ಮಡಿಕೇರಿ, ಡಿ. ೨೬: ಹಲವು ವರ್ಷಗಳಿಂದ ಜಮ್ಮಾ ಭೂಮಿ ವಿಚಾರದಲ್ಲಿ ಏರ್ಪಟ್ಟಿದ್ದ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ಬೆಳಗಾವಿ ಅಧಿವೇಶನದಲ್ಲಿ ಜಮ್ಮಾ ವಿಧೇಯಕ ಮಂಡಿಸಿದ ಹಿನ್ನೆಲೆ ಇದರ ಪ್ರಯತ್ನದ ಹಿಂದಿರುವ ಜಿಲ್ಲೆಯ ಮತ್ತೋರ್ವ ಶಾಸಕರೂ ಆಗಿರುವ ಡಾ. ಮಂತರ್ ಗೌಡ ಅವರಿಗೆ ವಿವಿಧ ಸಂಘ-ಸAಸ್ಥೆಗಳಿAದ ಅಭಿನಂದನಾ ಸಮಾರಂಭ ನಗರದ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ನಡೆಯಿತು.
ಬೆಳಗಾವಿ ಅಧಿವೇಶನ ಮುಗಿಸಿ ಜಿಲ್ಲೆಗೆ ಆಗಮಿಸಿದ ಶಾಸಕ ಮಂತರ್ ಅವರನ್ನು ನಗರದ ಜ. ತಿಮ್ಮಯ್ಯ ವೃತ್ತದಲ್ಲಿ ಕಾಂಗ್ರೆಸ್ ಪಕ್ಷ ಹಾಗೂ ಸಂಘ ಸಂಸ್ಥೆಗಳ ಪ್ರಮುಖರು ಸ್ವಾಗತಿಸಿಕೊಂಡರು. ನಂತರ ತೆರೆದ ವಾಹನದಲ್ಲಿ ಶಾಸಕರನ್ನು ಮೆರವಣಿಗೆ ಮೂಲಕ ಸಭಾಂಗಣಕ್ಕೆ ಕರೆದೊಯ್ಯಲಾಯಿತು. ಈ ಸಂದರ್ಭ ರಾಜ್ಯ ಸರಕಾರದ ಗ್ಯಾರಂಟಿ ಅನುಷ್ಠಾನ ಸಮಿತಿ, ಲಯನ್ಸ್ ಕ್ಲಬ್, ರೋಟರಿ ಕ್ಲಬ್, ಕಾಂಗ್ರೆಸ್ ಸಮಿತಿ, ಮಡಿಕೇರಿ ಗೌಡ ಸಮಾಜ, ಕೊಡವ ಸಮಾಜ, ರೋಟರಿ ಮಿಸ್ಟಿ ಹಿಲ್ಸ್, ಲಯನ್ಸ್ ಕ್ಲಬ್, ಪೊಮ್ಮಕ್ಕಡ ಕೂಟ, ಫೆಡರೇಷನ್ ಆಫ್ ಗೌಡ ಸಮಾಜ, ಬಿಲ್ಲವ, ವಿಶ್ವಕರ್ಮ ಸಮಾಜ, ಅಕ್ರಮ ಸಕ್ರಮ ಸಮಿತಿ, ಮುಡಾ ಸೇರಿದಂತೆ ವಿವಿಧ ಸಂಘ-ಸAಸ್ಥೆಗಳ ವತಿಯಿಂದ ಶಾಸಕರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
ಸರಕಾರದ ಇಚ್ಛಾಶಕ್ತಿಯಿಂದ ವಿಧೇಯಕ ಮಂಡನೆ
ಸಭಾ ಕಾರ್ಯಕ್ರಮವನ್ನು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದ ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಅವರು, ಜಮ್ಮಾ ವಿಚಾರ ಕಬ್ಬಿಣದ ಕಡಲೆಯಾಗಿ ಪರಿವರ್ತಿತಗೊಂಡಿತ್ತು. ಕಾನೂನಿನಲ್ಲಿ ಬಗೆಹರಿಸಲಾಗದಷ್ಟು ಲೋಪದೋಷಗಳಿದ್ದವು. ಇಚ್ಛಾಶಕ್ತಿ ಇದ್ದರೆ ಎಲ್ಲವೂ ಸಾಧ್ಯ ಎಂಬುದಕ್ಕೆ ಮಂಡನೆಯಾದ ಜಮ್ಮಾ ವಿಧೇಯಕ್ಕೆ ಉದಾಹರಣೆಯಾಗಿದೆ. ಜಮ್ಮಾ ಜಾಗದ ತಾಂತ್ರಿಕ ಸಮಸ್ಯೆಗಳಿಂದ ಜಾಗವನ್ನು ಬಿಟ್ಟು ರೈತರು ಕೃಷಿಯಿಂದ ವಿಮುಖರಾಗಿ ವಲಸೆ ಹೋಗುವಂತಾಗಿತ್ತು. ಹಿಡುವಳಿದಾರರಿಗೆ ಹಕ್ಕು ನೀಡಲೇಬೇಕೆಂಬ ಉದ್ದೇಶದಿಂದ ಸರಕಾರದ ಗಮನಸೆಳೆದು ಸಮಸ್ಯೆ ಬಗೆಹರಿಸುವ ಮೊದಲ ಹಂತಕ್ಕೆ ಮುನ್ನುಡಿ ಇಡಲಾಗಿದೆ ಎಂದರು.
ವಿಧೇಯಕದಿಂದ ಹಿಡುವಳಿದಾರರು ನೆಮ್ಮದಿ ಕಾಣಬಹುದಾಗಿದೆ. ಜಮ್ಮಾ ಜಮೀನಿನ ಹಕ್ಕಿಗಾಗಿ ತಹಶೀಲ್ದಾರ್ಗೆ ಅರ್ಜಿ ಸಲ್ಲಿಸುವ ಮೂಲಕ ಪ್ರಕ್ರಿಯೆ ಆರಂಭಗೊಳ್ಳುತ್ತದೆ. ಈ ಕುರಿತು ಜಾಗೃತಿ ಮೂಡಿಸುವ ಕೆಲಸ ಮಾಡಲಾಗುವುದು. ಜಮ್ಮಾ ವಿಚಾರ ಬಗೆಹರಿಸಲಾಗದ ಸಮಸ್ಯೆ ಎಂಬ ಮನಸ್ಥಿತಿ ಇತ್ತು. ಕಂದಾಯ ಸಚಿವ ಕೃಷ್ಣಬೈರೇಗೌಡರ ಇಚ್ಛಾಶಕ್ತಿ ಹಾಗೂ ವೀರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಅವರ ಕಾನೂನು ಪಾಂಡಿತ್ಯ ವಿಧೇಯಕ ಅನುಷ್ಠಾನಕ್ಕೆ ದೊಡ್ಡಮಟ್ಟದ ಸಹಕಾರವನ್ನು ನೀಡಿತು. ವಿಧೇಯಕ ಅಂಗೀಕಾರಕ್ಕೂ ಪಕ್ಷಾತೀತ ಬೆಂಬಲ ದೊರೆತಿದೆ. ಹಿಡುವಳಿದಾರರಿಗೆ ನ್ಯಾಯ ಕೊಡಿಸುವ ಸಲುವಾಗಿ ಕಾಯಿದೆ ಪೂರಕವಾಗಿರಲಿದೆ ಹೊರತು ಪಟ್ಟೆದಾರರಿಗೆ ಅಗೌರವ ತೋರುವ ಉದ್ದೇಶವಲ್ಲ ಎಂದರು.
ವಿಶೇಷ ಅಧಿಕಾರಿ ನೇಮಕಕ್ಕೂ ಪ್ರಯತ್ನ
ಒಂದೇ ಬಾರಿಗೆ ಈ ಸಮಸ್ಯೆಗೆ ಶಾಶ್ವತ ಅಂತ್ಯ ಸಿಗದಿದ್ದರೂ ಹಂತಹAತವಾಗಿ ಒಂದೊAದೆ ಸಮಸ್ಯೆಯನ್ನು ಪರಿಹರಿಸುವ ಪ್ರಯತ್ನ ಮಾಡಲಾಗುವುದು. ಜನರ ಬೇಡಿಕೆಯಂತೆ ಇದಕ್ಕಾಗಿ ವಿಶೇಷ ಅಧಿಕಾರಿಯ ನೇಮಕಕ್ಕೂ ಸರಕಾರದ ಗಮನ ಸೆಳೆದು ಪ್ರಯತ್ನ ಮಾಡಲಾಗುವುದು ಎಂದು ಮಂತರ್ ಗೌಡ ಹೇಳಿದರು. ವಿಧೇಯಕದ ಮೂಲಕ ಪರಿಹಾರದ ವಿಶ್ವಾಸ ಬಂದಿದೆ. ಜನರ ಸಹಕಾರ ದೊರೆತರೆ ಎಲ್ಲವೂ ಸಮರ್ಪಕವಾಗಿ ಕೊಂಡೊಯ್ಯಬಹುದು. ರೈತರು ಸೂಕ್ತ ರೀತಿಯಲ್ಲಿ ೪ಆರನೇ ಪುಟಕ್ಕೆ
(ಮೊದಲ ಪುಟದಿಂದ) ಅರ್ಜಿ ಸಲ್ಲಿಸಬೇಕು. ಅಧಿಕಾರಿಗಳು ಅನುಷ್ಠಾನದಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಸರಕಾರದ ನಿಲುವು ರೈತರ ಪರ ಎಂಬುದು ಸ್ಪಷ್ಟವಾಗಿದೆ ಎಂದು ತಿಳಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕಾಂಗ್ರೆಸ್ ಮುಖಂಡ ಟಿ.ಪಿ. ರಮೇಶ್, ಬಹುವರ್ಷಗಳ ಸಮಸ್ಯೆಗೆ ಪರಿಹಾರ ಕಾಣುವ ದೃಷ್ಟಿಕೋನದಲ್ಲಿ ರಾಜ್ಯ ಸರಕಾರ ದಿಟ್ಟ ಹೆಜ್ಜೆಯಿಟ್ಟು ಕಾರ್ಯಗತಗೊಳಿಸಿದೆ. ಕೊಡಗಿನ ೨ ಶಾಸಕರ ನಿರಂತರ ಶ್ರಮ ಫಲಪ್ರದವಾಗಿ ವಿಧೇಯಕ ಮಂಡನೆಯಾಗಿ ಅಂಗೀಕಾರವಾಗಿದೆ. ೧೯೬೪ರ ಕರ್ನಾಟಕ ಭೂಕಂದಾಯ ಕಾಯಿದೆ ಏಕರೂಪ ನೀತಿ ರಾಜ್ಯದಲ್ಲಿ ಜಾರಿಯಾಯಿತು. ಕೊಡಗಿಗೆ ಈ ಕಾಯಿದೆ ತದ್ವಿರುದ್ಧವಾಗಿತ್ತು. ೨೦೦೦ರಲ್ಲಿ ನಿಯಮದಡಿ ಪಹಣಿ ಕಡ್ಡಾಯ ಹಿನ್ನೆಲೆ ಸಮಸ್ಯೆ ಬಿಗಾಡಾಯಿಸಿತ್ತು. ಮಾಲೀಕತ್ವದ ವಿಚಾರ ಸಮಸ್ಯೆಯಾಗಿ ಪರಿಣಮಿಸಿತು. ಕೆಲವೊಂದು ಬದಲಾವಣೆಯಾದರೂ ಪರಿಪೂರ್ಣ ಪರಿಹಾರ ದೊರೆತಿರಲಿಲ್ಲ. ಕಂದಾಯ ಸಚಿವರ ಅಧ್ಯಕ್ಷತೆಯಲ್ಲಿ ರಚನೆಯಾದ ಸದನ ಸಮಿತಿ ಅಧ್ಯಯನ ನಡೆಸಿ ವಿಧೇಯಕ ಮಂಡನೆಯಾಗಿ ಅನುಮೋದನೆಯಾಗಿದೆ. ಕಂದಾಯ ಸಚಿವ ಕೃಷ್ಣಬೈರೇಗೌಡ, ಕೊಡಗಿನ ಶಾಸಕರಾದ ಎ.ಎಸ್.ಪೊನ್ನಣ್ಣ, ಡಾ. ಮಂತರ್, ವಿಪಕ್ಷ ನಾಯಕ ಆರ್. ಅಶೋಕ್ ಸೇರಿದಂತೆ ಹಲವರ ಸಹಕಾರದಿಂದ ಯಾವುದೇ ವಿರೋಧವಿಲ್ಲದೆ ವಿಧಾನಸಭೆ ಹಾಗೂ ವಿಧಾನ ಪರಿಷತ್ನಲ್ಲಿ ಪಕ್ಷಾತೀತವಾಗಿ ವಿಧೇಯಕ ಅಂಗೀಕಾರವಾಗಿದೆ. ಕಂದಾಯ ಇಲಾಖೆಯಲ್ಲಿ ಹಲವಷ್ಟು ಸುಧಾರಣೆಗಳನ್ನು ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ತಂದಿದ್ದಾರೆ. ಇದೀಗ ವಿಧೇಯಕ ಮೂಲಕ ಜಮ್ಮಾ ಹಿಡುವಳಿದಾರರಿಗೆ ಚೈತನ್ಯ ತುಂಬಿದ್ದಾರೆ ಎಂದರು.
ತಾರ್ಕಿಕ ಅಂತ್ಯ ಬೇಕು : ನಿರಂಜನ್
ಹಿರಿಯ ವಕೀಲ ಎಂ.ಎ. ನಿರಂಜನ್ ಮಾತನಾಡಿ, ಕೊಡಗು ಭೌಗೋಳಿಕವಾಗಿ ವಿಭಿನ್ನವಾಗಿದೆ. ಮೊದಲು ಜಮ್ಮಾ ಜಾಗಕ್ಕೆ ಬೆಲೆ ಇತ್ತು. ಬಾಣೆ ಕೃಷಿ ಚಟುವಟಿಕೆಗಳಿಗೆ ಪೂರಕವಾಗಿ ಬಳಸುವ ಜಾಗವಾಗಿತ್ತು. ಸರಕಾರದ ಏಕರೂಪ ನೀತಿಯಿಂದ ಜಮ್ಮಾ ಬಾಣೆ ವಿಚಾರ ಜಟಿಲವಾದ ಸಮಸ್ಯೆಯಾಗಿ ಬದಲಾಯಿತು. ಈ ವಿಧೇಯಕದಿಂದ ಸಮಸ್ಯೆ ಇತ್ಯರ್ಥವಾಗುವ ವಿಶ್ವಾಸವಿದೆ. ಕೊಡಗಿನ ಜನರಿಗೆ ದೊಡ್ಡ ಮಟ್ಟದ ಅನುಕೂಲವಾಗುವ ನಿರೀಕ್ಷೆ ಇದೆ. ಆದರೆ, ಈ ವಿಷಯದಲ್ಲಿ ಸ್ಪಷ್ಟತೆ ದೊರೆಯಬೇಕಾದರೆ ಕಂದಾಯ ಸಚಿವರು, ಶಾಸಕರು ಮುತುವರ್ಜಿ ವಹಿಸಿ ಕೆ.ಎ.ಎಸ್. ಹಂತದ ಅಧಿಕಾರಿಯನ್ನು ವಿಶೇಷ ಅಧಿಕಾರಿಯನ್ನಾಗಿ ನೇಮಿಸಬೇಕು. ಜಮ್ಮಾಬಾಣೆ ವಿಚಾರವನ್ನು ಅಧ್ಯಯನ ಮಾಡಿ ಪರಿಹರಿಸಬೇಕು. ಸದ್ಯ ಜಮ್ಮಾ ವಿಚಾರದಲ್ಲಿ ಸ್ವಾಧೀನದ ಹಕ್ಕು ಇದೆ. ಸಂಪೂರ್ಣ ಮಾಲೀಕತ್ವದ ಹಕ್ಕು ಕೂಡ ದೊರೆಯಬೇಕು. ೨೦೨೨ರ ಉಚ್ಚನ್ಯಾಯಾಲಯ ಜಮ್ಮಾಬಾಣೆ ಪ್ರಕರಣದಲ್ಲಿ ನ್ಯಾಯಾಲಯದಲ್ಲಿ ಹಕ್ಕು ಘೋಷಣೆ ಪ್ರತಿಪಾದನೆ ಕೋರಿ ಅರ್ಜಿ ಸಲ್ಲಿಸದಂತೆ ಆದೇಶಿಸಿದೆ. ಈ ಕುರಿತು ಮೇಲ್ಮನವಿ ಕೂಡ ಸಲ್ಲಿಕೆಯಾಗಿಲ್ಲ. ಪ್ರಾಥಮಿಕ ಹಂತದಲ್ಲಿ ವಿಧೇಯಕ ಅಂಗೀಕಾರವಾಗಿದ್ದರೂ ತಾರ್ಕಿಕ ಅಂತ್ಯಕ್ಕೆ ಇದನ್ನು ಕೊಂಡೊಯ್ಯಬೇಕಾಗಿದೆ ಎಂದು ಅಭಿಪ್ರಾಯಿಸಿದರು.
ಶಕ್ತಿ ದಿನಪತ್ರಿಕೆ ಸಂಪಾದಕ ಜಿ. ಚಿದ್ವಿಲಾಸ್ ಮಾತನಾಡಿ, ಕುರುಡನೊಬ್ಬ ಕತ್ತಲ ಕೋಣೆಯಲ್ಲಿ ಕಪ್ಪು ಬೆಕ್ಕು ಹುಡುಕುವಂತಹ ಪರಿಸ್ಥಿತಿ ಜಮ್ಮಾ ಜಾಗದ ವಿಚಾರದಲ್ಲಿ ಏರ್ಪಟ್ಟಿತ್ತು. ಗುಂಡೂರಾವ್ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭ ಅವರು ಸಮಸ್ಯೆ ಪರಿಹಾರಕ್ಕೆ ಮುಂದಾಗಿದ್ದರು. ಆದರೆ, ಕೆಲವರು ವಿರೋಧಿಸಿದ್ದ ಹಿನ್ನೆಲೆ ಪರಿಹಾರವಾಗದೆ ಹಾಗೆ ಉಳಿದಿತ್ತು. ಹಿಂದಿನ ಶಾಸಕರು ಶಾಸನಸಭೆಯಲ್ಲಿ ಈ ಕುರಿತು ಹಲವು ಬಾರಿ ಒತ್ತಾಯಿಸಿದ್ದರು. ಅಂದಿನ ಕಂದಾಯ ಸಚಿವರು ಪ್ರಯತ್ನಿಸಿದ್ದರೂ ಪೂರ್ಣ ಪರಿಹಾರ ಸಿಕ್ಕಿರಲಿಲ್ಲ ಇಂದಿನ ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ಇಚ್ಛಾಶಕ್ತಿ ತೋರಿದ್ದಾರೆ. ಇದು ಸಮಸ್ಯೆಯ ಅಂತ್ಯದ ಆರಂಭ ಎಂಬAತಿದೆ. ಜಮ್ಮಾ ಜಾಗ ಬೇರೆಯವರ ಆಕ್ರಮಣವಾಗಿ ಅಸ್ತಿತ್ವ ಕಳೆದುಕೊಳ್ಳುವ ಆತಂಕವೂ ಇದೆ. ಇದನ್ನು ತಪ್ಪಿಸುವುದು ನಮ್ಮ ಕೈಯಲ್ಲಿ ಇದೆ. ಇಲ್ಲಿನ ನೆಲ, ಜಲ, ಸಂಸ್ಕೃತಿ ಉಳಿಸಿಕೊಳ್ಳುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಅದನ್ನು ನಾವೇ ಉಳಿಸಿಕೊಳ್ಳಬೇಕು ಎಂದ ಅವರು, ಶಾಸಕರಾದ ಮಂತರ್ ಹಾಗೂ ಪೊನ್ನಣ್ಣ ಅವರ ಪರಿಶ್ರಮ ಶ್ಲಾಘನೀಯ ಎಂದರು.
೧ಕAದಾಯ ಸಚಿವರು, ಜಿಲ್ಲೆಯ ಇಬ್ಬರು ಶಾಸಕರಿಗೆ ಜಿಲ್ಲಾಮಟ್ಟದಲ್ಲಿ ನಾಗರಿಕ ಗೌರವ ಸಮರ್ಪಣೆಯಾಗುವ ಕೆಲಸವೂ ನಡೆಯಬೇಕೆಂದರು.
ಗೌಡ ಸಮಾಜ ಒಕ್ಕೂಟ ಉಪಾಧ್ಯಕ್ಷ ತೇನನ ರಾಜೇಶ್ ಮಾತನಾಡಿ, ಸರಕಾರ ಹೊಸ ವರ್ಷಕ್ಕೆ ಉಡುಗೊರೆ ರೂಪದಲ್ಲಿ ಜಮ್ಮಾ ವಿಧೇಯಕ ನೀಡಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಕೂರ್ಗ್ ಪ್ಲಾಂಟರ್ಸ್ ಅಸೋಸಿಯೇಷನ್ ಅಧ್ಯಕ್ಷ ನಂದಾ ಬೆಳ್ಯಪ್ಪ ಮಾತನಾಡಿ, ಹಲವು ವರ್ಷಗಳಿಂದ ಸಮಸ್ಯೆ ಪರಿಹಾರದ ಕೂಗಿತ್ತು. ವಿಧೇಯಕ ತಂದಿರುವುದು ಸ್ವಾಗತಾರ್ಹ. ಆದರೆ, ಮಾರ್ಗಸೂಚಿ ಸಮರ್ಪಕವಾಗಿ ರೂಪಿಸಬೇಕು ಎಂದರು.
ಕಾಂಗ್ರೆಸ್ ವಕ್ತಾರ ತೆನ್ನೀರ ಮೈನಾ ಮಾತನಾಡಿ, ಶತಮಾನಗಳ ಸಮಸ್ಯೆಯನ್ನು ಬಗೆಹರಿಸುವಲ್ಲಿ ಕಂದಾಯ ಸಚಿವರು ಹಾಗೂ ಜಿಲ್ಲೆಯ ಶಾಸಕರು ಕಾರಣರಾಗಿದ್ದಾರೆ. ಜಾಗ ನಮ್ಮದಾದರು ಮಾಲೀಕರು ನಾವಾಗಿರಲಿಲ್ಲ. ಗೊಂದಲದ ನಿಯಮದಿಂದ ಈ ರೀತಿ ಸಮಸ್ಯೆಯಾಗುತ್ತಿತ್ತು. ವಿಧೇಯಕದಿಂದ ಮಾಲೀಕತ್ವ ದೊರೆಯುವ ವಿಶ್ವಾಸ ಮೂಡಿದೆ ಎಂದರು.
ಓಂಕಾರೇಶ್ವರ ದೇವಾಲಯ ವ್ಯವಸ್ಥಾಪನಾನ ಸಮಿತಿ ಅಧ್ಯಕ್ಷ ಅಪ್ಪನೆರವಂಡ ಚುಮ್ಮಿ ದೇವಯ್ಯ ಮಾತನಾಡಿ, ಪೂರ್ಣ ಪ್ರಮಾಣದಲ್ಲಿ ಪರಿಹಾರ ನೀಡಿ ಹಿಡುವಳಿದಾರರನ್ನು ಸ್ವತಂತ್ರಗೊಳಿಸಬೇಕೆAದರು.
ವೇದಿಕೆಯಲ್ಲಿ ಮಡಿಕೇರಿ ಕೊಡವ ಸಮಾಜ ಉಪಾಧ್ಯಕ್ಷ ಕೇಕಡ ವಿಜು ದೇವಯ್ಯ, ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ರಾಜೇಶ್ ಯಲ್ಲಪ್ಪ, ಹೊದ್ದೂರು ಗ್ರಾ.ಪಂ. ಅಧ್ಯಕ್ಷ ಹೆಚ್.ಎ. ಹಂಸ ಹಾಜರಿದ್ದರು. ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ ಅನಿಲ್ ಎಚ್.ಟಿ. ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಪ್ರಮುಖರು ಪಾಲ್ಗೊಂಡಿದ್ದರು.
ಮಡಿಕೇರಿ ನಗರ ಕಾಂಗ್ರೆಸ್ ಅಧ್ಯಕ್ಷ ಪ್ರಕಾಶ್ ಆಚಾರ್ಯ ಸ್ವಾಗತಿಸಿ, ಮುನೀರ್ ಅಹಮ್ಮದ್ ನಿರೂಪಿಸಿ, ವಂದಿಸಿದರು.