ಪಾಲಿಬೆಟ್ಟ, ಫೆ. ೧: ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಪಾಲಿಬೆಟ್ಟ ವರ್ತಕರ ಸಂಘದ ಪದಗ್ರಹಣ ಸಮಾರಂಭ ಸ್ಥಳೀಯ ಮಹಿಳಾ ಸಮಾಜ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ನಿವೃತ್ತ ಪ್ರಾಂಶುಪಾಲರಾದ ಪ್ರೊ. ಟಿ.ಕೆ. ಬೋಪಯ್ಯ, ವರ್ತಕರು ಮತ್ತು ಗ್ರಾಹಕರು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ವರ್ತಕರು ಗ್ರಾಹಕರನ್ನು ಆಕರ್ಷಿಸುವಂತಹ ಕೆಲಸ ಮಾಡಬೇಕು. ಗ್ರಾಹಕರ ಬೇಡಿಕೆಗಳನ್ನು ಈಡೇರಿಸಬೇಕು ಎಂದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ನಿರ್ದೇಶಕಿ ಬಿ.ಆರ್. ಸವಿತಾ ರೈ ಮಾತನಾಡಿ, ಸಂಘವು ತನಗೇನು ನೀಡಿದೆ ಎನ್ನುವುದಕ್ಕಿಂತ ತಾನು ಸಂಘಕ್ಕೇನು ಕೊಡುಗೆ ನೀಡಿದ್ದೇನೆ ಎಂಬುದನ್ನು ಪ್ರತಿಯೊಬ್ಬರೂ ಪ್ರಶ್ನಿಸಿಕೊಳ್ಳಬೇಕು. ಸಂಘವು ತನ್ನ ಚೌಕಟ್ಟಿನಲ್ಲಿ ಕಾರ್ಯಾಚರಿಸಬೇಕು. ಹಣಕಾಸಿನ ವಿಚಾರದಲ್ಲಿ ಪಾರದರ್ಶಕವಾಗಿ ಇರಬೇಕು ಎಂದರಲ್ಲದೆ ವರ್ತಕರು ಸಂಘದ ಕ್ಷೇಮಾಭಿವೃದ್ಧಿ ನಿಧಿ, ಸ್ಥಾಪಿಸಿಕೊಳ್ಳುವಂತೆ ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಸಂಘದ ಅಧ್ಯಕ್ಷ ಎಂ.ಯು. ಮುನೀರ್, ಸಂಘದ ಚಟುವಟಿಕೆಗಳಿಗಾಗಿ ವರ್ತಕರ ಭವನ ನಿರ್ಮಾಣ ಮಾಡಲು ಉದ್ದೇಶಿಸಿದ್ದು ಜಾಗವನ್ನು ಗುರುತು ಮಾಡಲಾಗಿದೆ. ಶಾಸಕರೊಂದಿಗೆ ಈ ಸಂಬAಧ ಚರ್ಚಿಸಲಾಗುವುದು ಎಂದರು. ಸಂಘದಿAದ ಆ್ಯಂಬ್ಯುಲೆನ್ಸ್ ಸೇವೆ ಆರಂಭಿಸಲು ಕೂಡ ಚಿಂತನೆ ಇದೆ ಎಂದರು.
ಬಿ.ಆರ್. ಸವಿತಾ ರೈ ನೂತನ ಆಡಳಿತ ಮಂಡಳಿಯ ಸದಸ್ಯರಿಗೆ ಪ್ರತಿಜ್ಞಾವಿಧಿ ಬೋಧನೆ ಮಾಡಿದರು. ಕಾರ್ಯಕ್ರಮದಲ್ಲಿ ಹಿರಿಯ ವರ್ತಕರಾದ ಸಿ. ಅಬ್ದುಲ್ಲಾ, ಟಿ.ಕೆ. ಗಂಗಾಧರ್, ಸಿ.ಕೆ. ಮೊಯ್ದು, ಕೆ.ಕೆ. ಅಬ್ದುಲ್ ಖಾದರ್, ಪಳನಿ, ಸದಾಶಿವ ನಾಯರ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಎ.ಹೆಚ್. ಸಮೀರ್, ಉಪಾಧ್ಯಕ್ಷರಾದ ಟಿ.ಜಿ. ವಿಜೇಶ್, ಆರ್. ಮೈಕಲ್, ಖಜಾಂಚಿ ಅಬೂಬಕರ್, ಸಲಹೆಗಾರ ಪುತ್ತಂ ಪ್ರದೀಪ್, ಕಾರ್ಯದರ್ಶಿಗಳಾದ ಹೆಚ್ ಡಿ ಅಯ್ಯಪ್ಪ, ಫೈಜಲ್ ಸೇರಿದಂತೆ ಎಲ್ಲಾ ನಿರ್ದೇಶಕರುಗಳು ಇದ್ದರು.