ಕೂಡಿಗೆ, ಫೆ. ೮: ಕೇಂದ್ರ ಮತ್ತು ರಾಜ್ಯ ಸರಕಾರದ ಯೋಜನೆಗಳೊಂದಿಗೆ ಸಹಕಾರಿಗಳು ಸಹಕಾರಿ ಕ್ಷೇತ್ರವನ್ನು ಮತ್ತಷ್ಟು ಅಭಿವೃದ್ಧಿಪಡಿಸುವತ್ತ ಚಿಂತನೆ ಹರಿಸಬೇಕಿದೆ ಎಂದು ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಲದ ನಿರ್ದೇಶಕ ಜಯಕರ ಶೆಟ್ಟಿ ಬಿ. ಇಂದ್ರಾಳಿ ಹೇಳಿದರು.
ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಲ ಬೆಂಗಳೂರು ಮತ್ತು ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಸಂಯುಕ್ತ ಆಶ್ರಯದಲ್ಲಿ ಮೈಸೂರು ವಿಭಾಗದ ನೌಕರರ ಪತ್ತಿನ ಸಹಕಾರ ಸಂಘಗಳ ಪದಾಧಿಕಾರಿಗಳು ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಕುಶಾಲನಗರದಲ್ಲಿ ನಡೆದ ರಾಜ್ಯಮಟ್ಟದ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಹಕಾರಿ ಕ್ಷೇತ್ರವನ್ನು ಆರ್ಥಿಕ ವ್ಯವಸ್ಥೆಗೆ ಮಾತ್ರ ಸೀಮಿತಗೊಳಿಸದೆ ಇರುವ ಅವಕಾಶಗಳನ್ನು ಸದ್ಬಳಕೆ ಮಾಡಿಕೊಂಡು ಕ್ಷೇತ್ರದ ಅಭಿವೃದ್ಧಿಗೆ ಕಾರಣೀಭೂತರಾಗಬೇಕು ಎಂದು ಹೇಳಿದರು.
ವಿಶೇಷ ಆಹ್ವಾನಿತರಾದ ರಾಜ್ಯ ಸಹಕಾರ ಮಹಾಮಂಡಲ ನಿರ್ದೇಶಕ ಬಿ.ಸಿ. ಲೋಕಪ್ಪ ಗೌಡ ಮಾತನಾಡಿ, ಸಹಕಾರಿಗಳಿಗೆ ಸಹಕಾರ ಕ್ಷೇತ್ರವನ್ನು ಮುನ್ನಡೆಸಲು ಕಾಯ್ದೆ, ಕಾನೂನು, ತಿದ್ದುಪಡಿಗಳ ಬಗ್ಗೆ ಅಪಾರ ಅರಿವು ಅಗತ್ಯವಿದೆ. ಈ ನಿಟ್ಟಿನಲ್ಲಿ ಆಯೋಜಿಸಿರುವ ತರಬೇತಿ ಕಾರ್ಯಾಗಾರವನ್ನು ಸದ್ಬಳಕೆ ಮಾಡಿಕೊಳ್ಳ ಬೇಕೆಂದರು. ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ರಾಬಿನ್ ದೇವಯ್ಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಹಿರಿಯ ಸಹಕಾರಿಗಳ ನಿಸ್ವಾರ್ಥ ಸೇವೆ, ಮಾರ್ಗದರ್ಶನ ಹಾಗೂ ಶ್ರಮದಿಂದ ಇಂದು ಸಹಕಾರ ಕ್ಷೇತ್ರ ಹೆಚ್ಚು ಮುಂದುವರೆದಿದೆ ಎಂದರು. ಸಹಕಾರ ಸಂಘಗಳ ಕಾಯ್ದೆ-ಇತ್ತೀಚಿನ ತಿದ್ದುಪಡಿ, ಪದಾಧಿಕಾರಿ ಹಾಗೂ ಮುಖ್ಯ ಕಾರ್ಯನಿರ್ವಾಹಕರ ಜವಬ್ದಾರಿ-ಕರ್ತವ್ಯಗಳು, ಆದಾಯ ತೆರಿಗೆ ಹಾಗೂ ಜಿಎಸ್ಟಿ ಕುರಿತು ಮಹಾಮಂಡಲದ ಕಾರ್ಯಚಟುವಟಿಕೆ ಕುರಿತು ಸಂಪನ್ಮೂಲ ವ್ಯಕ್ತಿಗಳಾದ ಡಾ. ಗುರುಸ್ವಾಮಿ, ಸಿ.ಎ. ರುದ್ರೇಶ್ ಪಟೇಲ್, ಎಂ.ಎA. ಶ್ಯಾಮಲ ಅವರುಗಳು ಉಪನ್ಯಾಸ ನೀಡಿದರು.
ಈ ಸಂದರ್ಭ ಚಿಕ್ಕಮಗಳೂರು ಸಹಕಾರ ಯೂನಿಯನ್ ಅಧ್ಯಕ್ಷ ಜಿ.ಕೆ. ದಿವಾಕರ್, ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಉಪಾಧ್ಯಕ್ಷ ಹೆಚ್.ಕೆ. ಮಾದಪ್ಪ, ನಿರ್ದೇಶಕ ಕೆ.ಟಿ. ಪರಮೇಶ್, ಬಲ್ಲಾರಂಡ ಮಣಿ ಉತ್ತಪ್ಪ, ಎಂ.ಎA. ಶ್ಯಾಮಲಾ, ಎಸ್.ಆರ್. ಸುನಿಲ್ ರಾವ್, ಸಹಕಾರ ಸಂಘಗಳ ಉಪನಿಬಂಧಕ ಹೆಚ್.ಡಿ. ರವಿಕುಮಾರ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯೋಗೇಂದ್ರ ನಾಯಕ್, ಸಮನ್ವಯಾಧಿಕಾರಿ ಪುಟ್ಟಸ್ವಾಮಿ ಇದ್ದರು. ಯೋಗೇಂದ್ರ ನಾಯಕ್ ಸ್ವಾಗತಿಸಿ, ವಂದಿಸಿದರು.