ನಾಪೋಕ್ಲು, ಡಿ. ೨೪: ಯಾವುದೇ ಅಧಿಕಾರ ಶಾಶ್ವತ ಅಲ್ಲ ಜನಬೆಂಬಲ ಇದ್ದರೆ ಮಾತ್ರ ಅಭಿವೃದ್ಧಿ ಕೆಲಸ ಮಾಡಲು ಸಾಧ್ಯ ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವೀರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಹೇಳಿದರು.

ನಾಪೋಕ್ಲು ಕೊಡವ ಸಮಾಜದ ವತಿಯಿಂದ ಆಯೋಜಿಸಿದ್ದ ಅಭಿನಂದನೆ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ಕೊಡವ ಸಮಾಜದ - ಅಜ್ಜಿಮುಟ್ಟ ಮೂಲಕ ಎಮ್ಮೆಮಾಡು ಸಂಪರ್ಕಿಸುವ ಮೂರೂವರೆ ಕಿಲೋಮೀಟರ್ ರಸ್ತೆಯನ್ನು ಪಂಚಾಯತ್ ರಾಜ್ ಇಲಾಖೆಯ ಪ್ರಗತಿಪತ ಯೋಜನೆ ಮೂಲಕ ಅಭಿವೃದ್ಧಿಪಡಿಸಲಾಗುವುದು ಎಂದು ಭರವಸೆ ನೀಡಿದರು. ಎಲ್ಲಾ ಕಡೆ ಲೋಕೋಪಯೋಗಿ ಇಲಾಖೆ ವತಿಯಿಂದ ಕಾಮಗಾರಿ ನಡೆಯುತ್ತಿದೆ. ಮಾರ್ಚ್, ಏಪ್ರಿಲ್ ತಿಂಗಳು ಅಂದರೆ ಮಳೆಗಾಲದ ಮೊದಲು ರಸ್ತೆ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗುವುದು ಎಂದರು.

ನಾಪೋಕ್ಲು ಕೊಡವ ಸಮಾಜದ ಅಧ್ಯಕ್ಷ ಮುಂಡAಡ ಸಿ. ನಾಣಯ್ಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಇತ್ತೀಚೆಗೆ ಮುಕ್ತಾಯಗೊಂಡ ಬೆಳಗಾವಿ ಚಳಿಗಾಲದ ಅಧಿವೇಶನ -೨೦೨೫ರಲ್ಲಿ ಶಾಸಕರಾದ ಪೊನ್ನಣ್ಣ ಅವರ ವಿಶೇಷ ಪ್ರಯತ್ನದಿಂದಾಗಿ ಭೂ ಕಂದಾಯ ವಿಧೇಯಕ ಅಂಗೀಕಾರ ಆಗಿರುವುದನ್ನು ಸಂಭ್ರಮಿಸಲು ಈ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿದೆ.

ಈ ಕಾಯ್ದೆ ಅಂಗೀಕಾರ ಆಗಿರುವುದರಿಂದ ಮುಂದಿನ ದಿನಗಳಲ್ಲಿ ಕೊಡಗಿನ ಬಹುತೇಕ ಜನರನ್ನು ಕಾಡುತ್ತಿದ್ದ ದಶಕಗಳ ಸಮಸ್ಯೆಯಾಗಿದ್ದ ಜಮ್ಮಾ ಮತ್ತು ಪಟ್ಟೆದಾರ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವAತಾಗಿದೆ ಎಂದು ಅಭಿಪ್ರಾಯಪಟ್ಟರು.

ಈ ಸಂದರ್ಭ ಕೊಡವ ಸಮಾಜದ ಉಪಾಧ್ಯಕ್ಷ ಕರವಂಡ ಲವ ನಾಣಯ್ಯ, ಜಂಟಿ ಕಾರ್ಯದರ್ಶಿ ಮಾಚೆಟ್ಟಿರ ಕುಸು ಕುಶಾಲಪ್ಪ, ಪೊಮ್ಮಕ್ಕಡ ಪರಿಷತ್ ಅಧ್ಯಕ್ಷ ನಿಶಾ ಮೇದಪ್ಪ, ಆಡಳಿತ ಮಂಡಳಿ ಪದಾಧಿಕಾರಿಗಳು, ಸದಸ್ಯರು, ಕೊಡವ ಸಮಾಜದ ಪೊಮ್ಮಕ್ಕಡ ಪರಿಷತ್ ಆಡಳಿತ ಮಂಡಳಿ ಪದಾಧಿಕಾರಿಗಳು, ಸದಸ್ಯರು, ಚುನಾಯಿತ ಪ್ರತಿನಿಧಿಗಳು, ಕಾಂಗ್ರೆಸ್ ಪಕ್ಷದ ಪ್ರಮುಖರು ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.