ಮಡಿಕೇರಿ, ಫೆ. ೫: ನೇತಾಜಿ ಯುವಕ ಹಾಗೂ ಯುವತಿ ಮಂಡಳಿ, ಮೈ ಭಾರತ್, ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ತಾಲೂಕು ಯುವ ಒಕ್ಕೂಟ, ಮಡಿಕೇರಿ ಇವರ ಸಂಯುಕ್ತ ಆಶ್ರಯದಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ೧೨೯ನೇ ಜನ್ಮ ದಿನಾಚರಣೆ ಹಾಗೂ ನೇತಾಜಿ ಯುವಕ ಹಾಗೂ ಯುವತಿ ಮಂಡಲದ ೩೪ನೇ ವಾರ್ಷಿಕೋತ್ಸವ ಹಾಗೂ ಜಿಲ್ಲಾಮಟ್ಟದ ಕ್ರೀಡಾಕೂಟ ಇತ್ತೀಚೆಗೆ ತಾಳತ್ತಮನೆಯ ಆಟದ ಮೈದಾನದಲ್ಲಿ ನಡೆಯಿತು.
ಉದ್ಘಾಟನಾ ಸಮಾರಂಭವು ನೇತಾಜಿ ಯುವಕ ಮಂಡಲದ ಅಧ್ಯಕ್ಷ ಕೊಂಡಿರ ಪಿ. ಕಾರ್ಯಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಉದ್ಘಾಟನೆಯನ್ನು ವಕೀಲರು ಹಾಗೂ ಬೆಳೆಗಾರ ಮೂವೆರ ಶಂಭು ಸುಬ್ಬಯ್ಯ ಅವರು ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಎ.ಎಸ್. ಮೇರಿ ಮ್ಯಾಗ್ಡಾಲಿನ್, ನಿವೃತ್ತ ಶುಶ್ರೂಷ ಅಧೀಕ್ಷಕರು, ಬಿ.ಎ. ಭಾರತಿ, ಪ್ರಬಾರ ಮುಖ್ಯ ಶಿಕ್ಷಕರು, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ತಾಳತ್ತಮನೆ ಮತ್ತು ಉದ್ಯಮಿ ಬಿ.ಎಸ್. ಆನಂದ್ ಹಾಗೂ ನೇತಾಜಿ ಯುವಕ ಮಂಡಳಿ ಅಧ್ಯಕ್ಷೆ ಸಿಂಧು ಸುದೇವ ಹಾಜರಿದ್ದರು. ಅತಿಥಿ ಗಣ್ಯರು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು. ನಂತರ ನೇತಾಜಿ ಯುವಕ ಸಂಘದ ಧ್ವಜಾರೋಹಣವನ್ನು ಹಾಜರಿದ್ದ ಅತಿಥಿಗಳು ನೆರವೇರಿಸಿದರು. ಸಾರ್ವಜನಿಕರ ಪುರುಷ, ಮಹಿಳೆಯರ ಮತ್ತು ಪ್ರೌಢಶಾಲಾ ಬಾಲಕ - ಬಾಲಕಿಯರ ಮ್ಯಾರಾಥಾನ್, ಪುರುಷರ ವಾಲಿಬಾಲ್ ಪಂದ್ಯಾಟ ಮತ್ತು ಮಹಿಳೆಯರ ಹಗ್ಗಜಗ್ಗಾಟವನ್ನು ನಡೆಸಲಾಯಿತು.
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಕರ್ನಾಟಕ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಚೆಪ್ಪುಡಿರ ಎಸ್. ಅರುಣ್ ಮಾಚಯ್ಯ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಬಿ. ರಾಜೇಶ್ ಯಲ್ಲಪ್ಪ, ಅಧ್ಯಕ್ಷರು ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರ, ಟಾಟು ಮೊಣ್ಣಪ್ಪ, ಅಧ್ಯಕ್ಷರು ಮಾಯಾಮುಡಿ ಗ್ರಾಮ ಪಂಚಾಯಿತಿ ಹಾಗೂ ಮಾಜಿ ಅಧ್ಯಕ್ಷರು, ಜಿಲ್ಲಾ ಯುವ ಒಕ್ಕೂಟ, ಕಂದಾ ದೇವಯ್ಯ, ಮಾಜಿ ಅಧ್ಯಕ್ಷರು, ಜಿಲ್ಲಾ ಯುವ ಒಕ್ಕೂಟ, ನೇತಾಜಿ ಯುವಕ ಹಾಗೂ ಯುವತಿ ಮಂಡಳಿ ಅಧ್ಯಕ್ಷರು ಹಾಜರಿದ್ದರು.
ಭಾರತೀಯ ನೌಕಾದಳದ ಲೆಫ್ಟಿನೆಂಟ್ ಕಮಾಂಡರ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ತಾಳತ್ತಮನೆಯ ಕುಂಚೆಟ್ಟಿರ ಜಯಂತ್ ಸುಬ್ಬಯ್ಯ, ಹೆಚ್.ಎ. ಚಿನ್ನಪ್ಪ, ಹಿರಿಯ ಸಲಹೆಗಾರರು, ನೇತಾಜಿ ಯುವಕ ಮಂಡಲ ಮತ್ತು ಬಿ. ಮಂಜುಳ ಆನಂದ್, ಮಾಜಿ ಅಧ್ಯಕ್ಷರು, ನೇತಾಜಿ ಯುವತಿ ಮಂಡಳಿ ಅವರನ್ನು ಸನ್ಮಾನಿಸಲಾಯಿತು. ಕೊಡಗು ವಿಶ್ವವಿದ್ಯಾಲಯದ ಕನ್ನಡ ಉಪನ್ಯಾಸಕ ಡಾ. ಜಮೀರ್ ಅಹಮದ್ ಸಮಾರೋಪ ಭಾಷಣ ಮಾಡಿದರು. ವಿವಿಧ ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ತಾಳತ್ತಮನೆಯ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನವನ್ನು ವಿತರಿಸಲಾಯಿತು. ಸಂಜೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕೊಡಗು ಇವರ ಸಹಯೋಗದಲ್ಲಿ ವಿಶೇಷ ಘಟಕ ಯೋಜನೆಯಡಿಯಲ್ಲಿ ಮೈಸೂರು ರಂಗಸ್ವಾಮಿ ತಂಡದಿAದ ಸುಗಮ ಸಂಗೀತ ಕಾರ್ಯಕ್ರಮ ಸ್ಥಳೀಯರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಯಿತು. ಹಾಜರಿದ್ದ ಎಲ್ಲಾ ಕ್ರೀಡಾಪಟುಗಳು ಹಾಗೂ ಸಾರ್ವಜನಿಕರಿಗೆ ಮಧ್ಯಾಹ್ನ ಊಟದ ವ್ಯವಸ್ಥೆಯನ್ನು ಯುವಕ ಮಂಡಲದ ವತಿಯಿಂದ ಕಲ್ಪಿಸಲಾಗಿತ್ತು.