ಮಡಿಕೇರಿ, ಫೆ. ೩: ಐಗೂರಿನ ಕಾಜೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ತಾ. ೯ ರಂದು ೯ನೇ ಸೋಮವಾರಪೇಟೆ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ ಎಂದು ಕ.ಸಾ.ಪ. ಜಿಲ್ಲಾಧ್ಯಕ್ಷ ಎಂ.ಪಿ. ಕೇಶವ ಕಾಮತ್ ಮಾಹಿತಿ ನೀಡಿದರು.

ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿರಿಯ ಸಾಹಿತಿ ಜಲಜಾ ಶೇಖರ್ ಸಮ್ಮೇಳನಾಧ್ಯಕ್ಷರಾಗಿದ್ದು, ಸಮ್ಮೇಳನದ ಯಶಸ್ವಿಗೆ ೧೧ ಉಪಸಮಿತಿಗಳು ಕಾರ್ಯನಿರ್ವಹಿಸುತ್ತಿವೆ. ಅಂದು ಬೆಳಿಗ್ಗೆ ೯.೩೦ಕ್ಕೆ ತಹಶೀಲ್ದಾರ್ ಕೃಷ್ಣಮೂರ್ತಿ ಅವರು ರಾಷ್ಟç ಧ್ವಜಾರೋಹಣ ನೆರವೇರಿಸಲಿದ್ದು, ಬಳಿಕ ಗಣ್ಯರ ಹೆಸರಿನ ನೆನಪಿನ ದ್ವಾರಗಳ ಉದ್ಘಾಟನೆ ನಡೆದು ಐಗೂರು ಕಬ್ಬಿಣದ ಸೇತುವೆ ಬಳಿಯಿಂದ ಸಮ್ಮೇಳನಾಧ್ಯಕ್ಷರ ಮೆರವಣಿಗೆ ಸಾಗಿ ಬರಲಿದೆ. ಅನಂತರ ನಡೆಯುವ ಉದ್ಘಾಟನೆ ಕಾರ್ಯಕ್ರಮದಲ್ಲಿ ಗಣ್ಯರು ಭಾಗವಹಿಸಲಿದ್ದಾರೆ ಎಂದರು.

ಮಾಜಿ ಅಧ್ಯಕ್ಷ ಟಿ.ಪಿ. ರಮೇಶ್ ಮಾತನಾಡಿ, ಸಮ್ಮೇಳನಕ್ಕೆ ೩ ಸಾವಿರದಷ್ಟು ಜನ ಸೇರುವ ನಿರೀಕ್ಷೆ ಇದೆ. ವಿಚಾರ ಗೋಷ್ಠಿ, ಕವಿಗೋಷ್ಠಿ, ಸನ್ಮಾನ, ಗೀತ ಗಾಯನ, ಸಾಂಸ್ಕೃತಿಕ ಕಾರ್ಯಕ್ರಮ, ಬಹಿರಂಗ ಅಧಿವೇಶನ ಸೇರಿದಂತೆ ೬ ಕೃತಿಗಳ ಬಿಡುಗಡೆಯೂ ಇದೇ ಸಂದರ್ಭವಾಗಲಿದ್ದು, ಸಮ್ಮೇಳನದ ಸ್ಮರಣ ಸಂಚಿಕೆ ಐಗೂರು ಐಸಿರಿಯನ್ನು ಹೊರತರಲಾಗುವುದು ಎಂದು ಮಾಹಿತಿ ನೀಡಿದರು. ಸಮ್ಮೇಳನಕ್ಕೆ ವಿವಿಧ ಸಂಘ ಸಂಸ್ಥೆಗಳು ಸಹಕಾರ ನೀಡುತ್ತಿದ್ದು, ಕನ್ನಡಪರ ಕಾರ್ಯಕ್ರಮಗಳನ್ನು ನಡೆಸಲಾಗುವುದು ಎಂದರು.

ಗೋಷ್ಠಿಯಲ್ಲಿ ಸೋಮವಾರಪೇಟೆ ತಾಲೂಕು ಕ.ಸಾ.ಪ. ಅಧ್ಯಕ್ಷ ಎಸ್.ಡಿ. ವಿಜೇತ್, ಗೌರವ ಕಾರ್ಯದರ್ಶಿ ಎ.ಪಿ. ವೀರರಾಜು, ಐಗೂರು ಹೋಬಳಿ ಅಧ್ಯಕ್ಷ ನಂಗಾರು ಕೀರ್ತಿ ಪ್ರಸಾದ್ ಉಪಸ್ಥಿತರಿದ್ದರು.