ಮಡಿಕೇರಿ, ಫೆ. ೬: ಸಮರ್ಥ ಕನ್ನಡಿಗರು ಸಂಸ್ಥೆಯ ವತಿಯಿಂದ ಮಡಿಕೇರಿಯ ಲಯನ್ಸ್ ಸಭಾಂಗಣದಲ್ಲಿ ಮಕ್ಕಳ ಕಥೆ ಹೇಳುವ ಸ್ಪರ್ಧೆ ನಡೆಯಿತು. ಆಕಾಶವಾಣಿ ನಿವೃತ್ತ ಉದ್ಘೋಷಕ ಸುಬ್ರಾಯ ಸಂಪಾಜೆ ಕಾರ್ಯಕ್ರಮ ಉದ್ಘಾಟಿಸಿ ಮಾತಾಡಿ, ಮಕ್ಕಳನ್ನು ನಾವು ಬೆಳೆಸುತ್ತೇವೆ. ಏಕಕಾಲದಲ್ಲಿ ಮಕ್ಕಳು ನಮ್ಮನ್ನೂ ಬೆಳೆಸುತ್ತಾರೆ. ಮಕ್ಕಳನ್ನು ಅವರವರ ಆಸಕ್ತಿಯ ಕ್ಷೇತ್ರದಲ್ಲಿ ತೊಡಗಿಸಿ ಬೆಳೆಸುವುದೇ ನಿಜವಾದ ಶಿಸ್ತು. ಮುಂದಿನ ದಿನಗಳಲ್ಲಿ ಹಾಡು ಹೇಳುವ ಕಾರ್ಯಕ್ರಮವನ್ನೂ ಸಮರ್ಥ ಕನ್ನಡಿಗರು ಬಳಗ ಆಯೋಜಿಸುವಂತಾಗಲಿ ಎಂದರು. ಪೊಲೀಸ್ ಇನ್ಸ್ಪೆಕ್ಟರ್ ಚಂದ್ರಶೇಖರ್ ಮಾತನಾಡಿ, ಎಳೆಯ ಮಕ್ಕಳಲ್ಲಿ ಕನ್ನಡದ ಬಗ್ಗೆ ಪ್ರೀತಿ ಅಭಿಮಾನ ಬೆಳೆಸುತ್ತಿರುವ ಬಳಗದ ಕೆಲಸ ಪ್ರಶಂಸಾರ್ಹ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಅವರು ತಮ್ಮ ಹಾಡಿನ ಮೂಲಕ ರಂಜಿಸಿದರು.
ಡಾ. ಶಿಲ್ಪಾ ಸತೀಶ್ ಮಾತನಾಡಿ ಮನುಷ್ಯನ ಮೆದುಳಿನ ಬೆಳವಣಿಗೆಯ ಶೇ. ೯೦ ಭಾಗ ಆರು ವರ್ಷದ ಒಳಗೇ ಆಗುತ್ತದೆ. ಇಂತಹ ಕಥಾ ಕಮ್ಮಟಗಳು ಮಕ್ಕಳಲ್ಲಿ ಧನಾತ್ಮಕ ಚಿಂತನೆ ಮೂಡಿಸಲು ಸಹಕಾರಿ. ಹಿರಿಯರು ಮಕ್ಕಳಿಗೆ ಕಥೆ ಹೇಳುವ ರೂಢಿಯನ್ನು ಉಳಿಸಿಕೊಳ್ಳಬೇಕು ಎಂದರು. ಸಮರ್ಥ ಕನ್ನಡಿಗರು ಸಂಸ್ಥೆಯ ಜಿಲ್ಲಾ ಸಂಚಾಲಕಿ ಜಯಲಕ್ಷಿ÷್ಮ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಕ್ಕಳಲ್ಲಿ ಕಲ್ಪನಾ ಶಕ್ತಿಯನ್ನು ಹೆಚ್ಚಿಸಿ, ಭಾಷಾ ಕೌಶಲ್ಯವನ್ನು ಬೆಳೆಸಿ, ಏಕಾಗ್ರತೆ ಮತ್ತು ನೆನಪಿನ ಶಕ್ತಿಯ ವೃದ್ಧಿಯೊಂದಿಗೆ ನೈತಿಕ ಮೌಲ್ಯಗಳನ್ನು ಬೆಳೆಸಲು ಕಥೆ ಹೇಳುವ ಮತ್ತು ಕಥೆ ಕೇಳುವ ಕಾರ್ಯಕ್ರಮ ಬಹಳ ಸಹಕಾರಿ. ಸಮರ್ಥ ಕನ್ನಡಿಗರು ಸಂಸ್ಥೆ ಪ್ರತಿ ವರ್ಷ ನಡೆಸುವ ನಿಮ್ಮ ಪ್ರತಿಭೆ ನಮ್ಮ ವೇದಿಕೆ ಕಾರ್ಯಕ್ರಮದಲ್ಲಿ ವಿಭಿನ್ನ ಕಾರ್ಯಕ್ರಮಗಳಿರುವುದರಿಂದ ಮಕ್ಕಳ ಕಥೆ ಹೇಳುವ ಸ್ಪರ್ಧೆಗೆ ವಿಶೇಷ ಆದ್ಯತೆ ನೀಡಲು ಸಮಯದ ಅಭಾವವಿರುವುದರಿಂದ ಪ್ರತ್ಯೇಕವಾಗಿ ಕಥೆ ಹೇಳುವ ಸ್ಪರ್ಧೆಯನ್ನು ಆಯೋಜಿಸಿರುವುದಾಗಿ ತಿಳಿಸಿದರು. ಸಮಾರೋಪ ಸಮಾರಂಭ ಮುಖ್ಯ ಅತಿಥಿಗಳಾಗಿ ಆಗಮಿಸಿದ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಲೋಕೇಶ್ ಸಾಗರ್ ಮಾತನಾಡಿದರು. ವೀರಾಜಪೇಟೆ ತಾಲೂಕು ಜಾನಪದ ಪರಿಷತ್ತಿನ ಅಧ್ಯಕ್ಷ ನಾ ಕನ್ನಡಿಗ ಟೋಮಿ ಥೋಮಸ್ ಮಾತನಾಡಿದರು. ತೀರ್ಪುಗಾರರಾಗಿ ಲೇಖಕಿ ಸಹನಾ ಕಾಂತಬೈಲು, ರಾಧಿಕಾ ವಿಶ್ವನಾಥ್ ಹಾಗೂ ವಿಜಯಲಕ್ಷಿ÷್ಮ ಮತ್ತು ಶಶಿಕಿರಣ ಕಾರ್ಯನಿರ್ವಹಿಸಿದರು. ಒಟ್ಟು ೮೬ ಪುಟಾಣಿಗಳು ಕಥಾ ಕಮ್ಮಟದಲ್ಲಿ ಪಾಲ್ಗೊಂಡಿದ್ದರು.