ಸೋಮವಾರಪೇಟೆ, ಫೆ. ೬: ಸಮಾಜದ ಏಳಿಗೆಗೆ ಸಹಕರಿಸುವ ವ್ಯಕ್ತಿಗಳ ಜೀವನ ಸಾರ್ಥಕ ಬದುಕಿನಿಂದ ಕೂಡಿರುತ್ತದೆ ಎಂದು ಸೋಮವಾರಪೇಟೆ ಒಕ್ಕಲಿಗರ ಯುವ ವೇದಿಕೆಯ ಅಧ್ಯಕ್ಷ ಚಕ್ರವರ್ತಿ ಸುರೇಶ್ ತಿಳಿಸಿದರು.
ಶನಿವಾರಸಂತೆಯ ಹರಪಳ್ಳಿ ರವೀಂದ್ರ ಅಭಿಮಾನಿ ಬಳಗ ಮತ್ತು ಒಕ್ಕಲಿಗರ ಸಂಘದ ವತಿಯಿಂದ ಮಾದ್ರೆ ಗ್ರಾಮದ ಖಾಸಗಿ ರೆಸಾರ್ಟ್ನಲ್ಲಿ ಆಯೋಜಿಸಿದ್ದ ಸಮಾಜ ಸೇವಕ ಹರಪಳ್ಳಿ ರವೀಂದ್ರ ಅವರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕರಾಗಿ ಆಯ್ಕೆಯಾಗುವ ಮುನ್ನವೇ ರವೀಂದ್ರ ಅವರು ಸಮಾಜ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಸಾಕಷ್ಟು ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಪುಸ್ತಕ ವಿತರಣೆ, ಗ್ರಾಮೀಣ ಪ್ರತಿಭೆಗಳನ್ನು ಹೊರಹೊಮ್ಮಿಸಲು ಕ್ರೀಡಾಕೂಟಕ್ಕೆ ಸಹಾಯ. ವಯಸ್ಕರಿಗೆ ತಮ್ಮ ಆರೋಗ್ಯ ಚಿಕಿತ್ಸೆ, ರೈತಾಪಿ ವರ್ಗದವರಿಗೆ ಸೂಕ್ತ ರೀತಿಯಲ್ಲಿ ಕೃಷಿ ಚಟುವಟಿಕೆ ಮಾಡಲು ಅನೇಕ ಮಾಹಿತಿ ಕಾರ್ಯಕ್ರಮ, ಶಾಂತಳ್ಳಿಯ ಗ್ರಾಮೀಣ ಭಾಗದ ಮಕ್ಕಳಿಗೆ ಆಂಗ್ಲ ಮಾಧ್ಯಮ ಶಾಲೆಯನ್ನು ಆರಂಭಿಸಿ ವಿದ್ಯಾಭ್ಯಾಸಕ್ಕೆ ಒತ್ತು ನೀಡುತ್ತಿರುವುದೂ ಸೇರಿದಂತೆ ಇನ್ನಿತರ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಇಂತಹ ಸಮಾಜ ಸೇವಕರನ್ನು ಗುರುತಿಸುವುದು ಸಮಾಜದ ಕರ್ತವ್ಯವೂ ಆಗಿದೆ ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಹರಪಳ್ಳಿ ರವೀಂದ್ರ ಅವರು, ಹಳ್ಳಿಗಾಡಿನಲ್ಲಿ ವಿದ್ಯಾಭ್ಯಾಸ ಮಾಡಿ ದುಡಿದ ಪ್ರತಿಫಲವನ್ನು ಸ್ವಲ್ಪಮಟ್ಟಿಗೆ ನಾಡಿಗೆ ನೀಡುವ ಬಯಕೆಯಿಂದ ತಾನು ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದೇನೆ. ಮುಂದೆಯೂ ಹಲವಾರು ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕಿದೆ. ಸೇವೆಯು ಜನರಿಗೆ ತಲುಪಿದರೆ ಮಾತ್ರ ಸಾರ್ಥಕವಾಗುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶನಿವಾರಸಂತೆ ಒಕ್ಕಲಿಗರ ಸಂಘದ ಅಧ್ಯಕ್ಷ ಕೇಶವಮೂರ್ತಿ ವಹಿಸಿದ್ದರು. ಪ್ರಮುಖರಾದ ಮಂಜೂರು ತಮ್ಮಣಿ, ಹರೀಶ್ ಕುಮಾರ್, ಕೊಡ್ಲಿಪೇಟೆಯ ಸಚಿನ್, ಯುವ ವೇದಿಕೆ ಉಪಾಧ್ಯಕ್ಷ ಪೃಥ್ವಿ ಸೇರಿದಂತೆ ಇತರರು ಇದ್ದರು.