ಕೊಡ್ಲಿಪೇಟೆ, ಡಿ.೨೬: ವಾಹನ ತಡೆದು ಹಲ್ಲೆ ನಡೆಸಿ ಜಾತಿನಿಂದನೆ ಮಾಡಿರುವ ಆರೋಪದ ಮೇರೆ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಈರ್ವರ ವಿರುದ್ಧ ಮೊಕದ್ದಮೆ ದಾಖಲಾಗಿದೆ.
ದೊಡ್ಡಕೊಡ್ಲಿ ಗ್ರಾಮದ ಡಿ.ಆರ್. ಸುರೇಶ್ ಎಂಬವರ ಮೇಲೆ ಕೆರಗನಹಳ್ಳಿ ಗ್ರಾಮದ ಮಂಜುನಾಥ್ ಹಾಗೂ ಆನಂದ್ ಎಂಬವರುಗಳು ಹಲ್ಲೆ ನಡೆಸಿ, ಜಾತಿನಿಂದನೆ ಮಾಡಿರುವ ಬಗ್ಗೆ ಮೊಕದ್ದಮೆ ದಾಖಲಾಗಿದ್ದು, ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.
ಸುರೇಶ್ ಅವರು ಟಾಟಾ ಏಸ್ ವಾಹನದಲ್ಲಿ ತೆರಳುತ್ತಿದ್ದ ಸಂದರ್ಭ ಕಾರಿನಲ್ಲಿ ಆಗಮಿಸಿದ ಆರೋಪಿಗಳು, ವಾಹನವನ್ನು ಅಡ್ಡಗಟ್ಟಿ ಏಕಾಏಕಿ ಹಲ್ಲೆನಡೆಸಿ, ಕೊಲೆ ಬೆದರಿಕೆಯೊಂದಿಗೆ ಜಾತಿನಿಂದನೆ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಘಟನೆಯಿಂದ ಗಾಯಗೊಂಡ ಸುರೇಶ್ ಅವರನ್ನು ಸ್ಥಳೀಯರಾದ ರೂಪೇಶ್ ಎಂಬವರು ಶನಿವಾರಸಂತೆ ಆಸ್ಪತ್ರೆಗೆ ಸಾಗಿಸಿ ಪ್ರಥಮ ಚಿಕಿತ್ಸೆ ಕೊಡಿಸಿದ್ದು, ನಂತರ ಸೋಮವಾರಪೇಟೆ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಿದ್ದಾರೆ. ಅಲ್ಲಿನ ವೈದ್ಯರ ಸೂಚನೆ ಮೇರೆ ಹೆಚ್ಚಿನ ಚಿಕಿತ್ಸೆಗೆ ಹಾಸನದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಆರೋಪಿಗಳ ವಿರುದ್ಧ ಮೊಕದ್ದಮೆ ದಾಖಲಿಸಿಕೊಂಡಿರುವ ಶನಿವಾರಸಂತೆ ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ. ಸ್ಥಳಕ್ಕೆ ಶನಿವಾರಸಂತೆ ಪೊಲೀಸ್ ಇನ್ಸ್ಪೆಕ್ಟರ್, ಡಿವೈಎಸ್‌ಪಿ ಭೇಟಿ ನೀಡಿ ತನಿಖೆ ನಡೆಸಿದ್ದಾರೆ. ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ.