ಸೋಮವಾರಪೇಟೆ, ಫೆ. ೮: ಮಡಿಕೇರಿ-ಸೋಮವಾರಪೇಟೆ ರಾಜ್ಯ ಹೆದ್ದಾರಿಯ ಇಬ್ಬದಿಗಳಲ್ಲಿ ನೆಲೆಯಾಗಿರುವ ಪ್ರದೇಶ ಐಗೂರು. ಜೊತೆಗೆ ಚೋರನ ಹೊಳೆಯೂ ಸಹ ಗ್ರಾಮವನ್ನು ಭೌಗೋಳಿಕವಾಗಿ ಇಬ್ಬಾಗ ಮಾಡಿದೆ. ವಿವಿಧ ಧರ್ಮ, ವಿವಿಧ ಭಾಷಿಕರು ನೆಲೆಯಾಗಿರುವ ಐಗೂರಿನಲ್ಲಿ ಸೋಮವಾರಪೇಟೆ ತಾಲೂಕು ೯ನೇ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜನೆಗೊಂಡಿದ್ದು, ಕನ್ನಡ ನುಡಿ ಜಾತ್ರೆಯ ಯಶಸ್ಸಿಗೆ ಸಾಂಘಿಕ ಪ್ರಯತ್ನ ಸಾಗಿದೆ. ಐಗೂರಿನಲ್ಲಿರುವ ಕಾಜೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜನೆಗೊಂಡಿರುವ ಸಾಹಿತ್ಯ ಸಮ್ಮೇಳನದ ಯಶಸ್ಸಿಗೆ ಸರ್ವ ಭಾಷಿಕರು, ಸರ್ವ ಧರ್ಮೀಯರೂ ಕೈಜೋಡಿಸಿರುವುದು ಕನ್ನಡತನದ ಹಿರಿಮೆಗೆ ಸಾಕ್ಷಿಯಾಗಿದೆ.

ಪ್ರಮುಖವಾಗಿ ಕನ್ನಡ, ಅರೆಭಾಷೆ, ಕೊಡವ, ಮಲಯಾಳಂ, ಉರ್ದು, ತುಳು, ಎರವ, ಕೊಂಕಣಿ, ತಮಿಳು ಮಾತನಾಡುವ ಮಂದಿ ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹೆಚ್ಚು ನೆಲೆಯಾಗಿದ್ದು, ಕನ್ನಡಮ್ಮನ ತೇರನ್ನೆಳೆಯಲು ಕನ್ನಡಿಗರಾಗಿ ಒಂದಾಗಿದ್ದಾರೆ. ಸೋಮವಾರಪೇಟೆ-ಮಾದಾಪುರದ ನಡುವೆ ಇರುವ ಐಗೂರು ಗ್ರಾಮ ಪಂಚಾಯಿತಿಯಾಗಿದ್ದು, ಸ್ಥಳೀಯವಾಗಿ ಸಹಕಾರ ಸಂಘ, ಬ್ಯಾಂಕ್, ಪ್ರಾಥಮಿಕ ಆರೋಗ್ಯ ಕೇಂದ್ರ, ಪ್ರಾಥಮಿಕ, ಪ್ರೌಢ ಹಾಗೂ ಪದವಿಪೂರ್ವ ಕಾಲೇಜು, ಅಂಚೆ ಕಚೇರಿ, ಗ್ರಂಥಾಲಯ, ಸಂಬಾರ ಮಂಡಳಿಯ ಕ್ಷೇತ್ರ, ದೇವಾಲಯಗಳು, ಮಂದಿರ-ಮಸೀದಿಗಳನ್ನು ಒಳಗೊಂಡಿದೆ.

ಸಾಧಾರಣವಾಗಿ ಐಗೂರು ಎಂದರೆ ತಟ್ಟನೆ ನೆನಪಾಗುವುದು ಬ್ರಿಟೀಷರ ಕಾಲದ ಕಬ್ಬಿಣ ಸೇತುವೆ. ಈ ಸೇತುವೆಯಿಂದಾಗಿ ಐಗೂರಿಗಿಂತಲೂ ಕಬ್ಬಿಣ ಸೇತುವೆ ಎಂದೇ ಐಗೂರಿನ ಜಂಕ್ಷನ್ ಹೆಸರುವಾಸಿಯಾಗಿದೆ. ಇದೀಗ ಶಿಥಿಲಾವಸ್ಥೆಗೆ ತಲುಪಿದ್ದ ಸೇತುವೆಯನ್ನು ತೆರವುಗೊಳಿಸಿರುವ ಪರಿಣಾಮ, ಮಾದಾಪುರದಿಂದ ಐಗೂರು, ಸೋಮವಾರಪೇಟೆಯಿಂದ ಐಗೂರಿಗೆ ನೇರ ಸಂಪರ್ಕ ಕಡಿತಗೊಂಡಿದೆ. ಕಾಜೂರು ಮಾರ್ಗವಾಗಿ ವಾಹನಗಳು ಸಂಚರಿಸುತ್ತಿವೆ. ಸ್ಥಳೀಯರು ಓಡಾಡಲು ಚೋರನಹೊಳೆಗೆ ಕಾಲುದಾರಿಯನ್ನು ನಿರ್ಮಿಸಲಾಗಿದೆ. ಕಬ್ಬಿಣ ಸೇತುವೆ ನೇಪಥ್ಯಕ್ಕೆ ಸರಿದ ಸಮಯದಲ್ಲೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿದೆ.

ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ತಾಲೂಕಿನ ಹಿರಿಯ ಸಾಹಿತಿ, ಕವಯತ್ರಿ, ವಿವಿಧ ಸಂಘಟನೆಗಳಲ್ಲಿ ತೊಡಗಿಸಿಕೊಂಡು ಕ್ರಿಯಾಶೀಲರಾಗಿರುವ, ನಿವೃತ್ತ ಶಿಕ್ಷಕಿಯೂ ಆದ ಜಲಜಾ ಶೇಖರ್ ಅವರನ್ನು ಆಯ್ಕೆ ಮಾಡಲಾಗಿದೆ. ಸಮ್ಮೇಳನದ ಯಶಸ್ಸಿಗೆ ವಿವಿಧ ಉಪ ಸಮಿತಿಗಳನ್ನು ರಚಿಸಲಾಗಿದ್ದು, ಶಾಸಕ ಡಾ. ಮಂತರ್ ಗೌಡ ಅವರು ಸ್ವಾಗತ ಸಮಿತಿಯ ಗೌರವಾಧ್ಯಕ್ಷರಾಗಿದ್ದಾರೆ. ಐಗೂರು ಭಾಗದಲ್ಲಿ ಸಾಮಾಜಿಕ ಸೇವೆಸಲ್ಲಿಸಿದ ಮಹನೀಯರುಗಳಾದ ದಿ. ಕೆ.ಟಿ. ಪೂವಯ್ಯ, ಗುಂಡುಕುಟ್ಟಿ ಮಂಜುನಾಥಯ್ಯ, ಮಲಚೀರ ಪಟೇಲ್ ಸೋಮಯ್ಯ, ಮಲ್ಲಪ್ಪ, ಲಿಂಗಪ್ಪ, ಬೆಳ್ಳಿಯಪ್ಪ, ಚಂಗಪ್ಪ, ಸುರೇಶ್ ಎಂ.ಬಿ., ಎಂ.ಬಿ. ದೇವರಾಜ್, ಎಂ.ಎಲ್. ಅಪ್ಪಚ್ಚು, ಎಂ.ಎಲ್. ಕೃಪಾಲ್ ಅವರುಗಳ ನೆನಪಿನಲ್ಲಿ ದ್ವಾರಗಳನ್ನು ನಿರ್ಮಿಸಲಾಗುತ್ತಿದೆ.

ಇದರೊಂದಿಗೆ ಸಂಪಿಗೆಕೊಲ್ಲಿ ಡಿ.ಎಸ್. ದೇವಯ್ಯ, ಪೂವಮ್ಮ, ಮೂಲೆಮಜಲು ದಿ. ಸೋಮಣ್ಣ ತಂಗಮ್ಮ, ನಂಗಾರು ಬೋಪಯ್ಯ ಸೀತಮ್ಮ, ನಂಗಾರು ಗೋಪಾಲ ಮಾಸ್ಟರ್, ಚಿಣ್ಣಪ್ಪ, ಮುಕ್ಕಾಟಿರ ಮಾದಪ್ಪ, ಮಚ್ಚಂಡ ನಾಚಪ್ಪ, ಕಾಳೇರಮ್ಮನ ಅಯ್ಯಣ್ಣ, ನಾಣಯ್ಯ, ಗೋಪಾಲ, ಪಾಲಾಕ್ಷ, ಸಿ.ಕೆ. ಕಾಳಪ್ಪ, ಮಣವಟ್ಟಿರ ಅಪ್ಪಯ್ಯ, ಅಕ್ಕವ್ವ, ಅಯ್ಯಣ್ಣ, ಮಂದಣ್ಣ, ಬೆಳ್ಳಿಯಪ್ಪ, ಎ.ಎಂ. ಬೆಳ್ಳಿಯಪ್ಪ, ಎ.ಕೆ. ಸುಬ್ಬಯ್ಯ, ಈಶ್ವರಿ ಮೇದಪ್ಪ ಅವರುಗಳ ಜ್ಞಾಪಕಾರ್ಥ ದ್ವಾರಗಳನ್ನು ನಿರ್ಮಿಸುವ ಮೂಲಕ ಕನ್ನಡ ನಾಡು, ನುಡಿಗೆ ಸಲ್ಲಿಸಿದ ಸೇವೆಯನ್ನು ಸ್ಮರಿಸಲಾಗುತ್ತಿದೆ. ಸಮ್ಮೇಳನದ ಅಂಗವಾಗಿ ಸ್ಮರಣ ಸಂಚಿಕೆ ಹೊರತರಲಾಗುತ್ತಿದ್ದು, ಹಲವಷ್ಟು ಬರಹಗಾರರಿಗೆ ಅವಕಾಶ ಒದಗಿಸಲಾಗಿದೆ. ಇದರೊಂದಿಗೆ ಸ್ಥಳೀಯರಿಗೂ ಸಾಹಿತ್ಯ ಸೇವೆಗೆ ಅವಕಾಶ ಒದಗಿಸಲಾಗಿದ್ದು, ಸ್ಥಳೀಯ ಪ್ರಮುಖರನ್ನು ಒಳಗೊಂಡAತೆ ಸಮಿತಿಗಳನ್ನು ರಚಿಸಿ ಸಮ್ಮೇಳನದ ಯಶಸ್ಸಿಗೆ ಶ್ರಮಿಸಲಾಗುತ್ತಿದೆ.

ಇಂದು ಸಮ್ಮೇಳನ: ತಾ. ೯ ರಂದು (ಇಂದು) ಬೆಳಿಗ್ಗೆ ೬.೩೦ಕ್ಕೆ ಐಗೂರಿನಲ್ಲಿರುವ ಕಾಜೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ತಹಶೀಲ್ದಾರ್ ಕೆ.ಕೆ. ಕೃಷ್ಣಮೂರ್ತಿ ಅವರು ರಾಷ್ಟç ಧ್ವಜಾರೋಹಣ ಮಾಡುವ ಮೂಲಕ ಸಮ್ಮೇಳನಕ್ಕೆ ಚಾಲನೆ ನೀಡಲಿದ್ದಾರೆ. ಕನ್ನಡ ಧ್ವಜಾರೋಹಣವನ್ನು ಜಿಲ್ಲಾ ಕಸಾಪ ಅಧ್ಯಕ್ಷ ಕೇಶವ ಕಾಮತ್ ನೆರವೇರಿಸಲಿದ್ದು, ತಾಲೂಕು ಕಸಾಪ ಅಧ್ಯಕ್ಷ ವಿಜೇತ್ ಅವರು ಕನ್ನಡ ಸಾಹಿತ್ಯ ಪರಿಷತ್‌ನ ಧ್ವಜಾರೋಹಣ ಮಾಡಲಿದ್ದಾರೆ. ನಂತರ ಗಣ್ಯರ ನೆನಪಿನ ದ್ವಾರಗಳ ಉದ್ಘಾಟನೆಯಾಗಲಿದೆ. ಬೆಳಿಗ್ಗೆ ೮.೫೦ಕ್ಕೆ ಐಗೂರು ಕಬ್ಬಿಣ ಸೇತುವೆಯಿಂದ ಕಾಜೂರು ಅರಣ್ಯ ವಸತಿ ಗೃಹ, ನಂತರ ಸರ್ಕಾರಿ ಶಾಲಾ ಮೈದಾನದವರೆಗೆ ಸಮ್ಮೇಳನಾಧ್ಯಕ್ಷರ ಮೆರವಣಿಗೆ ನಡೆಯಲಿದೆ. ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಪರಮೇಶ್ ಕುಮಾರ್ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ.

೯.೪೫ಕ್ಕೆ ಸಾಕಮ್ಮನವರ ಹೆಸರಿನಲ್ಲಿರುವ ಪ್ರವೇಶ ದ್ವಾರದ ಉದ್ಘಾಟನೆ, ದಿ. ದಳವಾಯಿ ಹನುಮರಾಜೇ ಅರಸ್ ಸಮ್ಮೇಳನದ ಸಭಾಂಗಣ, ಸಾಹಿತಿ ಕೋವರ್‌ಕೊಲ್ಲಿ ದಿ. ಕರುಣಾಕರ ಪುಸ್ತಕ ಮಳಿಗೆ ಉದ್ಘಾಟನೆಯಾಗಲಿದೆ. ನಂತರ ಐಗೂರು ಹೋಬಳಿ ಕಸಾಪ ಘಟಕದ ಅಧ್ಯಕ್ಷ ನಂಗಾರು ಕೀರ್ತಿ ಪ್ರಸಾದ್ ಅವರು ಸಮ್ಮೇಳನ ನಡೆಯುವ ದಿ. ಶ್ರೀಮತಿ ಕೊಡಗಿನ ಗೌರಮ್ಮ ಮುಖ್ಯ ವೇದಿಕೆಯನ್ನು ಉದ್ಘಾಟಿಸಲಿದ್ದಾರೆ.

ಬೆಳಿಗ್ಗೆ ೧೦.೩೦ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಬೋಸರಾಜು ಅವರು ೯ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ. ಶಾಸಕ ಡಾ. ಮಂತರ್ ಗೌಡ ಅವರು ಸ್ಮರಣ ಸಂಚಿಕೆ ಬಿಡುಗಡೆಗೊಳಿಸಲಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖಾ ಸಚಿವ ಶಿವರಾಜ್ ಎಸ್. ತಂಗಡಗಿ, ವೀರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ, ಸಂಸದ ಯದುವೀರ್ ಒಡೆಯರ್, ಎಂ.ಎಲ್.ಸಿ. ಸುಜಾ ಕುಶಾಲಪ್ಪ, ಮಾಜಿ ಸಚಿವ ಬಿ.ಎ. ಜೀವಿಜಯ, ಕಸಾಪ ಮಾಜಿ ಜಿಲ್ಲಾಧ್ಯಕ್ಷ ಟಿ.ಪಿ. ರಮೇಶ್ ಅವರುಗಳು, ವಿವಿಧ ಬರಹಗಾರರು ರಚಿಸಿರುವ ಕನ್ನಡ ಕೃತಿಗಳನ್ನು ಲೋಕಾರ್ಪಣೆ ಮಾಡಲಿದ್ದಾರೆ. ೧.೩೦ಕ್ಕೆ ಗೀತಗಾಯನ, ೨.೩೦ಕ್ಕೆ ವಿಚಾರಗೋಷ್ಠಿ, ೩.೩೦ಕ್ಕೆ ಕವಿಗೋಷ್ಠಿ, ೪.೩೦ಕ್ಕೆ ಬಹಿರಂಗ ಅಧಿವೇಶನ, ೫ ಗಂಟೆಗೆ ಸನ್ಮಾನ ಮತ್ತು ಸಮಾರೋಪ ಸಮಾರಂಭ, ಸಂಜೆ ೭ ಗಂಟೆಯಿAದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. - ವಿಜಯ್ ಹಾನಗಲ್