ಸಿದ್ದಾಪುರ, ಫೆ. ೪: ಅರಣ್ಯ ಪರಿಸರ ಸಂರಕ್ಷಣೆಯ ಹಿನ್ನಲೆಯಲ್ಲಿ ಉರುಳು (ಬೋನು) ಬಳಕೆ ವಿರೋಧಿ ಅಭಿಯಾನ ಹಾಗೂ ಕಾಡ್ಗಿಚ್ಚು ತಡೆಯುವ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ತಿತಿಮತಿ ವಲಯ ಅರಣ್ಯ ಇಲಾಖೆ ವತಿಯಿಂದ ಮಾಲ್ದಾರೆ ಸರಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಆವರಣದಲ್ಲಿ ಬೀದಿ ನಾಟಕವನ್ನು ಪ್ರದರ್ಶನ ಮಾಡಲಾಯಿತು.

ತಿತಿಮತಿ ವಲಯ ಅರಣ್ಯ ಅಧಿಕಾರಿ ಗಂಗಾಧರ್ ನೇತೃತ್ವದಲ್ಲಿ ಉಪವಲಯ ಅರಣ್ಯ ಅಧಿಕಾರಿ ಶಶಿ ಪಿ.ಟಿ. ಭಾಗವಹಿಸಿ ಮಾತನಾಡಿ, ಅರಣ್ಯ ಸಂರಕ್ಷಣೆ ಮಾಡುವುದು ಪ್ರತಿಯೊಬ್ಬರ ಕರ್ತವ್ಯ ಆಗಿದೆ ಎಂದು ತಿಳಿಸಿದರು. ಬೇಸಿಗೆಯ ಸಂದರ್ಭದಲ್ಲಿ ಅರಣ್ಯ ವ್ಯಾಪ್ತಿಯಲ್ಲಿ ಕಾಡ್ಗಿಚ್ಚು ಹರಡುವ ಸಾಧ್ಯತೆ ಇದ್ದು ಇದನ್ನು ತಡೆಗಟ್ಟಬೇಕೆಂದರು.

ಕಾಡ್ಗಿಚ್ಚಿನಿಂದಾಗಿ ವನ್ಯಜೀವಿಗಳಿಗೆ ಕೂಡ ತೊಂದರೆಯಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಈ ಬಗ್ಗೆ ಜಾಗೃತಿ ವಹಿಸಬೇಕೆಂದರು ಹಾಗೂ ಈ ಬಗ್ಗೆ ಅರಣ್ಯ ಇಲಾಖೆಯ ವತಿಯಿಂದ ಶಾಲಾ ಮಕ್ಕಳಿಗೆ ಅರಿವು ಮೂಡಿಸಲಾಯಿತು.

ಪೊನ್ನಂಪೇಟೆಯ ಗಿರೀಶ್ ತಂಡದಿAದ ಕಾಡ್ಗಿಚ್ಚು ತಡೆ, ಪರಿಸರ ಸಂರಕ್ಷಣೆ ಮತ್ತು ಅರಣ್ಯ ನಾಶದ ಬಗ್ಗೆ ನಾಟಕ ಹಾಗೂ ನೃತ್ಯಗಳನ್ನು ಪ್ರದರ್ಶಿಸಲಾಯಿತು.