ಪೊನ್ನಂಪೇಟೆ, ಫೆ. ೪: ಧಾರ್ಮಿಕ ಉತ್ಸವಗಳು ಮತ್ತು ಆಚರಣೆಗಳು ಆಯಾ ಊರಿನ ಮತ್ತು ಮಹಲಿನ ಒಂದು ಪ್ರಮುಖ ಪರಂಪರೆಯಾಗಿದೆ. ಧರ್ಮದ ಹೆಸರಿನಲ್ಲಿ ಸಾರ್ವಜನಿಕರ ಒಂದುಗೂಡುವಿಕೆಯ ಉದ್ದೇಶಕ್ಕಾಗಿ ಕೊಡಗಿನ ಹಲವೆಡೆ ನಡೆಯುವ ಉರೂಸ್‌ಗಳು ಸಮಾಜದಲ್ಲಿ ಕೋಮು ಸಾಮರಸ್ಯ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ ಎಂದು ವೀರಾಜಪೇಟೆ ತಾಲೂಕು ಕೆಡಿಪಿ ಸದಸ್ಯ ಕೋಳುಮಂಡ ರಫೀಕ್ ಅಭಿಪ್ರಾಯಪಟ್ಟಿದ್ದಾರೆ.

ಪಾಲಿಬೆಟ್ಟ ಸಮೀಪದ ಚೆನ್ನಯ್ಯನಕೋಟೆಯ ಜಮಾಅತ್ ಆಶ್ರಯದಲ್ಲಿ ನಡೆಯುವ ಹಜ್ಹರತ್ ನಜ್ಹರ್ ಮೊಹಿದ್ದೀನ್ ಶಾವಲಿಯವರ ವಾರ್ಷಿಕ ಉರೂಸ್ ಕಾರ್ಯಕ್ರಮದ ಸಮಾರೋಪದ ಅಂಗವಾಗಿ ಆಯೋಜಿಸಲಾಗಿದ್ದ ಸೌಹಾರ್ದ ಸಮ್ಮೇ¼ನÀದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಅವರು, ಕೊಡಗಿನ ಹಲವೆಡೆ ನಡೆಯುವ ಉರೂಸ್ ಕಾರ್ಯಕ್ರಮಗಳಲ್ಲಿ ಹಿಂದೂ- ಮುಸಲ್ಮಾನ ಸಮುದಾಯವರು ಮತಬೇಧವನ್ನು ಮರೆತು ಒಂದಾಗಿ ಭಾಗವಹಿಸುತ್ತಾರೆ. ಹೀಗಾಗಿ ಜಿಲ್ಲೆಯ ಬಹುತೇಕ ಉರೂಸ್‌ಗಳು ಹಿಂದೂ- ಮುಸ್ಲಿಂ ಸಾಮರಸ್ಯಕ್ಕೆ ಸಾಕ್ಷಿಯಾಗಿವೆ. ಜನ ಸಮುದಾಯಗಳ ನಡುವೆ ಭಾವೈಕ್ಯತೆಯನ್ನು ಮೂಡಿಸುವಲ್ಲಿ ಹಾಗೂ ವಿವಿಧ ಕೋಮುಗಳ ನಡುವೆ ಸಾಮರಸ್ಯವನ್ನು ಸಾರುವಲ್ಲಿ ಯಶಸ್ವಿಯಾಗಿವೆ. ಈ ರೀತಿಯ ಆಚರಣೆಗಳೇ ನಿಜವಾದ ಭಾವೈಕ್ಯತೆಯ ಸಂಗಮ. ಎಲ್ಲಾ ಧರ್ಮಗಳು ಶ್ರೇಷ್ಠ ಎಂದು ತಿಳಿದಾಗ ಮಾತ್ರವೇ ಇಲ್ಲಿನ ಧರ್ಮ, ಸಂಪ್ರದಾಯ ಹಾಗೂ ಭಾಷೆಗಳ ಬಗ್ಗೆ ಗೌರವ ಭಾವನೆ ಮೂಡುತ್ತದೆ ಎಂದು ಹೇಳಿದರು.

ಭಾರತೀಯ ಸಂಸ್ಕೃತಿಯಲ್ಲಿ ಅನೇಕ ಆಚರಣೆಗಳು ನಡೆಯುತ್ತವೆ. ಇವೆಲ್ಲವೂ ಸಂಪ್ರದಾಯ, ನಂಬಿಕೆ ಮತ್ತು ಶ್ರದ್ಧಾಭಕ್ತಿಯಿಂದ ಆಚರಿಸುವ ಸಂಪ್ರದಾಯಗಳಾಗಿವೆ. ತಮ್ಮ ಸಂಸ್ಕೃತಿ, ಸಂಪ್ರದಾಯಕ್ಕೆ ತಕ್ಕಂತೆ ಜನತೆ ಆಚಾರಗಳನ್ನು ಪಾಲಿಸಿ ಭಕ್ತಿ ಪರಾಕಾಷ್ಠೆ ಮೆರೆಯುತ್ತಾರೆ. ಈ ಪೈಕಿ ಸಮಾಜದಲ್ಲಿ ಭಾವೈಕ್ಯತೆ ಪ್ರತಿಬಿಂಬಿಸುವ ಹಲವು ಧಾರ್ಮಿಕ ಆಚರಣೆಗಳಿವೆ. ಅದರಲ್ಲಿ ಉರೂಸ್ ಆಚರಣೆಗಳಿಗೆ ಮೊದಲ ಸ್ಥಾನವಿದೆ. ಉರೂಸ್ ಅನ್ನು ಯಾವುದೇ ತಾರತಮ್ಯವಿಲ್ಲದೆ ಎಲ್ಲಾ ಧರ್ಮೀಯರು ಆಚರಿಸುವುದು ವಿಶೇಷವಾಗಿದೆ. ಪುರಾತನ ಕಾಲದಿಂದಲೂ ಉರೂಸ್ ಅನ್ನು ಭಾವೈಕ್ಯತೆ, ಸಹೋದರತೆಯಿಂದ ಆಚರಿಸಲಾಗುತ್ತಿದೆ. ಅದರಲ್ಲೂ ಕೊಡಗಿನ ಗ್ರಾಮೀಣ ಪ್ರದೇಶಗಳಲ್ಲಿ ನಡೆಯುವ ಉರೂಸ್ ಒಂದು ವಿಶಿಷ್ಟವಾದ ಆಚರಣೆಯಾಗಿದೆ. ಇಂದಿಗೂ ಇದು ಎಲ್ಲಾ ಸಮುದಾಯದ ಜನರ ಬಾಂಧವ್ಯವನ್ನು ಗಟ್ಟಿಗೊಳಿಸಿದೆ ಎಂದು ಹೇಳಿದರು.

ಸೌಹಾರ್ದ ಸಮ್ಮೇಳನವನ್ನು ಚೆನ್ನಯ್ಯನಕೋಟೆಯ ಜುಮಾ ಮಸೀದಿಯ ಧರ್ಮಗುರು ಮೊಹಮ್ಮದ್ ನಾಝೀರ್ ರಜ್ವಿ ಉದ್ಘಾಟಿಸಿದರು. ೪ಆರನೇ ಪುಟಕ್ಕೆ

(ಮೊದಲ ಪುಟದಿಂದ) ಸಮ್ಮೇಳನದಲ್ಲಿ ಮುಖ್ಯ ಅತಿಥಿಗಳಾಗಿದ್ದ ಕೊಡಗು ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಪಿ.ಎ. ಹನೀಫ್ ಮಾತನಾಡಿದರು. ಚೆನ್ನಯ್ಯನಕೋಟೆ ಜುಮ್ಮಾ ಮಸೀದಿ ಆಡಳಿತ ಮಂಡಳಿ ಅಧ್ಯಕ್ಷ ಜವಾದುಲ್ ರೆಹಮಾನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಚೆನ್ನಯ್ಯನಕೋಟೆ ಗ್ರಾ. ಪಂ. ಉಪಾಧ್ಯಕ್ಷ ವಿಜು, ಸದಸ್ಯರಾದ ನಾಗರಾಜು, ಹೊಳಮಾಲ ಜುಮಾ ಮಸೀದಿ ಆಡಳಿತ ಮಂಡಳಿ ಅಧ್ಯಕ್ಷ ಮುಸ್ತಫಾ, ಅಲ್ಲಿನ ಜುಮಾ ಮಸೀದಿಯ ಖತೀಬರಾದ ಬಶೀರ್ ಸಖಾಫಿ, ಸ್ಥಳೀಯ ಸಮಾಜ ಸೇವಕ ಮನು, ರವೀಂದ್ರ ಭಾವೆ, ಚೆನ್ನಯ್ಯನಕೋಟೆ ಜುಮಾ ಮಸೀದಿ ಕಾರ್ಯದರ್ಶಿ ಫೈರೋಜ್ ಖಾನ್ ಮೊದಲಾದವರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಕೋಳುಮಂಡ ರಫೀಕ್ ಮತ್ತು ಹನೀಫ್ ಅವರ ಸಮುದಾಯ ಸೇವೆಯನ್ನು ಪರಿಗಣಿಸಿ ಚೆನ್ನಯ್ಯನಕೋಟೆ ಜಮಾಅತ್ ಪರವಾಗಿ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು. ಉಮ್ಮರ್ ಮದನಿ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು.