ಪೊನ್ನಂಪೇಟೆ, ಫೆ. ೩: ಪೊನ್ನಂಪೇಟೆ ತಾಲೂಕಿನ ಕಿರುಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕ್ರೀಡಾಪಟುಗಳಿಗಾಗಿ ಪ್ರಥಮ ವರ್ಷದ ಮಿನಿ ಕ್ರಿಕೆಟ್ ಲೀಗ್ ಪಂದ್ಯಾವಳಿಯನ್ನು ಆಯೋಜಿಸಲಾಗಿತ್ತು.
ಕಿರುಗೂರು ಫ್ರೆಂಡ್ಸ್ ಬಳಗದ ವತಿಯಿಂದ ಕಿರುಗೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಚಿರಿಯಪಂಡ ದೀಪಕ್ ತಿಮ್ಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಕ್ರೀಡಾಕೂಟಕ್ಕೆ ಗ್ರಾಮದ ಹಿರಿಯರಾದ ಆಲೆಮಾಡ ಪೂವಯ್ಯ ಅವರು ಚಾಲನೆ ನೀಡಿದರು.
ಈ ಸಂದರ್ಭ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ, ಗ್ರಾಮ ವಿಕಾಸ್ ಸಂಯೋಜಕ ಪಿ.ಎಸ್ ಸುರೇಶ್ ಅವರು ಮಾತನಾಡಿ, ಕಳೆದ ಎರಡು ವರ್ಷಗಳಿಂದ ಹೆಚ್ಚಿನ ಕ್ರೀಡಾಕೂಟಗಳು ಗ್ರಾಮದಲ್ಲಿ ಆಯೋಜನೆ ಮಾಡುವುದರಿಂದ ಈ ಭಾಗದ ಜನತೆಗೆ ಕ್ರೀಡೆಯಲ್ಲಿ ಹೆಚ್ಚಿನ ಪ್ರೋತ್ಸಾಹ ದೊರೆಯುವಂತಾಗಿದೆ. ಮುಂದಿನ ದಿನಗಳಲ್ಲಿಯೂ ಯುವಕರು ಕ್ರೀಡೆಯಲ್ಲಿ ಹೆಚ್ಚಾಗಿ ತೊಡಗಿಸಿಕೊಂಡು ಎಲ್ಲಾ ಕ್ರೀಡಾಕೂಟಗಳನ್ನು ಯಶಸ್ವಿಯಾಗಿ ನಡೆಸಿಕೊಡಬೇಕೆಂದರು.
ಕ್ರಿಕೆಟ್ ಪಂದ್ಯಾಟದಲ್ಲಿ ರಾಯಲ್ಸ್, ಟೀಮ್ ಪಿನಾಕಾ, ಟೀಮ್ ಸಿಂದೂರ್, ವೆಂಕಿ ಕ್ರಿಕೆಟರ್ಸ್, ಶಾಂತಿ ಗ್ರೂಪ್ಸ್, ಪಿ.ಬಿ. ಬಾಯ್ಸ್, ಎ.ಕೆ. ಬಾಯ್ಸ್ ಹಾಗೂ ಟೀಮ್ ಜಿಂಗಲಕ ತಂಡಗಳು ಭಾಗವಹಿಸಿವೆ.
ಈ ಸಂದರ್ಭ ಕಿರುಗೂರು ಸ.ಕಿ.ಪ್ರಾ. ಶಾಲಾ ಮುಖ್ಯ ಶಿಕ್ಷಕಿ ಶ್ರೀಜಾ, ಗ್ರಾಮ ವಿಕಾಸ ಸಂಯೋಜಕ ಪಿ.ಎಸ್. ಸುರೇಶ್, ನಲ್ಲೂರು ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಆಲೆಮಾಡ ಸುಧೀರ್, ಮಾಜಿ ವ್ಯವಸ್ಥಾಪಕ ಆಲೆಮಾಡ ವಿಜಯ, ಕಿರುಗೂರು ಯುವಕ ಸಂಘದ ಅಧ್ಯಕ್ಷ ಚಿರಿಯಪಂಡ ಕೀರ್ತನ್ ಪೆಮ್ಮಯ್ಯ, ಆಯೋಜಕರಾದ ನವೀನ್, ಪತ್ರಕರ್ತ ಚೆಪ್ಪುಡಿರ ರೋಷನ್, ತೀತರಮಾಡ ರಾಜ, ಕೋಪಟ್ಟಿರ ಗಾಂಧಿ ಗಣಪತಿ, ಶಾಲಾ ಶಿಕ್ಷಕಿಯರು, ಕ್ರೀಡಾಭಿಮಾನಿಗಳು, ಸಾರ್ವಜನಿಕರು, ಕಿರುಗೂರು ಫ್ರೆಂಡ್ಸ್ ಬಳಗದ ಪದಾಧಿಕಾರಿಗಳು ಹಾಗೂ ಸದಸ್ಯರು ಇದ್ದರು.