ಪೊನ್ನಂಪೇಟೆ, ಡಿ. ೨೬: ಪಾಲಿಬೆಟ್ಟ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಕೂತಂಡ ಪೂವಯ್ಯ ಮತ್ತು ಪಾರ್ವತಿ ಪೂವಯ್ಯ ಜ್ಞಾಪಕಾರ್ಥವಾಗಿ, ಸ್ವಾಮಿ ವಿವೇಕಾನಂದರ ಜೀವನ ಮತ್ತು ಸಾಧನೆ ಎಂಬ ವಿಷಯದ ಬಗ್ಗೆ ಆಯೋಜಿಸಲಾಗಿದ್ದ, ಜಿಲ್ಲಾಮಟ್ಟದ ರಸಪ್ರಶ್ನೆ ಸ್ಪರ್ಧೆಯಲ್ಲಿ ಪಾಲಿಬೆಟ್ಟ ಸರ್ಕಾರಿ ಪದವಿಪೂರ್ವ ಕಾಲೇಜಿನ ಹರ್ಷ ಹಾಗೂ ಪುಣ್ಯ ಜೋಡಿ ಪ್ರಥಮ ಸ್ಥಾನ, ಬಾಳುಗೋಡು ಏಕಲವ್ಯ ವಸತಿ ಕಾಲೇಜಿನ ಪವಿತ್ರ ಹಾಗೂ ನವಿತಾ ಜೋಡಿ ದ್ವಿತೀಯ ಸ್ಥಾನ ಪಡೆದುಕೊಂಡಿತು. ಗೋಣಿಕೊಪ್ಪಲು ವಿದ್ಯಾನಿಕೇತನ ಪದವಿಪೂರ್ವ ಕಾಲೇಜಿನ ಹರಿಕೃಷ್ಣ ಹಾಗೂ ಕಾರ್ಯಪ್ಪ ಜೋಡಿ ತೃತೀಯ ಸ್ಥಾನ ಪಡೆದುಕೊಂಡಿತು.

ಕೂರ್ಗ್ ಎಜುಕೇಶನ್ ಫಂಡ್ ಸದಸ್ಯ ಕೆ.ಪಿ ಉತ್ತಪ್ಪನವರು ಸ್ವಾಮಿ ವಿವೇಕಾನಂದರ ಜೀವನ ಹಾಗೂ ಸಾಧನೆಯ ಕುರಿತು ತಮ್ಮ ತಂದೆ ತಾಯಿಯಾದ ಕೂತಂಡ ಪೂವಯ್ಯ ಮತ್ತು ಪಾರ್ವತಿ ಪೂವಯ್ಯ ಸ್ಮರಣಾರ್ಥ ಆಯೋಜಿಸಿದ್ದ ಜಿಲ್ಲಾಮಟ್ಟದ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಜಿಲ್ಲೆಯ ೨೦ಕ್ಕೂ ಹೆಚ್ಚು ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಪ್ರಾಂಶುಪಾಲೆ ಶೈನಾ ಕೆ.ಕೆ. ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಂ.ಎಲ್. ಚಿದಾನಂದ ಕುಮಾರ್, ಭಾಗಮಂಡಲ ಕಾವೇರಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಕೆ.ಜೆ. ದಿವಾಕರ್, ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಸಾಬು ಕಾಳಪ್ಪ ಎಂ.ಎA., ನಮ್ಮ ಪ್ರೌಢಶಾಲೆಯ ಶಾಲಾ ಅಭಿವೃದ್ಧಿ ಸಮಿತಿಯ ಸದಸ್ಯೆ ಕೆ. ವಾಣಿ ಉತ್ತಪ್ಪ, ಉಪನ್ಯಾಸಕರಾದ ಪಿ.ಆರ್. ಶಿವದಾಸ್, ಪಾರ್ವತಿ ಎಂ.ಬಿ., ಶ್ರೀರಕ್ಷಾ, ಸವಿತಾ, ನಂದನ ಹಾಗೂ ಶಾಲಿನಿ ಉಪಸ್ಥಿತರಿದ್ದರು.