ಕಣಿವೆ, ಫೆ. ೬: ಕೊಡಗು ಜಿಲ್ಲೆಯ ಪ್ರಮುಖ ಹಾಗೂ ಏಕೈಕ ಕೈಗಾರಿಕಾ ಪ್ರದೇಶವಾಗಿರುವ ಕುಶಾಲನಗರ ತಾಲೂಕಿನ ಕೂಡ್ಲೂರು ಕೈಗಾರಿಕಾ ಪ್ರದೇಶ ಕಸದ ತೊಟ್ಟಿಯಾಗಿ ಮಾರ್ಪಟ್ಟಿದೆ.
ಕೈಗಾರಿಕಾ ಪ್ರದೇಶದ ಕಾವೇರಿ ನದಿ ದಂಡೆಯAತೂ ತ್ಯಾಜ್ಯ ವಸ್ತುಗಳು ಹಾಗೂ ಅನುಪಯುಕ್ತ ಮಣ್ಣಿನ ರಾಶಿಯಿಂದ ತುಂಬಿದ್ದು ನದಿಯ ಸುಂದರ ಪರಿಸರವನ್ನು ನುಂಗಿ ನದಿಯೇ ಕಾಣದಷ್ಟು ಎತ್ತರಕ್ಕೆ ಕಸದ ರಾಶಿ ನಿರ್ಮಾಣವಾಗಿದೆ. ೪೦೦ ಎಕರೆ ವ್ಯಾಪ್ತಿಯ ಇಡೀ ಕೈಗಾರಿಕಾ ಪ್ರದೇಶದ ತ್ಯಾಜ್ಯ ವಸ್ತುಗಳು ಹೇರಳವಾದ ಅನುಪಯುಕ್ತ ಮಣ್ಣಿನ ರಾಶಿ, ಮನೆಗಳು ಹಾಗೂ ಕೈಗಾರಿಕೆಗಳ ಅನುಪಯುಕ್ತ ಪರಿಕರಗಳನ್ನು ಲಾರಿ ಹಾಗೂ ಟ್ರಾö್ಯಕ್ಟರ್ಗಳಲ್ಲಿ ತಂದು ಸುರಿದು ರಾಶಿ ಮಾಡಲಾಗಿದೆ. ಇದರಿಂದಾಗಿ ಕೈಗಾರಿಕಾ ಪ್ರದೇಶ ಕಸದ ತೊಟ್ಟಿಯಾಗಿ ಗೋಚರಿಸುತ್ತಿದೆ.
ಗ್ರಾ,ಪಂ. - ಕೈಗಾರಿಕಾ ಇಲಾಖೆ ನಿರಾಸಕ್ತಿ
ಕೈಗಾರಿಕಾ ಪ್ರದೇಶಕ್ಕೆ ಸಂಬAಧಿಸಿದ ಕೂಡುಮಂಗಳೂರು ಗ್ರಾಮ ಪಂಚಾಯಿತಿ ಆಡಳಿತವಾಗಲಿ ಜಿಲ್ಲಾ ಕೈಗಾರಿಕಾ ಇಲಾಖೆಯ ಅಧಿಕಾರಿಗಳಾಗಲಿ ಇತ್ತ ಗಮನಹರಿಸದ ಕಾರಣ ಇಲ್ಲಿನ ಕೈಗಾರಿಕೋದ್ಯಮಿಗಳ ಅಳಲು ಮತ್ತು ಅಹವಾಲುಗಳನ್ನು ಆಲಿಸುವವರೇ ಇಲ್ಲದಂತಾಗಿದೆ. ಕೈಗಾರಿಕಾ ಪ್ರದೇಶದ ಪ್ರತಿ ರಸ್ತೆಗಳ ಅಂಚಿನಲ್ಲಿ ಶುಚಿತ್ವ ಎಂಬುದು ಮರೆಯಾಗಿದೆ.
ಚರಂಡಿಗಳಲ್ಲಿ ಕಸ ಕಡ್ಡಿಗಳು
ಗಿಡಗಂಟಿಗಳು ಬೆಳೆದು ಮಳೆಯ ನೀರು ಮತ್ತು ಉದ್ದಿಮೆಗಳಲ್ಲಿನ ತ್ಯಾಜ್ಯ ನೀರು ಚರಂಡಿಗಳಲ್ಲಿ ಹರಿಯಲು ಆಗದಂತಹ ಪರಿಸ್ಥಿತಿ ನಿರ್ಮಾಣಗೊಂಡಿದೆ.
ಕತ್ತಲೆಯಲ್ಲಿ ಕೈಗಾರಿಕಾ ಪ್ರದೇಶ
ಕೈಗಾರಿಕಾ ಪ್ರದೇಶದಲ್ಲಿ ಬೀದಿ ಬದಿಯ ವಿದ್ಯುತ್ ದೀಪಗಳು ಕೆಟ್ಟು ನಿಂತಿದ್ದು ಕೈಗಾರಿಕಾ ಪ್ರದೇಶದಲ್ಲಿ ಕತ್ತಲೆ ಆವರಿಸಿದೆ. ಹಾಗಾಗಿ ರಾತ್ರಿ ಪಾಳಿಯಲ್ಲಿ ಕೈಗಾರಿಕಾ ಘಟಕಗಳಲ್ಲಿ ಕಾರ್ಯನಿರ್ವಹಿಸುವ ಪಾದಚಾರಿ ಬಡ ಕಾರ್ಮಿಕರು ಪರದಾಡುವಂತಾಗಿದೆ.
ಕಾಫಿ ಸಂಸ್ಕರಣಾ ಘಟಕಗಳು, ವೆಲ್ಡಿಂಗ್ ಶಾಪ್ ಗಳು, ಪೆಟ್ರೋಲ್ ಬಂಕ್ಗಳು, ಇಟ್ಟಿಗೆ ತಯಾರಿಕಾ ಘಟಕಗಳು, ಬೃಹತ್ ವಾಹನಗಳ ದುರಸ್ತಿ ಘಟಕಗಳು, ಹೊಟೇಲ್ಗಳು, ೪ಐದನೇ ಪುಟಕ್ಕೆ
(ಮೊದಲ ಪುಟದಿಂದ) ಬೇಕರಿ ಖಾದ್ಯಗಳನ್ನು ಉತ್ಪಾದಿಸುವ ಘಟಕಗಳು ಸೇರಿದಂತೆ ಅರವತ್ತಕ್ಕೂ ಹೆಚ್ಚು ಉದ್ದಿಮೆಗಳು ಇಲ್ಲಿ ಕಾರ್ಯ ನಿರ್ವಹಿಸುತ್ತಿವೆ.
ಎರಡರಿಂದಲೂ ತೆರಿಗೆ ವಸೂಲಿ
ಮೂಲ ಸೌಕರ್ಯಗಳನ್ನು ಒದಗಿಸದಿದ್ದರೂ ಕೂಡ ಇಲ್ಲಿನ ಉದ್ದಿಮೆಗಳಿಂದ ಸ್ಥಳೀಯ ಗ್ರಾಮ ಪಂಚಾಯಿತಿ ಹಾಗೂ ಕೈಗಾರಿಕಾ ಇಲಾಖೆ ವಾರ್ಷಿಕ ಕೋಟ್ಯಂತರ ರೂಪಾಯಿ ತೆರಿಗೆಯನ್ನು ವಸೂಲಿ ಮಾಡುತ್ತಿದ್ದು ಮೂಲ ಭೂತ ಸೌಕರ್ಯ ಒದಗಿಸುವಂತೆ ಕೋರಿದರೆ ಯಾರಿಂದಲೂ ನಮಗೆ ಸ್ಪಂದನ ಸಿಗುತ್ತಿಲ್ಲ ಎನ್ನುತ್ತಾರೆ ಕಾಫಿ ಸಂಸ್ಕರಣಾ ಘಟಕಗಳ ಮಾಲೀಕರು.
ಕಾವೇರಿ ನದಿ ಕಲುಷಿತ
ಕಾವೇರಿ ನದಿಗೆ ನೇರವಾಗಿ ಕೈಗಾರಿಕಾ ಪ್ರದೇಶಗಳಿಂದ ಹರಿವ ತ್ಯಾಜ್ಯ ಹಾಗೂ ಕಲುಷಿತ ನೀರು ಬಂದು ಸೇರುತ್ತಿದ್ದರೂ ಕೂಡ ಯಾವ ಇಲಾಖೆಗಳೂ ಕೂಡ ಈ ಬಗ್ಗೆ ಕ್ರಮಕ್ಕೆ ಮುಂದಾಗಿಲ್ಲ.
ಇಲ್ಲಿನ ರಾಸಾಯನಿಕಯುಕ್ತ ಕಲುಷಿತ ನೀರು ನೇರವಾಗಿ ನದಿಗೆ ಹರಿಯುತ್ತಿರುವ ಪರಿಣಾಮ ನದಿಯಲ್ಲಿನ ಜಲಚರಗಳ ಜೀವಕ್ಕೆ ಅಪಾಯವಿದೆ. ಹಾಗೆಯೇ ನದಿಯ ನೀರನ್ನು ಕುಡಿಯುವ ಮನುಷ್ಯನ ಆರೋಗ್ಯದ ಮೇಲೂ ಮಾರಕ ಪರಿಣಾಮ ಗಳು ಉಂಟಾಗುತ್ತಿವೆ ಎಂಬುದು ನದಿಯ ಕೆಳಭಾಗದ ನಿವಾಸಿಗಳ ಅಳಲಾಗಿದೆ.
ಸಾರ್ವಜನಿಕ ಸ್ಮಶಾನದ ದಾರಿ ಮರೆ
ಕೈಗಾರಿಕಾ ಪ್ರದೇಶದ ಕಾವೇರಿ ನದಿ ದಂಡೆಯಲ್ಲಿ ಪಕ್ಕದ ಕೂಡ್ಲೂರು ಗ್ರಾಮವಾಸಿಗಳಿಗೆ ೨೦೧೭-೧೮ ರ ಸಾಲಿನಲ್ಲಿ ನಿರ್ಮಾಣ ಮಾಡಿದ್ದ ಸಾರ್ವಜನಿಕ ಸ್ಮಶಾನದ ದಾರಿ ಇಲ್ಲಿನ ಕಲ್ಲು ಮಣ್ಣುಗಳ ರಾಶಿಯಿಂದ ಮುಚ್ಚಿ ಹೋಗಿದೆ. ಅಲ್ಲದೇ ಕೈಗಾರಿಕಾ ಪ್ರದೇಶದ ಶ್ರಮಿಕ ಕಾರ್ಮಿಕರು ಸ್ನಾನಕ್ಕೆ ತೆರಳುತ್ತಿದ್ದ ಇಲ್ಲಿನ ನದಿಯ ದಾರಿಯೂ ಕೂಡ ಗಿಡಗಂಟಿಗಳು ಹಾಗೂ ತ್ಯಾಜ್ಯಗಳ ರಾಶಿಯಿಂದ ಮುಚ್ಚಿಹೋಗಿದೆ.
ಕೈಗಾರಿಕಾ ಇಲಾಖೆ ಅಧಿಕಾರಿಗಳು ಕೂಡಲೇ ಸ್ಥಳ ಪರಿಶೀಲನೆ ನಡೆಸಬೇಕು. ಉದ್ದಿಮೆದಾರರ ಸಂಕಷ್ಟಗಳನ್ನು ಆಲಿಸಿ ಬಗೆಹರಿಸುವ ನಿಟ್ಟಿನಲ್ಲಿ ಪ್ರಯತ್ನಿಸಬೇಕು. ಶಾಸಕರಾದ ಡಾ. ಮಂತರ್ ಗೌಡ ಅವರು ಕೈಗಾರಿಕಾ ಬಡಾವಣೆಯಲ್ಲಿ ಅಧಿಕಾರಿಗಳ ಸಭೆ ನಡೆಸಿ ಉದ್ದಿಮೆದಾರರ ಸಮಸ್ಯೆಗಳಿಗೆ ಪರಿಹಾರ ಒದಗಿಸಬೇಕು ಎಂಬುದು ಇಲ್ಲಿನ ಉದ್ಯಮಿಗಳ ಕೋರಿಕೆಯಾಗಿದೆ. ವಿಶೇಷ ವರದಿ : ಕೆ.ಎಸ್.ಮೂರ್ತಿ