷರ ಕಾಲದ ಹಳೆಯ ಸೇತುವೆಯನ್ನು ರೋಟರಿಯಿಂದ ಆಕರ್ಷಕ ಉದ್ಯಾನವನ್ನಾಗಿ ಅಭಿವೃದ್ಧಿಪಡಿಸಲು ಪುರಸಭೆ ಅವಕಾಶ ಕಲ್ಪಿಸಬೇಕೆಂದು ಕೋರಿದರು.

ರೋಟರಿ ಉಪರಾಜ್ಯಪಾಲ ಉಲ್ಲಾಸ್ ಕೃಷ್ಣ, ರೋಟರಿ ಸುವರ್ಣ ಸಂಭ್ರಮೋತ್ಸವದ ಛೇರ್ಮನ್ ಎಸ್.ಕೆ. ಸತೀಶ್, ಪದಾಧಿಕಾರಿಗಳಾದ ಡಾ. ಹರಿ ಎ. ಶೆಟ್ಟಿ, ಆರತಿ ಶೆಟ್ಟಿ, ಎಸ್.ಎನ್. ರಾಜೇಂದ್ರ, ಶಿಬು ಥಾಮಸ್, ಕ್ರಿಜ್ವಲ್ ಕೋಟ್ಸ್, ರೋಟರಿ ಕಾರ್ಯದರ್ಶಿ ಮಂಜುನಾಥ್, ಪ್ರಿನ್ಸ್ ಇದ್ದರು.