ಸೋಮವಾರಪೇಟೆ, ಡಿ. ೨೪: ಬಿಜೆಪಿ ಹಿರಿಯರ ಬಳಗದ ವತಿಯಿಂದ ತಾ. ೨೫ ರಂದು (ಇಂದು) ಪೂರ್ವಾಹ್ನ ೧೧ ಗಂಟೆಗೆ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ೧೦೧ನೇ ಜನ್ಮ ದಿನಾಚರಣೆಯನ್ನು ಜೇಸಿ ವೇದಿಕೆ ಮುಂಭಾಗದ ಅಟಲ್ಜೀ ಸಮುದಾಯ ಭವನದಲ್ಲಿ ಆಚರಿಸಲಾಗುವುದು ಎಂದು ಬಳಗದ ಪ್ರಮುಖರಾದ ಬಿ.ಟಿ. ತಿಮ್ಮಶೆಟ್ಟಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಷ್ಟçದ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದ ಮಹಾನ್ ನಾಯಕ ಅಟಲ್ ಬಿಹಾರಿ ವಾಜಪೇಯಿ ಅವರ ಸ್ಮರಣೆ ಮತ್ತು ಚಿಂತನೆಗಳನ್ನು ಜನತೆಗೆ ತಲುಪಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ವಾಜಪೇಯಿ ಅವರು ಕೇವಲ ರಾಜಕಾರಣಿ ಮಾತ್ರವಲ್ಲ, ಒಬ್ಬ ಶ್ರೇಷ್ಠ ಕವಿ, ವಾಗ್ಮಿ ಹಾಗೂ ದೇಶದ ಏಕತೆ, ಸಮಗ್ರತೆಯ ಸಂಕೇತವಾಗಿದ್ದರು. ರಾಜಕೀಯ ಕ್ಷೇತ್ರದಲ್ಲಿ ಆಜಾತಶತ್ರುವಾಗಿದ್ದ ಅಟಲ್ಜೀ ಅವರ ಆದರ್ಶಗಳು ಎಂದಿಗೂ ಪ್ರಸ್ತುತ. ಈ ನಿಟ್ಟಿನಲ್ಲಿ ಅವರ ಚಿಂತನೆಗಳನ್ನು ಜಾಗೃತಿಗೊಳಿಸುವ ಕಾರ್ಯವನ್ನು ಬಿಜೆಪಿ ಹಿರಿಯರ ಬಳಗ ಮಾಡುತ್ತಿದೆ ಎಂದರು. ಕಾರ್ಯಕ್ರಮದಲ್ಲಿ ಮಾಜಿ ಸಚಿವ ಅಪ್ಪಚ್ಚು ರಂಜನ್, ಮಾಜಿ ಸಭಾಧ್ಯಕ್ಷ ಕೆ.ಜಿ. ಬೋಪಯ್ಯ, ಮಾಜಿ ಎಂಎಲ್ಸಿ ಸುನೀಲ್ ಸುಬ್ರಮಣಿ, ಪಕ್ಷದ ಹಿರಿಯರು, ಅಟಲ್ಜೀ ಅಭಿಮಾನಿಗಳು ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಗೋಷ್ಠಿಯಲ್ಲಿ ಬಳಗದ ಪದಾಧಿಕಾರಿಗಳಾದ ಬಿ.ಪಿ. ಶಿವಕುಮಾರ್, ಮೃತ್ಯುಂಜಯ, ಹಾಲೇರಿ ದಿನೇಶ್, ದಯಾನಂದ ಇದ್ದರು.