ಸೋಮವಾರಪೇಟೆ, ಜ. ೨೧: ಸಮೀಪದ ಹಾನಗಲ್ಲು ಗ್ರಾಮ ಪಂಚಾಯಿತಿ ವತಿಯಿಂದ ಮಕ್ಕಳ ಗ್ರಾಮಸಭೆ ಹಾನಗಲ್ಲು ಶೆಟ್ಟಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.
ಪಂಚಾಯಿತಿ ಅಧ್ಯಕ್ಷ ಯಶಾಂತ್ ಕುಮಾರ್ ಗ್ರಾಮಸಭೆಗೆ ಚಾಲನೆ ನೀಡಿದರು. ವಿದ್ಯಾರ್ಥಿನಿ ಎಚ್.ಈ ಇಂಚರ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಯಡೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಲ್ಕಂದೂರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಹಾಗು ಹಾನಗಲ್ಲು ಶೆಟ್ಟಳ್ಳಿ ಶಾಲೆಯ ವಿದ್ಯಾರ್ಥಿಗಳು ಸಮಸ್ಯೆಗಳ ಬಗ್ಗೆ ಪಂಚಾಯಿತಿ ಗಮನಕ್ಕೆ ತಂದರು.
ಹಾನಗಲ್ಲು ಶಾಲೆಯ ಶೌಚಾಲಯ ದುರಸ್ತಿ ಮಾಡಿಕೊಡಿ, ಕೈತೊಳೆಯಲು ಸಿಂಕ್ ಅಳವಡಿಸಬೇಕು. ಶಾಲೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲು ಧ್ವನಿವರ್ಧಕ ಬೇಕು ಎಂದು ವಿದ್ಯಾರ್ಥಿಗಳಾದ ಪ್ರಥಮ್, ಭೂಮಿಕಾ, ಕಾರ್ತಿಕ್, ತೇಜಸ್, ಶ್ರೇಯಸ್ ಬೇಡಿಕೆಯಿಟ್ಟರು.
ಕಲ್ಕಂದೂರು ಶಾಲೆಗೆ ತೆರಳುವ ಸಂದರ್ಭ ಹಾಗು ಮೈದಾನದಲ್ಲಿ ಆಟವಾಡುವ ಸಂದರ್ಭ ಬೀದಿನಾಯಿಗಳ ಕಾಟ ಹೆಚ್ಚಾಗಿದೆ. ಕೆಲವೊಮ್ಮೆ ಮಕ್ಕಳನ್ನು ಅಟ್ಟಿಸಿಕೊಂಡು ಬರುತ್ತವೆ. ಶಾಲೆಗೆ ತೆರಳಲು ಭಯವಾಗುತ್ತದೆ ಎಂದು ವಿದ್ಯಾರ್ಥಿನಿ ಪೂರ್ವಿ ಹೇಳಿದರು. ಶಾಲೆಯಲ್ಲಿ ಶುದ್ಧ ಕುಡಿಯುವ ನೀರಿಗೆ ವಾಟರ್ ಫಿಲ್ಟರ್ ಕೊಡಿಸಿ ಎಂದು ಭುವನ್ ಪಂಚಾಯಿತಿಗೆ ಬೇಡಿಕೆ ಸಲ್ಲಿಸಿದರು. ಕೆಲವರು ಸಂಜೆ ಶಾಲೆಯ ಗೇಟ್‌ನ ಬೀಗ ಒಡೆದು ಶಾಲಾ ಆವರಣ ಪ್ರವೇಶಿಸಿ ಕಟ್ಟಡಕ್ಕೆ ಹಾನಿ ಮಾಡುತ್ತಿದ್ದಾರೆ. ಸಿಸಿ ಕ್ಯಾಮೆರಾ ಅಳವಡಿಸಿಕೊಡಿ ಎಂದು ವಿದ್ಯಾರ್ಥಿಗಳು ಬೇಡಿಕೆಯಿಟ್ಟರು.
ಯಡೂರು ಶಾಲೆಯ ಸುತ್ತ ಭದ್ರವಾದ ಬೇಲಿ ನಿರ್ಮಿಸಬೇಕು. ಗೇಟ್ ನಿರ್ಮಿಸಿಕೊಡಬೇಕೆಂದು ವಿದ್ಯಾರ್ಥಿ ಹವ್ಯಾಸ್, ಶ್ರಾವ್ಯ ಬೇಡಿಕೆಯಿಟ್ಟರು. ಮಕ್ಕಳ ಗ್ರಾಮಸಭೆಯಲ್ಲಿ ಭಾಗವಹಿಸಿದ್ದ ನಾವು ಪ್ರತಿಷ್ಠಾನ ಸಂಸ್ಥೆಯ ಕಾರ್ಯಕಾರಿ ನಿರ್ದೇಶಕರಾದ ಸುಮನ ಮ್ಯಾಥ್ಯು ಮಾತನಾಡಿ, ಮಕ್ಕಳ ಹಕ್ಕುಗಳ ರಕ್ಷಣೆಯಲ್ಲಿ ನಾವೆಲ್ಲರೂ ಕೈಜೋಡಿಸಬೇಕಾದ ಅಗತ್ಯ ಇದೆ ಎಂದರು.
ಎದೆ ಹಾಲು ಸಿಗದೆ ಯಾವುದೇ ಮಗು ಸಾಯಬಾರದು, ಪೌಷ್ಟಿಕ ಆಹಾರದ ಕೊರತೆಯಿಂದ ಯಾವುದೇ ತಾಯಿ ಪ್ರಾಣ ಕಳೆದುಕೊಳ್ಳಬಾರದು ಎಂಬ ಮಹತ್ವದ ಉದ್ದೇಶದಿಂದ ಸರ್ಕಾರ ಹಲವು ಕಲ್ಯಾಣ ಯೋಜನೆಗಳನ್ನು ಜಾರಿಗೆ ತಂದಿದೆ. ಮಕ್ಕಳ ಆರೋಗ್ಯ, ಶಿಕ್ಷಣ ಮತ್ತು ಪೋಷಣೆಯೇ ದೇಶದ ಭವಿಷ್ಯವನ್ನು ರೂಪಿಸುತ್ತದೆ ಎಂಬ ನಂಬಿಕೆಯಿAದ ಸರ್ಕಾರ ಕಾರ್ಯನಿರ್ವಹಿಸುತ್ತಿದೆ. ಮಕ್ಕಳ ಸಮಗ್ರ ಅಭಿವೃದ್ಧಿಯ ಮೂಲಕವೇ ದೇಶದ ಅಭಿವೃದ್ಧಿ ಸಾಧ್ಯ. ಈ ಕಾರ್ಯದಲ್ಲಿ ಸರ್ಕಾರದ ಜೊತೆಗೆ ಸಮಾಜವೂ ಕೈಜೋಡಿಸಬೇಕು. ಪ್ರತಿಯೊಬ್ಬರೂ ಪ್ರತಿಫಲಾಪೇಕ್ಷೆ ಇಲ್ಲದೆ, ಸೇವಾ ಮನೋಭಾವದಿಂದ ಮಕ್ಕಳ ಹಿತಕ್ಕಾಗಿ ಕೆಲಸ ಮಾಡಬೇಕಾಗಿದೆ ಎಂದು ಹೇಳಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕರಾದ ಸಾವಿತ್ರವ್ವ ಅವರು ಇಲಾಖೆಯಿಂದ ನೀಡುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು. ಪಂಚಾಯಿತಿ ಪಿಡಿಓ ಸ್ಮಿತಾ ಮಾತನಾಡಿ, ಕಳೆದ ಸಾಲಿನಲ್ಲಿ ನಡೆದ ಮಕ್ಕಳ ಗ್ರಾಮಸಭೆಯಲ್ಲಿ ಮಕ್ಕಳು ಕೇಳಿದ ಬೇಡಿಕೆಗಳನ್ನು ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗಿದೆ. ಪಂಚಾಯಿತಿ ಬರುವ ಅನುದಾನದಲ್ಲಿ ಒಂದಷ್ಟು ಭಾಗವನ್ನು ಶಾಲೆಗಳಿಗೆ ಸೌಲಭ್ಯ ಒದಗಿಸಲು ವಿನಿಯೋಗಿಸಲಾಗುವುದು ಎಂದು ಹೇಳಿದರು. ಸಭೆಯಲ್ಲಿ ಪಂಚಾಯಿತಿ ಉಪಾಧ್ಯಕ್ಷೆ ರೇಣುಕ, ಎಸ್‌ಡಿಎಂಸಿ ಉಪಾಧ್ಯಕ್ಷೆ ಮೋಹಿನಿ, ಸಿಆರ್‌ಪಿ ಚಂದ್ರಕಲಾ, ಮುಖ್ಯಶಿಕ್ಷಕರಾದ ಸುಕುಮಾರ್, ಎಲ್.ಎಂ. ಪ್ರೇಮಾ, ದಾನಿಗಳಾದ ಪದ್ಮನಾಭ, ನಾವು ಪ್ರತಿಷ್ಠಾನದ ಸಂಸ್ಥಾಪಕ ಗೌತಮ್ ಕಿರಗಂದೂರು ಮತ್ತು ಪಂಚಾಯಿತಿ ಸದಸ್ಯರು ಇದ್ದರು.