ಗೋಣಿಕೊಪ್ಪಲು, ಫೆ. ೫: ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಅನ್ನು ಕಲಿಕೆಯ ಜೊತೆಗಾರನಾಗಿ ಬಳಸಿಕೊಳ್ಳಬೇಕೇ ವಿನಃ ಇದನ್ನೇ ಸಂಪೂರ್ಣವಾಗಿ ಅವಲಂಬಿಸಬಾರದು, ಎಐ ಶೇ. ೪೦ ರಷ್ಟು ಉದ್ಯೋಗವನ್ನು ಕಸಿದುಕೊಳ್ಳಲಿದೆ. ಅವಶ್ಯಕತೆಗೆ ಅನುಗುಣವಾಗಿ ಟೆಕ್ನಾಲಜಿಯನ್ನು ಬಳಸಿಕೊಳ್ಳುವಂತೆ ಸಾಗರ್ ಆಸ್ಪತ್ರೆಯ ಅಧ್ಯಕ್ಷ ದಯಾನಂದ ಸಾಗರ್ ಯೂನಿವರ್ಸಿಟಿಯ ಚಾನ್ಸಲರ್ ಡಾ.ಡಿ ಹೇಮಚಂದ್ರಸಾಗರ್ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಗೋಣಿಕೊಪ್ಪಲುವಿನ ಕ್ಯಾಲ್ಸ್ ವಿದ್ಯಾಸಂಸ್ಥೆಯಲ್ಲಿ ಆಯೋಜನೆಗೊಂಡಿದ್ದ ೧೮ನೇ ವರ್ಷದ ಗ್ರೇಡ್ ೧೦ ಐಸಿಎಸ್‌ಇ ವಿಭಾಗದ ೨೦೨೫-೨೬ ಸಾಲಿನ ಗ್ರಾಜುಯೇಷನ್ ಸೆರೆಮನಿ ಕಾರ್ಯಕ್ರಮಕ್ಕೆ ಆಗಮಿಸಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ನೆರವೇರಿಸಿ ಮಾತನಾಡಿದ ಅವರು, ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ತಮ್ಮದೇ ಆದ ಪ್ರತಿಭೆಗಳನ್ನು ಹೊರಸೂಸುವ ಮೂಲಕ ಸಾಧನೆ ಮಾಡಬೇಕು. ಆ ನಿಟ್ಟಿನಲ್ಲಿ ಕ್ಯಾಲ್ಸ್ ವಿದ್ಯಾಸಂಸ್ಥೆ ಉತ್ತಮವಾದ ರೀತಿಯಲ್ಲಿ ವಿದ್ಯಾರ್ಥಿಗಳ ಕಲಿಕೆಗೆ ವಾತಾವರಣ ನಿರ್ಮಾಣ ಮಾಡಿದೆ. ಇದರ ಸದ್ಬಳಕೆ ಮಾಡುವ ಮೂಲಕ ವಿದ್ಯಾರ್ಥಿ ಜೀವನದಲ್ಲಿ ಉತ್ತಮ ಸಾಧನೆ ಮಾಡಬೇಕು, ಮುಂದಿನ ದಿನಗಳಲ್ಲಿ ಸಮಾಜಕ್ಕೆ ಹಾಗೂ ಮುಂದಿನ ಪೀಳಿಗೆಗೆ ಬಹುದೊಡ್ಡ ಕೊಡುಗೆ ನೀಡುವ ಜವಾಬ್ದಾರಿ ಯುವ ಜನಾಂಗದ ಮೇಲಿದೆ ಎಂದರು.
ಕ್ಯಾಲ್ಸ್ ವಿದ್ಯಾಸಂಸ್ಥೆಗೆ ಅತಿಥಿ ಗಣ್ಯರನ್ನು ಎನ್‌ಸಿಸಿ ವಿದ್ಯಾರ್ಥಿಗಳು ಹಾಗೂ ಸ್ಕೂಲ್‌ಬ್ಯಾಂಡ್ ತಂಡ ಗೌರವಪೂರ್ವಕವಾಗಿ ಸ್ವಾಗತಿಸುವ ಮೂಲಕ ವೇದಿಕೆಗೆ ಕರೆ ತರಲಾಯಿತು.
ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆಯನ್ನು ಶಾಲೆಯ ಅಧ್ಯಕ್ಷರಾದ ದತ್ತ ಕರುಂಬಯ್ಯ ವಹಿಸಿದ್ದರು. ಮ್ಯಾನೇಜಿಂಗ್ ಟ್ರಸ್ಟಿ ಅಶ್ವಿನಿ ನಾಚಪ್ಪ ಅವರು ಅತಿಥಿ ಗಣ್ಯರಿಗೆ ಕೊಡಗಿನ ಸಾಂಪ್ರದಾಯಿಕ ತೂಕ್‌ಬೊಳ್ಚ ನೆನಪಿನ ಕಾಣಿಕೆಯಾಗಿ ನೀಡಿದರು. ವೇದಿಕೆಯಲ್ಲಿ ಅತಿಥಿ ಗಣ್ಯರಾದ ಆರ್‌ವಿ ಇಂಜಿನಿಯರ್ ಕಾಲೇಜಿನ ಉಪಾಧ್ಯಕ್ಷರಾದ ಚಂದ್ರಶೇಖರ್ ರಾಜು, ಕ್ಯಾಲ್ಸ್ ಮ್ಯಾನೇಜಿಂಗ್ ಟ್ರಸ್ಟಿ ಅಶ್ವಿನಿ ನಾಚಪ್ಪ, ಎಟ್ರಿಯ ಗ್ರೂಪ್‌ನ ಮ್ಯಾನೆಜಿಂಗ್ ಟ್ರಸ್ಟಿ ಕೆ.ನಾಗರಾಜು, ಕ್ಯಾಲ್ಸ್ ವಿದ್ಯಾಸಂಸ್ಥೆಯ ಪ್ರಾಂಶುಪಾಲೆ ಬಾಚಟ್ಟಿರ ಗೌರಮ್ಮ ನಂಜಪ್ಪ ಉಪಸ್ಥಿತರಿದ್ದರು. ಈ ವೇಳೆ ೯೪ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಪತ್ರ ನೀಡಲಾಯಿತು. ನಂಜಪ್ಪ ಸ್ವಾಗತಿಸಿದರು. ಪದವಿ ಪ್ರದಾನ ಸಮಾರಂಭದಲ್ಲಿ ವಿದ್ಯಾರ್ಥಿಗಳಾದ ಲೆವಿನ್ ಅಯ್ಯಪ್ಪ, ನೀತ್ ಸೋಮಯ್ಯ, ತಮ್ಮ ಶಾಲಾ ದಿನಗಳ ಅನುಭವವನ್ನು ಹಂಚಿಕೊAಡರು. ಸಂಸ್ಥೆಯ ಪ್ರಾಂಶುಪಾಲೆ ಬಾಚೆಟ್ಟಿರ ಗೌರಮ್ಮ ಸ್ವಾಗತಿಸಿ, ಕ್ಯಾಲ್ಸ್ ವಿದ್ಯಾರ್ಥಿಗಳು ಪ್ರಾರ್ಥಿಸಿ, ಲವೀನ್ ಅಯ್ಯಪ್ಪ, ನೀತ್ ಸೋಮಯ್ಯ, ಪಟ್ಟಡ ಗಣಪತಿ, ಮನಸ್ವಿ ಪೊನ್ನಪ್ಪ, ನಿಯತಿ ಕಾಳಯ್ಯ, ಮೊಣ್ಣಪ್ಪ ಅಪ್ಪಚ್ಚು ನಿರೂಪಿಸಿ, ದಿವನ್ ದೇವಯ್ಯ ವಂದಿಸಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಪೋಷಕರು ಸೇರಿದಂತೆ ಸಂಸ್ಥೆಯ ಅಧ್ಯಾಪಕ, ಸಿಬ್ಬಂದಿ ವರ್ಗ ಪಾಲ್ಗೊಂಡಿದ್ದರು.