ಸೋಮವಾರಪೇಟೆ,ಫೆ.೨: ಪಟ್ಟಣ ಸಮೀಪದ ಚೌಡ್ಲು ಗ್ರಾಮ ಪಂಚಾಯಿತಿಯ ಆಲೇಕಟ್ಟೆಯಿಂದ ಹಾನಗಲ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂಡುರಸ್ತೆವರೆಗಿನ ರಾಜ್ಯ ಹೆದ್ದಾರಿಯಲ್ಲಿ ಗುಂಡಿಗಳು ಬಿದ್ದು, ಸಂಚಾರ ದುಸ್ತರವಾಗಿದ್ದರೂ ಕಾಮಗಾರಿ ನಡೆಸುತ್ತಿಲ್ಲ ಎಂದು ಆರೋಪಿಸಿ ಭಾರತೀಯ ಜನತಾ ಪಾರ್ಟಿಯ ಮುಖಂಡರು ಹಾಗೂ ಕಾರ್ಯಕರ್ತರು, ಸಾಂದೀಪನಿ ಶಾಲಾ ಜಂಕ್ಷನ್ ಸಮೀಪ ಗುಂಡಿ ಬಿದ್ದಿರುವ ರಸ್ತೆಗೆ ಬಾಳೆಗಿಡ ನೆಟ್ಟು ರಸ್ತೆ ತಡೆ ಮಾಡಿದರು.
ಹೆಚ್‌ಎಸ್‌ಡಿಪಿ ಯೋಜನೆಯಡಿ ಬೆಂಗಳೂರು-ಜಾಲ್ಸೂರು ರಾಜ್ಯಹೆದ್ದಾರಿ ೮೫ಕ್ಕೆ ಒಳಪಡುವ ಸೋಮವಾರಪೇಟೆ-ತೋಳೂರುಶೆಟ್ಟಳ್ಳಿ-ಕೂತಿ ರಸ್ತೆಯ ಅಭಿವೃದ್ಧಿ ಕಾಮಗಾರಿ ಆಮೆಗತಿಯಲ್ಲಿ ನಡೆಯುತ್ತಿದೆ. ಕೆಲವೆಡೆ ಡಾಂಬರು ಹಾಕಿದ್ದರೂ ಪೂರ್ಣ ಪ್ರಮಾಣದಲ್ಲಿ ಮುಕ್ತಾಯಗೊಂಡಿಲ್ಲ. ಈ ನಡುವೆ ಆಲೇಕಟ್ಟೆಯಿಂದ ಕೂಡುರಸ್ತೆವರೆಗೆ ಕಾಂಕ್ರೀಟ್ ರಸ್ತೆ ನಿರ್ಮಾಣದ ಯೋಜನೆಯಿದ್ದರೂ ಈವರೆಗೆ ಕೆಲಸ ಆರಂಭಿಸಿಲ್ಲ ಎಂದು ಕಾರ್ಯಕರ್ತರು ದೂರಿದರು.
ಒಟ್ಟು ೭.೨೪ ಕಿ.ಮೀ. ರಸ್ತೆಯನ್ನು ಮೇಲ್ದರ್ಜೆಗೇರಿಸಲು ಸರ್ಕಾರದಿಂದ ರೂ. ೨೦ ಕೋಟಿ ಅನುದಾನ ಒದಗಿಸಲಾಗಿದೆ ಎಂದು ಕಳೆದ ೨೦೨೪ರ ಜನವರಿ ೧೧ ರಂದು ತೋಳೂರುಶೆಟ್ಟಳ್ಳಿಯಲ್ಲಿ ರಾಜ್ಯ ಲೋಕೋಪಯೋಗಿ ಇಲಾಖಾ ಸಚಿವರು ಚಾಲನೆ ನೀಡಿದ್ದರು. ೧೧ ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಬೇಕಿತ್ತು. ಆದರೆ ಒಂದು ವರ್ಷ ಕಳೆದರೂ ಕಾಮಗಾರಿಯನ್ನು ಆರಂಭಿಸಿಲ್ಲ ಎಂದು ಆರೋಪಿಸಿದರು.
ರಸ್ತೆಯಲ್ಲಿ ಭಾರೀ ಪ್ರಮಾಣದ ಗುಂಡಿಗಳು ನಿರ್ಮಾಣವಾಗಿದ್ದು, ಒಂದೂವರೆ ಕಿ.ಮೀ. ರಸ್ತೆ ಕ್ರಮಿಸಲು ಕನಿಷ್ಟ ೨೦ ನಿಮಿಷ ಬೇಕಿದೆ. ಗುಂಡಿಗಳನ್ನು ತಪ್ಪಿಸಲು ಹೋಗಿ ಹಲವಷ್ಟು ಬೈಕ್ ಸವಾರರು ಬಿದ್ದು ಗಾಯಾಳುಗಳಾಗಿದ್ದಾರೆ. ವಾಹನಗಳ ಅವಘಡ ಸಾಮಾನ್ಯವೆನಿಸಿದೆ. ಆದರೂ ಸಹ ಸಂಬAಧಿಸಿದ ಗುತ್ತಿಗೆದಾರ, ಅಭಿಯಂತರ, ಶಾಸಕರು ಈ ಬಗ್ಗೆ ಗಮನ ಹರಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯ ಅಂಗವಾಗಿ ರಸ್ತೆಯ ಗುಂಡಿಗೆ ಬಾಳೆಗಿಡ ನೆಟ್ಟು ಆಕ್ರೋಶ ವ್ಯಕ್ತಪಡಿಸಿದ ಕಾರ್ಯಕರ್ತರು, ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರರು ಸ್ಥಳಕ್ಕೆ ಆಗಮಿಸುವಂತೆ ಪಟ್ಟು ಹಿಡಿದು ರಸ್ತೆ ತಡೆ ನಡೆಸಿದರು. ಇದರಿಂದಾಗಿ ೪೦ ನಿಮಿಷಗಳ ಕಾಲ ರಸ್ತೆಯ ಎರಡೂ ಬದಿಯಲ್ಲಿ ನೂರಾರು ವಾಹನಗಳು ನಿಲುಗಡೆಗೊಳ್ಳಬೇಕಾಯಿತು.
ಈ ಸಂದರ್ಭ ಠಾಣಾಧಿಕಾರಿ ಗೋಪಾಲ್ ಅವರು ಪ್ರತಿಭಟನಾಕಾರರ ಮನವೊಲಿಸಲು ಮುಂದಾದರೂ ಜಗ್ಗದ ಕಾರ್ಯಕರ್ತರು, ಇಲಾಖೆಯ ಅಭಿಯಂತರ, ಗುತ್ತಿಗೆದಾರ, ಶಾಸಕರಿಗೆ ಧಿಕ್ಕಾರದ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಸರ್ಕಾರ ಅಭಿವೃದ್ಧಿಯನ್ನು ಮರೆತಿದೆ. ಆಡಳಿತ ವೈಫಲ್ಯಕ್ಕೆ ರಸ್ತೆಯ ಗುಂಡಿಗಳೇ ಸಾಕ್ಷಿಯಾಗಿದೆ. ಕಾಂಗ್ರೆಸ್‌ನಿAದ ಜನರಿಗೆ ಗುಂಡಿ ಭಾಗ್ಯ ನೀಡಲಾಗಿದೆ. ಸರ್ಕಾರದಲ್ಲಿ ಹಣ ಇಲ್ಲವಾದರೆ ಈ ಹಿಂದೆ ಇದ್ದ ರಸ್ತೆಯನ್ನು ಯಾಕೆ ಅಗೆಯಬೇಕಿತ್ತು? ಎಂದು ಆಕ್ರೋಶ ವ್ಯಕ್ತಪಡಿಸಿ ರಸ್ತೆ ತಡೆ ಮುಂದುವರೆಸಿದರು.
ನAತರ ಸ್ಥಳಕ್ಕಾಗಮಿಸಿದ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಕುಮಾರ್ ಅವರನ್ನು ತರಾಟೆಗೆ ತೆಗೆದುಕೊಂಡರು. ಈ ಸಂದರ್ಭ ಮಾತನಾಡಿದ ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಮಹೇಶ್ ತಿಮ್ಮಯ್ಯ, ಒಂದು ವರ್ಷದಿಂದ ರಸ್ತೆ ಗುಂಡಿ ಬಿದ್ದಿದ್ದರೂ ಈವರೆಗೆ ಮುಚ್ಚಿಲ್ಲ. ಈ ಬಗ್ಗೆ ತಮ್ಮನ್ನು ಪ್ರಶ್ನಿಸಿದ ಸಂದರ್ಭ ಗುತ್ತಿಗೆದಾರರಿಗೆ ಬಿಲ್ ಪಾವತಿಯಾಗಿಲ್ಲ ಎಂದು ಹೇಳಿದ್ದೀರಿ. ಸರ್ಕಾರದಲ್ಲಿ ಹಣ ಇಲ್ಲ; ಬಿಲ್ ಪಾವತಿಯಾಗುತ್ತಿಲ್ಲ ಎಂದಾದರೆ ಈ ಹಿಂದೆ ಇದ್ದ ರಸ್ತೆಯನ್ನು ಅಗೆದು ಗುಂಡಿ ಮಾಡಿದ್ದು ಯಾಕೆ? ಎಂದು ಪ್ರಶ್ನಿಸಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಜಿ. ಮೇದಪ್ಪ ಮಾತನಾಡಿ, ಪ್ರತಿದಿನ ಈ ರಸ್ತೆಯಲ್ಲಿ ನೂರಾರು ವಾಹನಗಳು ಸಂಚರಿಸುತ್ತಿವೆ. ಪ್ರವಾಸಿ ತಾಣವಾಗಿರುವ ಮಲ್ಲಳ್ಳಿ, ಪುಷ್ಪಗಿರಿ ಶಾಂತಮಲ್ಲಿಕಾರ್ಜುನ ದೇವಾಲಯ ಸೇರಿದಂತೆ ಸುಬ್ರಹ್ಮಣ್ಯಕ್ಕೆ ನೂರಾರು ವಾಹನಗಳಲ್ಲಿ ಪ್ರವಾಸಿಗರು ತೆರಳುತ್ತಾರೆ. ಸ್ಥಳೀಯರೂ ಸಹ ಇದೇ ರಸ್ತೆಯನ್ನು ಅವಲಂಬಿಸಿದ್ದು, ಒಂದು ವರ್ಷವಾದರೂ ಕಾಮಗಾರಿ ನಿರ್ವಹಿಸಿಲ್ಲ. ಅಧಿಕಾರಿಗಳ ನಿರ್ಲಕ್ಷö್ಯದಿಂದ ಜನಸಾಮಾನ್ಯರು ತೊಂದರೆ ಅನುಭವಿಸುವಂತಾಗಿದೆ ಎಂದು ಆರೋಪಿಸಿದರು. ೪ಐದನೇ ಪುಟಕ್ಕೆ
(ಮೊದಲ ಪುಟದಿಂದ) ಮುಂದಿನ ತಾ. ೨೦ರೊಳಗೆ ಕಾಮಗಾರಿ ಆರಂಭಿಸುವುದಾಗಿ ಅಭಿಯಂತರ ಕುಮಾರ್ ಭರವಸೆ ನೀಡಿದರು. ಮತ್ತೆ ವಿಳಂಬವಾದರೆ ಲೋಕೋಪಯೋಗಿ ಇಲಾಖೆಯ ಮುಂಭಾಗ ಪ್ರತಿಭಟನೆ ನಡೆಸಲಾಗುವುದು. ಅಧಿಕಾರಿಗಳನ್ನು ಕಚೇರಿಯೊಳಗೆ ಕೂಡಿ ಹಾಕಿ ಬೀಗ ಜಡಿಯಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಸಿದರು. ನಂತರ ರಸ್ತೆ ತಡೆಯನ್ನು ತೆರವುಗೊಳಿಸಲಾಯಿತು.
ಈ ಸಂದರ್ಭ ಬಿಜೆಪಿ ಮಂಡಲ ಅಧ್ಯಕ್ಷ ಗೌತಮ್ ಗೌಡ, ಜಿಲ್ಲಾ ಉಪಾಧ್ಯಕ್ಷ ಮನುಕುಮಾರ್ ರೈ, ಮಂಡಲ ಕಾರ್ಯದರ್ಶಿ ದರ್ಶನ್ ಜೋಯಪ್ಪ, ಅಭಿಮನ್ಯುಕುಮಾರ್, ಪದಾಧಿಕಾರಿಗಳಾದ ಎನ್.ಆರ್. ಅಜೀಶ್‌ಕುಮಾರ್, ಎಸ್.ಆರ್. ಸೋಮೇಶ್, ಶರತ್‌ಚಂದ್ರ, ಶ್ರೀಕಾಂತ್, ಕುಂದಳ್ಳಿ ದಿನೇಶ್, ಚೌಡ್ಲು ಗ್ರಾ.ಪಂ. ಅಧ್ಯಕ್ಷೆ ಗೀತಾ, ಹಾನಗಲ್ಲು ಗ್ರಾ.ಪಂ. ಅಧ್ಯಕ್ಷ ಯಶಾಂತ್‌ಕುಮಾರ್, ಪ್ರಮುಖರಾದ ಬನ್ನಳ್ಳಿ ಗೋಪಾಲ್, ಹರಗ ಉದಯ, ನೆಹರು, ಪ್ರವೀಣ್, ಪ್ರಜಾ ಪೂಣಚ್ಚ, ಕೆ.ಕೆ. ಸುಧಾಕರ್, ಮಧುಕುಮಾರ್ ಶಾಂತಳ್ಳಿ, ಕಲ್ಕಂದೂರು ಪ್ರಕಾಶ್, ಶ್ರೀನಿಧಿ ಲಿಂಗಪ್ಪ, ಪ್ರೇಮ್‌ಸಾಗರ್, ಆದರ್ಶ್ ತಮ್ಮಯ್ಯ, ರೇಣುಕಾ ವೆಂಕಟೇಶ್ ಸೇರಿದಂತೆ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.