ಮಡಿಕೇರಿ, ಜ. ೧೮: ಮೂಲತಃ ಕೊಡಗು ಜಿಲ್ಲೆಯ ಕೋಕೇರಿಯವರಾದ ದ್ರೋಣಾಚಾರ್ಯ ಪ್ರಶಸ್ತಿ ವಿಜೇತರಾಗಿರುವ ಚೇನಂಡ ವಿಶು ಕುಟ್ಟಪ್ಪ ಅವರು ಭಾರತ ಪುರುಷರ ಬಾಕ್ಸಿಂಗ್ ತಂಡದ ಮುಖ್ಯ ಕೋಚ್ ಆಗಿ ೩ನೇ ಬಾರಿಗೆ ಆಯ್ಕೆಗೊಂಡಿದ್ದಾರೆ.
ಭಾರತೀಯ ಸೇನೆಯಲ್ಲಿ ಸುಬೇದಾರ್ ಆಗಿರುವ ವಿಶು ಕುಟ್ಟಪ್ಪ ಅವರು, ಸ್ವತಃ ಬಾಕ್ಸಿಂಗ್ ಪಟುವೂ ಆಗಿದ್ದು, ೨೦೦೭ ರಿಂದ ೨೦೧೮ರ ತನಕ ಬಾಕ್ಸಿಂಗ್ ತಂಡದ ಸಹಾಯಕ ಕೋಚ್ ಆಗಿದ್ದರು. ನಂತರದಲ್ಲಿ ೨೦೧೮ರಲ್ಲಿ ಮುಖ್ಯ ಕೋಚ್ ಆಗಿ ಆಯ್ಕೆಗೊಂಡ ಅವರು, ೨೦೨೨ರ ತನಕ ಮೊದಲ ಅವಧಿ, ನಂತರದಲ್ಲಿ ೨೦೨೨ ರಿಂದ ೨೦೨೪ರ ತನಕ ಎರಡನೇ ಬಾರಿಗೆ ಹಾಗೂ ಇದೀಗ ೨೦೨೬ ರಿಂದ ೩ನೇ ಬಾರಿಗೆ ಮುಖ್ಯ ಕೋಚ್ ಆಗಿ ನೇಮಕಗೊಂಡಿದ್ದಾರೆ. ಫೆಬ್ರವರಿ ೨ ರಿಂದ ಸ್ಪೇನ್ನಲ್ಲಿ ಜರುಗುವ ಬಾಕ್ಸಿಂಗ್ ಸ್ಪರ್ಧೆ ಸೇರಿದಂತೆ ಮುಂಬರಲಿರುವ ಏಷ್ಯನ್ ಗೇಮ್ಸ್, ಕಾಮನ್ ವೆಲ್ತ್ ಕ್ರೀಡಾಕೂಟಕ್ಕೂ ಇವರು ಮುಖ್ಯ ಕೋಚ್ ಆಗಲಿದ್ದಾರೆ. ಮುಂದಿನ ಒಲಂಪಿಕ್ಸ್ನಲ್ಲೂ ಕಾರ್ಯನಿರ್ವಹಿಸುವ ನಿರೀಕ್ಷೆ ಇದೆ.