ನಾಪೋಕ್ಲು, ಫೆ .೯: ಹಾಕತ್ತೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಹೊಸಕೇರಿ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಪಂಚಾಯಿತಿಯಲ್ಲಿನ ಆಡಳಿತ ಹಾಗೂ ಸೌಲಭ್ಯ, ಕೆಲಸ ಕಾರ್ಯಗಳ ಬಗ್ಗೆ ಸಮಗ್ರ ಮಾಹಿತಿಯನ್ನು ಪಡೆದುಕೊಂಡರು.

ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ಕವಿತ ಬಿ.ಬಿ, ಉಪಾಧ್ಯಕ್ಷ ಚಿದಂಬರ ಎಂ.ಬಿ.ಹಾಗೂ ಸದಸ್ಯರೊಂದಿಗೆ ವಿದ್ಯಾರ್ಥಿಗಳ ಸಭೆ ನಡೆಯಿತು. ಸಭೆಯಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಅಬ್ದುಲ್ಲಾ ಅವರು, ಗ್ರಾಮ ಪಂಚಾಯಿತಿಯ ಕೆಲಸ ಕಾರ್ಯಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿಯನ್ನು ನೀಡಿದರು. ಗ್ರಾಮ ಪಂಚಾಯಿತಿಯ ಅಧಿಕಾರ, ಗ್ರಾಮ ಅಭಿವೃದ್ಧಿಯ ಮೂಲಕ ಜನರಿಗೆ ಹೇಗೆ ಸೇವೆ ಸಲ್ಲಿಸುತ್ತದೆ ಎಂಬುದನ್ನು ತಿಳಿಸಿದರು. ವಿದ್ಯಾರ್ಥಿಗಳು ಕ್ಷೇತ್ರ ಭೇಟಿಯಿಂದ ನೂತನ ಅನುಭವವನ್ನು ಪಡೆದುಕೊಂಡರು.

ಈ ಸಂದರ್ಭ ಮುಖ್ಯ ಶಿಕ್ಷಕ ಕುಮಾರಸ್ವಾಮಿ ಟಿ.ಬಿ, ಅತಿಥಿ ಶಿಕ್ಷಕಿ ಸರಸ್ವತಿ, ಪಂಚಾಯತಿ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.