ಸೋಮವಾರಪೇಟೆ, ಡಿ.೨೪: ಯೇಸುಕ್ರಿಸ್ತರ ಜನ್ಮ ದಿನವಾದ ಕ್ರಿಸ್‌ಮಸ್ ಹಬ್ಬವನ್ನು ಕ್ರಿಶ್ಚಿಯನ್ ಸಮುದಾಯದವರು ಸಂಭ್ರಮ ಸಡಗರದಿಂದ ಆಚರಿಸಿದರು. ರಾತ್ರಿ ಚರ್ಚ್ನಲ್ಲಿ ಗೋದಲಿ ನಿರ್ಮಿಸಿ ಸಾಮೂಹಿಕವಾಗಿ ಕ್ರಿಸ್‌ಮಸ್ ಆಚರಿಸಿದರೆ, ಮನೆಗಳಲ್ಲಿಯೂ ಬಾಲ ಯೇಸುವಿನ ಸ್ಮರಣೆ ನಡೆಯಿತು.

ಪಟ್ಟಣದ ಜಯವೀರಮಾತೆ ದೇವಾಲಯದಲ್ಲಿ ಕ್ರಿಸ್‌ಮಸ್ ಹಿನ್ನೆಲೆ ವಿಶೇಷ ಪೂಜೆ, ಪ್ರಾರ್ಥನೆ ನೆರವೇರಿದವು. ಚರ್ಚ್ನ ಆವರಣದಲ್ಲಿ ನಿರ್ಮಿಸಿದ್ದ ಗೋದಲಿ ಎಲ್ಲರ ಆಕರ್ಷಣೆಯ ಕೇಂದ್ರವಾಗಿತ್ತು. ಬಾಲ ಯೇಸುವಿನ ಜನನ, ಜೀವನದ ವಿವಿಧ ಹಂತಗಳನ್ನು ಬಿಂಬಿಸುವ ಗೋದಲಿಯನ್ನು ಭಕ್ತರು ಕಣ್ತುಂಬಿಕೊAಡರು. ಜಯವೀರಮಾತೆ ದೇವಾಲಯವನ್ನು ವಿದ್ಯುತ್‌ದೀಪಗಳಿಂದ ಅಲಂಕರಿಸಲಾಗಿತ್ತು.

ಚರ್ಚ್ನಲ್ಲಿ ಸೇರಿದ ಕ್ರಿಶ್ಚಿಯನ್ ಸಮುದಾಯದವರು ಪರಸ್ಪರ ಹಬ್ಬದ ಶುಭಾಶಯ ಕೋರಿದರು. ಮನೆಯಲ್ಲಿ ನೆಂಟರಿಷ್ಟರೊAದಿಗೆ ಹಬ್ಬದ ಸಂಭ್ರಮದಲ್ಲಿ ಭಾಗಿಯಾದರು. ಇದರೊಂದಿಗೆ ರಾತ್ರಿ ಮನೆಗಳಲ್ಲಿ ಗೋದಲಿಯನ್ನು ನಿರ್ಮಿಸಿ, ಬಾಲ ಯೇಸುವಿನ ಪ್ರತಿಮೆ ಪ್ರತಿಷ್ಠಾಪಿಸಿ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಿದರು. ಕ್ರಿಸ್‌ಮಸ್ ಸ್ಟಾರ್‌ಗಳನ್ನು ಮನೆ, ಅಂಗಡಿಗಳಲ್ಲಿ ಅಳವಡಿಸಿ ಹಬ್ಬಕ್ಕೆ ವಿಶೇಷ ಮೆರುಗು ನೀಡಿದರು. ಚರ್ಚ್ಗಳಲ್ಲಿ ಕೇಕ್ ಕತ್ತರಿಸಿ ಪರಸ್ಪರ ವಿನಿಮಯ ಮಾಡಿಕೊಂಡು ಹಬ್ಬದ ಶುಭಾಶಯ ಕೋರಿದರು. ಇಲ್ಲಿನ ಜಯವೀರ ಮಾತೆ ದೇವಾಲಯದಲ್ಲಿ ಬೆಂಗಳೂರು ಮಹಾ ಗುರುಮಠದ ಧರ್ಮಾಧಿಕಾರಿ ಡಾ. ರಿಚರ್ಡ್ ಬ್ರಿಟ್ಟೋ ಅವರ ನೇತೃತ್ವದಲ್ಲಿ ದಿವ್ಯ ಬಲಿಪೂಜೆ ನಡೆಯಿತು. ಮೈಸೂರಿನ ಕೃಪಾಲಯ ಗುರು ಮಂದಿರದ ಗುರುಗಳಾದ ಫಾ. ಅಜಿತ್ ರಾಡ್ರಿಗಸ್, ಜಯವೀರಮಾತೆ ದೇವಾಲಯದ ಫಾ. ಅವಿನಾಶ್ ಅವರ ನೇತೃತ್ವದಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಯಿತು. ಕ್ರಿಸ್‌ಮಸ್ ಆಚರಣೆ, ಏಸುಕ್ರಿಸ್ತರ ಸಂದೇಶಗಳ ಬಗ್ಗೆ ಅವಿನಾಶ್ ಅವರು ಸಂದೇಶ ನೀಡಿದರು.

ಚರ್ಚ್ನಲ್ಲಿ ಸ್ಥಾಪಿಸಿದ್ದ ಗೋದಲಿಗೆ ವಿಶೇಷ ಪೂಜೆ ನೆರವೇರಿತು.

ಈ ಸಂದರ್ಭ ಚರ್ಚ್ನ ಸಲಹಾ ಸಮಿತಿ ಅಧ್ಯಕ್ಷೆ ಶೀಲಾ ಡಿಸೋಜ, ಉಪಾಧ್ಯಕ್ಷ ಕೆ.ಜೆ. ಸುನಿಲ್, ಸದಸ್ಯರುಗಳಾದ ವಿ.ಎ. ಲಾರೆನ್ಸ್, ಮಾರ್ಷಲ್ ಲೋಬೋ, ಜಾರ್ಜ್, ಜೋಸ್ಪಿನ್, ಸಿಸ್ಟರ್ ದಯಾ, ಶಾಂತಿ ಡಿಸೋಜ, ಪೀಟರ್, ಥೆರೇಸಾ, ಮ್ಯಾಕ್ಡಲಿನ್, ಮ್ಯಾಕ್ಲಿನ್, ರೋಷನ್, ಸುದೀಪ್, ಮರ್ವಿನ್ ಫೆರ್ನಾಂಡೀಸ್, ಶಾಂತಿ ಬೆನ್ನಾ, ಪ್ರಿನ್ಸ್, ವಿನ್ಸಿ ಡಿಸೋಜ, ರೋಮನ್ ಕ್ಯಾಥೋಲಿಕ್ ಯುವ ಘಟಕದ ತಾಲೂಕು ಅಧ್ಯಕ್ಷ ಡೆಂನ್ಜಿಲ್ ಸೇರಿದಂತೆ ಸಮುದಾಯದ ಮುಖಂಡರು ಭಾಗಿಯಾಗಿದ್ದರು.