ನೆಲ್ಲಿಹುದಿಕೇರಿ ಗ್ರಾಮಸಭೆ
ಸಿದ್ದಾಪುರ, ಡಿ. ೨೬: ಜಲಜೀವನ್ ಮಿಷನ್ ಯೋಜನೆಯಡಿಯಲ್ಲಿ ಕುಡಿಯುವ ನೀರು ಯೋಜನೆ ಕಳಪೆ ಕಾಮಗಾರಿ ಆಗಿದೆ ಎಂಬ ಆರೋಪ ಹಾಗೂ ವನ್ಯಪ್ರಾಣಿಗಳ ಹಾವಳಿಯನ್ನು ತಡೆಗಟ್ಟಲು ಶಾಶ್ವತ ಯೋಜನೆಯನ್ನು ರೂಪಿಸಬೇಕೆಂದು ಒತ್ತಾಯ ಸೇರಿದಂತೆ ವಿವಿಧ ಸಮಸ್ಯೆಗಳನ್ನು ಗ್ರಾಮಸ್ಥರು ಗ್ರಾಮ ಸಭೆಯಲ್ಲಿ ಪ್ರಸ್ತಾಪಿಸಿದರು.
ನೆಲ್ಲಿಹುದಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ೨೦೨೫-೨೦೨೬ನೇ ಸಾಲಿನ ಗ್ರಾಮಸಭೆ ಪಂಚಾಯಿತಿ ಸಭಾಂಗಣದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಧನಲಕ್ಷ್ಮಿ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಮಾತನಾಡಿದ ಗ್ರಾಮಸ್ಥರಾದ ಟಿ.ಜಿ. ಚಂದ್ರಶೇಖರ್ ಮತ್ತು ಸತ್ಯ ಮಾತನಾಡಿ, ಬೆಟ್ಟದ ಕಾಡು ರಸ್ತೆಯ ಕಾವೇರಿ ನದಿ ತೀರದ ಬಳಿ ಕೋಟ್ಯಂತರ ರೂಪಾಯಿ ವೆಚ್ಚ ಮಾಡಿ ಜಲಜೀವನ್ ಮಿಷನ್ ಯೋಜನೆಯಡಿಯಲ್ಲಿ ಕುಡಿಯುವ ನೀರು ಸರಬರಾಜು ಮಾಡುವ ನಿಟ್ಟಿನಲ್ಲಿ ಪ್ರಾರಂಭಿಸಲಾದ ಕಾಮಗಾರಿಯು ಮಂದಗತಿಯಲ್ಲಿ ಸಾಗುತ್ತಿದ್ದು ಇದು ಕಳಪೆ ಗುಣಮಟ್ಟದಿಂದ ಕೂಡಿದೆ ಎಂದು ತಿಳಿಸಿದರು. ಅಲ್ಲದೆ ಕೋಟ್ಯಂತರ ರೂಪಾಯಿ ವೆಚ್ಚ ಮಾಡಿ ಜಲಜೀವನ್ ಮಿಷನ್ ಯೋಜನೆಯಡಿಯಲ್ಲಿ ಕೈಗೊಂಡಿರುವ ಕಾಮಗಾರಿಯು ನದಿ ತೀರದಲ್ಲಿರುವ ಹಿನ್ನೆಲೆಯಲ್ಲಿ ಮುಂದಿನ ಮಳೆಗಾಲದ ಸಂದರ್ಭ ಪ್ರವಾಹಕ್ಕೆ ಸಿಲುಕಿ ಕಾಮಗಾರಿಯು ನೀರು ಪಾಲಾಗುವ ಸಾಧ್ಯತೆ ಕಂಡು ಬಂದಿದ್ದು ಈಗಾಗಲೇ ಕಾಮಗಾರಿಯ ಬದಿಯಲ್ಲಿ ಬಿರುಕು ಬಿಟ್ಟಿದೆ ಎಂದರು.
ಇದಕ್ಕೆ ಉತ್ತರಿಸಿದ ಜಲಜೀವನ್ ಮಿಷನ್ ಯೋಜನೆಯ ಅಭಿಯಂತರ ವೀರೇಂದ್ರ ಪ್ರತಿಕ್ರಿಯೆ ನೀಡಿ, ಈ ಭಾಗದಲ್ಲಿ ಕೈಗೊಂಡಿರುವ ಕಾಮಗಾರಿಯು ಮುಂದಿನ ಮಾರ್ಚ್ ತಿಂಗಳೊಳಗೆ ಸಂಪೂರ್ಣವಾಗಿ ಮುಕ್ತಾಯಗೊಳಿಸಲಾಗುವುದೆಂದು ಭರವಸೆಯನ್ನು ನೀಡಿದರು. ಕಳಪೆಯಾಗಿರುವ ಜಾಗದಲ್ಲಿ ಸರಿಪಡಿಸಿಕೊಡಲಾಗುವುದು ಎಂದು ಭರವಸೆಯನ್ನು ನೀಡಿದರು. ಗ್ರಾಮಸ್ಥರಾದ ಬಾಬು ವಿಶ್ವನಾಥ್ ಮಾತನಾಡಿ, ಬೆಟ್ಟದ ಕಾಡು ಭಾಗದಲ್ಲಿ ಮಿತಿಮೀರಿದ ಕಾಡಾನೆಗಳ ಹಾವಳಿಯಿಂದಾಗಿ ರೈತರ ಕೃಷಿ ಫಸಲುಗಳನ್ನು ನಾಶಗೊಳಿಸುತ್ತಿದೆ. ಈ ಬಗ್ಗೆ ತಾನು ಅರಣ್ಯ ಇಲಾಖೆಗೆ ದೂರು ನೀಡಿ ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಐದು ತಿಂಗಳು ಕಳೆದರೂ ನಷ್ಟಕ್ಕೊಳಗಾದ ರೈತರಿಗೆ ಸೂಕ್ತ ಪರಿಹಾರವನ್ನು ನೀಡದೆ ನಿರ್ಲಕ್ಷ ವಹಿಸಿದ್ದಾರೆ ಎಂದು ಆರೋಪಿಸಿದರು. ತಮಗೆ ಸೂಕ್ತ ಪರಿಹಾರವನ್ನು ನೀಡುವಂತೆ ಬೆಳಗಾರರು ಒತ್ತಾಯಿಸಿದರು.
ಕಾರ್ಮಿಕ ಮುಖಂಡ ಪಿ.ಆರ್. ಭರತ್ ಮಾತನಾಡಿ, ಗ್ರಾಮ ಸಭೆಗೆ ಕಡಿಮೆ ಸಂಖ್ಯೆಯಲ್ಲಿ ಗ್ರಾಮಸ್ಥರು ಆಗಮಿಸಿದ್ದು ಗ್ರಾಮ ಪಂಚಾಯಿತಿಯು ಗ್ರಾಮಸ್ಥರನ್ನು ಸಭೆಗೆ ಕರೆತರುವಂತೆ ಒತ್ತಾಯಪಡಿಸಿದರು. ಅಲ್ಲದೆ ನಲ್ವತ್ತೇಕರೆ - ಬರಡಿ ಭಾಗದಲ್ಲಿ ಕಾಡಾನೆಗಳ ಉಪಟಳದಿಂದಾಗಿ ತತ್ತರಿಸಿರುವ ಗ್ರಾಮಸ್ಥರು ಇದೀಗ ಮಂಗಗಳ ಹಾವಳಿಯಿಂದಾಗಿ ನೆಮ್ಮದಿ ಇಲ್ಲದಂತಾಗಿದೆ ಎಂದು ತಿಳಿಸಿದರು. ಮಂಗಗಳನ್ನು ಅರಣ್ಯ ಇಲಾಖೆ ವತಿಯಿಂದ ಹಿಡಿದು ಸ್ಥಳಾಂತರ ಮಾಡಬೇಕೆಂದು ಒತ್ತಾಯಪಡಿಸಿದರು.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಉಪ ವಲಯ ಅರಣ್ಯ ಅಧಿಕಾರಿ ಸಚಿನ್ ನಿಂಬಾಳ್ಕರ್ ಮಾತನಾಡಿ, ಅರಣ್ಯ ಇಲಾಖೆ ವತಿಯಿಂದ ವನ್ಯ ಪ್ರಾಣಿಗಳ ಹಾವಳಿಯಿಂದಾಗಿ ಬೆಳೆ ಹಾನಿಯಾಗಿ ನಷ್ಟಗೊಂಡಿರುವ ರೈತರಿಗೆ ಸೂಕ್ತ ಪರಿಹಾರವನ್ನು ನೀಡಲಾಗುತ್ತಿದೆ ಎಂದು ತಿಳಿಸಿದರು. ಮಂಗಗಳ ಹಾವಳಿಯ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತರುವುದಾಗಿ ಭರವಸೆಯನ್ನು ನೀಡಿದರು.
ಗ್ರಾಮಸ್ಥ ಜೋಸೆಫ್ ಶ್ಯಾಂ ಮಾತನಾಡಿ, ಸರಕಾರವು ಬಿ.ಪಿ.ಎಲ್. ಪಡಿತರ ಚೀಟಿಗಳಿಗೆ ಹೊರಡಿಸಿರುವ ಮಾನದಂಡಗಳನ್ನು ಬದಲಾಯಿಸಬೇಕೆಂದು ಒತ್ತಾಯಪಡಿಸಿದರು. ಕುಶಾಲನಗರ ತಾಲೂಕು ಆಹಾರ ನಿರೀಕ್ಷಕಿ ಸ್ವಾತಿ ಮಾತನಾಡಿ, ಪಡಿತರ ಚೀಟಿ ತಿದ್ದುಪಡಿ ಹಾಗೂ ಹೊಸ ಹೆಸರುಗಳನ್ನು ಸೇರ್ಪಡೆಗೊಳಿಸುವ ಪ್ರಕ್ರಿಯೆಗಳು ನಡೆಯುತ್ತಿದೆ. ಹೊಸ ಪಡಿತರ ಚೀಟಿಗಳು ಇನ್ನೂ ಕೂಡ ಪ್ರಾರಂಭವಾಗಿಲ್ಲ ಎಂದು ಮಾಹಿತಿ ನೀಡಿದರು. ಸರ್ಕಾರದಿಂದ ಪಡಿತರ ಅಂಗಡಿಗಳಲ್ಲಿ ನೀಡುವ ಫುಡ್ ಕಿಟ್ಗಳನ್ನು ಸರ್ಕಾರವು ಸದ್ಯದಲ್ಲೇ ನೀಡುವುದಾಗಿ ತಿಳಿಸಿದ್ದು ಅದು ಬಂದ ಬಳಿಕ ನ್ಯಾಯಬೆಲೆ ಅಂಗಡಿಗಳಲ್ಲಿ ವಿತರಣೆ ಮಾಡಲಾಗುವುದೆಂದು ಮಾಹಿತಿ ನೀಡಿದರು.
ಸಭೆಯಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಪ್ರಮೀಳಾ ಮತ್ತು ಗ್ರಾಮ ಪಂಚಾಯಿತಿ ಸದಸ್ಯರುಗಳು ಹಾಜರಿದ್ದರು. ನೋಡಲ್ ಅಧಿಕಾರಿಯಾಗಿ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ಸಿದ್ದೇಗೌಡ ಭಾಗವಹಿಸಿದ್ದರು. ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಂಜುAಡಸ್ವಾಮಿ ಸ್ವಾಗತಿಸಿ, ವಂದಿಸಿದರು. ಸಭೆಯಲ್ಲಿ ವಿವಿಧ ಇಲಾಖೆ ಅಧಿಕಾರಿಗಳು ಹಾಜರಾಗಿ ತಮ್ಮ ಇಲಾಖೆಯಿಂದ ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.