ಶನಿವಾರಸಂತೆ, ಫೆ.೭ : ಶನಿವಾರಸಂತೆ ನೂತನ ಬಸ್ ನಿಲ್ದಾಣಕ್ಕೆ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಅವರ ಹೆಸರನ್ನು ಇಡಲು ಪುತ್ತೂರು ವಿಭಾಗದ ಕೆಆರ್ಟಿಸಿ ಆಡಳಿತ ಮಂಡಳಿಗೆ ಮನವಿ ಕಳುಹಿಸಿದ್ದು ಕ್ಯಾಬಿನೆಟ್ಗೆ ಬಂದ ಮೇಲೆ ಅಧಿಕೃತವಾಗಿ ಘೋಷಿಸಲಾಗುವುದು ಎಂದು ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.
ಜಿಲ್ಲಾಡಳಿತ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಪುತ್ತೂರು ವಿಭಾಗ ಹಾಗೂ ಶನಿವಾರಸಂತೆ ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಶನಿವಾರಸಂತೆಯಲ್ಲಿ ನಿರ್ಮಾಣ ಗೊಂಡ ನೂತನ ಬಸ್ ನಿಲ್ದಾಣವನ್ನು ಸಾರ್ವಜನಿಕರ ಸೇವೆಗೆ ಲೋಕಾರ್ಪಣೆಗೊಳಿಸಿ, ಬಳಿಕ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಕಾವೇರಿ ಹುಟ್ಟಿದ ನಾಡು ಕೊಡಗಿನಲ್ಲಿ ಕಾವೇರಿ ಹರಿಯದಿದ್ದರೇ ಬೆಂಗಳೂರಿಗೆ ನೀರಿಲ್ಲ, ಕಾವೇರಿ ತೀರ್ಥೊದ್ಭವಕ್ಕೆ ೩ ವರ್ಷದಿಂದ ಅನುದಾನ ಕೊಡಲಾಗುತ್ತಿದೆ. ಜಿಲ್ಲೆಯಲ್ಲಿ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿದ ಸೈನಿಕರು, ಬೆಳೆಗಾರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.ಕ್ರೀಡಾ ಕ್ಷೇತ್ರ, ರಾಜಕೀಯ ಕ್ಷೇತ್ರದಲ್ಲೂ ಹೆಸರು ಮಾಡಿದ ಧುರೀಣರು ಜಿಲ್ಲೆಯಲ್ಲಿದ್ದಾರೆ.
ನೂತನ ಬಸ್ ನಿಲ್ದಾಣದಲ್ಲಿ ಸ್ವಚ್ಛತೆ ಕಾಪಾಡುವ ಜವಾಬ್ದಾರಿ ಕೆಎಸ್ಆರ್ಟಿಸಿ ಡಿಸಿಯವರ ಮೇಲಿದೆ ನಿಲ್ದಾಣದ ಹೊರಭಾಗಕ್ಕೂ ಕಾಂಕ್ರೀಟ್ ಹಾಕಲು ಮಾರ್ಚ್ನ ಬಜೆಟ್ನಲ್ಲಿ ಅನುದಾನ ನೀಡಲಾಗುವುದು.ಮಹಿಳೆಯರ ಉಚಿತ ಪ್ರಯಾಣಕ್ಕೆ ಆದ್ಯತೆ ನೀಡಲಾಗಿದ್ದು ೬೭೦ ಕೋಟಿ ಮಹಿಳೆಯರು ಉಚಿತ ಪ್ರಯಾಣ ಮಾಡಿದ್ದಾರೆ. ೫,೮೦೦ ಬಸ್ ಈಗಾಗಲೇ ಓಡಾಡುತ್ತಿದ್ದು, ೨೦೦೦ ಬಸ್ ರಸ್ತೆಗೆ ಬರಲಿದೆ. ಮುಂದಿನ ಬಜೆಟ್ನಲ್ಲೂ ಜಿಲ್ಲೆಗೆ ಹೆಚ್ಚಿನ ಅನುದಾನ ನೀಡಲು ಮನವಿ ಮಾಡುತ್ತೇನೆ ಎಂದು ರಾಮಲಿಂಗಾ ರೆಡ್ಡಿ ಭರವಸೆ ನೀಡಿದರು.
ಹೈಕೋರ್ಟ್ ಹಿರಿಯ ವಕೀಲ ಎಚ್.ಎಸ್.ಚಂದ್ರಮೌಳಿ ಮಾತನಾಡಿ, ಸುಂದರ ಬಸ್ ನಿಲ್ದಾಣ ಲೋಕಾರ್ಪಣೆಯ ಹಿಂದೆ ಸಚಿವ ರಾಮಲಿಂಗಾರೆಡ್ಡಿ ಅವರ ಕೊಡುಗೆ ಇದೆ. ೪ನಾಲ್ಕನೇ ಪುಟಕ್ಕೆ
(ಮೊದಲ ಪುಟದಿಂದ) ಅವರು ಹೇಳಿದಂತೆ ಬಸ್ ನಿಲ್ದಾಣಕ್ಕೆ ಫೀ.ಮಾ. ಕಾರ್ಯಪ್ಪ ಹೆಸರಿಡಬೇಕು. ಶಾಸಕ ಡಾ.ಮಂತರ್ ಗೌಡ ಉತ್ತಮ ಬಸ್ ನಿಲ್ದಾಣವನ್ನು ಶನಿವಾರಸಂತೆಯಲ್ಲಿ ನಿರ್ಮಿಸಲು ಶ್ರಮಿಸಿದ್ದಾರೆ ಎಂದರು.
ಸಾನಿಧ್ಯ ವಹಿಸಿದ್ದ ಕಿರಿಕೊಡ್ಲಿಮಠದ ಸದಾಶಿವ ಸ್ವಾಮೀಜಿ ಆಶೀರ್ವಚನ ನೀಡಿ, ಅಭಿವೃದ್ಧಿ ಕಾರ್ಯಕ್ಕೆ ಶಾಸಕ ಮಂತರ್ಗೌಡ ಸಚಿವ ರಾಮಲಿಂಗಾ ರೆಡ್ಡಿ, ಚಂದ್ರಮೌಳಿ ಇವರುಗಳು ಒತ್ತು ನೀಡುತ್ತಿದ್ದಾರೆ ಎಂದು ಶ್ಲಾಘಿಸಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಾಹರೀಶ್ ಮಾತನಾಡಿ, ಪಟ್ಟಣಕ್ಕೆ ಉತ್ತಮ, ಸುಂದರ ಬಸ್ ನಿಲ್ದಾಣ ಶಾಸಕರ ಕೊಡುಗೆಯಾಗಿದೆ.ಬಸ್ ನಿಲ್ದಾಣದ ಬಾಕಿ ಉಳಿದ ಕಾಮಗಾರಿಗಳನ್ನು ಮಾಡಿಸಿಕೊಡುವುದರ ಜೊತೆಗೆ ಸಂತೆಮಾರುಕಟ್ಟೆಯನ್ನು ಅಭಿವೃದ್ಧಿಪಡಿಸಬೇಕು ಎಂದು ಮನವಿ ಮಾಡಿದರು. ಕಾರ್ಯಕ್ರಮದಲ್ಲಿ ಬಸ್ ನಿಲ್ದಾಣ ನಿರ್ಮಾಣದ ಗುತ್ತಿಗೆದಾರ ಮೈಸೂರಿನ ಬಿ.ಎಚ್.ರೇವಣಿಪ್ರಸಾದ್, ಸಚಿವ ರಾಮಲಿಂಗಾರೆಡ್ಡಿ ಹಾಗೂ ಶಾಸಕ ಮಂತರ್ ಗೌಡ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಸಕ ಡಾ.ಮಂತರ್ ಗೌಡ ಮಾತನಾಡಿ, ಬಸ್ ನಿಲ್ದಾಣ ನಿರ್ಮಾಣ ಚುನಾವಣೆ ಸಂದರ್ಭ ನೀಡಿದ್ದ ಭರವಸೆಯಾಗಿದ್ದು ಅದು ಈಡೇರಿದೆ. ಸ್ಥಳಾವಕಾಶ ನೀಡಿದ ಗ್ರಾಮ ಪಂಚಾಯಿತಿ ಅಭಿನಂದನಾರ್ಹ. ಒಂದು ಕೋಟಿ ಎಪ್ಪತ್ತು ಲಕ್ಷ ರೂಪಾಯಿ ವೆಚ್ಚದಲ್ಲಿ ನಿಲ್ದಾಣ ನಿರ್ಮಾಣವಾಗಿದ್ದು ಇನ್ನೂ ಒಂದೂವರೆ ಕೋಟಿ ವೆಚ್ಚದ ಕಾಮಗಾರಿ ಬಾಕಿಯಿದೆ.ಕೊಡ್ಲಿಪೇಟೆಯಲ್ಲೂ ಸಾರಿಗೆ ಇಲಾಖೆ ವತಿಯಿಂದ ಈ ಸಾಲಿನಲ್ಲೆ ಕಾಮಗಾರಿ ಆರಂಭವಾಗಬೇಕು. ಕುಶಾಲನಗರದಲ್ಲೂ ಡಿಪೋ ಆಗಬೇಕು ಎಂದರು.
ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ.ಧರ್ಮಜ ಉತ್ತಪ್ಪ, ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಜಿ.ಎಂ.ಕಾAತರಾಜ್, ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್, ಕೆ.ಪಿ.ಸಿ.ಸಿ. ಸದಸ್ಯರಾದ ಕೆ.ಪಿ.ಚಂದ್ರಕಲಾ, ಮಾಜಿ ಎಂಎಲ್ಸಿ ವೀಣಾ ಅಚ್ಚಯ್ಯ, ಕ.ರಾ.ರ.ಸಾ.ನಿಗಮ ಪುತ್ತೂರು ವಿಭಾಗೀಯ ನಿಯಂತ್ರಣಾಧಿಕಾರಿ ಎಂ.ಪಿ.ಹರಿಬಾಬು, ಮುಡಾ ಅಧ್ಯಕ್ಷ ರಾಜೇಶ್ ಯಲ್ಲಪ್ಪ, ತಹಶೀಲ್ದಾರ್ ಕೃಷ್ಣಮೂರ್ತಿ, ಸಹಕಾರ ಬ್ಯಾಂಕ್ ಅಧ್ಯಕ್ಷ ಎಸ್.ಸಿ.ಶರತ್ ಶೇಖರ್, ಕುಶಾಲನಗರ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್, ದುಂಡಳ್ಳಿ, ಹಂಡ್ಲಿ, ನಿಡ್ತ ಗ್ರಾಮ ಪಂಚಾಯಿತಿಗಳ ಅಧ್ಯಕ್ಷರಾದ ಭವಾನಿಗುರುಪ್ರಸನ್ನ, ಸುಧಾ ಈರೇಶ್, ಅಶೋಕ್, ಉಪಾಧ್ಯಕ್ಷರು, ಸದಸ್ಯರು, ಪಿಡಿಒಗಳು, ಮುಖಂಡರಾದ ಜೆ.ಎಲ್.ಜನಾರ್ಧನ್, ಎಸ್.ಎನ್,ರಘು, ಸರ್ದಾರ್, ರಂಗಸ್ವಾಮಿ, ಮಹಮ್ಮದ್ ಪಾಶ, ಆದಿತ್ಯ, ಡಾ.ಉದಯಕುಮಾರ್, ಪೊಲೀಸ್ ಇಲಾಖಾ ಅಧಿಕಾರಿಗಳು, ಸಿಬ್ಬಂದಿ, ಜಿ.ಪಂ.ಪದಾಧಿಕಾರಿಗಳು, ವಿವಿಧ ಇಲಾಖಾಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.
ಸಂಗೀತ ಶಿಕ್ಷಕಿ ರೋಸಿ ಪ್ರಾರ್ಥಿಸಿದರು.ವಿದ್ಯಾರ್ಥಿನಿಯರು ನಾಡಗೀತೆ ಹಾಗೂ ರೈತ ಗೀತೆ ಹಾಡಿದರು, ಶಿಕ್ಷಕರಾದ ಕೆ.ಪಿ.ಜಯಕುಮಾರ್ ಮತ್ತು ಜೆಸಿಂತಾ ಸಿಕ್ವೇರಾ ನಿರೂಪಿಸಿ, ಮಮತಾ ವಂದಿಸಿದರು. ನೂತನ ಬಸ್ ನಿಲ್ದಾಣದ ಉದ್ಘಾಟನೆ ಮತ್ತು ಸಮಾರಂಭಕ್ಕೆ ಮುನ್ನ ಪಟ್ಟಣದ ಪ್ರವೇಶ ದ್ವಾರದಲ್ಲಿ ಶಾಸಕ ಡಾ.ಮಂತರ್ಗೌಡ ಹಾಗೂ ಇತರ ಗಣ್ಯರನ್ನು ಸ್ವಾಗತಿಸಿದ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿಯವರು, ಮುಖಂಡರು, ಅಧಿಕಾರಿಗಳು ಮುಖ್ಯರಸ್ತೆಯಲ್ಲಿ ವಾದ್ಯಗೋಷ್ಠಿಯೊಂದಿಗೆ ಮೆರವಣಿಗೆ ಮೂಲಕ ಬಸ್ ನಿಲ್ದಾಣಕ್ಕೆ ಕರೆತಂದರು.