ಸೋಮವಾರಪೇಟೆ, ಜ. ೧೪: ಸಮೀಪದ ಶಾಂತಳ್ಳಿ ಗ್ರಾಮದಲ್ಲಿರುವ, ಚೋಳರ ಕಾಲದ ಐತಿಹ್ಯ ಹೊಂದಿರುವ ಇತಿಹಾಸ ಪ್ರಸಿದ್ಧ ಶ್ರೀ ಕುಮಾರಲಿಂಗೇಶ್ವರ ಸ್ವಾಮಿ ದೇವರ ೬೭ನೇ ವರ್ಷದ ವಾರ್ಷಿಕ ಜಾತ್ರೋತ್ಸವಕ್ಕೆ ವಿಧ್ಯುಕ್ತ ಚಾಲನೆ ದೊರೆತಿದ್ದು, ತಾ. ೧೬ರಂದು (ನಾಳೆ) ೬೭ನೇ ಮಹಾರಥೋತ್ಸವ ನಡೆಯಲಿದೆ. ನಿನ್ನೆ ಸಂಜೆ ‘ಬೆಳ್ಳಿ ಬಂಗಾರ ದಿನ’ದ ಆಚರಣೆಯೊಂದಿಗೆ ಜಾತ್ರೆಯ ಪ್ರಾರಂಭೋತ್ಸವ ಪೂಜೆ ನೆರವೇರಿದ್ದು, ಇಂದು ‘ಮಕರ ಸಂಕ್ರಮಣ ಕರುವಿನ ಹಬ್ಬ’ ಹಾಗೂ ದೇಗುಲದ ಗರುಡ ಕಂಬದ ಅಗ್ರಪೀಠದಲ್ಲಿ ತುಪ್ಪದ ನಂದಾದೀಪವನ್ನು ಬೆಳಗುವ ಪೂಜಾ ಕೈಂಕರ್ಯಗಳು ಶ್ರದ್ಧಾಭಕ್ತಿಯಿಂದ ನಡೆದವು. ಇದರೊಂದಿಗೆ ಅಂಕುರಾರ್ಪಣ ಪೂಜೆ, ಮಹಾಮಂಗಳಾರತಿ, ಪ್ರಾರ್ಥನೆ, ಪ್ರಸಾದ ಸ್ವೀಕಾರ ನಡೆಯಿತು.

ತಾ. ೧೫ರಂದು (ಇಂದು) ‘ಅರಸು ಬಲ ಸೇವೆ’ ನಡೆಯಲಿದೆ. ಸಂಜೆ ೭.೩೦ರಿಂದ ಗಣಹೋಮ, ರಂಗಪೂಜೆ, ಬೀದಿ ಉತ್ಸವ, ಮಹಾಮಂಗಳಾರತಿ ಕಾರ್ಯಕ್ರಮಗಳು ಜರುಗುತ್ತವೆ. ತಾ. ೧೬ರಂದು ಮಧ್ಯಾಹ್ನ ೧೨.೦೫ಕ್ಕೆ ೬೭ನೇ ಮಹಾ ರಥೋತ್ಸವ ಜರುಗಲಿದೆ. ಜಿಲ್ಲಾ ಉಸ್ತುವಾರಿ ಸಚಿವ ಬೋಸರಾಜು, ಶಾಸಕ ಡಾ. ಮಂತರ್ ಗೌಡ, ಸಂಸದ ಯದುವೀರ್ ಒಡೆಯರ್, ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್, ಮಾಜಿ ಸಚಿವರಾದ ಬಿ.ಎ. ಜೀವಿಜಯ, ಅಪ್ಪಚ್ಚು ರಂಜನ್, ಒಕ್ಕಲಿಗರ ಸಂಘದ ನಿರ್ದೇಶಕ ಹರಪಳ್ಳಿ ರವೀಂದ್ರ ಸೇರಿದಂತೆ ಇತರರು ಭಾಗವಹಿಸಲಿದ್ದಾರೆ ಎಂದು ದೇವಾಲಯ ಧರ್ಮದರ್ಶಿ ಮಂಡಳಿ ಅಧ್ಯಕ್ಷ ಕೆ.ಎಂ. ಲೋಕೇಶ್ ತಿಳಿಸಿದ್ದಾರೆ.

ತಾ. ೧೭ರಂದು ಮಧ್ಯಾಹ್ನ ೩ ಗಂಟೆಗೆ ಜಾತ್ರಾ ಸಮಾರೋಪ ಸಮಾರಂಭ ನಡೆಯಲಿದೆ. ಶಾಂತಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸವಿತಾ ವಿಜಯಕುಮಾರ್, ಬೆಟ್ಟದಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ತಮ್ಮಯ್ಯ, ಮಾಜಿ ವಿಧಾನ ಪರಿಷತ್ ಸದಸ್ಯ ಎಸ್.ಜಿ. ಮೇದಪ್ಪ, ಪ್ರಮುಖರಾದ ಕೆ.ಎಸ್. ರಾಮಚಂದ್ರ, ಕೃಷ್ಣಕುಮಾರ್, ಜಯೇಂದ್ರ ಸೇರಿದಂತೆ ಹಲವರು ಪಾಲ್ಗೊಳ್ಳಲಿದ್ದಾರೆ. ಜಾತ್ರೋತ್ಸವದ ಪ್ರಯುಕ್ತ ಶ್ರೀಕುಮಾರಲಿಂಗೇಶ್ವರ ಯುವಕ ಸಂಘದ ವತಿಯಿಂದ ಅಂತರ್ ಜಿಲ್ಲಾ ಮಟ್ಟದ ಥ್ರೋಬಾಲ್, ಕಬಡ್ಡಿ ಮತ್ತು ವಾಲಿಬಾಲ್ ಪಂದ್ಯಾಟಗಳು ನಡೆಯಲಿದ್ದು, ಜಾತ್ರೋತ್ಸವ ಅಂಗವಾಗಿ ತಾ. ೧೫ ರಿಂದ ಮೂರು ದಿನಗಳ ಕಾಲ ದೇವಾಲಯದಲ್ಲಿ ಸಾರ್ವಜನಿಕ ಭಕ್ತಾದಿಗಳಿಗೆ ಅನ್ನದಾನ ನಡೆಯಲಿದೆ. ಇದರೊಂದಿಗೆ ಫಲಪುಷ್ಪ, ವಸ್ತು ಪ್ರದರ್ಶನ ಆಯೋಜಿಸಿದ್ದು, ವಿಶೇಷ ವಸ್ತುಗಳಿಗೆ ಸಮಿತಿಯ ವತಿಯಿಂದ ಬಹುಮಾನ ನೀಡುವ ಮೂಲಕ ಕೃಷಿಕರನ್ನು ಪ್ರೋತ್ಸಾಹಿಸುವ ಕಾರ್ಯ ನಡೆಯಲಿದೆ.