ಮಡಿಕೇರಿ, ಫೆ. ೪: ರೈಲ್ವೆ ಸಂಪರ್ಕ ಇಲ್ಲದ ರಾಜ್ಯದ ಏಕೈಕ ಜಿಲ್ಲೆ ಎಂದು ಕರೆಸಿಕೊಳ್ಳುವ ಕೊಡಗಿನಲ್ಲಿ ಯೋಜನೆ ಅನುಷ್ಠಾನ ಅಸಾಧ್ಯ ಎಂಬ ಸ್ಥಿತಿ ಸದ್ಯಕ್ಕೆ ನಿರ್ಮಾಣವಾಗಿದೆ. ಇದರೊಂದಿಗೆ ಯೋಜನೆಯ ಬಗ್ಗೆ ಪರ-ವಿರೋಧ ಚರ್ಚೆಯೂ ವ್ಯಕ್ತವಾಗುತ್ತಿದೆ.

ಮೈಸೂರು-ಕುಶಾಲನಗರ ತನಕದ ೮೯ ಕಿ.ಮೀ. ಉದ್ದದ ರೈಲ್ವೆ ನಿರ್ಮಾಣಕ್ಕೆ ಹಲವು ವರ್ಷಗಳಿಂದ ಪ್ರಯತ್ನ ಸಾಗುತ್ತಿತ್ತು. ಕೊಡಗಿನ ಅಳಿಯ, ಕೇಂದ್ರದ ಮಾಜಿ ರೈಲ್ವೆ ಸಚಿವ ಡಿ.ವಿ. ಸದಾನಂದ ಗೌಡ ಅವರು ಕೂಡ ಈ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿದ್ದರು. ಹಿಂದಿನ ಸಂಸದ ಪ್ರತಾಪ್ ಸಿಂಹ ಕೂಡ ರೈಲ್ವೆ ಯೋಜನೆ ಮಾಡೇ ಮಾಡುತ್ತೇನೆ ಎಂದು ಪಣ ತೊಟ್ಟಿದ್ದರು. ಈ ಸಂಬAಧ ಫೈನಲ್ ಲೋಕೇಷನ್ ಸರ್ವೆ ಸೇರಿದಂತೆ ಕೆಲ ಪ್ರಕ್ರಿಯೆಗಳು ನಡೆದಿದ್ದವು. ೨೦೧೯ರಲ್ಲಿ ಕೇಂದ್ರ ಇದಕ್ಕೆ ಅನುಮೋದನೆ ನೀಡಿ ಪಿಂಕ್ ಬುಕ್‌ನಲ್ಲೂ ದಾಖಲಾಗಿತ್ತು. ಆದರೆ, ಈ ಯೋಜನೆಯಿಂದ ದೀರ್ಘಾವಧಿಯಲ್ಲಿ ಯಾವುದೇ ಲಾಭವಿಲ್ಲ ಎಂದು ನೈಋತ್ಯ ರೈಲ್ವೆ ವಿಭಾಗೀಯ ಅಧಿಕಾರಿಗಳು ವರದಿ ನೀಡಿರುವ ಕಾರಣದಿಂದ ಯೋಜನೆ ಕೈಬಿಡಲಾಗಿದೆ ಎಂಬ ಅಂಶ ಹೊರಬಿದ್ದಿದೆ.

ಹಾಲಿ ಸಂಸದ ಯದುವೀರ್ ಅವರು, ಯೋಜನೆ ರದ್ದಾಗಿಲ್ಲ. ಕೇವಲ ಸ್ಥಗಿತವಾಗಿದೆ. ಈ ಯೋಜನೆ ವಿಳಂಬವಾಗಲು ರಾಜ್ಯ ಸರಕಾರದ ವಿಳಂಬ ನೀತಿ ಕಾರಣ ಎಂದು ಆರೋಪಿಸುತ್ತಿದ್ದಾರೆ.

ಮತ್ತೊಂದೆಡೆ ಸಂಸದರ ಹೇಳಿಕೆಯನ್ನು ಕಾಂಗ್ರೆಸ್ ವಿರೋಧಿಸಿದ್ದು, ಸೂಕ್ತ ಆದಾಯ ಬರುವುದಿಲ್ಲ ಎಂದು ಸ್ಥಗಿತಗೊಳಿಸಲಾಗಿದ್ದು, ರಾಜ್ಯ ಸರಕಾರದ ಕಡೆÀ ಬೊಟ್ಟು ಮಾಡುವುದು ಸರಿಯಲ್ಲ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷö್ಮಣ ದೂರಿದ್ದಾರೆ. ರೈಲ್ವೆ ಯೋಜನೆ ಇದೀಗ ರಾಜಕೀಯ ಚರ್ಚೆಯಾಗಿ ಪರಿವರ್ತನೆಯಾದಂತೆ ಬಿಂಬಿತವಾಗುತ್ತಿದೆ.

ಈ ಯೋಜನೆಗೆ ಒಟ್ಟಾರೆಯಾಗಿ ೩೧೦೦ ಕೋಟಿ ವೆಚ್ಚ ತಗುಲುವ ಸಾಧ್ಯತೆ ಇದ್ದು, ಕೇಂದ್ರ ಸರಕಾರ ೧,೮೫೪ ಕೋಟಿ ಮೊತ್ತಕ್ಕೆ ಅನುಮೋದನೆ ನೀಡಿತ್ತು. ೧೩೭೯ ಎಕರೆ ಜಾಗವನ್ನು ಭೂಸ್ವಾಧೀನ ಮಾಡಿಕೊಳ್ಳುವ ಪ್ರಸ್ತಾಪವಿತ್ತು. ಇವೆಲ್ಲದರ ನಡುವೆ ಪರಿಸರವಾದಿಗಳು ಈ ಯೋಜನೆಯಿಂದ ಯಾವುದೇ ಲಾಭವಿಲ್ಲ ಎಂಬ ಆರೋಪ ಮಾಡುತ್ತಿದ್ದಾರೆ. ವ್ಯಾಪಾರಿಗಳು ಸೇರಿದಂತೆ ಕೆಲ ರಾಜಕಾರಣಿಗಳು ರೈಲು ಕೊಡಗಿಗೆ ಬೇಕೆಂಬ ನಿಲುವನ್ನು ತಾಳಿದ್ದಾರೆ.

ರಾಜ್ಯದ ವಿಳಂಬ ನೀತಿ ಕಾರಣ : ಯದುವೀರ್

ಮೈಸೂರಿನಿಂದ ಕುಶಾಲನಗರದವರೆಗಿನ ಉದ್ದೇಶಿತ ರೈಲು ಸಂಪರ್ಕ ಯೋಜನೆ ಸ್ಥಗಿತಗೊಂಡಿದೆ ಹೊರತು ರದ್ದಾಗಿಲ್ಲ. ಈ ಯೋಜನೆಗೆ ಹಿನ್ನಡೆಯಾಗಲು ರಾಜ್ಯದ ವಿಳಂಬ ನೀತಿಯೇ ಕಾರಣವಾಗಿದೆ ಎಂದು ಮೈಸೂರು ಕೊಡಗು ಸಂಸದ ಯದುವೀರ್ ಒಡೆಯರ್ ಆರೋಪಿಸಿದ್ದಾರೆ.

ರೈಲು ಮಾರ್ಗದ ಈ ಯೋಜನೆ ಸಾಗುವ ಪ್ರದೇಶಗಳಲ್ಲಿ ರಾಜ್ಯ ಸರ್ಕಾರ ಭೂ ಸ್ವಾದೀನ ಪ್ರಕ್ರಿಯೆ ಕೈಗೊಳ್ಳಬೇಕಾಗಿತ್ತು. ಆದರೆ ಸಾಕಷ್ಟು ಮನವಿ ಬಳಿಕವೂ ಭೂಸ್ವಾಧೀನ ಪ್ರಕ್ರಿಯೆ ಕೈಗೊಳ್ಳದೇ ವಿಳಂಬ ನೀತಿ ಅನುಸರಿಸಿದೆ. ಹೀಗಾಗಿ ರೈಲು ಸಂಪರ್ಕ ಯೋಜನೆ ವಿಳಂಬವಾಗಿದೆ. ಮತ್ತೊಮ್ಮೆ ರಾಜ್ಯ ಸರ್ಕಾರಕ್ಕೆ ಯೋಜನೆ ಬಗ್ಗೆ ಮನವರಿಕೆ ಮಾಡಿ ಭೂಸ್ವಾಧೀನ ಪ್ರಕ್ರಿಯೆಗೆ ಚಾಲನೆ ನೀಡುವಂತೆ ಕೋರಲಾಗುತ್ತದೆ. ರೈಲು ಸಂಪರ್ಕಕ್ಕೆ ಆರ್ಥಿಕವಾಗಿ ಯೋಜನೆ ಫಲಕಾರಿಯಲ್ಲ ಎಂಬ ಕಾರಣ ಯೋಜನೆ ವಿಳಂಬಕ್ಕೆ ಕಾರಣವಲ್ಲ. ಕೆಲವೊಮ್ಮೆ ಆರ್ಥಿಕ ಲಾಭ ನೋಡುವುದಕ್ಕಿಂತ ಉದ್ದೇಶಿತ ಸ್ಥಳಗಳಿಗೆ ರೈಲು ಸಂಪರ್ಕ ಕಲ್ಪಿಸುವ ಸಾಧ್ಯತೆ ಬಗ್ಗೆ ಗಮನ ನೀಡುವುದು ಮುಖ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ.

ರಾಜ್ಯ ಸರಕಾರದ ಸ್ಪಂದನ ಬೇಕು : ಡಿ.ವಿ. ಸದಾನಂದಗೌಡ

ಭೂ ಸ್ವಾಧೀನ ಪ್ರಕ್ರಿಯೆಯೊಂದಿಗೆ ರೈಲ್ವೆ ಯೋಜನೆ ಅನುಷ್ಠಾನಕ್ಕೆ ರಾಜ್ಯ ಸರಕಾರ ಸೂಕ್ತ ಸ್ಪಂದನ ನೀಡಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರದ ರೈಲ್ವೆ ಸಚಿವರಾಗಿದ್ದ ಡಿ.ವಿ. ಸದಾನಂದಗೌಡ ತಿಳಿಸಿದ್ದಾರೆ.

ರಾಜ್ಯ ಸರಕಾರ ಕೂಡ ಕುಶಾಲನಗರ-ಮೈಸೂರು ರೈಲ್ವೆ ಯೋಜನೆಗೆ ಒತ್ತಡ ಹಾಕಬೇಕು. ತಾನು ಮುಖ್ಯಮಂತ್ರಿಯಾಗಿದ್ದ ಸಂದರ್ಭ ರೈಲ್ವೆ ಯೋಜನೆಯನ್ನು ಬಳಸಿಕೊಂಡಿದ್ದೆ. ಭೂಸ್ವಾಧೀನ ಪ್ರಕ್ರಿಯೆಯನ್ನು ರಾಜ್ಯ ಸರಕಾರ ನಡೆಸುವುದು. ಉಳಿದ ಮೊತ್ತವನ್ನು ಕೇಂದ್ರ ಭರಿಸಬೇಕೆಂದು ಮಾಡಿ ಅನುಷ್ಠಾನ ಮಾಡಿದ್ದೇವೆ. ಭೂಸ್ವಾಧೀನದ ತೊಂದರೆ ಇದ್ದರೂ ರಾಜ್ಯ ಸರಕಾರ ಗಂಭೀರ ಪರಿಗಣಿಸಿ ಯೋಜನೆ ಕಾರ್ಯಗತಕ್ಕೆ ಪ್ರಯತ್ನಿಸಬೇಕು. ರೈಲ್ವೆಗಾಗಿ ಪ್ರತ್ಯೇಕ ಬಜೆಟ್ ಇಲ್ಲ. ಅಗತ್ಯ ಅನುದಾನ, ಹೊಸ ಯೋಜನೆ ರೂಪಿಸಲು ಎಲ್ಲಾ ಅವಕಾಶವಿದೆ. ಇದಕ್ಕಾಗಿ ಆಯವ್ಯಯದಲ್ಲಿಯೇ ಘೋಷಣೆಯಾಗಬೇಕೆಂದಿಲ್ಲ ಎಂದರು.

ಅಧ್ಯಯನದ ಅಗತ್ಯತೆ ಇದೆ : ಪೊನ್ನಣ್ಣ

ಕುಶಾಲನಗರ-ಮೈಸೂರು ರೈಲ್ವೆ ಬಗ್ಗೆ ಅಧ್ಯಯನದ ಅಗತ್ಯತೆ ಇದೆ. ರೈಲ್ವೆ ಇಲಾಖೆಯೇ ಲಾಭದಾಯಕವಲ್ಲ ಎಂದು ತಿರಸ್ಕಾರ ಮಾಡಿದ ಮೇಲೆ ರಾಜ್ಯ ಸರಕಾರದ ಮೇಲೆ ವೃಥಾ ಆರೋಪ ಮಾಡುವುದು ಸರಿಯಲ್ಲ ಎಂದು ಮುಖ್ಯಮಂತ್ರಿಯವರ ಕಾನೂನು ಸಲಹೆಗಾರ, ವೀರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಹೇಳಿದ್ದಾರೆ.

ಈ ವಿಷಯ ಮುಂದಿಟ್ಟು ರಾಜಕೀಯ ಮಾಡಬಾರದು. ರೈಲು ಕೊಡಗಿಗೆ ಬೇಕು, ಬೇಡ ಎನ್ನುವ ವಿಷಯದಲ್ಲಿ ಪರ-ವಿರೋಧವಿದೆ. ಈ ಯೋಜನೆಯಿಂದ ಲಾಭವಿದೆ, ಪರಿಸರಕ್ಕೆ ನಷ್ಟವಿಲ್ಲ ಎಂದಾದಲ್ಲಿ ಅದನ್ನು ವಿರೋಧ ಮಾಡುವವರಿಗೆ ತಿಳಿಸಬೇಕು. ಲಾಭವಿಲ್ಲ ಎಂದಾದಲ್ಲಿ ಯೋಜನೆಯ ಪರ ನಿಲುವು ಹೊಂದಿರುವವರಿಗೆ ವಿವರಿಸಬೇಕು. ಈ ವಿಷಯದಲ್ಲಿ ಜನಾಭಿಪ್ರಾಯ ಅತೀ ಮುಖ್ಯವಾಗುತ್ತದೆ. ರೈಲ್ವೆ ಇಲಾಖೆಯ ವರದಿ ಅರ್ಥೈಸಿಕೊಂಡು ಬಿಜೆಪಿಯವರು ಹೇಳಿಕೆ ನೀಡಬೇಕು. ರಾಜಕೀಯ ದ್ವೇಷಕ್ಕಾಗಿ ಬಾಲಿಶ ಹೇಳಿಕೆಗಳನ್ನು ನೀಡಬಾರದು. ರೈಲ್ವೆ ಇಲಾಖೆ ಈ ಕುರಿತು ಪೂರಕ ವರದಿ ನೀಡಿ, ಇದರಿಂದ ಕೊಡಗಿನ ಪರಿಸರಕ್ಕೆ, ಜನಜೀವನದ ಮೇಲೆ ಯಾವುದೇ ಹಾನಿಯಿಲ್ಲ ಎಂದು ತಿಳಿಸಿದ್ದಲ್ಲಿ ರಾಜ್ಯ ಸರಕಾರದ ಗಮನ ಸೆಳೆಯುವ ಕೆಲಸವನ್ನೂ ಮಾಡುತ್ತೇನೆ. ಜನಾಭಿಪ್ರಾಯದಡಿಯಷ್ಟೆ ಮುಂದುವರೆಯಲು ಸಾಧ್ಯ ಎಂದು ಪೊನ್ನಣ್ಣ ಅವರು ಸ್ಪಷ್ಟಪಡಿಸಿದ್ದಾರೆ.

ಲಾಭದಾಯಕವಲ್ಲ ಎಂದು ತಿರಸ್ಕೃತ : ಮಂತರ್

ರೈಲ್ವೆ ಯೋಜನೆಯನ್ನು ನೈಋತ್ಯ ರೈಲ್ವೆ ವಿಭಾಗ ಲಾಭದಾಯಕವಲ್ಲ ಎಂದು ತಿರಸ್ಕರಿಸಿದೆ. ಅಲ್ಲಿಂದ ಅನುಮೋದನೆ ನಂತವಷ್ಟೆ ರಾಜ್ಯ ಸರಕಾರ ಈ ಯೋಜನೆಯನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಸಾಧ್ಯ ಎಂದು ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ತಿಳಿಸಿದ್ದಾರೆ.

ಬಜೆಟ್‌ನಲ್ಲಿ ಕರ್ನಾಟಕಕ್ಕೆ ಅನ್ಯಾಯ ಮಾಡಿರುವ ಕೇಂದ್ರ ಸರಕಾರ ಇದೀಗ ಈ ವಿಚಾರದಲ್ಲಿ ರಾಜ್ಯ ಸರಕಾರವನ್ನು ದೂರುವುದು ಸರಿಯಲ್ಲ. ದೀರ್ಘಾವಧಿಯಲ್ಲಿ ಈ ಯೋಜನೆ ೪ಆರನೇ ಪುಟಕ್ಕೆ

ಲಾಭದಾಯಕವಲ್ಲ ಎಂದು ಇಲಾಖೆಯೇ ಸ್ಪಷ್ಟಪಡಿಸಿರುವುದರಿಂದ ರಾಜ್ಯ ಸರಕಾರ ಏನು ಮಾಡಲಾಗುವುದಿಲ್ಲ ಎಂದಿದ್ದಾರೆ.

ಇಚ್ಛಾಶಕ್ತಿಯ ಕೊರತೆ : ಸುಜಾ

ಮೈಸೂರು-ಕುಶಾಲನಗರ ರೈಲು ಮಾರ್ಗವನ್ನು ಸ್ಥಗಿತ ಮಾಡಿರುವುದು ವಿಷಾದನೀಯ. ರಾಜ್ಯ ಸರ್ಕಾರವು ಯೋಜನೆಗೆ ಭೂಮಿ ವ್ಯವಸ್ಥೆ ಮತ್ತು ಹಣ ಹಂಚಿಕೊಳ್ಳುವ ಕುರಿತು ತಕರಾರು ವ್ಯಕ್ತಪಡಿಸಿರುವುದು ಮುಖ್ಯ ಕಾರಣ. ರಾಜ್ಯ ಸರ್ಕಾರದ ಇಚ್ಛಾಶಕ್ತಿಯ ಕೊರತೆಯಿಂದಾಗಿ ಮಹತ್ವಾಕಾಂಕ್ಷೆಯ ಯೋಜನೆ ಕೈತಪ್ಪಿದಂತಾಗಿದೆ ಎಂದು ವಿಧಾನ ಪರಿಷತ್ತು ಸದಸ್ಯ ಎಂ.ಪಿ. ಸುಜಾ ಕುಶಾಲಪ್ಪ ದೂರಿದ್ದಾರೆ.

ಅಭಿವೃದ್ಧಿ ವಿರೋಧಿ ಸರ್ಕಾರ ಪ್ರಸ್ತುತ ರಾಜ್ಯದಲ್ಲಿದೆ. ಇಂತಹ ಸಂದರ್ಭದಲ್ಲಿ ಹೇಗೆ ತಾನೇ ಅಭಿವೃದ್ಧಿ ನಿರೀಕ್ಷಿಸಲು ಸಾಧ್ಯ. ಕೊಡಗಿನ ಜನರ ೧೪ ವರ್ಷಗಳ ಕನಸಿಗೆ ತಣ್ಣೀರು ಎರಚಿದಂತಾಗಿದೆ ಎಂದು ಅತೃಪ್ತಿ ವ್ಯಕ್ತಪಡಿಸಿದ್ದಾರೆ.

ರಾಜ್ಯ ಸರಕಾರದ ಸಹಕಾರ ಅತ್ಯಗತ್ಯ - ಪ್ರತಾಪ್ ಸಿಂಹ

ಈ ಯೋಜನೆ ಸಾಕಾರಗೊಳ್ಳಬೇಕಾದರೆ ರಾಜ್ಯ ಸರಕಾರದ ಸಹಕಾರ ಅತ್ಯಗತ್ಯ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ತಿಳಿಸಿದ್ದಾರೆ.

ತಾನು ಸಂಸದನಾಗಿದ್ದ ಸಮಯದಲ್ಲಿ ಕುಶಾಲನಗರ-ಮೈಸೂರು ಜಿಲ್ಲೆಗೆ ರೈಲ್ವೆ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನವನ್ನು ನಡೆಸಿದ್ದೆ. ೨೦೧೮ರ ಬಜೆಟ್‌ನಲ್ಲಿ ಯೋಜನೆ ಅನುಮೋದನೆಗೊಂಡು ಫೈನಲ್ ಲೊಕೇಷನ್ ಸರ್ವೆ, ಡಿಪಿಆರ್ ಸೇರಿದಂತೆ ಪೂರಕ ಪ್ರಕ್ರಿಯೆಗಳೆಲ್ಲವು ನಡೆದಿದ್ದವು. ರೈಲ್ವೆ ಯೋಜನೆ ಕಾರ್ಯಗತಗೊಳ್ಳಬೇಕಾದರೆ ಆಯಾ ರಾಜ್ಯಗಳು ಭೂಸ್ವಾಧೀನ ಪ್ರಕ್ರಿಯೆ ಹಾಗೂ ಯೋಜನೆಗೆ ಶೇ ೫೦ ಹಣವನ್ನು ಒದಗಿಸಬೇಕು. ಆದರೆ, ಇದನ್ನು ರಾಜ್ಯ ಸರಕಾರ ನೀಡಿಲ್ಲ. ಬಿಜೆಪಿ ಅವಧಿಯಲ್ಲಿ ಸರ್ವೆ ಕಾರ್ಯ ನಡೆಯುತ್ತಿದ್ದ ಕಾರಣ ಆ ಸರಕಾರದಿಂದ ಅನುದಾನ ಬಿಡುಗಡೆ ಸಾಧ್ಯವಾಗಿರಲಿಲ್ಲ. ಅಲ್ಲದೆ, ಈ ಯೋಜನೆಯಿಂದ ಕೊಡಗಿನಲ್ಲಿ ಯಾವ ರೀತಿ ಪರಿಸರ ನಾಶವೂ ಆಗುವುದಿಲ್ಲ. ಜೊತೆಗೆ ಪಿರಿಯಾಪಟ್ಟಣ, ಹುಣಸೂರು ಜನರಿಗೂ ಸಹಾಯಕವಾಗಲಿದೆ. ಸಾರಿಗೆ ಸಂಪರ್ಕಕ್ಕೆ ಈ ಯೋಜನೆ ಅತ್ಯಂತ ಸಹಾಯಕವಾಗಿದ್ದು, ರಾಜ್ಯ ಸರಕಾರ ಮನಸ್ಸು ಮಾಡಿದರೆ ಎಲ್ಲವೂ ಸರಿಯಾಗುತ್ತದೆ. ಕೊಡಗಿನ ಶಾಸಕರು ಸೇರಿದಂತೆ ಪಿರಿಯಾಪಟ್ಟಣ ಪ್ರತಿನಿಧಿಸುವ ಶಾಸಕರು, ಸಚಿವರೂ ಆಗಿರುವುದರಿಂದ ಅವರುಗಳು ಸರಕಾರದ ಗಮನ ಸೆಳೆಯಬೇಕಾಗಿದೆ ಎಂದು ಹೇಳಿದ್ದಾರೆ.

ವಿರೋಧಿ ನೀತಿಯಿಂದ ಸ್ಥಗಿತ : ಕೆಜಿಬಿ

ರಾಜ್ಯ ಸರಕಾರ ಕೇಂದ್ರ ಸರಕಾರದ ವಿರೋಧಿ ನೀತಿ ಹೊಂದಿರುವ ಪರಿಣಾಮ ಕುಶಾಲನಗರ-ಮೈಸೂರು ರೈಲ್ವೆ ಯೋಜನೆ ಸ್ಥಗಿತಗೊಂಡಿದೆ ಎಂದು ಮಾಜಿ ಸಭಾಧ್ಯಕ್ಷ ಕೆ.ಜಿ. ಬೋಪಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕೊಡಗಿಗೆ ರೈಲು ಸಂಪರ್ಕ ಅತ್ಯಗತ್ಯವಾಗಿದೆ. ಅಲ್ಲದೆ ಬಹುಕಾಲದ ಬೇಡಿಕೆ ಕೂಡ ಆಗಿದೆ. ಡಿ.ವಿ. ಸದಾನಂದಗೌಡ ಅವರು ರೈಲ್ವೆ ಸಚಿವರಾಗಿದ್ದ ಸಂದರ್ಭ ವಿಶೇಷ ಆಸಕ್ತಿ ವಹಿಸಿ ಯೋಜನೆ ಮಂಜೂರಾತಿಗೊಳಿಸಿದ್ದರು. ಇದಕ್ಕೆ ಸಂಬAಧಿಸಿದ ಪ್ರಕ್ರಿಯೆಯೂ ಆಗಿದೆ. ಆದರೆ, ರಾಜ್ಯ ಸರಕಾರ ಭೂಸ್ವಾಧೀನ ಹಾಗೂ ಶೇ ೫೦ ಹಣ ನೀಡದ ಕಾರಣದಿಂದ ಯೋಜನೆ ಸ್ಥಗಿತದ ಹಂತಕ್ಕೆ ಹೋಗಿದೆ ಎಂದು ತಿಳಿಸಿದ್ದಾರೆ.

ಅನುಷ್ಠಾನಕ್ಕೆ ಕೇಂದ್ರ ತಯಾರಿದೆ : ರಂಜನ್

ರೈಲ್ವೆ ಯೋಜನೆ ಅನುಷ್ಠಾನ ಮಾಡಲು ಕೇಂದ್ರ ಸರಕಾರ ತಯಾರಿದೆ. ರಾಜ್ಯ ಸರಕಾರದ ಸಹಕಾರ ಬೇಕೆಂದು ಮಾಜಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ತಿಳಿಸಿದ್ದಾರೆ.

ಸಂಸದರು ಈ ಕುರಿತು ಕಾಳಜಿ ವಹಿಸಿದ್ದಾರೆ. ಕೇಂದ್ರವೂ ಕಾರ್ಯಗತಗೊಳಿಸಬೇಕೆಂಬ ಇರಾದೆ ಹೊಂದಿದೆ. ಈ ಹಿಂದೆ ರೈಲ್ವೆ ಸಚಿವ (ರಾಜ್ಯ ಖಾತೆ) ವಿ. ಸೋಮಣ್ಣ ಅವರೊಂದಿಗೆ ಮಾತನಾಡುವಾಗ ಅವರು ಕೂಡ ಯೋಜನೆ ಅನುಷ್ಠಾನಕ್ಕೆ ಸಹಕಾರ ನೀಡುವುದಾಗಿ ಭರವಸೆ ನೀಡಿದ್ದರು. ಆದರೆ, ರಾಜ್ಯ ಸರಕಾರ ಭೂಸ್ವಾಧೀನಕ್ಕೆ ಸಂಬAಧಿಸದAತೆ ಸಹಕಾರ ನೀಡದ ಪರಿಣಾಮ ಕಾರ್ಯಗತಗೊಳ್ಳುತ್ತಿಲ್ಲ. ರೈಲ್ವೆ ಯೋಜನೆಯಿಂದ ಆದಾಯ ಬರುವುದಿಲ್ಲ ಎಂಬ ತಪ್ಪು ಗ್ರಹಿಕೆ ಇದೆ. ಈ ಬಗ್ಗೆ ಗಮನಸೆಳೆಯುವ ಪ್ರಯತ್ನ ಮಾಡಲಾಗುವುದು. ರೈಲ್ವೆ ಯೋಜನೆ ಜಿಲ್ಲೆಗೆ ಅಗತ್ಯವಾಗಿದೆ ಎಂದು ಪ್ರತಿಪಾದಿಸಿದ್ದಾರೆ.

ರಾಜ್ಯದ ಬಳಿ ಹಣವಿಲ್ಲ : ಸುನಿಲ್ ಸುಬ್ರಮಣಿ

ರೈಲ್ವೆ ಯೋಜನೆಗೆ ಸಹಕಾರ ನೀಡಬೇಕಾದ ರಾಜ್ಯ ಸರಕಾರದ ಬಳಿ ಹಣವಿಲ್ಲ ಎಂದು ಕೇಂದ್ರದ ಮೇಲೆ ಗೂಬೆ ಕೂರಿಸುವ ಕೆಲಸವಾಗುತ್ತಿದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ ದೂರಿದ್ದಾರೆ.

ಸಂಸದ ಯದುವೀರ್ ಅವರು ಕ್ಷೇತ್ರದಲ್ಲಿ ಅತ್ಯಂತ ಕ್ರಿಯಾಶೀಲರಾಗಿ ಕೆಲಸ ಮಾಡುತ್ತಿದ್ದಾರೆ. ಸಂಬAಧಪಟ್ಟ ಸಚಿವರೊಂದಿಗೆ ಸಮನ್ವಯತೆ ಸಾಧಿಸುತ್ತಿದ್ದಾರೆ. ವಿಷಯವನ್ನು ಮನದಟ್ಟು ಮಾಡಿದ್ದಾರೆ. ಆದರೆ, ರಾಜ್ಯ ಸರಕಾರ ಭೂಸ್ವಾಧೀನದಂತಹ ಪ್ರಕ್ರಿಯೆಗೆ ಕೈಜೋಡಿಸುತ್ತಿಲ್ಲ. ಕೇಂದ್ರ ಸರಕಾರ ತಾಯಿ ಹಾಗೂ ರಾಜ್ಯ ಸರಕಾರ ಮಗನ ಸ್ಥಾನದಲ್ಲಿದ್ದು, ಅಭಿವೃದ್ಧಿ ವಿಚಾರದಲ್ಲಿ ಪರಸ್ಪರ ಸಹಕಾರ ನೀಡಬೇಕು. ಇಲ್ಲದಿದಲ್ಲಿ ಸಮಸ್ಯೆ ಉಂಟಾಗುತ್ತದೆ ಎಂದು ಹೇಳಿದ್ದಾರೆ.

ರೈಲಿನ ಅವಶ್ಯಕತೆ ಇಲ್ಲ : ವೀಣಾ

ಕುಶಾಲನಗರ-ಮೈಸೂರು ರೈಲ್ವೆ ಯೋಜನೆ ಅನುಷ್ಠಾನಕ್ಕೆ ಮೊದಲಿನಿಂದಲೂ ವಿರೋಧವಿದೆ. ಕೊಡಗು ಕೊಡಗಾಗಿಯೇ ಉಳಿಯಬೇಕು. ಕೊಡಗಿಗೆ ರೈಲಿನ ಅವಶ್ಯಕತೆ ಇಲ್ಲ. ಯೋಜನೆಯ ಸಾಧಕ-ಬಾಧಕ ಅರಿತು ಸರಕಾರ ಮುಂದುವರೆಯಬೇಕು ಎಂದು ವಿಧಾನ ಪರಿಷತ್ ಮಾಜಿ ಸದಸ್ಯೆ ಶಾಂತೆಯAಡ ವೀಣಾ ಅಚ್ಚಯ್ಯ ತಿಳಿಸಿದ್ದಾರೆ.

ವ್ಯಾಪಾರಿಗಳಿಗೆ ಅನುಕೂಲ : ನಾಗೇಂದ್ರ ಪ್ರಸಾದ್

ರೈಲ್ವೆ ಯೋಜನೆಯಿಂದ ವ್ಯಾಪಾರಿಗಳಿಗೂ ಅನುಕೂಲವಾಗುತ್ತದೆ, ಸರಕಾರಕ್ಕೂ ಆದಾಯ ಬರುತ್ತದೆ ಎಂದು ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಬಿ.ಆರ್. ನಾಗೇಂದ್ರ ಪ್ರಸಾದ್ ಅಭಿಪ್ರಾಯಿಸಿದ್ದಾರೆ.

ರೈಲ್ವೆ ಯೋಜನೆ ಜಿಲ್ಲೆಗೆ ಬೇಕೇ ಬೇಕು. ಎಲ್ಲಾ ಅಭಿವೃದ್ಧಿ ಕಾರ್ಯಗಳಲ್ಲಿಯೂ ಸಾಧಕ-ಬಾಧಕ ಇದ್ದೆ ಇರುತ್ತದೆ. ಕೊಡಗಿಗೆ ರೈಲ್ವೆ ಯೋಜನೆ ಬರುವುದರಿಂದ ದೊಡ್ಡ ಮಟ್ಟದ ಅನುಕೂಲ ಜನರಿಗೆ ಹಾಗೂ ವ್ಯಾಪಾರ ವಲಯಕ್ಕೆ ಆಗಲಿದೆ. ಜೊತೆಗೆ ಸರಕಾರಕ್ಕೂ ಆದಾಯ ಬರಲಿದೆ. ಈ ನಿಟ್ಟಿನಲ್ಲಿ ರಾಜ್ಯ ಸರಕಾರ ಈ ಯೋಜನೆಗೆ ಸಹಕಾರ ನೀಡಬೇಕು. ಮುಂದಿನ ಬಜೆಟ್‌ನಲ್ಲಿ ಘೋಷಣೆಯಾಗಬೇಕು. ರೈಲ್ವೆ ಸಂಪರ್ಕದಿAದ ರಸ್ತೆಯಲ್ಲಿ ಟ್ರಾಫಿಕ್ ದಟ್ಟಣೆ ಕಡಿಮೆಯಾಗುತ್ತದೆ. ಕೈಗಾರಿಕೆಗಳ ಉತ್ಪಾದನಾ ಸಾಗಾಟಕ್ಕೂ ಸುಲಭವಾಗುತ್ತದೆ. ಮಳೆಗಾಲದ ಸಮಯದಲ್ಲಿ ಭೂಕುಸಿತದಿಂದ ೨-೩ ತಿಂಗಳು ಭಾರಿ ವಾಹನ ಸಂಚಾರವನ್ನು ಸ್ಥಗಿತಗೊಳಿಸಲಾಗುತ್ತದೆ. ಅದುವೇ ರೈಲ್ವೆ ಸಂಚಾರವಿದ್ದರೆ ಜನರಿಗೂ ಹಾಗೂ ವ್ಯಾಪಾರಿಗಳಿಗೆ ದೊಡ್ಡ ಮಟ್ಟದ ಅನುಕೂಲ ಆಗಲಿದೆ. ರಸ್ತೆ ಸುರಕ್ಷತೆಯೂ ಹೆಚ್ಚಾಗುತ್ತದೆ. ಅಪಘಾತವನ್ನು ತಪ್ಪಿಸಬಹುದಾಗಿದೆ ಎಂದು ತಿಳಿಸಿದ್ದಾರೆ.

ಕೊಡಗಿಗೆ ಮಾರಕ : ಸಿ.ಪಿ. ಮುತ್ತಣ್ಣ

ಮೈಸೂರಿನಿಂದ ಕುಶಾಲನಗರಕ್ಕೆ ಹೋಗುವ ರೈಲು ಮಾರ್ಗವು ಒಂದು ದುರಂತವಾಗಲಿದೆ. ಅದು ಕುಶಾಲನಗರದಲ್ಲಿ ಕೊನೆಗೊಂಡರು ಅಪಾಯ ಕಟ್ಟಿಟ್ಟ ಬುತ್ತಿ. ಕೊಡಗು ದಕ್ಷಿಣ ಭಾರತದಾದ್ಯಂತ ಜನರನ್ನು ಪೋಷಿಸುವ ಕಾವೇರಿ ನದಿಯ ಪ್ರಮುಖ ಜಲಾನಯನ ಪ್ರದೇಶವಾಗಿದೆ. ಈ ರೈಲು ಮಾರ್ಗವು ಕೊಡಗಿನಲ್ಲಿ ಜನಸಂಖ್ಯಾ ಸಮತೋಲನವನ್ನು ಹಾಳು ಮಾಡುತ್ತದೆ ಮತ್ತು ಇದು ಕೊಡಗಿನ ಸ್ಥಳೀಯ ಸಮುದಾಯಗಳನ್ನು ಮತ್ತಷ್ಟು ಅಂಚಿನಲ್ಲಿಡುತ್ತದೆ ಜೊತೆಗೆ ಕಾವೇರಿ ನದಿಯ ಹರಿವು ಮತ್ತು ಶುದ್ಧತೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದು ಪರಿಸರವಾದಿ ಕರ್ನಲ್ (ನಿ) ಸಿ.ಪಿ. ಮುತ್ತಣ್ಣ ಆತಂಕ ವ್ಯಕ್ತಪಡಿಸಿದ್ದಾರೆ.

ಸಂಸದರು ಈ ಯೋಜನೆಯನ್ನು ಪುನರುಜ್ಜೀವನಗೊಳಿಸಲು ಪ್ರಯತ್ನಿಸುವುದನ್ನು ನಿಲ್ಲಿಸಬೇಕು. ಇದು ಸಂಪೂರ್ಣವಾಗಿ ರಾಷ್ಟಿçÃಯ ಹಿತಾಸಕ್ತಿಗೆ ವಿರುದ್ಧವಾಗಿದೆ. ಪ್ರಸ್ತುತ ಜನರು ಮತ್ತು ಸರಕುಗಳಿಗೆ ಅನುಕೂಲಕರ ರಸ್ತೆ ಪ್ರಯಾಣವಿದೆ ಮತ್ತು ರೈಲ್ವೆ ಅಗತ್ಯವಿಲ್ಲ. ಇದು ರೋಹಿಂಗ್ಯಾಗಳು ಮತ್ತು ಬಾಂಗ್ಲಾದೇಶಿಗಳAತಹ ಹೆಚ್ಚಿನ ಸಂಖ್ಯೆಯ ಅಕ್ರಮ ವಲಸಿಗರ ಆಗಮನಕ್ಕೆ ದಾರಿ ಮಾಡಿಕೊಟ್ಟಂತಾಗುತ್ತದೆ. ಕೊಡಗಿನ ಸಿ.ಎಂ. ಪೂಣಚ್ಚ ಅವರು ಕೇಂದ್ರ ರೈಲ್ವೆ ಸಚಿವರಾಗಿದ್ದಾಗ, ಆ ಸಮಯದಲ್ಲಿಯೂ ಅಪಾಯಗಳ ಬಗ್ಗೆ ತಿಳಿದು ನಿರಾಕರಿಸಿದ್ದರು ಎಂದು ಸ್ಮರಿಸಿಕೊಂಡಿದ್ದಾರೆ.

ಲಾಭವೇನೂ ಇಲ್ಲ : ತಮ್ಮು ಪೂವಯ್ಯ

ರೈಲ್ವೇ ಯೋಜನೆಯಿಂದ ಕೊಡಗಿಗೆ ಯಾವುದೇ ರೀತಿಯ ಲಾಭವೂ ಇಲ್ಲ ಎಂದು ಕೊಡಗು ಏಕೀಕರಣ ರಂಗದ ಸಂಚಾಲಕ ತಮ್ಮು ಪೂವಯ್ಯ ತಿಳಿಸಿದ್ದಾರೆ.

ರೈಲ್ವೆ ಸಂಪರ್ಕದಿAದ ಕೊಡಗಿಗೆ ವಲಸಿಗರ ಸಂಖ್ಯೆ ಹೆಚ್ಚಾಗುತ್ತದೆ. ಪ್ರವಾಸಿಗರ ಸಂಖ್ಯೆಯೂ ದುಪ್ಪಟ್ಟಾಗುತ್ತದೆ. ಕೊಡಗಿನ ಪ್ರಮುಖ ವಾಣಿಜ್ಯ ಕೃಷಿಯಾಗಿರುವ ಕಾಫಿಯ ಸಾಗಾಟವೂ ಮಂಗಳೂರು ಮೂಲಕ ನಡೆಯುತ್ತದೆ. ರೈಲ್ವೆಯಿಂದ ಪ್ರಯೋಜನವಿಲ್ಲ. ಸರಕಾರಕ್ಕೂ ಯಾವುದೇ ಆದಾಯ ಬರುವುದಿಲ್ಲ. ಪರಿಸರದ ಮೇಲೂ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಮುಂದೆ ಕೊಡಗಿನ ಅಸ್ತಿತ್ವದ ಮೇಲೆಯೇ ಧಕ್ಕೆ ಬರಲು ರೈಲ್ವೆ ಯೋಜನೆ ಕಾರಣವಾಗುತ್ತದೆ ಎಂದು ಅಭಿಪ್ರಾಯಿಸಿದ್ದಾರೆ.

ಸ್ವಾಗತಾರ್ಹ ಕ್ರಮ : ಮುತ್ತಣ್ಣ

ಭಾರತೀಯ ರೈಲ್ವೆ ಉದ್ದೇಶಿತ ಮೈಸೂರು-ಕುಶಾಲನಗರ ರೈಲು ಮಾರ್ಗವನ್ನು ಕೈಬಿಟ್ಟಿರುವುದು ಸ್ವಾಗತಾರ್ಹ ಕ್ರಮ. ಮೈಸೂರು-ಕುಶಾಲನಗರ ರೈಲು ಮಾರ್ಗವನ್ನು ಆರ್ಥಿಕವಾಗಿ ಲಾಭದಾಯಕವಲ್ಲ ಎಂಬ ಕಾರಣಕ್ಕೆ ಭಾರತೀಯ ರೈಲ್ವೆ ಇಲಾಖೆ ಕೈಬಿಟ್ಟದೆ ಎಂದು ಸೆಂಟರ್ ಫಾರ್ ವೈಲ್ಡ್ ಲೈಫ್ ಸ್ಟಡೀಸ್‌ನ ಫೀಲ್ಡ್ ಕನ್ಸರ್ವೇಷನ್ ಡೈರೆಕ್ಟರ್ ಪಿ.ಎಂ. ಮುತ್ತಣ್ಣ ತಿಳಿಸಿದ್ದಾರೆ.

ಆರ್ಥಿಕವಾಗಿ ಲಾಭದಾಯಕವಲ್ಲದಿದ್ದರೂ ಕರ್ನಾಟಕದ ಬಯಲು ಸೀಮೆ ಮತ್ತು ಕರಾವಳಿಯ ನಡುವೆ ಕೊಡಗಿನ ಪಶ್ಚಿಮ ಘಟ್ಟವನ್ನು ಸೀಳಿ ರೈಲು ಮಾರ್ಗವನ್ನು ನಿರ್ಮಿಸಲೇಬೇಕೆಂದು ಕೆಲ ವ್ಯಾಪಾರಿ ಶಕ್ತಿಗಳು ಹಿಂದಿನಿAದಲೂ ವ್ಯವಸ್ಥಿತವಾಗಿ ಶ್ರಮಿಸುತ್ತಿವೆ. ಪಶ್ಚಿಮ ಘಟ್ಟದ ಮೂಲಕ ಹೆದ್ದಾರಿ ಮತ್ತು ರೈಲು ಮಾರ್ಗ ನಿರ್ಮಿಸುವುದರ ಪರವಾಗಿ ಗಟ್ಟಿಧ್ವನಿಯಲ್ಲಿ ಮಾತನಾಡುವವರು ಚಾರ್ಮಾಡಿ ಘಾಟ್, ಶಿರಾಡಿ ಘಾಟ್, ಸಂಪಾಜೆ ಘಾಟಿನಲ್ಲಿ ಮತ್ತು ಸಕಲೇಶಪುರ ಮತ್ತು ಸುಬ್ರಹ್ಮಣ್ಯ ನಡುವಿನಿ ರೈಲು ಮಾರ್ಗದಲ್ಲಿ ನಿರಂತರ ಭೂಕುಸಿತ ಸಂಭವಿಸುತ್ತಿರುವುದನ್ನು ಉದ್ದೇಶಪೂರ್ವಕವಾಗಿ ಮರೆಮಾಚುತ್ತಾರೆ. ಆಧುನಿಕ ಇಂಜಿನಿಯರಿAಗ್ ತಂತ್ರಜ್ಞಾನಕ್ಕೆ ಅಪರಿಮಿತ ಸಾಧ್ಯತೆಗಳು ಮತ್ತು ಇತಿಮಿತಿಗಳಿವೆ. ಈ ತಂತ್ರಜ್ಞಾನವನ್ನು ಮನುಕುಲ ಏಳಿಗಗೆ ಬಳಸುವ ನೂರೆಂಟು ಅವಕಾಶಗಳಿವೆ. ಅದರೆ ಅದನ್ನು ಹಠಕ್ಕೆ ಬಿದ್ದು ಪಶ್ಚಿಮ ಘಟ್ಟದ ಸೂಕ್ಷö್ಮ ಸಮತೋಲನವನ್ನು ಹದಗೆಡಿಸಲು ಬಳಸಿದಲ್ಲಿ ಮಾನವಕುಲ ಭಾರಿ ಬೆಲೆ ತೆರಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ರೈಲ್ವೆ ಪ್ರಯೋಜನಕಾರಿ : ಸಾತಪ್ಪನ್

ರೈಲ್ವೆ ಯೋಜನೆ ಬಹಳಷ್ಟು ಪ್ರಯೋಜನಕಾರಿ ಎಂದು ಕುಶಾಲನಗರದ ಎಸ್‌ಎಲ್‌ಎನ್ ಸಂಸ್ಥೆ ಚೇರ್ಮನ್ ಎನ್. ಸಾತಪ್ಪನ್ ಅನಿಸಿಕೆ ವ್ಯಕ್ತಪಡಿಸಿದ್ದಾರೆ.

ಕುಶಾಲನಗರ ತನಕ ರೈಲ್ವೆ ಯೋಜನೆ ಪ್ರಸ್ತಾಪವಿರುವ ಕಾರಣದಿಂದ ದೊಡ್ಡಮಟ್ಟದ ಪರಿಸರ ನಾಶವಾಗುವುದಿಲ್ಲ. ಅಲ್ಲದೆ ಕಾಫಿ ಉದ್ಯಮಕ್ಕೆ ಮಾರುಕಟ್ಟೆ ಸುಲಭ ಸಾಧ್ಯವಾಗುತ್ತದೆ. ಹೆಚ್ಚಾಗಿ ಮಂಗಳೂರು ಹಾಗೂ ಚೆನ್ನೆöÊ ಭಾಗದಿಂದ ಕಾಫಿ ಸರಬರಾಜಾಗುವ ಕಾರಣದಿಂದ ಇಲ್ಲಿ ಗೂಡ್ಸ್ ರೈಲ್ವೆ ಪ್ರಯಾಣದಿಂದ ಸಾಗಾಟ ಸುಲಭವಾಗಿ ರೈತರು ಹಾಗೂ ವ್ಯಾಪಾರಿಗಳ ಆದಾಯವೂ ಹೆಚ್ಚಾಗುತ್ತದೆ. ಸಾರಿಗೆ ಸಂಪರ್ಕಗಳು ಅಭಿವೃದ್ಧಿಗೊಂಡರೆ ಆ ಭಾಗವೂ ಅಭಿವೃದ್ಧಿಯಾಗುತ್ತದೆ ಎಂದು ಅಭಿಪ್ರಾಯಿಸಿದರು.

ಪರಿಸರ ನಾಶವಾದಲ್ಲಿ ಬೇಡ : ದಿನೇಶ್

ಪರಿಸರ ನಾಶ ಮಾಡುವುದಾದರೆ ರೈಲ್ವೆ ಯೋಜನೆಯ ಅಗತ್ಯವಿಲ್ಲ ಎಂದು ಕೂರ್ಗ್ ಹೊಟೇಲ್ ಮತ್ತು ರೆಸಾರ್ಟ್ ಅಸೋಸಿಯೇಷನ್ ಅಧ್ಯಕ್ಷ ಕುಂಡ್ಯೋಳAಡ ದಿನೇಶ್ ಕಾರ್ಯಪ್ಪ ತಿಳಿಸಿದ್ದಾರೆ.

ಪ್ರವಾಸೋದ್ಯಮ ಬೆಳವಣಿಗೆ ಸಾಧಿಸಬೇಕಾದರೆ ಅಭಿವೃದ್ಧಿ ಕಾರ್ಯಗಳು ಆಗಬೇಕು. ಕೊಡಗು ಜಿಲ್ಲೆಗೆ ರೈಲ್ವೆ ಯೋಜನೆಯೂ ಬೇಕು. ಆದರೆ, ವ್ಯವಸ್ಥಿತವಾಗಿ ನಡೆಯಬೇಕು. ಪರಿಸರ ನಾಶ ಮಾಡಿ ರೈಲು ಯೋಜನೆ ರೂಪಿಸುವುದಾದರೆ ಅಗತ್ಯತೆ ಇಲ್ಲ. ಅದುವೇ ಚತುಷ್ಪಥ ರಸ್ತೆಯನ್ನು ಗುಣಮಟ್ಟದಿಂದ ಮಾಡಿದರೆ ಸಾರಿಗೆ ಸಂಪರ್ಕ ಸುಲಭವಾಗುತ್ತದೆ ಎಂದು ಅಭಿಪ್ರಾಯಿಸಿದ್ದಾರೆ.