ಸೋಮವಾರಪೇಟೆ, ಡಿ. ೨೬: ತಾಲೂಕಿನ ಶನಿವಾರಸಂತೆಯಲ್ಲಿರುವ ಸೆಕ್ರೇಡ್ ಹಾರ್ಟ್ ವಿದ್ಯಾಸಂಸ್ಥೆಯ ೫೦ನೇ ವರ್ಷಾಚರಣೆ ಮತ್ತು ಶಾಲಾ ಕಾಲೇಜಿನ ವಾರ್ಷಿಕೋತ್ಸವ ವಿದ್ಯಾಸಂಸ್ಥೆ ಆವರಣದಲ್ಲಿ ಸಂಭ್ರಮದಿAದ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೈಸೂರಿನ ಥೋಮಸ್ ವಿದ್ಯಾ ಸೊಸೈಟಿಯ ಸಿಎಂಐ ಅಧ್ಯಕ್ಷ ಡಾ. ಅಗಸ್ಟಿನ್ ಪೈಂಪಲ್ಲಿ ವಹಿಸಿ ಮಾತನಾಡಿ, ಕಳೆದ ೫೦ ವರ್ಷಗಳ ಹಿಂದೆ ಪ್ರಾರಂಭವಾದ ಇಲ್ಲಿನ ವಿದ್ಯಾಸಂಸ್ಥೆ ಇಂದು ಹೆಮ್ಮರವಾಗಿ ಬೆಳೆದು, ಸಮಾಜಕ್ಕೆ ಹಲವು ಪ್ರತಿಭಾವಂತ ವಿದ್ಯಾರ್ಥಿಗಳನ್ನು ನೀಡಿದೆ. ಶಿಕ್ಷಣ ಕೇತ್ರದಲ್ಲಿ ವಿದ್ಯಾಸಂಸ್ಥೆಯ ಸೇವೆ ಶ್ಲಾಘನೀಯ ಎಂದರು. ಎಸ್ಎಸ್ಎಲ್ಸಿ ಮತ್ತು ಪಿಯುಸಿಯಲ್ಲಿ ಸಾಕಷ್ಟು ವಿದ್ಯಾರ್ಥಿಗಳು ರಾಜ್ಯಮಟ್ಟದಲ್ಲಿ ಸಾಧನೆ ಮಾಡಿರುವುದು ಅಭಿನಂದನಾರ್ಹ. ವಿದ್ಯಾರ್ಥಿಗಳು ತಮ್ಮ ಗುರಿ ಸಾಧನೆಗೆ ನಿರಂತರ ಅಭ್ಯಾಸ ಮಾಡಬೇಕು. ಹಾಗಿದ್ದಲ್ಲಿ ಮಾತ್ರ ತಮ್ಮ ಗುರಿ ತಲುಪಲು ಸಾಧ್ಯ ಎಂದರು.
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಶನಿವಾರಸಂತೆ ಸಿಆರ್ಪಿ ಕೆ.ಸಿ. ದಿನೇಶ್ ಮಾತನಾಡಿ, ಹೋಬಳಿ ಕೇಂದ್ರದಲ್ಲಿ ಕಳೆದ ೫೦ ವರ್ಷಗಳ ಹಿಂದೆ ಪ್ರಾರಂಭವಾದ ವಿದ್ಯಾಸಂಸ್ಥೆ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ವರ್ಷದಿಂದ ವರ್ಷಕ್ಕೆ ಸಾಧನೆ ಮಾಡುತ್ತಾ ಸಾಗುತ್ತಿದೆ. ವಿದ್ಯಾರ್ಥಿಗಳಿಗೆ ಮೌಲ್ಯಯುತ ಶಿಕ್ಷಣ ನೀಡುವ ಉದ್ದೇಶದಿಂದ ಹತ್ತು ಹಲವು ಯೋಜನೆಗಳನ್ನು ಹಮ್ಮಿಕೊಂಡು ಸಾಗುತ್ತಿದೆ ಎಂದರು. ನಮ್ಮ ಜೀವನದಲ್ಲಿ ಪರಿಪಕ್ವವಾಗಲು ಉತ್ತಮ ಶಿಕ್ಷಣ ಮುಖ್ಯ. ಪೋಷಕರು, ಶಿಕ್ಷಕರು ಹಾಗೂ ವಿದ್ಯಾಸಂಸ್ಥೆಗಳಿAದ ಮಾತ್ರ ವಿದ್ಯಾರ್ಥಿಗಳನ್ನು ಉತ್ತುಂಗಕ್ಕೆ ಕೊಂಡೊಯ್ಯಲು ಸಾಧ್ಯ. ಶೈಕ್ಷಣಿಕ ಗುಣಮಟ್ಟ ಎತ್ತಿಹಿಡಿಯಲು ಪೋಷಕರ ಸಹಕಾರ ಪ್ರಮುಖವಾಗಿದೆ ಎಂದು ಅಭಿಪ್ರಾಯಿಸಿದರು.
ಕಾರ್ಯಕ್ರಮವನ್ನು ಶನಿವಾರಸಂತೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಾ ಹರೀಶ್ ಉದ್ಘಾಟಿಸಿದರು. ವೇದಿಕೆಯಲ್ಲಿ ದುಂಡಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭವಾನಿ ಪ್ರಸನ್ನ, ವಿದ್ಯಾಸಂಸ್ಥೆಯ ವ್ಯವಸ್ಥಾಪಕ ಫಾ. ಅಂಟೋನಿ ಸಬಾಸ್ಟಿನ್, ಪ್ರಾಂಶುಪಾಲರಾದ ಸಬಾಸ್ಟಿನ್ ಮೈಕಲ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ೨೦೨೩-೨೪ನೇ ಮತ್ತು ೨೦೨೪-೨೫ನೇ ಸಾಲಿನ ಎಸ್ಎಸ್ಎಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿದ ಎಂ. ತನಿಷ್ಕ, ಚೇತನ್ಕುಮಾರ್ ಹಾಗೂ ದೀಪಶ್ರೀ, ಪಿಯುಸಿಯಲ್ಲಿ ಹೆಚ್ಚು ಅಂಕಗಳಿಸಿದ ಕೀರ್ತನ ಹಾಗೂ ತೇಜಸ್ವಿನಿ ಅವರುಗಳನ್ನು ಗೌರವಿಸಲಾಯಿತು. ಸಭಾ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಮೂಡಿಬಂದವು.