ಮುಳ್ಳೂರು, ಫೆ. ೭: ಸಮೀಪದ ಆಲೂರು-ಸಿದ್ದಾಪುರ ಗ್ರಾ.ಪಂ.ವ್ಯಾಪ್ತಿಯ ೨೦೨೫-೨೬ನೇ ಸಾಲಿನ ಮಕ್ಕಳ ಗ್ರಾಮಸಭೆ ಗ್ರಾ.ಪಂ. ಅಧ್ಯಕ್ಷೆ ಮೀನಾಕ್ಷಿ ಮತ್ತು ಆಲೂರು-ಸಿದ್ದಾಪುರ ಸರಕಾರಿ ಪ್ರೌಢಶಾಲಾ ವಿದ್ಯಾರ್ಥಿನಿ ಸಿಂಚನ ಜಂಟಿ ಅಧ್ಯಕ್ಷತೆಯಲ್ಲಿ ಸಾರ್ವಜನಿಕ ಸಮುದಾಯ ಭವನದಲ್ಲಿ ನಡೆಯಿತು. ಗ್ರಾ.ಪಂ. ವ್ಯಾಪ್ತಿಯ ವಿವಿಧ ಶಾಲೆಗಳಿಂದ ಆಗಮಿಸಿದ ಮಕ್ಕಳು ತಮ್ಮ ಶಾಲೆಯಲ್ಲಿನ ಸಮಸ್ಯೆಗಳನ್ನು ಸಭೆಯಲ್ಲಿ ಗಮನ ಸೆಳೆದರು. ಅಂಕನಹಳ್ಳಿ ಸರಕಾರಿ ಪ್ರಾಥಮಿಕ ಶಾಲಾ ಆವರಣದೊಳಗೆ ಹಿಂಡು ಹಿಂಡಾಗಿ ಬೀದಿ ನಾಯಿಗಳು ಓಡಾಡುತ್ತಿರುವುದರಿಂದ ಭಯವಾಗುತ್ತಿದೆ ಎಂದು ವಿದ್ಯಾರ್ಥಿಯೋರ್ವ ದೂರಿದನು.
ವಿದ್ಯಾರ್ಥಿನಿ ಸೃಜನಾ ಮಾತನಾಡಿ, ನಮ್ಮ ಶಾಲೆಯಲ್ಲಿ ಎಲ್ಲಾ ಸೌಕರ್ಯವೂ ಇದೆ. ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಈ ಕಾರಣದಿಂದ ನಮ್ಮ ಶಾಲೆಗೆ ರಾಜ್ಯ ಪ್ರಶಸ್ತಿ ಲಭಿಸಿದೆ. ಆದರೆ ಹಲವಾರು ವರ್ಷಗಳಿಂದ ನಮ್ಮ ಶಾಲೆಯ ಕುಡಿಯುವ ನೀರಿನ ಟ್ಯಾಂಕ್ ಅನ್ನು ಸ್ವಚ್ಚಗೊಳಿಸಿಲ್ಲ. ಈ ಬಗ್ಗೆ ಸಂಬAಧ ಪಟ್ಟ ಗ್ರಾ.ಪಂಗೆ ಹಲವಾರು ಬಾರಿ ಮನವಿ ಮಾಡುತ್ತಿದ್ದರೂ ಪ್ರಯೋಜನವಾಗುತ್ತಿಲ್ಲ ಎಂದು ಗಮನಕ್ಕೆ ತಂದಳು.. ಆಲೂರು-ಸಿದ್ದಾಪುರ ಸೇರಿದಂತೆ ಹಲವಾರು ಶಾಲೆಗಳ ಮಕ್ಕಳು ರಾತ್ರಿ ವೇಳೆಯಲ್ಲಿ ಪುಂಡ ಪೋಕರಿಗಳು ತಮ್ಮ ಶಾಲಾ ಆವರಣವನ್ನು ಪ್ರವೇಶಿಸಿ ತ್ಯಾಜ್ಯ, ಸಿಗರೇಟ್ ತುಂಡು, ನೀರಿನ ಬಾಟಲ್ ಮುಂತಾದವುಗಳನ್ನು ಎಸೆದು ಹೋಗುತ್ತಾರೆ. ಬೆಳಿಗ್ಗೆ ನಾವು ತ್ಯಾಜ್ಯಗಳನ್ನು ಸ್ವಚ್ಚಗೊಳಿಸುವ ಪರಿಸ್ಥಿತಿ ಈ ಬಗ್ಗೆ ಕ್ರಮಕೈಗೊಳ್ಳುವಂತೆ ವಿದ್ಯಾರ್ಥಿಗಳು ಒತ್ತಾಯಿಸಿದರು. ಕೆಲವು ವಿದ್ಯಾರ್ಥಿಗಳು ತಮ್ಮ ಶಾಲೆಗೆ ಪೀಠೋಪಕರಣ ಕಲ್ಪಿಸಿಕೊಡುವಂತೆ, ಶಾಲೆಗೆ ಸಿಸಿ ಕ್ಯಾಮರ ಅಳವಡಿಸುವಂತೆ ಮನವಿ ಮಾಡಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ವಿದ್ಯಾರ್ಥಿನಿ ಸಿಂಚನ ಮಾತನಾಡಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ತಾಲೂಕು ಮೇಲ್ವಿಚಾರಕಿ ಸಾವಿತ್ರಮ್ಮ ತಮ್ಮ ಇಲಾಖೆಯಿಂದ ವಿದ್ಯಾರ್ಥಿಗಳಿಗೆ ದೊರೆಯುವ ಸೇವೆ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು. ಪಿಡಿಓ ಚಂದ್ರಶೇಖರ್ ಸಭೆಯಲ್ಲಿ ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗಳನ್ನು ಆಲಿಸಿ ಸಮಸ್ಯೆಗಳನ್ನು ಹಂತ ಹಂತವಾಗಿ ಬಗೆಹರಿಸುವ ಭರವಸೆ ನೀಡಿದರು. ನಾವು ಸಂಸ್ಥೆಯ ಕುಮಾರಿ ಮಕ್ಕಳ ಗ್ರಾಮ ಸಭೆಯ ಉದ್ದೇಶದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಸಭೆಯಲ್ಲಿ ವಿವಿಧ ಶಾಲಾ ವಿದ್ಯಾರ್ಥಿಗಳಾದ ಪೃಥ್ವಿ, ನಮಿತ, ಕೌಶಿಕ್, ದೀಪು, ರಾಹುಲ್ ಗ್ರಾ.ಪಂ.ಯ ಸದಸ್ಯರು, ಗ್ರಾ.ಪಂ. ಸಿಬ್ಬಂದಿ, ವಿವಿಧ ಶಾಲೆಯ ಶಿಕ್ಷಕರು, ಶಿಕ್ಷಕಿಯರು ಪಾಲ್ಗೊಂಡಿದ್ದರು.