ಮಡಿಕೇರಿ ಜ.೧೮ : ಮತದಾರರ ಪಟ್ಟಿ ತೀವ್ರ ಪರಿಷ್ಕರಣೆ (ಎಸ್‌ಐಆರ್) ಕ್ರಮದಿಂದ ಕೇವಲ ಮುಸಲ್ಮಾನರಿಗೆ ಮಾತ್ರ ತೊಂದರೆಯಾಗುವುದಿಲ್ಲ, ಬದಲಿಗೆ ಬಡವರು, ಕೂಲಿ ಕಾರ್ಮಿಕರು ಸೇರಿದಂತೆ ೧೦೦ ಕೋಟಿ ಭಾರತೀಯರು ಸಂಕಷ್ಟಕ್ಕೆ ಸಿಲುಕಲಿದ್ದಾರೆ ಎಂದು ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಆತಂಕ ವ್ಯಕ್ತಪಡಿಸಿದ್ದಾರೆ.

ಎಸ್‌ಡಿಪಿಐ ವತಿಯಿಂದ ನಗರದ ಗಾಂಧಿ ಮೈದಾನದಲ್ಲಿ ನಡೆದ ಜನಾಗ್ರಹ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಎನ್‌ಆರ್‌ಸಿ ವಿಚಾರ ಕೋರ್ಟ್ನಲ್ಲಿರುವ ಕಾರಣ ಚುನಾವಣಾ ಆಯೋಗದ ಮೂಲಕ ಹಿಂಬಾಗಿಲಿನಿAದ ಎಸ್‌ಐಆರ್ ಪರೀಕ್ಷೆಯನ್ನು ಒಡ್ಡಲಾಗಿದೆ. ಇದರಿಂದ ಬಡವರು, ಕೂಲಿ ಕಾರ್ಮಿಕರು ಮತದಾನದ ಹಕ್ಕನ್ನು ಕಳೆದುಕೊಳ್ಳಲಿದ್ದಾರೆ. ಈ ಹಿಂದೆ ಕಪ್ಪು ಹಣವನ್ನು ಹೊರ ತರಲು ಮತ್ತು ಭಯೋತ್ಪಾದನೆಯನ್ನು ತಡೆಯಲು ನೋಟ್ ಬ್ಯಾನ್ ಮಾಡುವುದಾಗಿ ಹೇಳಿ ನೋಟ್ ಬ್ಯಾನ್ ಮಾಡಲಾಯಿತು. ಆದರೆ ಕಪ್ಪು ಹಣ ಪತ್ತೆಯಾಗಲಿಲ್ಲ, ಭಯೋತ್ಪಾದನೆ ಕಡಿಮೆಯಾಗಲಿಲ್ಲ. ಇದೀಗ ನುಸುಳುಕೋರರನ್ನು ಪತ್ತೆ ಮಾಡಲು ಎಸ್‌ಐಆರ್ ತರಲಾಗಿದೆ ಎಂದು ಹೇಳುತ್ತಿದ್ದಾರೆ, ಇದೊಂದು ಮೂರ್ಖತನದ ನಿರ್ಧಾರವಾಗಿದೆ. ಎಸ್‌ಐಆರ್ ಎನ್ನುವುದು ತೀವ್ರ ಪರಿಷ್ಕರಣೆ ಪ್ರಕ್ರಿಯೆಯಲ್ಲ, ಇದು ಜನರನ್ನು ತೀವ್ರ ನಿಗಾ ಘಟಕಕ್ಕೆ ತಳ್ಳುವ ಮತ್ತು ಪೌರತ್ವದ ಅಗ್ನಿ ಪರೀಕ್ಷೆಗೆ ಒಡ್ಡುವ ಅಪಾಯಕಾರಿ ಕ್ರಮವಾಗಿದೆ ಎಂದು ಆರೋಪಿಸಿದರು.

೪ಐದನೇ ಪುಟಕ್ಕೆ

(ಮೊದಲ ಪುಟದಿಂದ)

ಎಲ್ಲ ಜನಾಂಗದವರಿಗೂ ತೊಂದರೆ : ತಮಿಳುನಾಡಿನಲ್ಲಿ ಎಸ್‌ಐಆರ್ ಪ್ರಕ್ರಿಯೆಯಿಂದಾಗಿ ೯೦ ಲಕ್ಷ ಮಂದಿ ಮತದಾನದ ಹಕ್ಕಿನಿಂದ ಹೊರ ಬಂದಿದ್ದಾರೆ. ಇವರೆಲ್ಲರೂ ಮುಸಲ್ಮಾನರಲ್ಲ, ತಮಿಳುನಾಡಿನ ಜನಸಂಖ್ಯೆಯಲ್ಲಿ ಶೇ.೬ ರಷ್ಟು ಮಾತ್ರ ಮುಸಲ್ಮಾನರಿದ್ದಾರೆ. ೯೦ ಲಕ್ಷ ಮಂದಿಯಲ್ಲಿ ೨೦ ಲಕ್ಷ ಮಂದಿ ಮುಸಲ್ಮಾನರಾದರೆ ಉಳಿದ ೭೦ ಲಕ್ಷ ಮಂದಿ ಇತರ ಜಾತಿ ಜನಾಂಗಕ್ಕೆ ಸೇರಿದವರಾಗಿದ್ದಾರೆ, ಇವರೆಲ್ಲರೂ ಬಡವರು, ಕೂಲಿ ಕಾರ್ಮಿಕರೇ ಆಗಿದ್ದಾರೆ. ಈ ಕ್ರಮದಿಂದ ಮುಸಲ್ಮಾನರಿಗೆ ಮಾತ್ರ ತೊಂದರೆ ಎಂದು ಯಾರೂ ಭಾವಿಸಬಾರದು, ಆದ್ದರಿಂದ ಇದರ ವಿರುದ್ಧ ಸರ್ವ ಜನರೂ ಜಾಗೃತರಾಗಬೇಕು ಎಂದು ಕರೆ ನೀಡಿದರು.

ರಾಜ್ಯ ಸರಕಾರದ ನಿದ್ರಾವಸ್ಥೆ

ಎಸ್‌ಐಆರ್ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಸರಕಾರ ಯಾವುದೇ ಹೋರಾಟಗಳನ್ನು ಮಾಡದೆ ಯಾಕೆ ನಿದ್ರಾವಸ್ಥೆಯಲ್ಲಿದೆ ಎಂದು ಪ್ರಶ್ನಿಸಿದರು.

ರಾಜ್ಯದ ಕಾಂಗ್ರೆಸ್ ಸರಕಾರ ಬುಲ್ಡೋಸರ್ ಬಳಸಿ ಬಡವರ ಮನೆಗಳನ್ನು ನೆಲಸಮಗೊಳಿಸುತ್ತಿದೆ. ಮನೆಗಳನ್ನು ತೆರವು ಮಾಡುವ ಸಂದರ್ಭ ನಿವಾಸಿಗಳಿಗೆ ನೋಟೀಸ್ ನೀಡಬೇಕೆಂದು ಸುಪ್ರೀಂಕೋರ್ಟ್ ಹೇಳಿದೆ, ಆದರೆ ರಾಜ್ಯ ಸರಕಾರ ಯಾವ ಮುನ್ಸೂಚನೆಯನ್ನೂ ನೀಡದೆ ಕಾನೂನಿಗೆ ವಿರುದ್ಧವಾಗಿ ಮುಂಜಾನೆ ೪ ಗಂಟೆಗೆ ಬುಲ್ಡೋಸರ್ ಬಳಸಿ ಮನೆ ಕೆಡವಿ ಬಡವರನ್ನು ಬೀದಿ ಪಾಲು ಮಾಡಿದೆ. ಸಿದ್ದರಾಮಯ್ಯ ಹಾಗೂ ಯೋಗಿ ಅವರಿಗೆ ಏನು ವ್ಯತ್ಯಾಸವಿದೆ?. ತಪ್ಪುಗಳಿದ್ದರೆ ಕ್ರಮ ಕೈಗೊಳ್ಳುವುದಕ್ಕೆ ನಮ್ಮ ವಿರೋಧವಿಲ್ಲ, ಆದರೆ ಅದು ಕಾನೂನಿನ ಚೌಕಟ್ಟಿನಡಿ ನಡೆಯಬೇಕು ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮಡಿಕೇರಿ ಶಾಸಕ ಮಂತರ್ ಗೌಡ ಅವರು ವಿಧಾನಸಭೆಯಲ್ಲಿ ಅಸ್ಸಾಂ ಕಾರ್ಮಿಕರು ಹೆಚ್ಚಾಗಿದ್ದಾರೆ, ಗೃಹ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು ಚರ್ಚಿಸಿದ್ದಾರೆ. ಆದರೆ ಇದಕ್ಕೂ ಗಂಭೀರವಾದ ಸಮಸ್ಯೆಗಳು ಕೊಡಗನ್ನು ಕಾಡುತ್ತಿದೆ. ನಿವೇಶನ ಮತ್ತು ವಸತಿಗಾಗಿ ಸಾವಿರಾರು ಬಡವರು ಅರ್ಜಿ ಸಲ್ಲಿಸಿ ವರ್ಷಗಳೇ ಕಳೆದಿದೆ, ಆದರೆ ಜಿಲ್ಲೆಯ ಶಾಸಕರುಗಳು ಅಕ್ರಮ ಸಕ್ರಮ ಸಮಿತಿಯಲ್ಲಿ ಸಕ್ರಮಗೊಳಿಸಲು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಬ್ದುಲ್ ಮಜೀದ್ ಆರೋಪಿಸಿದರು.

ಮೊದಲು ಜಿಲ್ಲೆಯ ಜನರ ಜ್ವಲಂತ ಸಮಸ್ಯೆಗಳಿಗೆ ಸ್ಪಂದಿಸಿ ಪರಿಹಾರ ಸೂಚಿಸಲು ಶಾಸಕರುಗಳು ಕ್ರಮ ಕೈಗೊಳ್ಳಲಿ ಎಂದು ಒತ್ತಾಯಿಸಿದರು.

ದೇಶ ಕಾಂಗ್ರೆಸ್ ಮುಕ್ತವಾಗುತ್ತಿದೆ

ಎಸ್‌ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಅಫ್ಸರ್ ಕೊಡ್ಲಿಪೇಟೆ ಮಾತನಾಡಿ ಭಯಮುಕ್ತ ಸಮಾಜದ ನಿರ್ಮಾಣಕ್ಕಾಗಿ ಎಸ್‌ಡಿಪಿಐ ಹೋರಾಟ ನಡೆಸುತ್ತಿದೆ. ಇಂದು ದೇಶದಲ್ಲಿ ಬಿಜೆಪಿಯನ್ನು ಬಲವಾಗಿ ಎದುರಿಸಬಲ್ಲ ಶಕ್ತಿ ಇರುವುದು ಎಸ್‌ಡಿಪಿಐಗೆ ಮಾತ್ರ, ದೇಶ ಕಾಂಗ್ರೆಸ್ ಮುಕ್ತವಾಗುತ್ತಿದೆ, ಆ ಪಕ್ಷಕ್ಕೆ ಇನ್ನು ಉಳಿಗಾಲವಿಲ್ಲ. ರಾಜಕೀಯವಾಗಿ ಕಾಂಗ್ರೆಸ್‌ಗೆ ಇನ್ನೂ ಉಳಿದುಕೊಳ್ಳಬೇಕೆನ್ನುವ ಇಚ್ಛೆ ಇದ್ದರೆ ಅದು ಎಸ್‌ಡಿಪಿಐಗೆ ಬೆಂಬಲ ಸೂಚಿಸಲಿ ಎಂದರು.

ದೇಶಕ್ಕೆ ‘ಅಚ್ಚೇ ದಿನ್’ ಬರಲಿದೆ ಎಂದು ಎನ್‌ಡಿಎ ಸರಕಾರ ಘೋಷಿಸಿತು, ಆದರೆ ಇಲ್ಲಿಯವರೆಗೆ ಪ್ರಜೆಗಳಿಗೆ ಒಳ್ಳೆಯ ದಿನಗಳು ಬರಲಿಲ್ಲ. ಎಸ್‌ಐಆರ್ ಎನ್ನುವುದು ಎನ್‌ಆರ್‌ಸಿಯ ಹಿಂಬಾಗಿಲಾಗಿದೆ, ಮತಗಳ್ಳತನದ ಷಡ್ಯಂತ್ರವಾಗಿದೆ ಎಂದು ಆರೋಪಿಸಿದರು.

ಮೀಸಲಾತಿಯನ್ನು ಕಡಿತಗೊಳಿಸಿದಾಗ, ಹಿಜಾಬ್‌ಗೆ ಆಕ್ಷೇಪ ಎತ್ತಿದಾಗ, ಎಸ್‌ಡಿಪಿಐನ ರಾಷ್ಟಿçÃಯ ಅಧ್ಯಕ್ಷರನ್ನು ಬಂಧಿಸಿದಾಗ, ಎನ್‌ಆರ್‌ಸಿಯ ಕುರಿತು ಪ್ರಸ್ತಾಪಿಸಿದಾಗ ಯಾವುದಕ್ಕೂ ನಾವು ಭಯಪಡಲಿಲ್ಲ. ಹೋರಾಟದ ಮೂಲಕವೇ ನಮ್ಮ ಹಕ್ಕನ್ನು ಉಳಿಸಿಕೊಳ್ಳುತ್ತೇವೆ. ಈ ದೇಶದಲ್ಲಿ ಪ್ರತಿಯೊಬ್ಬರಿಗೂ ಸಂವಿಧಾನದ ಆಶಯದಂತೆ ಹಕ್ಕುಗಳನ್ನು ನೀಡುವುದು ನಮ್ಮ ಗುರಿಯಾಗಿದೆ. ಮುಂದೊAದು ದಿನ ಎಸ್‌ಡಿಪಿಐ ಪಕ್ಷದ ಮುಖ್ಯಮಂತ್ರಿ ಈ ರಾಜ್ಯವನ್ನು, ಎಸ್‌ಡಿಪಿಐ ಪಕ್ಷದ ಪ್ರಧಾನಮಂತ್ರಿ ಈ ದೇಶವನ್ನು ಆಳಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪೌರತ್ವ ಕಸಿಯುವಿಕೆ

ಅಧ್ಯಕ್ಷತೆ ವಹಿಸಿ ಮಾತನಾಡಿದ ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಅಮೀನ್ ಮೊಹಿಸಿನ್ ಎಸ್‌ಐಅರ್ ಎನ್ನುವುದು ನುಸುಳುಕೋರರನ್ನು ಪತ್ತೆ ಹಚ್ಚುವ ಪ್ರಕ್ರಿಯೆಯಲ್ಲ, ದೇಶದ ಪೌರತ್ವವನ್ನು ಕಸಿದುಕೊಳ್ಳುವ ಪ್ರಯತ್ನವಾಗಿದೆ. ಬೆಟ್ಟ ಕೊರೆದು ಇಲಿ ಹಿಡಿಯುವ ಸಾಹಸ ಇದಾಗಿದೆ, ಇಲ್ಲಿಯವರೆಗೆ ಕೇವಲ ಇಬ್ಬರು ಬಾಂಗ್ಲಾ ದೇಶಿಗರನ್ನು ಮಾತ್ರ ಪತ್ತೆ ಮಾಡಲಾಗಿದೆ ಎಂದು ಆರೋಪಿಸಿದರು.

ಇತ್ತೀಚೆಗೆ ದೇಶದ ವಿವಿಧ ರಾಜ್ಯಗಳಲ್ಲಿ ನಡೆಸಿದ ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ೯ ಕೋಟಿ ಮತದಾರರು ಮತದಾನದ ಹಕ್ಕಿನಿಂದ ಹೊರಗುಳಿದಿದ್ದಾರೆ. ಮತದಾನದ ಹಕ್ಕನ್ನು ಸಾಬೀತು ಪಡಿಸಬೇಕಾದರೆ ಜನನ ಪ್ರಮಾಣ ಪತ್ರ, ಆಸ್ತಿ ಪತ್ರ, ಪಾಸ್ ಪೋರ್ಟ್ ಮೊದಲಾದ ದಾಖಲೆಗಳನ್ನು ಒದಗಿಸಬೇಕೆನ್ನುವ ನಿಯಮ ರೂಪಿಸಲಾಗಿದೆ. ದೇಶದಲ್ಲಿ ಆಸ್ತಿ ಇಲ್ಲದವರ ಸಂಖ್ಯೆಯೇ ಅಧಿಕವಿರುವಾಗ ಈ ರೀತಿಯ ನಿರ್ಬಂಧಗಳಿAದ ಮತದಾರರ ಪಟ್ಟಿ ಪರಿಷ್ಕರಣೆ ನಡೆಸುತ್ತಿರುವುದರ ಹಿಂದೆ ಷಡ್ಯಂತ್ರ ಅಡಗಿದೆ, ಇದು ಕತ್ತಲೆ ಯುಗದ ಕಾನೂನಾಗಿದೆ, ಹಕ್ಕುಗಳನ್ನು ಮೊಟಕುಗೊಳಿಸುವ ಪ್ರಯತ್ನವಾಗಿದೆ. ರಾಜ್ಯ ಸರಕಾರ ವಿಶೇಷ ಅಧಿವೇಶನ ಕರೆದು ಪರಿಷ್ಕರಣೆಯ ಕ್ರಮಕ್ಕೆ ವಿರೋಧ ವ್ಯಕ್ತಪಡಿಸಬೇಕು. ಕೊಡಗಿನ ಇಬ್ಬರು ಶಾಸಕರು ಈ ಕುರಿತು ಒತ್ತಡ ಹೇರಬೇಕು ಎಂದು ಒತ್ತಾಯಿಸಿದರು.

ಅಲ್ಲದೆ, ಕೃಷಿ ಮಾಡಿಕೊಂಡು ಬದುಕು ಸಾಗಿಸುತ್ತಿರುವ ರೈತರ ಜಮೀನನ್ನು ಸಿಎನ್‌ಡಿ ವ್ಯಾಪ್ತಿಗೆ ತಂದು ಸೆಕ್ಷನ್ ೪ರ ಅಡಿಯಲ್ಲಿ ನೋಟೀಸ್ ಜಾರಿ ಮಾಡಿರುವ ಕ್ರಮವನ್ನು ಕೈಬಿಟ್ಟು ಜಮೀನನ್ನು ೫೭ರ ಅಡಿಯಲ್ಲಿ ಸಕ್ರಮಗೊಳಿಸಬೇಕು. ಮಾನವ ಹಾಗೂ ವನ್ಯಜೀವಿ ನಡುವಿನ ಸಂಘರ್ಷವನ್ನು ತಡೆಯಲು ಶಾಶ್ವತ ಯೋಜನೆಯನ್ನು ರೂಪಿಸಬೇಕು. ಕೊಡಗಿನಲ್ಲಿರುವ ನಿವೇಶನ ರಹಿತ ಮತ್ತು ವಸತಿ ರಹಿತ ಕುಟುಂಬಗಳಿಗೆ ತಕ್ಷಣ ನಿವೇಶನ, ವಸತಿ ಮಂಜೂರು ಮಾಡಬೇಕು. ಎಲ್ಲಾ ನಮೂನೆ ೫೦, ೫೩, ೫೭ ಹಾಗೂ ೯೪ಸಿ, ೯೪ಸಿಸಿ ಫಾಸ್ಟ್ ಟ್ರಾö್ಯಕ್ ಸಮಿತಿ ರಚಿಸಿ ಸಕ್ರಮಗೊಳಿಸಬೇಕು. ಜೀವನದಿ ಕಾವೇರಿ ಕಲುಷಿತಗೊಳ್ಳುವುದನ್ನು ತಡೆಯಲು ಕ್ರಮ ಕೈಗೊಳ್ಳಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಈಡೇರಿಸುವಂತೆ ಅಮೀನ್ ಮೊಹಿಸಿನ್ ಆಗ್ರಹಿಸಿದರು.

ಕಾಂಗ್ರೆಸ್‌ನಿAದ ನ್ಯಾಯ ಅಲಭ್ಯ

ಎಸ್‌ಡಿಪಿಐ ರಾಷ್ಟಿçÃಯ ಸಮಿತಿ ಸದಸ್ಯ ಅಶ್ರಫ್ ಮೌಲವಿ ಮೂವಾಟ್ಟುಪುಝ ಮಾತನಾಡಿ ನಿರಂತರವಾಗಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುತ್ತಾ ಬಂದಿದ್ದ ಮುಸಲ್ಮಾನರಿಗೆ ಆ ಪಕ್ಷದಿಂದ ನ್ಯಾಯ ಸಿಗಲಿಲ್ಲ, ಇನ್ನು ಮುಂದೆ ಕಾಂಗ್ರೆಸ್ ಮತ್ತು ಜೆಡಿಎಸ್ ಆಟ ನಡೆಯುವುದಿಲ್ಲ. ಭಯಮುಕ್ತ ಸಮಾಜ ನಿರ್ಮಾಣ, ಮನುಷ್ಯತ್ವ, ಸಮಗ್ರ ಅಭಿವೃದ್ಧಿ, ಎಲ್ಲಾ ಮಕ್ಕಳಿಗೆ ಶಿಕ್ಷಣ, ಬಡವರಿಗೆ ಮನೆಗಳನ್ನು ನೀಡುವುದು ಎಸ್‌ಡಿಪಿಐ ಗುರಿಯಾಗಿದೆ. ಎಸ್‌ಐಆರ್ ಪ್ರಕ್ರಿಯೆಯ ಹಿಂದೆ ದುರುದ್ದೇಶವಿದ್ದು, ಜನರು ಜಾಗೃತರಾಗಿ ಅದರ ವಿರುದ್ಧ ಧ್ವನಿ ಎತ್ತಬೇಕು ಎಂದರು.

ಎಸ್‌ಡಿಪಿಐ ರಾಜ್ಯ ಉಪಾಧ್ಯಕ್ಷ ದೇವನೂರು ಪುಟ್ಟ ನಂಜಯ್ಯ ಮಾತನಾಡಿ ದೇಶ ಸೇವೆ, ಜನ ಸೇವೆ, ಅಂಬೇಡ್ಕರ್ ಸಿದ್ಧಾಂತ, ಸಂವಿಧಾನದ ಆಶಯಗಳನ್ನು ತಿಳಿಯದವರು ಇಂದು ಆಡಳಿತ ನಡೆಸುತ್ತಿದ್ದಾರೆ. ಮುಂದೊAದು ದಿನ ಎಸ್‌ಡಿಪಿಐಯನ್ನು ಎದುರಿಸಲು ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಒಗ್ಗೂಡುವ ಕಾಲ ಬರಲಿದೆ ಎಂದು ತಿಳಿಸಿದರು.

ಅಸಮಾನತೆ, ಅಸ್ಪೃಶ್ಯತೆ, ಅರಾಜಕತೆ, ಡ್ರಗ್ಸ್ ಜಾಲ ತಾಂಡವವಾಡುತ್ತಿದೆ, ಬಡವರು ಮೂಲಭೂತ ಸೌಲಭ್ಯಗಳ ಕೊರತೆಯನ್ನು ಎದುರಿಸುತ್ತಿದ್ದಾರೆ. ಒಬ್ಬ ವ್ಯಕ್ತಿ, ಒಂದು ಕುಟುಂಬದ ಸುತ್ತ ರಾಜಕಾರಣ ಸುತ್ತುತ್ತಿದೆ. ಬಡವರಿಗೆ ನ್ಯಾಯ ಸಿಗುತ್ತಿಲ್ಲ ಎಂದು ಟೀಕಿಸಿದರು.

ಪತ್ರಕರ್ತ ರಾ.ಚಿಂತನ್ ಮಾತನಾಡಿ ಶಾಶ್ವತವಾಗಿ ಅಧಿಕಾರದಲ್ಲಿ ಉಳಿಯಲು ಎಸ್‌ಐಆರ್ ಪ್ರಕ್ರಿಯೆ ಆರಂಭಿಸಲಾಗಿದೆ. ಇದರಿಂದ ಕೋಟ್ಯಂತರ ಜನರಿಗೆ ತೊಂದರೆಯಾಗಲಿದೆ, ಇದೊಂದು ಸಂವಿಧಾನ ಬಾಹಿರ ಕ್ರಮವಾಗಿದ್ದು, ಅಧಿಕಾರದ ದುರುಪಯೋಗವಾಗಿದೆ ಎಂದು ಆರೋಪಿಸಿದರು.

ಎಸ್‌ಡಿಪಿಐ ರಾಜ್ಯ ಉಪಾಧ್ಯಕ್ಷೆ ಶಾಹಿದಾ ತಸ್ನೀಮ್ ಮಾತನಾಡಿ ರಾಜ್ಯದಲ್ಲಿ ಯಾವುದೇ ಗ್ಯಾರಂಟಿ ಯೋಜನೆಗಳಿದ್ದರೂ ಮಹಿಳಾ ವಿರೋಧಿ, ಶಿಕ್ಷಣ ವಿರೋಧಿ ಸರಕಾರವಿದೆ. ಬುಲ್ಡೋಸರ್ ಬಳಸಿ ಮನೆಗಳನ್ನು ನೆಲಸಮಗೊಳಿಸುವಾಗ ವಿದ್ಯಾರ್ಥಿಗಳ ಸರ್ಟಿಫಿಕೇಟ್‌ಗಳು ಬೆಲೆ ನೀಡಿಲ್ಲ, ಹಿಜಾಬ್ ಕುರಿತು ಸರಕಾರ ಮಾತು ಉಳಿಸಿಕೊಂಡಿಲ್ಲ ಎಂದು ಟೀಕಿಸಿದರು. ನುಸುಳುಕೋರರು ದೇಶದ ಗಡಿಯಲ್ಲಿ ನುಸುಳುತ್ತಿದ್ದಾರೆ ಎಂದರೆ ಇದಕ್ಕೆ ಯಾರು ಹೊಣೆ? ಎಂದು ಪ್ರಶ್ನಿಸಿದರು.

ಎಸ್‌ಐಆರ್ ನಿಂದ ಕೂಲಿ ಕಾರ್ಮಿಕರಿಗೆ ಹಾಗೂ ಮಹಿಳೆಯರಿಗೆ ಹೆಚ್ಚು ತೊಂದರೆಯಾಗಲಿದೆ. ಆದ್ದರಿಂದ ಎಸ್‌ಡಿಪಿಐ ವತಿಯಿಂದ ಪ್ರತಿ ಮನೆ ಮನೆಗೆ ತೆರಳಿ ಜಾಗೃತಿ ಮೂಡಿಸಲಾಗುವುದು ಎಂದರು.

ಎಸ್‌ಡಿಪಿಐ ಜಿಲ್ಲಾ ಸಮಿತಿ ಸದಸ್ಯ ಅಬ್ದುಲ್ ಅಡ್ಕಾರ್ ಮತದಾರರ ಪಟ್ಟಿ ತೀವ್ರ ಪರಿಷ್ಕರಣೆಯನ್ನು ಕೈಬಿಡಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಮಂಡಿಸಿದರು, ಉಸ್ಮಾನ್ ಸುಂಟಿಕೊಪ್ಪ ಸ್ವಾಗತಿಸಿದರು. ವಿವಿಧ ಪಕ್ಷಗಳ ಕಾರ್ಯಕರ್ತರು ಎಸ್‌ಡಿಪಿಐಗೆ ಸೇರ್ಪಡೆಗೊಂಡರು. ಪಕ್ಷದ ಪ್ರಮುಖರು ಧ್ವಜ ನೀಡಿ ಬರ ಮಾಡಿಕೊಂಡರು.

ಎಸ್‌ಡಿಪಿಐ ಜಿಲ್ಲಾ ಉಪಾಧ್ಯಕ್ಷ ಎಂ.ಕೆ.ಮನ್ಸೂರ್ ಆಲಿ, ಕಾರ್ಯದರ್ಶಿ ಮೇರಿ ವೇಗಸ್, ಸದಸ್ಯ ಅಬ್ದುಲ್ ಅಡ್ಕಾರ್, ನಗರಾಧ್ಯಕ್ಷ ಮೊಹಮ್ಮದ್ ಅಲಿ, ನಗರಸಭಾ ಸದಸ್ಯೆ ನೀಮಾ ಅರ್ಷದ್, ಕಾರ್ಯದರ್ಶಿ ಬಷೀರ್ ಅಹಮ್ಮದ್, ಕೆ.ಸಿ.ಬಷೀರ್, ಅಬ್ದುಲ್ ಜಮೀರ್, ಫಾರುಕ್ ಖಾನ್, ಷರೀಫ್, ಭಾಷಾ, ಹನೀಫ್ ವೀರಾಜಪೇಟೆ, ಜಕ್ರಿಯ ಕುಶಾಲನಗರ, ಹಫೀಜ್ ಮತ್ತಿತರರು ಉಪಸ್ಥಿತರಿದ್ದರು.

ಸಮಾವೇಶಕ್ಕೂ ಮೊದಲು ಎಸ್‌ಡಿಪಿಐ ಮುಖಂಡರು ಹಾಗೂ ಕಾರ್ಯಕರ್ತರು ಎವಿ ಶಾಲೆ ಬಳಿಯಿಂದ ಗಾಂಧಿ ಮೈದಾನದವರೆಗೆ ಘೋಷಣೆಗಳೊಂದಿಗೆ ರ‍್ಯಾಲಿ ನಡೆಸಿದರು