ಕಣಿವೆ, ಫೆ. ೩: ರಾಜ್ಯ ಸರ್ಕಾರದ ಬೊಕ್ಕಸ ತುಂಬುವಲ್ಲಿ ಜನಸಂಖ್ಯೆಯಲ್ಲಿ ಶೇ.೧ ರಷ್ಟಿರುವ ರಾಜ್ಯದ ಆರ್ಯವೈಶ್ಯ ಸಮಾಜದವರ ಕೊಡುಗೆ ಅಪಾರ ಎಂದು ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಸ್.ಈ. ಸುಧೀಂದ್ರ ಹೇಳಿದರು.
ಕುಶಾಲನಗರದ ರಥಬೀದಿ ಯಲ್ಲಿರುವ ಕನ್ನಿಕಾ ಪರಮೇಶ್ವರಿ ದೇವಾಲಯದ ಬ್ರಹ್ಮಕಲಶೋತ್ಸವ ಸಮಾರಂಭದಲ್ಲಿ ಭಾಗಿಯಾಗಿ ಉತ್ಸವ ಮೂರ್ತಿಯ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದ ಅವರು, ಕುಶಾಲನಗರದಲ್ಲಿ ಕೇವಲ ೧೨೦ ಕುಟುಂಬಗಳು ಇರುವ ಆರ್ಯವೈಶ್ಯ ಸಮುದಾಯ ನಗರದ ಅಭಿವೃದ್ಧಿಗೆ ತನ್ನದೇ ಆದ ವಿಶಿಷ್ಟ ಸೇವೆ ನೀಡಿದೆ.
ರಥಬೀದಿಯಲ್ಲಿರುವ ಕನ್ನಿಕಾ ಪರಮೇಶ್ವರಿ ಅಮ್ಮನವರ ದೇವಾಲಯದ ನಿರ್ಮಾಣ ಹಾಗೂ ಬ್ರಹ್ಮಕಲಶೋತ್ಸವ ಸಮಾರಂಭ ಊರಿನ ಸಮಸ್ತ ಭಕ್ತರ ಸಮ್ಮುಖದಲ್ಲಿ ನಡೆದು ನಗರದ ಜನರ ಆರೋಗ್ಯ ಹಾಗೂ ಅಭಿವೃದ್ಧಿಗೆ ಕಾರಣವಾಗಿದೆ ಎಂದರು. ಜೈವಿಕ ಮಂಡಳಿ ವತಿಯಿಂದ ರಾಜ್ಯವ್ಯಾಪಿ ಜನಹಿತವಾದ ಹಾಗೂ ಪರಿಸರ ಸ್ನೇಹಿ ಯೋಜನೆಗಳ ಚಿಂತನೆ ನಡೆಸಲಾಗಿದೆ. ಈ ನಿಟ್ಟಿನಲ್ಲಿ ಜರ್ಮನಿಗೆ ತಜ್ಞರ ನಿಯೋಗವನ್ನು ಕೊಂಡೊಯ್ದು ಅಲ್ಲಿನ ಯೋಜನೆಗಳನ್ನು ರಾಜ್ಯದಲ್ಲೂ ಕಾರ್ಯಗತಗೊಳಿಸಲು ಮುಖ್ಯಮಂತ್ರಿಗಳ ಜೊತೆ ಚರ್ಚಿಸಲಾಗಿದೆ. ಈ ನಿಟ್ಟಿನನಲ್ಲಿ ಐಟಿ-ಬಿಟಿ, ಮೂಲಸೌಕರ್ಯ, ಮೊದಲಾದ ಇಲಾಖೆ ಸಚಿವರು ಕೂಡ ಸಹಕಾರ ನೀಡುತ್ತಿದ್ದಾರೆ ಎಂದು ಅವರು ತಿಳಿಸಿದರು.
ಉತ್ಸವದಲ್ಲಿ ಚಂಡೆ ವಾದ್ಯ ಭಕ್ತ ಜನರ ಮನ ಸೆಳೆಯಿತು. ಆರ್ಯವೈಶ್ಯ ಸಮಾಜದ ಕೊಡಗು ಜಿಲ್ಲಾ ಅಧ್ಯಕ್ಷ ಬಿ.ಎಲ್. ಸತ್ಯನಾರಾಯಣ, ಕುಶಾಲನಗರದ ಅಧ್ಯಕ್ಷ ಬಿ.ಆರ್. ನಾಗೇಂದ್ರ ಪ್ರಸಾದ್, ಕಾರ್ಯದರ್ಶಿ ಪ್ರವೀಣ್, ನಿರ್ದೇಶಕ ವೈಶಾಕ್, ಎ.ಎಸ್. ಕುಮಾರ್, ಬಿ.ಎಲ್. ಉದಯ ಕುಮಾರ್, ಕೆ.ಜೆ. ಸತೀಶ್, ಬಿ.ಪಿ. ಕೃಷ್ಣಮೂರ್ತಿ, ಬಿ. ಅಮೃತರಾಜು, ಮಹಿಳಾ ಮಂಡಳಿ ಅಧ್ಯಕ್ಷೆ ವಾಣಿ ಮಹೇಶ್, ವಾಸವಿ ಯುವಜನ ಸಂಘದ ಉಪಾಧ್ಯಕ್ಷ ಬಾಲಾಜಿ ಮೊದಲಾದವರಿದ್ದರು.