ಗುಡ್ಡೆಹೊಸೂರು, ಫೆ. ೯: ಶ್ರೀ ಕ್ಷೇತ್ರ ಧರ್ಮಸ್ಥಳದ ವತಿಯಿಂದ ನಿರ್ಗತಿಕರ ಮಾಸಾಶನ ಯೋಜನೆಯಡಿ ‘ವಾತ್ಸಲ್ಯ ಕಿಟ್’ ವಿತರಣೆ ಮಾಡಲಾಯಿತು. ಇಲ್ಲಿನ ದೊಡ್ಡಬೆಟ್ಟಗೇರಿ ಗ್ರಾಮದ ವಿಶೇಷಚೇತನರಾದ ದೃಷ್ಠಿ ದೋಷವಿರುವ ಜಯಮ್ಮ ಅವರಿಗೆ ಅವರ ಬೇಡಿಕೆಗೆ ತಕ್ಕಂತೆ ಕಿಟ್ ವಿತರಿಸಲಾಯಿತು. ಅದರ ಜೊತೆಯಲ್ಲಿ ಪ್ರತಿ ತಿಂಗಳು ರೂ.೧,೦೦೦ ಹಣ ಜಯಮ್ಮ ಅವರ ಬ್ಯಾಂಕ್ ಖಾತೆಗೆ ಜಮಾ ಆಗಲಿದೆ. ಈ ಯೋಜನೆಯ ವತಿಯಿಂದ ವಿವಿಧ ಭಾಗಗಳಲ್ಲಿ ಫಲಾನುಭವಿಗಳನ್ನು ಗುರುತಿಸಿ ಕಿಟ್ ಮತ್ತು ತಿಂಗಳ ವೇತನ ನೀಡಲಾಗುತ್ತಿದೆ ಎಂದು ಕಿಟ್ ವಿತರಿಸಿದ ಬಳಿಕ ವಲಯ ಮೇಲ್ವಿಚಾರಕ ಯತೀಶ್ ಮಾಹಿತಿ ನೀಡಿದರು. ಕಿಟ್‌ಅನ್ನು ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸೌಮ್ಯ ವಿತರಿಸಿದರು. ಈ ಸಂದರ್ಭ ವಾರ್ಡ್ ಸದಸ್ಯ ಕೆ.ಕೆ. ಚಿದಾನಂದ ಮತ್ತು ಪ್ರಗತಿಪರ ರೈತರಾದ ಬಿ.ಎಸ್. ಧನಪಾಲ್, ತಾಲೂಕು ಜ್ಞಾನ ವಿಕಾಸ ಸಮನ್ವಯ ಅಧಿಕಾರಿ ಕವನ, ಈ ವಿಭಾಗದ ಸೇವಾ ಪ್ರತಿನಿಧಿ ರೋಹಿಣಿ, ಸ್ಥಳೀಯರಾದ ಕುಡೆಕಲ್ ಗಣೇಶ್ ಮತ್ತು ಸಂಘದ ಸದಸ್ಯರುಗಳು ಹಾಜರಿದ್ದರು. ರೋಹಿಣಿ ಸ್ವಾಗತಿಸಿದರು. ಗಣೇಶ್ ವಂದಿಸಿದರು.