ಸುಂಟಿಕೊಪ್ಪ, ಫೆ. ೬: ಸುಂಟಿಕೊಪ್ಪ ಹೋಬಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಅನೇಕ ಅರ್ಹ ಕುಟುಂಬಗಳ ಬಿಪಿಎಲ್ ಪಡಿತರ ಚೀಟಿಗಳು ಇತ್ತೀಚೆಗೆ ಎಪಿಎಲ್ ಆಗಿ ಪರಿವರ್ತನೆಯಾಗಿರುವುದರಿಂದ ಸಾರ್ವಜನಿಕರಿಗೆ ತೀವ್ರ ಅನಾನುಕೂಲ ಉಂಟಾಗಿರುವ ಹಿನ್ನೆಲೆ ಸುಂಟಿಕೊಪ್ಪ ಹಾಗೂ ಹೊಸಕೋಟೆ ಗ್ರಾಮ ಪಂಚಾಯಿತಿಗಳ ಸದಸ್ಯರುಗಳು ಕುಶಾಲನಗರ ತಾಲೂಕು ತಹಶೀಲ್ದಾರ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.

ಈ ಸಂದರ್ಭ ಆಹಾರ ನಿರೀಕ್ಷಕರಾದ ಸ್ವಾತಿ ಅವರು ಹಾಜರಿದ್ದು, ಪಡಿತರ ಚೀಟಿಗಳಲ್ಲಿ ಉಂಟಾಗಿರುವ ನ್ಯೂನತೆಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಹಶೀಲ್ದಾರ್ ಗಮನಕ್ಕೆ ತಂದರು. ಮನವಿಗೆ ಸ್ಪಂದಿಸಿದ ತಹಶೀಲ್ದಾರ್, ಅರ್ಹ ಬಿಪಿಎಲ್ ಫಲಾನುಭವಿಗಳಿಗೆ ಯಾವುದೇ ಅನ್ಯಾಯವಾಗದಂತೆ ಶೀಘ್ರ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಅದರಂತೆ ಆಹಾರ ನಿರೀಕ್ಷಕರು ಖುದ್ದಾಗಿ ಮನೆಮನೆಗೆ ಭೇಟಿ ನೀಡಿ, ಅರ್ಹ ಕುಟುಂಬಗಳ ಮಾಹಿತಿಯನ್ನು ಸಂಗ್ರಹಿಸಿ ಸರ್ಕಾರದ ಗಮನಕ್ಕೆ ತಂದು, ಬಿಪಿಎಲ್ ಪಡಿತರ ಚೀಟಿಗಳ ನವೀಕರಣ ಪ್ರಕ್ರಿಯೆಯನ್ನು ವೇಗವಾಗಿ ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದರು. ಅರ್ಹರಿಗೆ ಬಿಪಿಎಲ್ ಕಾರ್ಡ್ ಖಂಡಿತವಾಗಿಯೂ ಮರಳಿ ದೊರಕಿಸುವ ನಿಟ್ಟಿನಲ್ಲಿ ಇಲಾಖೆ ಸಂಪೂರ್ಣ ಸಹಕಾರ ನೀಡಲಿದೆ ಎಂದು ಸ್ಪಷ್ಟಪಡಿಸಿದರು. ಈ ಮನವಿ ಸಲ್ಲಿಸುವ ಸಂದರ್ಭದಲ್ಲಿ ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಸದಸ್ಯರಾದ ಪ್ರಸಾದ್ ಕುಟ್ಟಪ್ಪ, ಆಲಿಕುಟ್ಟಿ, ಶಬೀರ್, ಸೋಮನಾಥ್ ಮತ್ತು ಹೊಸಕೋಟೆ ಗ್ರಾಮ ಪಂಚಾಯಿತಿ ಸದಸ್ಯರಾದ ಮುಸ್ತಾಫ (ಕುಂಜಿ ಕುಟ್ಟಿ) ಹಾಜರಿದ್ದರು.