ಸಿದ್ದಾಪುರ, ಡಿ. ೨೬: ವೀರಾಜಪೇಟೆ ವಲಯ ಅರಣ್ಯ ವ್ಯಾಪ್ತಿಗೆ ಒಳಪಡುವ ಬಿಟ್ಟಂಗಾಲ, ಬೇಟೋಳಿ, ಬೆಳ್ಳರಿಮಾಡ್, ಬಿಳುಗುಂದ, ಗ್ರಾಮದ ಕಾಫಿ ತೋಟಗಳಲ್ಲಿ ಬೀಡು ಬಿಟ್ಟು ದಾಂಧಲೆ ನಡೆಸುತ್ತಿದ್ದ ಕಾಡಾನೆಗಳ ಹಿಂಡನ್ನು ಕಾಡಿಗೆ ಓಡಿಸಿದರು.
ಈ ಸಂದರ್ಭದಲ್ಲಿ ೨ ಮರಿಯಾನೆ ಗಳು ಸೇರಿದಂತೆ ೪ ಕಾಡಾನೆಗಳು ಕಂಡುಬAದಿತು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಕಾಫಿ ತೋಟಗಳಲ್ಲಿ ಬೀಡು ಬಿಟ್ಟಿದ್ದ ಕಾಡಾನೆಗಳನ್ನು ಕಾರ್ಯಾಚರಣೆ ನಡೆಸುವ ಮೂಲಕ ಕಾಡಿಗೆ ಅಟ್ಟುವ ಸಂದರ್ಭ ಕಾರ್ಯಾಚರಣೆ ತಂಡವನ್ನು ಸುತ್ತಾಡಿಸುತ್ತಾ ಒಂದು ತೋಟದಿಂದ ಮತ್ತೊಂದು ತೋಟಕ್ಕೆ ಕಾಡಾನೆಗಳು ನುಗ್ಗಿ ಕಾರ್ಯಾಚರಣೆ ತಂಡವನ್ನು ದಿಕ್ಕು ತಪ್ಪಿಸುತ್ತ ಕಾಡಿಗೆ ತೆರಳಲು ಹಿಂದೇಟು ಹಾಕಿದವು ಎಂದು ಕಾರ್ಯಾಚರಣೆ ತಂಡದ ಉಪ ವಲಯ ಅರಣ್ಯ ಅಧಿಕಾರಿ ರಾಘವ ತಿಳಿಸಿದರು.
ರಾಮನಗರದ ಭಾಗದಲ್ಲಿ ಎರಡು ಕಾಡಾನೆಗಳು ಕಾಫಿ ತೋಟದಲ್ಲಿ ಉಳಿದುಕೊಂಡಿದೆ. ವೀರಾಜಪೇಟೆ ವಲಯ ಅರಣ್ಯ ಅಧಿಕಾರಿ ಶಿವರಾಮ್ ನೇತೃತ್ವದಲ್ಲಿ ಉಪವಲಯ ಅರಣ್ಯ ಅಧಿಕಾರಿ ರಾಘವ ಹಾಗೂ ಅರಣ್ಯ ಸಿಬ್ಬಂದಿಗಳು, ಆರ್.ಆರ್.ಟಿ ಮತ್ತು ಆನೆ ಕಾರ್ಯಪಡೆ ತಂಡದ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.