ವೀರಾಜಪೇಟೆ, ಡಿ. ೨೬: ವೀರಾಜಪೇಟೆ ತಾಲೂಕು ಕಚೇರಿ ಮತ್ತು ಸಾರ್ವಜನಿಕ ಕಚೇರಿಗಳಲ್ಲಿ ಮಧ್ಯವರ್ತಿಗಳ ಹಾವಳಿ ಏಜೆಂಟ್‌ಗಳ ಹಾವಳಿ ಹೆಚ್ಚಾಗಿರುವುದರಿಂದ ಸಾರ್ವಜನಿಕರ ಕಚೇರಿ ಕೆಲಸ ಕಾರ್ಯಗಳಿಗೆ ತೊಂದರೆ ಉಂಟಾಗಿರುವುದರಿAದ ತಾ. ೩೧ ರಂದು ರೈತರು ಮತ್ತು ನಾಗರಿಕ ಸಮಿತಿ ಸಾಮಾಜಿಕ ಕಾರ್ಯಕರ್ತರ ಸಹಕಾರದೊಂದಿಗೆ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ವೀರಾಜಪೇಟೆ ನಾಗರಿಕ ಸಮಿತಿ ಮತ್ತು ಸಾಮಾಜಿಕ ಕಾರ್ಯಕರ್ತರ ಸಂಯುಕ್ತ ಸಮಿತಿ ಸಂಚಾಲಕ ಡಾ. ಇ.ರಾ. ದುರ್ಗಾ ಪ್ರಸಾದ್ ತಿಳಿಸಿದರು.
ವೀರಾಜಪೇಟೆ ನಾಗರಿಕ ಸಮಿತಿ ಮತ್ತು ಸಾಮಾಜಿಕ ಕಾರ್ಯಕರ್ತರ ಸಂಯುಕ್ತ ಆಶ್ರಯದಲ್ಲಿ ವೀರಾಜಪೇಟೆ ಕಚೇರಿಯ ಸಭಾಂಗಣದಲ್ಲಿ ನಡೆದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ದುರ್ಗಾಪ್ರಸಾದ್, ರೈತರು ಮತ್ತು ಸಾರ್ವಜನಿಕರು ತಾಲೂಕು ಕಚೇರಿಗಳಿಗೆ ಹೋದರೆ ಅವರ ಕೆಲಸ ನಡೆಯುವುದಿಲ್ಲ. ದಲ್ಲಾಳಿಗಳ ಮೂಲಕವೇ ಕೆಲಸ ಮಾಡಿಸಬೇಕು. ಏಜೆಂಟ್‌ಗಳ ಹಾವಳಿಯೂ ಹೆಚ್ಚಾಗಿದ್ದು, ಸುಮಾರು ೫೦ಕ್ಕೂ ಹೆಚ್ಚು ಮಂದಿ ದಲ್ಲಾಳಿಗಳು ಇಲ್ಲಿದ್ದಾರೆ. ಇದರ ಬಗ್ಗೆ ಸರಕಾರ ಕ್ರಮ ಕೈಗೊಳ್ಳಬೇಕು ಎಂದರು.
ವೀರಾಜಪೇಟೆ ನಾಗರಿಕ ಸಮಿತಿ ಮತ್ತು ಸಾಮಾಜಿಕ ಕಾರ್ಯಕರ್ತರ ಸಂಯುಕ್ತ ಸಮಿತಿಯ ಸದಸ್ಯ ಮಾಳೇಟಿರ ಎಸ್. ಕಾಳಯ್ಯ ಮಾತನಾಡಿ, ವೀರಾಜಪೇಟೆ ತಾಲೂಕು ಆಡಳಿತ ಕಚೇರಿಯಲ್ಲಿ ದಲ್ಲಾಳಿಗಳ ಹಾವಳಿಯನ್ನು ತಡೆಗಟ್ಟುವ ಸಲುವಾಗಿ ತಾಲೂಕು ಆಡಳಿತ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಾಗುವುದು. ಇದಕ್ಕೆ ಎಲ್ಲರೂ ಸಹಕಾರ ನೀಡಬೇಕು ಎಂದರು.
ಸಮಿತಿ ಸದಸ್ಯ ಅಬ್ದುಲ್ ರೆಹಮಾನ್ ಮಾತನಾಡಿ, ದಲ್ಲಾಳಿಗಳ ಹಾವಳಿ ನಿಯಂತ್ರಿಸಬೇಕು ಎಂದರು. ಈ ಸಂದರ್ಭ ನಾಗರಿಕ ಸಮಿತಿ ಸದಸ್ಯರಾದ ಎನ್.ಕೆ. ಅಬ್ದುಲ್ ಷರೀಫ್ ಉಪಸ್ಥಿತರಿದ್ದರು.