ಸಿದ್ದಾಪುರ, ಜ. ೭: ವಾಲ್ನೂರು-ತ್ಯಾಗತ್ತೂರು ಗ್ರಾಮದಲ್ಲಿ ಹಿಂದೂ ಸಂಗಮ ಕಾರ್ಯಕ್ರಮ ನಡೆಯಿತು. ಗ್ರಾಮದ ಶ್ರೀ ಬಸವೇಶ್ವರ ಸಮುದಾಯ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಂಗಳೂರು ವಿಭಾಗದ ಪ್ರಚಾರಕ್ ಸುರೇಶ್ ಮಾತನಾಡಿ, ಹಿಂದೂಗಳು ಸಂಘಟಿತರಾಗಬೇಕೆAಬ ಉದ್ದೇಶದಿಂದ ಪ್ರತಿ ಗ್ರಾಮಗಳಲ್ಲಿ ಹಿಂದೂ ಸಂಗಮ ಆಯೋಜಿಸಲಾಗುತ್ತಿದೆ. ಸಮಾಜದಲ್ಲಿ ಸಾಮರಸ್ಯವನ್ನು ಮೂಡಿಸುವ ನಿಟ್ಟಿನಲ್ಲಿ ಹಿಂದೂ ಧರ್ಮದಲ್ಲಿರುವ ಎಲ್ಲಾ ಸಮುದಾಯದವರು ಒಂದಾಗಬೇಕು. ಜಾಗೃತ ಸಮಾಜ ನಿರ್ಮಾಣ ಮಾಡಬೇಕು. ಸಮಾಜದ ಒಳಿತಿಗಾಗಿ ದೇಶದ ಒಳಿತಿಗಾಗಿ ಮುಂದಿನ ಪೀಳಿಗೆಗೆ ಮನೆಯಿಂದಲೇ ಸಂಸ್ಕಾರವನ್ನು ಕಲಿಸಬೇಕೆಂದು ಕಿವಿಮಾತು ಹೇಳಿದರು.
ಸಿದ್ದಲಿಂಗಪುರ ಹರಸಿಕುಪ್ಪೆಯ ಶ್ರೀ ಮಂಜುನಾಥ ಕ್ಷೇತ್ರದ ಶ್ರೀ ರಾಜೇಶ್‌ನಾಥ್ ಗುರೂಜಿ ಆಶೀರ್ವಚನ ನೀಡಿ ಮಾತನಾಡಿ ಸಮಾಜದಲ್ಲಿ ಪಂಚ ಪರಿವರ್ತನೆಗಳು ಆಗಬೇಕು. ಪರಿಸರ, ವಾಯು, ಸ್ವದೇಶಿ, ಸ್ವಾವಲಂಬಿ, ಸ್ವದೇಶಿ ಗೋ ತಳಿಗಳ ಉಳಿವು ಆಗಬೇಕೆಂದರು. ಮನೆಗಳಿಂದಲೇ ಮಕ್ಕಳಿಗೆ ಧರ್ಮದ ಬಗ್ಗೆ ಅರಿವು ಮೂಡಿಸಬೇಕು. ಸ್ವಾವಲಂಬಿ ಕೃಷಿ ಚಟುವಟಿಕೆಗಳನ್ನು ಮಾಡುವ ಮೂಲಕ ಸ್ವದೇಶಿ ಗೋ ತಳಿಗಳ ಸಂರಕ್ಷಣೆ ಮಾಡಬೇಕೆಂದು ಹೇಳಿದರು.
ಮಹಿಳೆಯರು ಟಿ.ವಿ.ಯಲ್ಲಿ ಬರುವ ಧಾರಾವಾಹಿಗಳಿಂದ ದೂರವಿದ್ದು, ಮೊಬೈಲ್‌ಗಳನ್ನು ಹೆಚ್ಚಾಗಿ ಬಳಸದೆ ತಮ್ಮ ಮಕ್ಕಳ ಬಗ್ಗೆ ಹೆಚ್ಚಿನ ಗಮನ ಹರಿಸಬೇಕೆಂದು ಹೇಳಿದರು. ಹುಟ್ಟುಹಬ್ಬವನ್ನು ಆಚರಿಸುವ ಸಂದರ್ಭ ಕೇಕ್ ಕತ್ತರಿಸುವ ಬದಲು ವರ್ಷಕ್ಕೊಮ್ಮೆ ಹುಟ್ಟುಹಬ್ಬದ ನೆನಪಿನಲ್ಲಿ ಒಂದೊAದು ಗಿಡಗಳನ್ನು ನೆಟ್ಟು ಬೆಳೆಸಬೇಕೆಂದು ಕಿವಿಮಾತು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಂಡ್ರುಮನೆ ಶಿವಕುಮಾರ್ ವಹಿಸಿದ್ದರು. ಕಾರ್ಯಕ್ರಮದಲ್ಲಿ ವಾಲ್ನೂರು-ತ್ಯಾಗತ್ತೂರು ಗ್ರಾಮದ ಶ್ರೀ ಬಸವೇಶ್ವರ ದೇವಾಲಯದ ತಕ್ಕರು ಎಂ.ಬಿ. ದೇವಯ್ಯ, ದೇವಾಲಯದ ಮುಖ್ಯಸ್ಥರಾದ ಜಿ.ಎಸ್. ರಾಮಪ್ಪ, ಇನ್ನಿತರರು ಹಾಜರಿದ್ದರು. ಗ್ರಾಮ ವ್ಯಾಪ್ತಿಯ ನಿವೃತ್ತ ಸೈನಿಕರನ್ನು ಸನ್ಮಾನಿಸಿ ಗೌರವಿಸಲಾಯಿತು.