ಮಡಿಕೇರಿ, ಫೆ. ೪: ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದ ಮಹಿಳೆಗೆ ಕಿರುಕುಳ ಆರೋಪ ಎದುರಿಸುತ್ತಿರುವ ಮಹಿಳೆಯ ಪತಿ ಹಾಗೂ ಅತ್ತೆಗೆ ನಿರೀಕ್ಷಣಾ ಜಾಮೀನನ್ನು ನೀಡಲು ನ್ಯಾಯಾಲಯ ನಿರಾಕರಿಸಿದೆ. ಸಾವನ್ನಪ್ಪಿದ ಮಹಿಳೆ ಮೈಸೂರು ಜಿಲ್ಲೆಯವರಾಗಿದ್ದು, ಆರೋಪಿ ಪತಿ ಹಾಗೂ ಅತ್ತೆ ದಕ್ಷಿಣ ಕೊಡಗಿನ ಕಳತ್ಮಾಡು ನಿವಾಸಿಗಳಾಗಿದ್ದಾರೆ.
ಮೈಸೂರಿನ ದಟ್ಟಗಳ್ಳಿಯಲ್ಲಿ ಅಡುಗೆ ಸಹಾಯಕರಾಗಿ ದುಡಿಯುತ್ತಿರುವ ಸಹದೇವ ರಾವ್ ಅವರ ಪುತ್ರಿ ಸಂಪ್ರೀತಾ (೨೮ ವರ್ಷ) ದಕ್ಷಿಣ ಕೊಡಗಿನ ಕಳತ್ಮಾಡು ಗ್ರಾಮದ ನಿವಾಸಿ ವಸಂತ್ ಎಂ.ಯು. ಅವರ ಪುತ್ರ ಕುಶಾಲ್ ಮುಕ್ಕಾಟಿ ಎಂಬವರನ್ನು ಪ್ರೀತಿಸಿ ವಿವಾಹವಾಗಿದ್ದರು.
ಬೆಂಗಳೂರಿನಲ್ಲಿ ಸೈಬರ್ ಸೆಕ್ಯೂರಿಟಿ ಇಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿದ್ದ ಕುಶಾಲ್ ಸೇರಿದಂತೆ ಅವರ ತಾಯಿ ಮಹಿಳೆ ಸಂಪ್ರೀತಾಗೆ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಿ ಡಿ. ೧೦ ರಂದು ಸಂಪ್ರೀತಾ ತನ್ನ ತವರು ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು.
ಆಕೆಯ ಪತಿ ಕುಶಾಲ್ ಆಕೆ ಗರ್ಭಿಣಿ ಆದಾಗ ಬಲವಂತವಾಗಿ ಗರ್ಭಪಾತ ಮಾಡಿಸಿದ್ದು, ನಂತರ ಆಕೆಯನ್ನು ಮನೆಯಿಂದ ಓಡಿಸಿ ತಲೆಮರೆಸಿಕೊಂಡಿದ್ದ ಎಂಬುದಾಗಿಯೂ ಮಹಿಳೆಯ ಸಹೋದರ ನೀಡಿದ್ದ ದೂರಿನಲ್ಲಿ ಉಲ್ಲೇಖಿಸಲಾಗಿತ್ತು. ಪ್ರಕರಣ ದಾಖಲಿಸಿಕೊಂಡ ಮೈಸೂರಿನ ಕುವೆಂಪು ನಗರ ಪೊಲೀಸರು ನ್ಯಾಯಾಲಯಕ್ಕೆ ಪ್ರಥಮ ವರ್ತಮಾನ ವರದಿ ಸಲ್ಲಿಸಿ ತನಿಖೆ ನಡೆಸುತ್ತಿದ್ದರು.
ಈ ನಡುವೆ ಬಂಧನದ ಭೀತಿಯಿಂದ ಪಾರಾಗಲು ಸಂಪ್ರೀತಾಳ ಪತಿ ಕುಶಾಲ್, ಆತನ ತಂದೆ ವಸಂತ ಹಾಗೂ ತಾಯಿ ರೇಣುಕಾ ನಿರೀಕ್ಷಣಾ ಜಾಮೀನು ಕೋರಿ ಮೈಸೂರಿನ ಜಿಲ್ಲಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ೫ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಕೆ.ಎನ್. ರೂಪಾ ಅವರು ಅಪರಾಧದ ಗಂಭೀರತೆಯನ್ನು ಪರಿಗಣಿಸಿ ಆರೋಪಿಗಳಿಗೆ ನಿರೀಕ್ಷಣಾ ಜಾಮೀನು ನೀಡಲು ನಿರಾಕರಿಸಿ ಅರ್ಜಿಯನ್ನು ತಿರಸ್ಕರಿಸಿದ್ದಾರೆ. ರಾಜ್ಯದ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ಎ.ಎನ್. ಮಧು ತಕರಾರು ಸಲ್ಲಿಸಿ ವಾದಿಸಿದ್ದರು.
ಸಂಪ್ರೀತಾ ಅವರಿಗೆ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಿ ಆಕೆಯು ಆತ್ಮಹತ್ಯೆಗೆ ಶರಣಾಗಲು ಪ್ರಚೋದಿಸಿ ಆಕೆಯ ಸಾವಿಗೆ ಕಾರಣರಾಗಿ ತಲೆಮರೆಸಿಕೊಂಡಿರುವ ಆರೋಪದ ಮೇಲೆ ಆಕೆಯ ಪತಿ ಕುಶಾಲ್ ಹಾಗೂ ಆತನ ತಾಯಿಯ ಬಂಧನಕ್ಕೆ ಕುವೆಂಪು ನಗರ ಪೊಲೀಸರು ಬಲೆ ಬೀಸಿದ್ದಾರೆ.