ಮಡಿಕೇರಿ, ಡಿ. ೨೬: ಮಡಿಕೇರಿ ಹಾಗೂ ಕುಶಾಲನಗರದಲ್ಲಿ ಕುಡಿಯುವ ನೀರಿನ ಒಂದು ಲೀಟರ್ ಹಾಗೂ ಅರ್ಧ ಲೀಟರ್ ಬಾಟಲಿಗಳನ್ನು ನಿಷೇಧ ಮಾಡಿರುವದನ್ನು ಹಿಂಪಡೆಯಬೇಕು. ಇಲ್ಲವಾದಲ್ಲಿ ಅನಿರ್ಧಿಷ್ಟಾವಧಿ ಪ್ರತಿಭಟನೆ ಹಮ್ಮಿಕೊಳ್ಳುವದಾಗಿ ಕರ್ನಾಟಕ ಯುವ ರಕ್ಷಣಾ ವೇದಿಕೆ ಎಚ್ಚರಿಸಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವೇದಿಕೆಯ ರಾಜ್ಯ ಕಾರ್ಯದರ್ಶಿ ಎಂ.ಎA. ದಾವೂದ್; ಮಡಿಕೇರಿ ಹಾಗೂ ಕುಶಾಲನಗರ ಭಾಗಗಳಲ್ಲಿ ಕುಡಿಯುವ ನೀರಿನ ಪ್ಲಾಸ್ಟಿಕ್ ಬಾಟಲಿಗಳ ನಿಷೇಧವಾಗಿದೆ.

ಭಾರತ ಸಂವಿಧಾನದ ಕಲಂ ೨೧ರ ಅಡಿಯಲ್ಲಿ ಸುರಕ್ಷಿತ ಕುಡಿಯುವ ನೀರು ಮಾನವನ ಮೂಲಭೂತ ಹಕ್ಕು ಎಂಬುದನ್ನು ಸ್ಪಷ್ಟಪಡಿಸಿದೆ. ಸರ್ವೋಚ್ಚ ನ್ಯಾಯಾಲಯ ಕೂಡ ಅನೇಕ ತೀರ್ಪುಗಳಲ್ಲಿ ಇದನ್ನು ಪ್ರತಿಪಾದಿಸಿದೆ. ಆದರೂ ಯಾವದೇ ಪರ್ಯಾಯ ವ್ಯವಸ್ಥೆ ಒದಗಿಸದೆ ಕುಡಿಯುವ ನೀರಿನ ಲಭ್ಯತೆಯನ್ನು ನಿರ್ಬಂಧಿಸಿರುವದು ಸಂವಿಧಾನಾತ್ಮಕ ಹಕ್ಕನ್ನು ಉಲ್ಲಂಘಿಸಿದAತಾಗಿದೆ ಎಂದು ಹೇಳಿದರು.

ಒಂದು ಲೀ. ಹಾಗೂ ಅರ್ಧ ಲೀ. ಬಾಟಲಿಗಳನ್ನು ನಿಷೇಧಿಸಿರುವದರಿಂದ ಮಕ್ಕಳು, ವಯಸ್ಕರು, ರೋಗಿಗಳು, ಪ್ರವಾಸಿಗರಿಗೆ ಕಷ್ಟವಾಗುತ್ತದೆ. ಕಾರ್ಯಕ್ರಮಗಳಲ್ಲಿ ಕೂಡ ನೀರು ಪೂರೈಕೆ ಮಾಡಲು ತೊಂದರೆಯಾಗುತ್ತದೆ. ನಿಷೇಧ ಮಾಡಿರುವ ಕ್ರಮವನ್ನು ಪುನರ್ ಪರಿಶೀಲಿಸಿ ಹಿಂಪಡೆಯಬೇಕು.

ಮುಂದಿನ ೧೫ ದಿನಗಳೊಳಗಡೆ ಹಿಂಪಡೆಯದಿದ್ದಲ್ಲಿ ಮಡಿಕೇರಿ ನಗರಸಭೆ ಹಾಗೂ ಕುಶಾಲನಗರ ಪುರಸಭೆ ಕಚೇರಿ ಎದುರು ಅನಿರ್ಧಿಷ್ಟಾವಧಿ ಪ್ರತಿಭಟನೆ ಹಮ್ಮಿಕೊಳ್ಳುವದಾಗಿ ಹೇಳಿದರು.

ವೇದಿಕೆಯ ಕಾರ್ಯಾಧ್ಯಕ್ಷ ಚಿಕ್ಕಂಡ ಪ್ರಭು ಮಾದಪ್ಪ ಮಾತನಾಡಿ; ನೀರಿನ ಬಾಟಲಿಗಳನ್ನು ಮಾತ್ರ ನಿಷೇಧ ಮಾಡಿದ್ದಾರೆ. ಆದರೆ, ತಂಪು ಪಾನೀಯಗಳು ರಾಜಾರೋಷವಾಗಿ ಮಾರಾಟವಾಗುತ್ತಿವೆ.

ಜಿಲ್ಲೆಯ ಎರಡು ಭಾಗದಲ್ಲಿ ಮಾತ್ರ ನಿಷೇಧ ಮಾಡಲಾಗಿದೆ. ಇದು ಉದ್ದೇಶಪೂರ್ವಕವಾಗಿ ಮಾಡಲಾಗಿದೆ ಎಂಬ ಸಂಶಯ ಮೂಡುತ್ತಿದೆ. ಬಾರ್, ಮದ್ಯದಂಗಡಿಗಳಲ್ಲಿ ಪ್ಲಾಸ್ಟಿಕ್ ಬಾಟಲಿ, ಗ್ಲಾಸ್‌ಗಳನ್ನು ಉಪಯೋಗಿಸಲಾಗುತ್ತಿದೆ, ಇದಕ್ಕೆ ಯಾವದೇ ನಿರ್ಬಂಧ ಹೇರಿಲ್ಲ. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ ಸಂದರ್ಭ ಈ ವಿಚಾರ ತಮ್ಮ ವ್ಯಾಪ್ತಿಗೆ ಬರುವದಿಲ್ಲವೆಂದು ಹೇಳಿದ್ದಾರೆ. ಈ ಬಗ್ಗೆ ಪುನರ್ ಪರಿಶೀಲನೆಯಾಗಬೇಕೆಂದು ಒತ್ತಾಯಿಸಿದರು.

ವೇದಿಕೆಯ ಜಿಲ್ಲಾಧ್ಯಕ್ಷ ಮುತ್ತುರಾಜ್ ಮಾತನಾಡಿ; ಪ್ಲಾಸ್ಟಿಕ್ ಬಾಟಲಿ ನಿಷೇಧ ವಿಚಾರದಲ್ಲಿ ಮಲತಾಯಿ ಧೋರಣೆ ತಾಳಲಾಗಿದೆ. ಯಾವದೇ ಬದಲೀ ವ್ಯವಸ್ಥೆ ಮಾಡದೆ ನಿಷೇಧ ಮಾಡಿರುವದರಿಂದ ಎಲ್ಲರಿಗೂ ತೊಂದರೆಯಾಗಲಿದೆ.

ರಾಜ್ಯದಲ್ಲಿ ಎಲ್ಲೂ ಇಲ್ಲದ ಧೋರಣೆ ಕೊಡಗು ಜಿಲ್ಲೆಗೆ ಮಾತ್ರ ಏಕೆ ಎಂದು ಪ್ರಶ್ನಿಸಿದರು. ಪ್ಲಾಸ್ಟಿಕ್ ಮುಕ್ತ ಆಗಬೇಕು. ನಿಷೇಧ ಮಾಡುವದಾದರೆ ಎಲ್ಲ ರೀತಿಯ ಪ್ಲಾಸ್ಟಿಕ್ ನಿಷೇಧ ಮಾಡಲಿ. ರಾಸಾಯನಿಕ ಮಿಶ್ರಣ ಇರುವ ತಂಪು ಪಾನೀಯ, ಕುರುಕುರೆ ಮುಂತಾದ ತಿಂಡಿ ಪೊಟ್ಟಣಗಳು ಪ್ಲಾಸ್ಟಿಕ್‌ನಲ್ಲಿ ಬರುತ್ತಿವೆ, ಇಂತಹುಗಳನ್ನು ಕೂಡ ನಿಷೇಧ ಮಾಡಲಿ ಎಂದು ಒತ್ತಾಯಿಸಿದರು.

ಕೊಡಗು ದೇವಾಲಯಗಳ ಸಮಿತಿ ಅಧ್ಯಕ್ಷ ಬಳಪಂಡ ಪವನ್ ಬಿದ್ದಪ್ಪ ಮಾತನಾಡಿ; ಮಾನವನ ದಿನಬಳಕೆಯಲ್ಲಿ ನೀರು ಅತ್ಯವಶ್ಯ. ಅಂತಹದರಲ್ಲಿ ನೀರಿನ ಬಾಟಲಿಯನ್ನು ನಿಷೇಧ ಮಾಡಲಾಗಿದೆ. ಮದ್ಯದ ಬಾಟಲಿಗಳು ಹೆಚ್ಚಾಗಿ ಪ್ಲಾಸ್ಟಿಕ್ ಬಾಟಲಿಗಳಾಗಿದ್ದು ಅವುಗಳ ನಿಷೇಧ ಮಾಡಿಲ್ಲ. ಇದರಿಂದ ಸರಕಾರಕ್ಕೆ ಹೆಚ್ಚಿನ ಆದಾಯ ಬರುತ್ತದೆ. ಕುಶಾಲನಗರದಲ್ಲಿ ನೀರಿನ ಬಾಟಲಿ ನಿಷೇಧ ಸಂಬAಧ ಏರ್ಪಡಿಸಿದ್ದ ಸಭೆಯಲ್ಲಿ ಪ್ರಶ್ನಿಸಿದಾಗ ಜಿಲ್ಲಾಧಿಕಾರಿಗಳ ಆದೇಶದಂತೆ ನಿಷೇಧ ಮಾಡಲಾಗುತ್ತಿದೆ ಎಂಬ ಉತ್ತರ ನೀಡಿದ್ದಾರೆ. ಈ ಆದೇಶವನ್ನು ಹಿಂಪಡೆಯದಿದ್ದಲ್ಲಿ ಕಾನೂನು ಹೋರಾಟಕ್ಕೆ ಮುಂದಾಗುವದಾಗಿ ಹೇಳಿದರು.

ಉದ್ಯಮಿ ಸತೀಶ್ ಮಾತನಾಡಿ; ನೀರು ಎಲ್ಲರಿಗೂ ಅತ್ಯವಶ್ಯ ಎಂದು ಪರಿಗಣಿಸಿ ಕೇಂದ್ರ ಸರಕಾರ ನೀರಿನ ಮೇಲಿನ ಜಿಎಸ್‌ಟಿಯನ್ನು ಕಡಿತಗೊಳಿಸಿದೆ. ನೀರಿನ ಬಾಟಲಿ ತಯಾರಿಕೆಯೊಂದಿಗೆ ಕಂಪೆನಿಗಳು, ವಿತರಕರು, ಮಾರಾಟಗಾರರು ಸೇರಿದಂತೆ ಗುಜರಿ ಹೆಕ್ಕುವವರ ಸಂಸಾರ ಸಾಗುತ್ತಿದೆ. ಬಾಟಲಿ ನಿಷೇಧದಿಂದಾಗಿ ಹಲವರ ಜೀವನಕ್ಕೆ ತೊಂದರೆಯಾಗುತ್ತದೆ. ಹಾಗಾಗಿ ಈ ಬಗೆಗಿನ ಸಾಧಕ-ಬಾಧಕಗಳ ಬಗ್ಗೆ ಚರ್ಚೆ ಮಾಡಿ ಪರ್ಯಾಯ ವ್ಯವಸ್ಥೆ ಮಾಡುವುದೊಳಿತು. ನಿಷೇಧ ಮಾಡುವದಾದರೆ ಎಲ್ಲ ಪ್ಲಾಸ್ಟಿಕ್ ಉತ್ಪನ್ನಗಳನ್ನು ಮಾಡಲಿ ಎಂದು ಹೇಳಿದರು.

ಗೋಷ್ಠಿಯಲ್ಲಿ ವೇದಿಕೆಯ ಗೌರವ ಅಧ್ಯಕ್ಷ ಪಿ.ಕೆ. ಯಾದವ್ ಇದ್ದರು.