ವೀರಾಜಪೇಟೆ, ಫೆ. ೭: ಅಲ್ಪಸಂಖ್ಯಾತರ ವರ್ಗದ ಅಭಿವೃದ್ಧಿಗಾಗಿ ವೀರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್ ಪೊನ್ನಣ್ಣ ಅವರು ಮೂರು ವರ್ಷಗಳಲ್ಲಿ ರೂ. ೨೧ ಕೋಟಿ ಅನುದಾನ ನೀಡಿದ್ದು, ಕಳೆದ ೨೫ ವರ್ಷಗಳಿಂದ ಆಗದಂತಹ ರಸ್ತೆ ಅಭಿವೃದ್ಧಿ ಕಾಮಗಾರಿಗಳು ನಡೆದಿವೆ ಎಂದು ಅಲ್ಪಸಂಖ್ಯಾತರ ಘಟಕದ ಜಿಲ್ಲಾ ಅಧ್ಯಕ್ಷ ಪಿ.ಎ ಹನೀಫ್ ಹೇಳಿದರು.
ವೀರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ವತಿಯಿಂದ ಶಾಸಕರ ಗೃಹ ಕಚೇರಿ ಸಭಾಂಗಣದಲ್ಲಿ ೧೮ ಅಲ್ಪಸಂಖ್ಯಾತರ ವಲಯಗಳ ಸಮಿತಿ ಸದಸ್ಯರುಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅಭಿವೃದ್ಧಿಯ ಪೂರಕವಾಗಿ ಸಭೆಗಳು ನಡೆಯುವುದು ಅನಿವಾರ್ಯ. ಈಗಾಗಲೇ ಕ್ಷೇತ್ರದ ಶಾಸಕರು ಕ್ಷೇತ್ರದ ಎಲ್ಲಾ ಕಡೆಗಳಲ್ಲಿ ಅನುದಾನ ನೀಡಿ ಕಾಮಗಾರಿಗಳು ನಡೆದಿವೆ. ಗ್ರಾಮೀಣ ಭಾಗದಲ್ಲಿ ಜನರಿಗೆ ಮೂಲಭೂತ ಸೌಲಭ್ಯಗಳು ದೊರಕಬೇಕು.
ಎಲ್ಲಿ ಕಾಮಗಾರಿಗಳು ನಡೆದಿಲ್ಲ ಎಂಬುದರ ಬಗ್ಗೆ ಇನ್ನು ಒಂದು ತಿಂಗಳೊಳಗಾಗಿ ಸ್ಥಳೀಯರು ತಿಳಿಸುವಂತಾಗಬೇಕು. ನಂತರ ಗ್ರಾಮ, ತಾಲೂಕು, ಜಿಲ್ಲಾ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆ ಬರುವುದರಿಂದ ಕಾಮಗಾರಿಗಳು ಮುಗಿಯಬೇಕು. ಶಾಸಕರು ಹೆಚ್ಚಿನ ಅನುದಾನ ತರಲಿದ್ದಾರೆ ಎಂದು ಹೇಳಿದ ಹನೀಫ್, ಮುಂದಿನ ಚುನಾವಣೆ ಎದುರಿಸುವ ನಿಟ್ಟಿನಲ್ಲಿ ಪಕ್ಷವನ್ನು ಬಲಪಡಿಸಲು ಕಾರ್ಯಕರ್ತರು ಸಂಘಟಿತರಾಗಬೇಕು ಎಂದರು.
ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಉಪಾಧ್ಯಕ್ಷ ಜೋಕಿಂ ರೋಡ್ರಿಗಸ್ ಅವರು ಮಾತನಾಡಿ, ಕ್ಷೇತ್ರದ ಶಾಸಕರ ಪ್ರಯತ್ನದ ಫಲವಾಗಿ ಅಲ್ಪಸಂಖ್ಯಾತ ವರ್ಗದ ಅಭಿವೃದ್ಧಿಗೆ ಅನುದಾನ ದೊರಕಿದೆ. ಇದರಿಂದ ರಸ್ತೆ ಅಭಿವೃದ್ಧಿ ಕಾಮಗಾರಿ ಪೂರ್ಣಗೊಂಡು ಕೆಲವು ಕಡೆ ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದರು.
ವೀರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಕೊಳುಮಂಡ ರಫೀಕ್ ಅವರು ಸಭೆಯನ್ನುದ್ದೇಶಿಸಿ ಮಾತನಾಡಿ, ೧೮ ವಲಯಗಳಲ್ಲಿ ಶಾಸಕರ ವಿಶೇಷ ಪ್ರಯತ್ನದಿಂದ ವಿವಿಧ ಕಾಮಗಾರಿಗಳು ನಡೆದಿವೆ. ಇನ್ನು ವಿವಿಧ ಯೋಜನೆಗಳಿಗೆ ರೂ.೫ ಕೋಟಿ ಅನುದಾನಕ್ಕೆ ಬೇಡಿಕೆಯನ್ನಿಟ್ಟು ಈಗಾಗಲೇ ರೂ.೨ ಕೋಟಿ ಅನುದಾನ ಬಿಡುಗಡೆಯಾಗಿದೆ. ಇನ್ನು ಮುಂದಿನ ದಿನಗಳಲ್ಲಿ ಹೆಚ್ಚಿನ ಅನುದಾನ ಬರಲಿದೆ ಎಂದರು.
ಈ ಸಂದರ್ಭ ಅಲ್ಪಸಂಖ್ಯಾತರ ಘಟಕದ ಮಾಜಿ ಅಧ್ಯಕ್ಷರುಗಳಾದ ವೈ.ಇ. ಮುಸ್ತಾಫ ಹಾಗೂ ಎಂ.ಐ. ಎಜಾಸ್ ಅಹ್ಮದ್ ಅವರುಗಳಿಗೆ ವೇದಿಕೆಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ವೇದಿಕೆಯಲ್ಲಿ ಅಲ್ಪಸಂಖ್ಯಾತರ ಘಟಕದ ಪ್ರಧಾನ ಕಾರ್ಯದರ್ಶಿ ಅಗಸ್ಟೀನ್ ಬೆನ್ನಿ, ಸಹ ಕಾರ್ಯದರ್ಶಿ ಶಫೀಕ್, ಅಂತೋಣಿ, ಜಿಲ್ಲಾ ಜಂಟಿ ಕಾರ್ಯದರ್ಶಿ ಇಸ್ಮಾಯಿಲ್ ಗುಂಡಿಗೆರೆ, ಮುಖಂಡರಾದ ಮರ್ವಿನ್ ಲೋಬೊ, ಅನಿತಾ, ಹಂಸ, ಎ.ಎಸ್ ಹಬೀಬುಲ್ಲ, ನಿಯಾಜ್, ನಜೀರ್ ಅಹ್ಮದ್, ಮುನಾವರ್ ಹಾಗೂ ಇತರರಿದ್ದರು.