ಶ್ರೀಮಂಗಲ, ಡಿ. ೨೬: ಪುತ್ತರಿ ನಮ್ಮೆಯ ಸಂಭ್ರಮಾಚರಣೆ ಪ್ರಯುಕ್ತ ಕೊಡವ ತಕ್ಕ್ ಎಳ್ತ್ಕಾರಡ ಕೂಟ ಹಾಗೂ ಅಖಿಲ ಕೊಡವ ಸಮಾಜದ ಜಂಟಿ ಆಶ್ರಯದಲ್ಲಿ ತಾ. ೩೦ ರಂದು ಅಪರಾಹ್ನ ೨ ಗಂಟೆಗೆ ವೀರಾಜಪೇಟೆಯಲ್ಲಿರುವ ಅಖಿಲ ಕೊಡವ ಸಮಾಜದ ಸಭಾಂಗಣದಲ್ಲಿ ರಾಜ್ಯ ಮಟ್ಟದ ಪುತ್ತರಿ ಕವಿಗೋಷ್ಠಿ ಹಾಗೂ ಕೊಡವ ತಕ್ಕ್ ಎಳ್ತ್ಕಾರಡ ಕೂಟದ ಜನಪ್ರಿಯ ಕೊಡವ ಸಾಹಿತ್ಯಮಾಲೆ ಯೋಜನೆಯ ೧೯೬ನೇ ಹೆಜ್ಜೆಯ ನೂತನ ಕೊಡವ ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.
ತಾ. ೨೫ರವರೆಗೆ ಕವಿಗಳಿಗೆ ಕವನ ಬರೆದು ಕಳುಹಿಸಲು ಅವಕಾಶ ನೀಡಲಾಗಿದ್ದು, ನಿಗದಿತ ದಿನಾಂಕದ ಒಳಗೆ ಕಳುಹಿಸಿದ ಕವಿಗಳಿಗೆ ತಾ. ೩೦ರಂದು ನಡೆಯುವ ಕವಿಗೋಷ್ಠಿಯಲ್ಲಿ ಕವನ ವಾಚಿಸಲು ಅವಕಾಶ ನೀಡಲಾಗುವುದು. ಜಾತಿ, ಧರ್ಮದ ನಿರ್ಬಂಧವಿಲ್ಲದೆ ಕೊಡವ ಭಾಷೆಯ ಕವನ ವಾಚನಕ್ಕೆ ಮುಕ್ತ ಅವಕಾಶ ನೀಡಿರುವ ಈ ಕವಿಗೋಷ್ಠಿ ಹಾಗೂ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಎಲ್ಲರೂ ಭಾಗವಹಿಸಬಹುದಾಗಿದೆ.
ಕೊಡವ ತಕ್ಕ್ ಎಳ್ತ್ಕಾರಡ ಕೂಟದ ಅಧ್ಯಕ್ಷ ಚೆಟ್ಟಂಗಡ ರವಿ ಸುಬ್ಬಯ್ಯ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅಖಿಲ ಕೊಡವ ಸಮಾಜದ ಅಧ್ಯಕ್ಷ ಪರದಂಡ ಸುಬ್ರಮಣಿ ಕಾವೇರಪ್ಪ, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಬಾಚರಣಿಯಂಡ ಪಿ. ಅಪ್ಪಣ್ಣ, ಅಖಿಲ ಕೊಡವ ಸಮಾಜ ಪೊಮ್ಮಕ್ಕಡ ಪರಿಷತ್ ಅಧ್ಯಕ್ಷೆ ಬಾಚರಣಿಯಂಡ ರಾಣು ಅಪ್ಪಣ್ಣ, ರಾಜ್ಯ ಮಟ್ಟದ ಕೊಡವ ಕವಿಗೋಷ್ಠಿಯ ದತ್ತಿನಿಧಿ ಪ್ರಾಯೋಜಕಿ ಮೂಕಳೆರ ಟೈನಿ ಪೂಣಚ್ಚ ಭಾಗವಹಿಸಲಿದ್ದಾರೆ.
ಕವನ ವಾಚಿಸಿದ ಕವಿಗಳಿಗೆ ಸ್ಮರಣಿಕೆ, ನೆನಪಿನ ಕಾಣಿಕೆ, ಪ್ರಮಾಣಪತ್ರ, ನೂತನ ಕವನ ಪುಸ್ತಕ ನೀಡಿ ಗೌರವಿಸಲಾಗುವುದು ಎಂದು ಕೂಟದ ಕಾರ್ಯದರ್ಶಿ ಅಮ್ಮಣಿಚಂಡ ಪ್ರವೀಣ್ ಚಂಗಪ್ಪ ತಿಳಿಸಿದ್ದಾರೆ.