ಸಿದ್ದಾಪುರ, ಡಿ. ೨೮: ವೀರಾಜಪೇಟೆ ನಗರ ಠಾಣಾ ವ್ಯಾಪ್ತಿಯ ಕಾಫಿ - ಕರಿಮೆಣಸು ವ್ಯಾಪಾರಿಗಳ ಸಭೆಯನ್ನು ವೀರಾಜಪೇಟೆ ತಾಲೂಕು ಡಿವೈಎಸ್ಪಿ ಮಹೇಶ್ ಕುಮಾರ್ ನೇತೃತ್ವದಲ್ಲಿ ನಡೆಸಲಾಯಿತು.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಡಿವೈಎಸ್‌ಪಿ ಮಹೇಶ್ ಕುಮಾರ್, ಇತ್ತೀಚಿನ ದಿನಗಳಲ್ಲಿ ಕೆಲವರು ಕಾಫಿ - ಕರಿಮೆಣಸುಗಳನ್ನು ಕಳ್ಳತನ ಮಾಡಿ ಮಾರಾಟ ಮಾಡುತ್ತಿರುವ ಬಗ್ಗೆ ಪೊಲೀಸ್ ಠಾಣೆಗಳಿಗೆ ದೂರುಗಳು ಬರುತ್ತಿವೆ. ಈ ಹಿನ್ನೆಲೆಯಲ್ಲಿ ಈ ಸಭೆಯನ್ನು ಕರೆಯಲಾಗಿದೆ. ಕಾಫಿ ವ್ಯಾಪಾರಸ್ಥರು ತಮ್ಮಲ್ಲಿಗೆ ಬಂದು ಕಾಫಿ ಮಾರಾಟ ಮಾಡುವ ವ್ಯಕ್ತಿಗಳ ಬಗ್ಗೆ ವಿಚಾರಿಸಬೇಕು. ಅಲ್ಲದೆ ಬೆಳಗಾರರ ದಾಖಲಾತಿಗಳನ್ನು ಸಂಗ್ರಹಿಸಬೇಕು. ತೋಟಗಳಿಂದ ಕಳ್ಳತನ ಮಾಡಿ ತಂದ ಕಾಫಿಯನ್ನು ಖರೀದಿಸಬಾರದು ಎಂದು ಸೂಚನೆ ನೀಡಿದರು. ಒಂದುವೇಳೆ ವರ್ತಕರು ಖರೀದಿಸಿದಲ್ಲಿ ಮಾರಾಟ ಮಾಡಿದ ವ್ಯಕ್ತಿಯ ವಿರುದ್ಧ ದೂರುಗಳು ಬಂದ ಸಂದರ್ಭ ಆ ವ್ಯಕ್ತಿಯು ನೀಡಿದ ಮಾಹಿತಿ ಮೇರೆಗೆ ಕಾಫಿಯನ್ನು ಖರೀದಿಸಿದ ವ್ಯಾಪಾರಸ್ಥರ ವಿರುದ್ಧವೂ ಪ್ರಕರಣ ದಾಖಲಿಸಲಾಗುವುದೆಂದು ಎಚ್ಚರಿಕೆ ನೀಡಿದರು.

ಕಳ್ಳತನ ಮಾಡಿದ ಕಾಫಿ ಹಾಗೂ ಕರಿಮೆಣಸನ್ನು ಮಾರಾಟ ಮಾಡಲು ತರುವ ವ್ಯಕ್ತಿಗಳ ಬಗ್ಗೆ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಮನವಿ ಮಾಡಿದರು. ಸೂಕ್ತ ದಾಖಲಾತಿಗಳು ಇಲ್ಲದೆ ಕಾಫಿ ಹಾಗೂ ಕರಿಮೆಣಸನ್ನು ಖರೀದಿಸದಂತೆ ಸಲಹೆ ನೀಡಿದರು.

ಸಭೆಯಲ್ಲಿ ಸಿ.ಐ. ಅನೂಪ್ ಮಾದಪ್ಪ. ಠಾಣಾಧಿಕಾರಿಗಳಾದ ಪ್ರಮೋದ್, ಕಾವೇರಪ್ಪ. ವಾಣಿ, ಲತಾ ಹಾಗೂ ಸಿಬ್ಬಂದಿ ಹಾಜರಿದ್ದರು.