ಅಮ್ಮತ್ತಿ, ಫೆ. ೨: ಅಮ್ಮತ್ತಿಯ ಕಾರ್ಮಾಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಬೀಶ್ ಎಂಬವರಿಗೆ ಸೇರಿದ ಮನೆಯಲ್ಲಿ ತಡ ರಾತ್ರಿ ಏಕಾಏಕಿ ರೆಫ್ರಿಜರೇಟರ್ ಸ್ಪೋಟವಾಗಿದ್ದು, ಮನೆಯವರ ಸಮಯಪ್ರಜ್ಞೆಯಿಂದಾಗಿ ಭಾರಿ ಅನಾಹುತ ತಪ್ಪಿದೆ. ಸುಬೀಶ್ ಸುನೀತಾ ದಂಪತಿ ಮತ್ತು ಮಕ್ಕಳು ಮಲಗಿದ್ದ ವೇಳೆ ತಡರಾತ್ರಿ ರೆಫ್ರಿಜರೇಟರ್ ಸ್ಪೋಟವಾಗಿ ಅಡುಗೆ ಮನೆಗೆ ಸಂಪೂರ್ಣ ಬೆಂಕಿ ಹೊತ್ತಿಕೊಂಡಿದ್ದು, ತಕ್ಷಣ ದಂಪತಿ ಗ್ಯಾಸ್ ಸಿಲಿಂಡರ್‌ನ್ನು ಸ್ಥಳಾಂತರ ಮಾಡಿದ್ದಾರೆ.

ಇದರಿಂದಾಗಿ ಭಾರಿ ಅನಾಹುತ ತಪ್ಪಿದ್ದು, ಅಡುಗೆ ಮನೆ ಸಂಪೂರ್ಣ ಬೆಂಕಿಗಾಹುತಿಯಾಗಿದೆ. ಬೆಂಕಿ ನಂದಿಸುವ ವೇಳೆ ಸುಬೀಶ್ ಅವರಿಗೆ ಸಣ್ಣಪುಟ್ಟ ಸುಟ್ಟ ಗಾಯಗಳಾಗಿದ್ದು ಸಮೀಪದ ಆರ್‌ಐಹೆಚ್‌ಪಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತು. ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅಮ್ಮತ್ತಿ ಪೊಲೀಸ್ ಉಪಠಾಣೆ ಆರಕ್ಷಕ ಸಿಬ್ಬಂದಿ ದೂರು ದಾಖಲಿಸಿಕೊಂಡಿದ್ದಾರೆ.