ಸಿದ್ದಾಪುರ ಡಿ. ೨೬: ಮನೆಯೊಳಗೆ ನುಗ್ಗಿ ರೂ.೨೦ ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣವನ್ನು ಕಳ್ಳ ಕಳವು ಮಾಡಿರುವ ಘಟನೆ ಸಿದ್ದಾಪುರದ ಮೈಸೂರು ರಸ್ತೆಯಲ್ಲಿ ನಡೆದಿದೆ. ಸಿದ್ದಾಪುರದ ಮೈಸೂರು ರಸ್ತೆಯ ನಿವಾಸಿ ಬಿ.ಜಿ. ಚಿಣ್ಣಪ್ಪ ಎಂಬವರ ಮನೆಗೆ ನುಗ್ಗಿದ ಕಳ್ಳ ಮನೆ ಒಳಗಿನ ಕೊಠಡಿಯಿಂದ ನಗದು ಸೇರಿ ಅಂದಾಜು ರೂ. ೨೦ ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದು, ಚಿಣ್ಣಪ್ಪ ಸಿದ್ದಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಘಟನೆ ವಿವರ: ಸಿದ್ದಾಪುರದ ಮೈಸೂರು ರಸ್ತೆ ನಿವಾಸಿ ಚಿಣ್ಣಪ್ಪ ಅವರು ತಮ್ಮ ಪತ್ನಿಯೊಂದಿಗೆ ಮೈಸೂರಿಗೆ ಸಂಬAಧಿಕರ ಮನೆಗೆ ತೆರಳಿ ಸಂಜೆ ಮನೆಗೆ ಹಿಂತಿರುಗಿದ್ದರು. ಬಳಿಕ ರಾತ್ರಿ ಊಟ ಮುಗಿಸಿ ಅವರ ಪತ್ನಿ ಮಲಗಿದ್ದು ನಂತರ ಚಿಣ್ಣಪ್ಪ ತಡವಾಗಿ ಮಲಗಿದ್ದಾರೆ. ಬೆಳಗಿನ ಜಾವ ಅಂದಾಜು ೩:೩೦ರ ಸಮಯಕ್ಕೆ ಯಾವುದೊ ಶಬ್ದ ಕೇಳಿ ಬಂದ ಹಿನ್ನೆಲೆಯಲ್ಲಿ ಅವರ ಪತ್ನಿ ಕಿರುಚಿಕೊಂಡಿದ್ದು, ಚಿಣ್ಣಪ್ಪ ಅವರು ಕೋಣೆಯಿಂದ ಎದ್ದು ಬಂದು ನೋಡುವಷ್ಟರಲ್ಲಿ ಕಳ್ಳನೋರ್ವ ಬಾಗಿಲಿಗೆ ಬೀಗ ಹಾಕಿ ಪರಾರಿಯಾಗಿದ್ದು ಕಂಡುಬAದಿತು.
ನಂತರ ಇವರ ತಾಯಿ ಮಲಗುತ್ತಿದ್ದ ಕೋಣೆಗೆ ತೆರಳಿದ ಸಂದರ್ಭ ಕೋಣೆಯ ಒಳಗೆ ವಾಡ್ರೋಬ್ನ ಬಾಗಿಲು ತೆಗೆದು ಅದರ ಬೀಗವನ್ನು ಮತ್ತು ಡ್ರಾಯರನ್ನು ಒಡೆದು ಅಲ್ಲಿ ಇಟ್ಟಿದ್ದ ಚಿನ್ನದ ಸರ, ಉಂಗುರ, ಕೊಕ್ಕೆತಾತಿ, ಮುತ್ತಿನ ಸರ ಸೇರಿದಂತೆ ಅಂದಾಜು ೧೫೦ ಗ್ರಾಂ.ಗೂ ಅಧಿಕ, ಅಂದಾಜು ರೂ. ೧೯.೫೦ ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ದೋಚಿ ಕಳ್ಳ ಪರಾರಿಯಾಗಿರುವುದು ಕಂಡು ಬಂದಿದೆ. ಚಿಣ್ಣಪ್ಪ ಅವರ ಪತ್ನಿಯ ಬ್ಯಾಗಿನಲ್ಲಿದ್ದ ನಗದು ಐದು ಸಾವಿರ ಹಣವನ್ನು ಕೂಡ ಕಳ್ಳತನ ಮಾಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಕಳ್ಳ ಮನೆ ಹಿಂಭಾಗದಿAದ ಬಂದು ಶೌಚಾಲಯದ ಕಿಟಕಿಯ ಮೂಲಕ ನುಗ್ಗಿ ಕಳವು ಮಾಡಿರುವುದು ತಿಳಿದು ಬಂದಿದೆ.
ಚಿಣ್ಣಪ್ಪ ಅವರ ಮನೆಯಲ್ಲಿ ಕಳ್ಳತನ ಮಾಡಿರುವ ಕಳ್ಳ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಕತ್ತಲಿನಲ್ಲಿ ಬಂದು ಕಳ್ಳತನ ಮಾಡಿದ್ದಾನೆ. ಆದರೆ ಮನೆಯ ಒಳಗೆ ಇಟ್ಟಿದ್ದ ಬಂದೂಕನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದಾನೆ. ಈ ಸಂದರ್ಭ ಕಳ್ಳ ಕಪ್ಪುಬಣ್ಣದ ಟೋಪಿ ಹಾಗೂ ಕಾಲಿಗೆ ಧರಿಸಿದ ಶೂ ಅನ್ನು ಬಿಟ್ಟು ಹೋಗಿರುವುದು ಕಂಡುಬAದಿದೆ. ಮನೆಯಲ್ಲಿ ಮನೆಯವರು ಇರುವ ಸಂದರ್ಭದಲ್ಲೇ ಕಳ್ಳತನ ನಡೆದಿರುವುದು ಪಟ್ಟಣದ ನಿವಾಸಿಗಳಲ್ಲಿ ಆತಂಕ ಮೂಡಿಸಿದೆ.
ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ದಿನೇಶ್ ಕುಮಾರ್, ಮಡಿಕೇರಿ ಡಿವೈಎಸ್ಪಿ ಸೂರಜ್, ಸಿದ್ದಾಪುರ ಠಾಣಾಧಿಕಾರಿ ಮಂಜುನಾಥ್ ಹಾಗೂ ಪೊಲೀಸ್ ಸಿಬ್ಬಂದಿ ಭೇಟಿ ನೀಡಿ ಆರೋಪಿಯ ಬಂಧನಕ್ಕೆ ಬಲೆ ಬೀಸಿದ್ದಾರೆ. ಸ್ಥಳಕ್ಕೆ ಬೆರಳಚ್ಚು ತಜ್ಞರು ಹಾಗೂ ಶ್ವಾನ ದಳವು ಆಗಮಿಸಿ ಪರಿಶೀಲಿಸಿತು.
-ವಾಸು.ಎ.ಎನ್.