ಮಡಿಕೇರಿ, ಫೆ. ೫: ಪ್ರತಿನಿತ್ಯ ಪುಸ್ತಕಗಳನ್ನು ಓದುವುದರಿಂದ ಆರೋಗ್ಯ ರಕ್ಷಿಸಲ್ಪಡುತ್ತದೆ ಎಂದು ಕ್ರೀಡಾ ಬರಹಗಾರ, ಕರ್ನಾಟಕ ಮಾಧ್ಯಮ ಅಕಾಡೆಮಿ ಮಾಜಿ ಅಧ್ಯಕ್ಷ ಮನೆಯಪಂಡ ಎ. ಪೊನ್ನಪ್ಪ ಹೇಳಿದರು.
ಅಲ್ಲಾರಂಡ ರಂಗಚಾವಡಿ, ಸಿರಿಗನ್ನಡ ವೇದಿಕೆ, ಚಕೋರ ಕೊಡಗು ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ನಗರದ ಗಾಂಧಿ ಭವನದಲ್ಲಿ ಆಯೋಜಿಸಲಾಗಿದ್ದ ಅಲ್ಲಾರಂಡ ವಿಠಲ ನಂಜಪ್ಪ ಅವರ ‘ಬಹುರೂಪಿ’ ಪುಸ್ತಕ ಬಿಡುಗಡೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬಹುರೂಪಿ ಪುಸ್ತಕವನ್ನು ಎಲ್ಲರೂ ಓದುವಂತಾಗಬೇಕು. ಅದರಲ್ಲಿರುವ ಮೊದಲ ೨೦ ಲೇಖನಗಳ ಬಗ್ಗೆ ಚರ್ಚೆ ಆಗಬೇಕು. ಪದ್ಮಶ್ರೀ ರಾಣಿ ಮಾಚಯ್ಯ ಸೇರಿದಂತೆ ಸಾಧಕರ ಸಾಕ್ಷö್ಯಚಿತ್ರವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ಮಾಣ ಮಾಡಿ ಜನರಿಗೆ ತಲುಪಿಸಬೇಕು ಎಂದು ಪೊನ್ನಪ್ಪ ನುಡಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಹಿರಿಯ ವಕೀಲ, ಸಾಹಿತಿ ಕೆ.ಪಿ. ಬಾಲಸುಬ್ರಮಣ್ಯ ಕಂಜರ್ಪಣೆ ಮಾತನಾಡಿ, ಸಾಹಿತ್ಯದಲ್ಲಿ ಭಾಷೆಯನ್ನು ಬಳಸುವಾಗ ಹೊಸ ಹೊಸ ಪದಗಳನ್ನು ಪ್ರಯೋಗ ಮಾಡಿದರೆ ಅದು ಭಾಷೆಗೆ ನಾವು ಕೊಡುವ ಕಾಣಿಕೆಯಾಗುತ್ತದೆ. ಅಸಹಾಯಕರಿಗೆ ಅಗತ್ಯವಾದ ಅನುಕೂಲಗಳನ್ನು ಕಲ್ಪಿಸುವುದೇ ದೇವರ ಸೇವೆ ಎಂದರಲ್ಲದೆ ಭಾಷೆ ಎಂಬುದು ನಿರಂತರ ಕಲಿಕೆಯ ಪ್ರಕ್ರಿಯೆ ಎಂದು ನುಡಿದರು.
ಮೈಸೂರಿನ ಬಾರುಕೋಲು ಪತ್ರಿಕೆ ಸಂಪಾದಕ ಬಿ.ಆರ್. ರಂಗಸ್ವಾಮಿ ಮಾತನಾಡಿ, ಬಹುರೂಪಿ ಪುಸ್ತಕದಲ್ಲಿ ಕೊಡವ ನೆಲದ ಧ್ವನಿ ಇದೆ. ಕೊಡಗಿನಲ್ಲಿ ಪ್ರಸ್ತುತ ಏನಾಗಬೇಕಾಗಿದೆ ಎಂಬ ಹಲವು ವಿಷಯಗಳು ಪುಸ್ತಕದಲ್ಲಿದೆ ಎಂದು ಹೇಳಿದರು.
ಮಂಗಳೂರು ವಿಶ್ವ ವಿದ್ಯಾನಿಲಯದ ಸಂಸ್ಕೃತಿ ಚಿಂತಕರಾದ ಪ್ರೊ. ಟಿ. ರಂಗಪ್ಪ ಮಾತನಾಡಿ, ಬಹುರೂಪಿ ಪುಸ್ತಕದಲ್ಲಿ ಹಲವಾರು ಪ್ರಮುಖ ಗಂಭೀರ ಚಿಂತನೆಯ ವಿಚಾರಗಳಿವೆ. ಕೊಡಗಿನ ಹಲವು ಮಹನೀಯರ ಬಗ್ಗೆ, ಅವರ ಸಾಧನೆ ಕುರಿತು ಪ್ರಸ್ತಾಪಿಸಲಾಗಿದೆ ಎಂದು ತಿಳಿಸಿದರು. ಸಾಹಿತಿ ಡಾ. ಸೋಮಣ್ಣ ಪ್ರಾಸ್ತಾವಿಕವಾಗಿ ಮಾತನಾಡಿ, ಅಲ್ಲಾರಂಡ ವಿಠಲ ನಂಜಪ್ಪ ಅವರ ಬೇರೆ ಬೇರೆ ಕೃತಿಗಳನ್ನು ಒಳಗೊಂಡ ಬಹುರೂಪಿ ಪುಸ್ತಕವನ್ನು ಹೊರತರಲಾಗಿದೆ ಎಂದರು.ವೇದಿಕೆಯಲ್ಲಿ ಅತಿಥಿಗಳಾಗಿ ನಿವೃತ್ತ ಪ್ರಾಂಶುಪಾಲೆ ಕಲ್ಲುಮಾಡಂಡ ಸರಸ್ವತಿ ಉಪಸ್ಥಿತರಿದ್ದರು. ಪತ್ರಕರ್ತ ರಂಜಿತ್ ಕವಲಪಾರ ನಿರೂಪಿಸಿ, ಅಲ್ಲಾರಂಡ ವಿಠಲ ನಂಜಪ್ಪ ಸ್ವಾಗತಿಸಿದರು. ಭರಮಣ್ಣ ರಂಗಗೀತೆ ಹಾಡಿದರು.