ಸೋಮವಾರಪೇಟೆ, ಫೆ. ೯: ಜಿಲ್ಲಾ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್, ಐಗೂರು ಕಸಾಪ ಘಟಕದ ಆಶ್ರಯದಲ್ಲಿ, ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಐಗೂರಿನ ಕಾಜೂರು ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದ ಕೊಡಗಿನ ಗೌರಮ್ಮ ಮುಖ್ಯವೇದಿಕೆಯಲ್ಲಿ ನಡೆದ ಸೋಮವಾರಪೇಟೆ ತಾಲೂಕು ೯ನೇ ಕನ್ನಡ ಸಾಹಿತ್ಯ ಸಮ್ಮೇಳನವು ಕನ್ನಡ ಭಾಷೆ, ಸಂಸ್ಕೃತಿ, ನೆಲ-ಜಲದ ಉಳಿವಿನ ಚಿಂತನೆಗೆ ಕಾರಣೀಭೂತವಾಯಿತು.

೯ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷೆಯಾಗಿದ್ದ ಹಿರಿಯ ಸಾಹಿತಿ ಜಲಜಾ ಶೇಖರ್ ಅವರು, ೮ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷೆ ಶ.ಗ. ನಯನ ತಾರಾ ಅವರಿಂದ ಕನ್ನಡ ಧ್ವಜವನ್ನು ಪಡೆಯುವ ಮೂಲಕ ಅಧಿಕಾರ ವಹಿಸಿಕೊಂಡು ಮಾತನಾಡಿ, ಕನ್ನಡವೆಂದರೆ ಕೇವಲ ವರ್ಣಮಾಲೆಯಲ್ಲ. ನೆಲ, ಜಲ, ಸಂಸ್ಕೃತಿ, ಸಂಗೀತ, ಸಾಹಿತ್ಯವನ್ನು ಒಳಗೊಂಡಿರುವ ಕುಟುಂಬ ಎಂದರು.

ಹಿರಿಯರು ಸಾಹಿತ್ಯದ ಕೃಷಿಯಲ್ಲಿ ಹೆಚ್ಚು ತೊಡಗಿಸಿಕೊಂಡಿದ್ದರು. ಕೊಡಗಿನಲ್ಲಿ ಸಾಹಿತ್ಯದ ದೀವಿಗೆ ಹಲವರು ಹಚ್ಚಿದ್ದಾರೆ. ಕನ್ನಡ ಸಾಹಿತ್ಯಕ್ಕೆ ಮಹಿಳೆಯರ ಕೊಡುಗೆ ಅಪಾರವಾಗಿದೆ. ಬಂಡಾಯ ಕವಯತ್ರಿಯಾಗಿ ಅಕ್ಕಮಹಾದೇವಿ ಕನ್ನಡವನ್ನು ಶ್ರೀಮಂತಗೊಳಿಸಿದ್ದಾರೆ. ಕೊಡಗಿನ ಗೌರಮ್ಮ ಅವರು ಕೊಡಗಿನ ಮಹಿಳೆಯರ ಪರವಾಗಿ ದನಿಯೆತ್ತಿದ ದಿಟ್ಟ ಸಾಹಿತಿ. ಕೊಡಗಿನ ಸಾಹಿತ್ಯ ಕ್ಷೇತ್ರಕ್ಕೆ ಗಟ್ಟಿ ಬುನಾದಿ ಹಾಕಿದರು ಎಂದು ಸ್ಮರಿಸಿದ ಜಲಜಾ ಶೇಖರ್ ಅವರು, ಇಂದು ಸಾಕಷ್ಟು ಮಹಿಳೆಯರು ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದರು.

ಜರ್ಮನಿಯವರಾದರೂ ಬೃಹತ್ ಶಬ್ದಕೋಶ ರಚಿಸಿದ ಕಿಟಲ್ ಅವರ ಕನ್ನಡ ಭಾಷಾ ಪ್ರೇಮ ಮೆಚ್ಚಬೇಕು. ಕನ್ನಡಕ್ಕೆ ಕನ್ನಡಿ ಹಿಡಿದು ದುಡಿದವರು ಕಿಟಲ್ ಎಂದ ಅವರು, ಜಾಗತೀಕರಣ ಪ್ರಭಾವದಿಂದ ಇಂಗ್ಲೀಷ್‌ನ ಅಧಿಪಥ್ಯ ಹೆಚ್ಚಿದೆ. ಆದರೂ ಕನ್ನಡದ ಉಳಿವಿಗೆ ಪತ್ರಕರ್ತರು, ಪತ್ರಿಕೆಗಳು, ಚಲನಚಿತ್ರಗಳು ಹೆಚ್ಚು ಶ್ರಮಿಸುತ್ತಿವೆ. ಗಣಕ ಹಾಗೂ ಸಂಚಾರಿ ಮಾಧ್ಯಮದಲ್ಲಿ ಕನ್ನಡಕ್ಕೆ ಪ್ರಾಮುಖ್ಯತೆ ನೀಡಬೇಕು ಎಂದು ಅಭಿಪ್ರಾಯಿಸಿದರು.

ಪ್ರಾಥಮಿಕ ಹಂತದಲ್ಲಿ ಕನ್ನಡ ಕಲಿಕೆ ಕಡ್ಡಾಯವಾಗಬೇಕು. ನೆಲ, ಜಲ, ಭಾಷೆ, ಸಾಹಿತ್ಯಕ್ಕೆ ಜಾತಿ- ಧರ್ಮದ ಸೋಂಕು ತಗುಲಬಾರದು. ಭಾಷೆಯ ಬಳಕೆಯಿಂದ ಮಾತ್ರ ಭಾಷೆಯ ಉಳಿವು ಸಾಧ್ಯ. ಕನ್ನಡಿಗರಾದ ನಾವು ಭಾಷೆಯನ್ನು ಬಳಸಿ ಬೆಳೆಸಬೇಕು. ಮಕ್ಕಳಿಗೆ ಭಾಷಾಜ್ಞಾನ ಮತ್ತು ಸಂಸ್ಕೃತಿ ಬಗ್ಗೆ ಅರಿವು ಮೂಡಿಸಬೇಕು. ಸಂವೇದನಾಶೀಲತೆ, ಅನುಭೂತಿ, ಅನುಕಂಪ ಮೂಡಿಸಬೇಕು. ಎಲ್ಲಾ ಭಾಷೆ ಕಲಿಯೋಣ; ಕನ್ನಡಕ್ಕೆ ಆದ್ಯತೆ ನೀಡೋಣ. ಕರ್ನಾಟಕದ ಏಕತೆ ಕಾಪಾಡುವ ಮೂಲಕ ಕನ್ನಡದ ಒಗ್ಗಟ್ಟು, ಹಿರಿಮೆ ಎತ್ತಿಹಿಡಿಯಲು ಇಂತಹ ಸಮ್ಮೇಳನ ಅಗತ್ಯ ಎಂದು ಪ್ರತಿಪಾದಿಸಿದರು.

ಭಾಷೆ ಅಳಿದರೆ ಸಂಸ್ಕೃತಿ ಅಳಿದಂತೆ: ಸಮ್ಮೇಳನದಲ್ಲಿ ಭಾಗಿಯಾಗಿ, ‘ಐಗೂರಿನ ಐಸಿರಿ’ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಶಾಸಕ ಡಾ. ಮಂತರ್ ಗೌಡ ಅವರು, ಭಾಷೆ ಅಳಿದರೆ ಸಂಸ್ಕೃತಿ ಅಳಿದಂತೆ, ಭಾಷೆಯಿಂದಾಗಿ ನಾವೆಲ್ಲರೂ ಒಂದಾಗಿದ್ದೇವೆ. ಇಂಗ್ಲೀಷ್ ಅನಿವಾರ್ಯವಾದರೂ ಮಾತೃಭಾಷೆಗೆ ಹೆಚ್ಚು ಆದ್ಯತೆ ನೀಡಬೇಕು ಎಂದರು.

ಕನ್ನಡ ಭಾಷೆಯ ಬಗ್ಗೆ ಹೆಚ್ಚು ಅಭಿಮಾನ ಹೊಂದಬೇಕು. ಭಾಷೆ, ಲಿಪಿ, ಸಾಹಿತ್ಯ, ಲೇಖಕರಿಗೆ ನಿರಂತರ ಪ್ರೋತ್ಸಾಹ ನೀಡಬೇಕು. ಕನ್ನಡ ನಾಡಿನ ಸಂಸ್ಕೃತಿ ಶ್ರೀಮಂತವಾಗಿದ್ದು, ಇದನ್ನು ಯುವ ಪೀಳಿಗೆಗೆ ತಿಳಿಸಬೇಕು. ಇತಿಹಾಸ ಮರೆಯಬಾರದು. ವಿದೇಶಕ್ಕೆ ತೆರಳುವ ಸಂದರ್ಭ ಕನ್ನಡಿಗರು ಸಿಕ್ಕಿದರೆ ಕನ್ನಡದಲ್ಲಿಯೇ ಮಾತನಾಡಬೇಕು. ಕನ್ನಡ ಧ್ವಜದ ಹಾರಾಟ ನಿರಂತರವಾಗಿರಬೇಕು. ಕನ್ನಡ ನಾಡು, ನುಡಿಗೆ ಸೇವೆ ಸಲ್ಲಿಸಿದವರನ್ನು ಸದಾ ಸ್ಮರಿಸಬೇಕು ಎಂದು ಕರೆ ನೀಡಿದರು.

ಸಮ್ಮೇಳನದ ಅಧಿವೇಶನದಲ್ಲಿ ಕೈಗೊಳ್ಳುವ ನಿರ್ಣಯಗಳನ್ನು ಈಡೇರಿಸಲು ಸರ್ವ ಪ್ರಯತ್ನ ನಡೆಸುವುದಾಗಿ ಭರವಸೆ ನೀಡಿದ ಅವರು, ಮಲ್ಲಳ್ಳಿ ಜಲಪಾತ, ಮಕ್ಕಳಗುಡಿ ಬೆಟ್ಟದ ಅಭಿವೃದ್ಧಿ, ರಾಜ್ಯ ಹೆದ್ದಾರಿಯಿಂದ ರಾಷ್ಟಿçÃಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿಸುವುದು, ಗಡಿ ಗ್ರಾಮ ಪಂಚಾಯಿತಿಗಳಾದ ೪ಏಳನೇ ಪುಟಕ್ಕೆ

(ಮೊದಲ ಪುಟದಿಂದ) ಗರ್ವಾಲೆ-ಬೆಟ್ಟದಳ್ಳಿ ಅಭಿವೃದ್ಧಿ, ಮಾದಾಪುರದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜು ಸ್ಥಾಪನೆಯ ಬಗ್ಗೆ ಪ್ರಯತ್ನ ನಡೆಸಲಾಗುವುದು. ಬಡ ಕೂಲಿ ಕಾರ್ಮಿಕರು, ತೋಟದ ಲೈನ್‌ಮನೆಯಲ್ಲಿ ವಾಸವಿರುವ ಮಂದಿಗೆ ವಸತಿ ಕಲ್ಪಿಸಲು ಶ್ರಮಿಸಲಾಗುವುದು. ಸಮ್ಮೇಳನದಲ್ಲಿ ಉಳಿಕೆಯಾದ ಹಣದೊಂದಿಗೆ, ವೈಯುಕ್ತಿಕ ನೆರವು ನೀಡಿ ಇತ್ತೀಚೆಗಷ್ಟೇ ಅಗ್ನಿ ಅವಘಡದಿಂದ ಮನೆ ಕಳೆದುಕೊಂಡ ವೃದ್ಧೆ ಪುಷ್ಪ ಅವರಿಗೆ ಮನೆ ನಿರ್ಮಿಸಲು ಕೈಜೋಡಿಸಲಾಗುವುದು ಎಂದರು.

ನAಬರ್ ಒನ್ ಕನ್ನಡಿಗರಾಗಬೇಕು: ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ಮೈಸೂರಿನ ಸಾಹಿತಿ ಡಾ. ಜಯಪ್ಪ ಹೊನ್ನಾಳಿ ಮಾತನಾಡಿ, ಕನ್ನಡವನ್ನು ಉಳಿಸಿ ಬೆಳೆಸಿ ಎಂದು ಕೇಳಿಕೊಳ್ಳುವ ಸನ್ನಿವೇಶ ಬಂದಿರುವುದು ವಿಷಾದ. ಜಗತ್ತಿನ ಅತ್ಯಂತ ಶ್ರೀಮಂತ ಭಾಷೆಗಳಲ್ಲಿ ಕನ್ನಡ ಅತಿಯಾದ ಶ್ರೀಮಂತ ಭಾಷೆ. ಸ್ವಂತ ಲಿಪಿ, ಸಂಖ್ಯೆಗಳನ್ನು ಹೊಂದಿದೆ. ೮ ಜ್ಞಾನಪೀಠ ಪ್ರಶಸ್ತಿ ಪಡೆದಿದೆ. ಶಾಸ್ತಿçÃಯ ಸ್ಥಾನಮಾನ ಹೊಂದಿದೆ. ನಾವೆಲ್ಲರೂ ಸಾತ್ವಿಕವಾಗಿ ಭಾಷಾ ಗರ್ವ ಪಡಬೇಕು ಎಂದರು.

ಏನು ಮಾತಾಡುತ್ತೇವೋ ಅದನ್ನೇ ಬರೆಯುತ್ತೇವೆ. ಏನು ಬರೆಯುತ್ತೇವೋ ಅದನ್ನೇ ಓದುತ್ತೇವೆ. ನಮ್ಮ ಪೂರ್ವಿಕರು ಕಟ್ಟಿದ ಅತ್ಯಂತ ವೈಜ್ಞಾನಿಕವಾದ ಭಾಷೆ ಕನ್ನಡ. ನಾವುಗಳು ನವೆಂಬರ್ ಕನ್ನಡಿಗರಾಗುವ ಬದಲಿಗೆ ನಂಬರ್ ಒನ್ ಕನ್ನಡಿಗರಾಗಬೇಕು. ಕನ್ನಡ ಕೇವಲ ಭಾಷೆಯಲ್ಲ; ಜನಾಂಗದ ಅಸ್ಮಿತೆ. ಮಕ್ಕಳಿಗೆ ಕನ್ನಡ ಸಂಸ್ಕೃತಿ, ಭಾಷೆಯ ಬಗ್ಗೆ ಅರಿವು ಮೂಡಿಸಬೇಕು ಎಂದು ಅಭಿಪ್ರಾಯಿಸಿದರು. ಸರೋಜಿನಿ ಮಹಿಷಿ ವರದಿ ಜಾರಿಯಾಗಬೇಕು ಎಂದು ಒತ್ತಾಯಿಸಿದ ಅವರು, ಸರ್ಕಾರಿ ಶಾಲೆ ಉಳಿಯಬೇಕು. ಖಾಸಗಿ ಹಾಗೂ ಸರ್ಕಾರಿ ಉದ್ಯೋಗದಲ್ಲಿ ಕನ್ನಡಿಗರಿಗೆ ಶೇ.೮೦ ಮೀಸಲಾತಿ ನೀಡಬೇಕು. ಕನ್ನಡದ ಮೇಲೆ ಇತರ ಭಾಷೆಗಳ ಹೇರಿಕೆ ನಿಲ್ಲಬೇಕು. ಭಾಷಾ ಪ್ರಾಧಿಕಾರಕ್ಕೆ ವಿಶೇಷ ಪ್ರಾತಿನಿಧ್ಯ;ಆರ್ಥಿಕ ಸವಲತ್ತು ಒದಗಿಸಬೇಕು ಎಂದು ಆಗ್ರಹಿಸಿದರು.

ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಮಾಜೀ ಸಚಿವ ಬಿ.ಎ. ಜೀವಿಜಯ, ಕನ್ನಡದ ಭಾಷಾ ಸಾಹಿತ್ಯ ಪ್ರಮುಖವಾಗಿ ೧೦, ೧೨, ೧೫, ೧೯-೨೦ನೇ ಶತಮಾನದಲ್ಲಿ ಹೆಚ್ಚು ಪ್ರವರ್ಧಮಾನ ಕಂಡಿತು. ಆದಿಕವಿ ಪಂಪ ಕನ್ನಡದ ಭವ್ಯತೆಯನ್ನು ಹೊರತಂದರು. ನಂತರದಲ್ಲಿ ರನ್ನ, ಗದುಗಿನ ನಾರಾಯಣಪ್ಪ, ಕುಮಾರವ್ಯಾಸ, ಬಸವೇಶ್ವರ, ರಾಘವಾಂಕ, ಕುವೆಂಪು ಸೇರಿದಂತೆ ಸಾವಿರಾರು ಮಂದಿ ಕನ್ನಡ ನಾಡು ನುಡಿಯ ಜಾಗೃತಿಗೆ ಶ್ರಮಿಸಿದರು ಎಂದು ಸ್ಮರಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕಸಾಪ ಜಿಲ್ಲಾಧ್ಯಕ್ಷ ಎಂ.ಪಿ. ಕೇಶವಕಾಮತ್, ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಜಿಲ್ಲೆಯಾದ್ಯಂತ ಕನ್ನಡ ಭಾಷೆ, ಸಾಹಿತ್ಯಕ್ಕೆ ಸಂಬAಧಿಸಿದAತೆ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬರಲಾಗುತ್ತಿದೆ. ಕನ್ನಡ ಸಾಹಿತ್ಯದ ಬೆಳವಣಿಗೆ, ಸಂವಾದ, ದತ್ತಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ ಎಂದರು.

ಕನ್ನಡಿಗರಲ್ಲಿ ಕನ್ನಡತನದ ಪ್ರಜ್ಞೆ ಸದಾ ಜಾಗೃತವಿರಬೇಕು. ಕನ್ನಡ ನಾಡು-ನುಡಿ, ಏಕೀಕರಣಕ್ಕೆ ಪೂರಕ ವಾತಾವರಣ ನಿರ್ಮಿಸಲು ಇಂತಹ ಸಮ್ಮೇಳನಗಳಿಂದ ಸಾಧ್ಯ. ಕನ್ನಡ ಶಾಲೆಗಳ ಮೂಲ ಸೌಕರ್ಯ, ಗಡಿ ಸಮಸ್ಯೆ ಸೇರಿದಂತೆ ಕನ್ನಡ ನಾಡಿನ ಪ್ರಚಲಿತ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವುದಕ್ಕೆ ಇಂತಹ ವೇದಿಕೆಗಳು ಬಳಕೆಯಾಗಬೇಕು ಎಂದು ತಿಳಿಸಿದರು.

ಕನ್ನಡ ಸಾಹಿತ್ಯ ಪರಿಷತ್‌ನಿಂದ ಜಿಲ್ಲೆಯಲ್ಲಿ ೩೭ ದತ್ತಿ ಸ್ಥಾಪನೆ ಮಾಡಲಾಗಿದೆ. ಸೋಮವಾರಪೇಟೆ ತಾಲೂಕಿನಿಂದ ೪ ದತ್ತಿ ಸ್ಥಾಪಿಸಲಾಗಿದ್ದು, ಕನ್ನಡಪರ ಕಾರ್ಯಕ್ರಮಗಳು ನಡೆಯುತ್ತಿವೆ ಎಂದ ಅವರು, ಐಗೂರಿನ ಸಮ್ಮೇಳನ ಯಶಸ್ಸಿಗೆ ೧೧ ಸಮಿತಿಗಳ ಮೂಲಕ ೩೫೦ಕ್ಕೂ ಹೆಚ್ಚು ಮಂದಿ ಗ್ರಾಮಸ್ಥರು ಕೈಜೋಡಿಸಿರುವುದು ಶ್ಲಾಘನೀಯ ಎಂದರು.

ತಾಲೂಕು ತಹಶೀಲ್ದಾರ್ ಕೆ.ಕೆ. ಕೃಷ್ಣಮೂರ್ತಿ ಮಾತನಾಡಿ, ಕನ್ನಡ ನಾಡುನುಡಿ, ಗಡಿಯ ವಿಚಾರದಲ್ಲಿ ಪರಭಾಷೆ, ನೆರೆಯ ರಾಜ್ಯಗಳ ಧಾಳಿ ನಿರಂತರವಾಗಿದೆ. ನಮ್ಮ ಭಾಷೆ, ಗಡಿ ಉಳಿಸಿಕೊಳ್ಳಲು ನಾವುಗಳೇ ಹೋರಾಟ ಮಾಡಬೇಕಾದ ಸನ್ನಿವೇಶ ಇರುವುದು ವಿಷಾದ. ಕನ್ನಡದ ‘ಅವ್ವ’ನನ್ನು ಮೊದಲು ಹೆಚ್ಚು ಪ್ರೀತಿಸಿ; ನಂತರ ಇಂಗ್ಲೀಷ್‌ನ ‘ಮಮ್ಮಿ’ಯನ್ನು ಪ್ರೀತಿಸಿ ಎಂದು ಕರೆ ನೀಡಿದರು.

ಜಿ.ಪಂ. ಮಾಜೀ ಅಧ್ಯಕ್ಷೆ ಕೆ.ಪಿ. ಚಂದ್ರಕಲಾ ಮಾತನಾಡಿ, ಕೊಡಗಿನ ಬಗ್ಗೆ ಹೆಚ್ಚು ಲೇಖನಗಳು ಬರಬೇಕು. ಹಿರಿಯರೊಂದಿಗೆ ಕಿರಿಯ ಲೇಖಕರು ಬರವಣಿಗೆಯತ್ತ ಗಮನ ಹರಿಸಬೇಕು ಎಂದರು. ಕುಶಾಲನಗರ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ. ಶಶಿಧರ್ ಮಾತನಾಡಿ, ಮಹಿಳೆಯರು ಹೆಚ್ಚು ಸಂವೇದನಾಶೀಲರಾಗಿದ್ದು, ಸಾಹಿತ್ಯ ಕ್ಷೇತ್ರದಲ್ಲಿ ಹೆಚ್ಚು ತೊಡಗಿಸಿಕೊಂಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

೮ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷೆ ಶ.ಗ. ನಯನತಾರಾ ಅವರು ಆಶಯ ನುಡಿಯಾಡಿ, ಸಾಹಿತಿಗಳು, ಕವಿಗಳು, ಕನ್ನಡತನ ಇರುವ ಮನಸ್ಸುಗಳಿಂದ ಮಾತ್ರ ಕನ್ನಡ ಭಾಷೆ, ಸಾಹಿತ್ಯದ ಅಭಿವೃದ್ಧಿ ಸಾಧ್ಯ. ಸಮ್ಮೇಳನಗಳು ಏಕತೆಯ ಸಂಕೇತ. ಇದಕ್ಕೆ ಎಲ್ಲರನ್ನೂ ಒಂದುಗೂಡಿಸುವ ಶಕ್ತಿಯಿದೆ ಎಂದು ಅಭಿಪ್ರಾಯಿಸಿದರು.

ವೇದಿಕೆಯಲ್ಲಿ ಉದ್ಯಮಿಗಳಾದ ವಿನೋದ್ ಶಿವಪ್ಪ, ಕಸಾಪ ಗೌರವ ಕಾರ್ಯದರ್ಶಿ ರೇವತಿ ರಮೇಶ್, ಪ್ರಮುಖರಾದ ವಿಶ್ವನಾಥರಾಜೇ ಅರಸ್, ಮುನೀರ್ ಅಹ್ಮದ್, ಸಂಪತ್ ಕುಮಾರ್, ನಂಗಾರು ರಾಮಚಂದ್ರ, ಪೂವಯ್ಯ, ಕಡ್ಲೇರ ತುಳಸಿ ಮೋಹನ್, ಜವರಪ್ಪ, ನಾಗರಾಜ್, ಅಶೋಕ್, ಸೋಮವಾರಪೇಟೆ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಜಿ.ಎಂ. ಕಾಂತರಾಜ್, ಕಸಾಪ ಸಂಘಟನಾ ಕಾರ್ಯದರ್ಶಿ ದೇವರಾಜ್, ಪಿಡಿಓ ಪೂರ್ಣಕುಮಾರ್, ನೌಕರರ ಸಂಘದ ಅಧ್ಯಕ್ಷ ಪ್ರದೀಪ್, ಗ್ರಾ.ಪಂ. ಅಧ್ಯಕ್ಷ ಜಿ.ಕೆ. ವಿನೋದ್, ಐಗೂರು ಕಸಾಪ ಅಧ್ಯಕ್ಷ ನಂಗಾರು ಕೀರ್ತಿ ಪ್ರಸಾದ್, ಸೇರಿದಂತೆ ಇತರರು ಇದ್ದರು.

ಕಾಜೂರು-ಐಗೂರು ಶಾಲಾ ಶಿಕ್ಷಕರು ನಾಡಗೀತೆ ಹಾಡಿದರು. ಗಂಧರ್ವ ಕಲಾ ತಂಡದಿAದ ರೈತಗೀತೆ ಮೂಡಿಬಂದಿತು. ತಾಲೂಕು ಕಸಾಪ ಅಧ್ಯಕ್ಷ ಎಸ್.ಡಿ. ವಿಜೇತ್ ಸ್ವಾಗತಿಸಿ, ಗೌರವ ಕಾರ್ಯದರ್ಶಿ ಜ್ಯೋತಿ ಅರುಣ್ ನಿರೂಪಿಸಿದರು. ಕೆ.ಪಿ. ದಿನೇಶ್ ವಂದಿಸಿದರು. ಸಮ್ಮೇಳನದ ಸ್ಮರಣ ಸಂಚಿಕೆ ‘ಐಗೂರಿನ ಐಸಿರಿ’ಯನ್ನು ಗಣ್ಯರು ಬಿಡುಗಡೆಗೊಳಿಸಿದರು. - ವಿಜಯ್ ಹಾನಗಲ್