ಸೋಮವಾರಪೇಟೆ, ಡಿ. ೨೪: ಮಡಿಕೇರಿ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗೆ ಕಳೆದ ೨ ವರ್ಷಗಳಿಂದ ಸುಮಾರು ರೂ. ೧೭೨೪.೧೬೫ ಕೋಟಿ ಅನುದಾನ ತಂದಿರುವುದಾಗಿ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷರಾದ ಬಿ.ಬಿ. ಸತೀಶ್ ಹೇಳಿಕೆ ನೀಡಿರುವುದು ಜನತೆಗೆ ನೀಡಿದ ತಪ್ಪು ಮಾಹಿತಿ ಎಂದು ಮಂಡಲ ಬಿಜೆಪಿ ಪ್ರತಿಕ್ರಿಯಿಸಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ಮಂಡಲ ಅಧ್ಯಕ್ಷ ಗೌತಮ್ ಗೌಡ, ಹಿಂದಿನ ಬಿಜೆಪಿ ಸರ್ಕಾರದಲ್ಲಿ ಅಂದಿನ ಶಾಸಕ ಅಪ್ಪಚ್ಚು ರಂಜನ್ ಅವರ ಶ್ರಮದಿಂದ ಬಿಡುಗಡೆಯಾದ ಅನುದಾನದಲ್ಲಿ ನಡೆದ ಕಾಮಗಾರಿಗಳನ್ನು ಇಂದಿನ ಶಾಸಕರು ತಂದ ಅನುದಾನ ಎಂದು ಹೇಳಿರುವುದು ಹಾಸ್ಯಾಸ್ಪದ ಎಂದು ಟೀಕಿಸಿದರು.

ಕಾಂಗ್ರೆಸ್‌ನ ಬ್ಲಾಕ್ ಅಧ್ಯಕ್ಷರು ಕೊಟ್ಟಿರುವ ರೂ. ೧೭೨೪.೧೬೫ ಕೋಟಿ ಅನುದಾನದ ಮೊತ್ತದಲ್ಲಿ, ೬೫೩.೫೯ ಕೋಟಿ ರೂ.ಗಳ ಅನುದಾನ ಬಿಜೆಪಿ ಸರ್ಕಾರವಿದ್ದಾಗ ಬಿಡುಗಡೆಯಾದ ಅನುದಾನ ಎಂದು ಹೇಳಿದರು. ಕೇಂದ್ರ ಸರ್ಕಾರದ ಅನುದಾನದ ಕಾಮಗಾರಿಯನ್ನು ತಾನೇ ತಂದಿದ್ದು ಎಂದು ಕಾಂಗ್ರೆಸ್‌ನವರು ಭೂಮಿಪೂಜೆ ನೆರವೇರಿಸಿ ಪ್ರಚಾರ ಪಡೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.

ಯುವ ಮೋರ್ಚಾ ಜಿಲ್ಲಾಧ್ಯಕ್ಷ ಮಹೇಶ್ ತಿಮ್ಮಯ್ಯ ಮಾತನಾಡಿ, ರಾಜ್ಯ ಸರ್ಕಾರದಲ್ಲಿ ಅನುದಾನವಿಲ್ಲದೆ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಲು ಸಾಧ್ಯವಾಗುತ್ತಿಲ್ಲ ಎಂದು ರಾಜ್ಯದ ಕಾಂಗ್ರೆಸ್ ಶಾಸಕರುಗಳು ತಮ್ಮ ಸರ್ಕಾರದ ವಿರುದ್ಧವೇ ಹೋರಾಟಕ್ಕೆ ಇಳಿದಿದ್ದಾರೆ. ಇಂತಹ ಸಂಕಷ್ಟದ ವರ್ಷಗಳಲ್ಲಿ ಮಡಿಕೇರಿ ಕ್ಷೇತ್ರಕ್ಕೆ ೧೭೨೪ ಕೋಟಿ ರೂ.ಗಳ ಅನುದಾನವನ್ನು ರಾಜ್ಯ ಸರ್ಕಾರ ನೀಡಲು ಸಾಧ್ಯವೆ? ಎಂದು ಪ್ರಶ್ನಿಸಿದರು.

ಈ ಬಗ್ಗೆ ಶ್ವೇತ ಪತ್ರವನ್ನು ಹೊರಡಿಸುವಂತೆ ಕೇಳಿದರೆ, ಅನುದಾನದ ವಿವರವನ್ನು ಬಿಳಿಹಾಳೆಯಲ್ಲಿ ಟೈಪ್ ಮಾಡಿಸಿ ಮಾಜಿ ಸಚಿವ ಅಪ್ಪಚ್ಚು ರಂಜನ್ ಅವರಿಗೆ ಕಳುಹಿಸಿದ್ದಾರೆ. ಬ್ಲಾಕ್ ಅಧ್ಯಕ್ಷರು ಶ್ವೇತಪತ್ರ ಎಂದರೆ ಏನೆಂಬುದರ ಬಗ್ಗೆ ಮಾಹಿತಿ ಪಡೆದುಕೊಳ್ಳಬೇಕು ಎಂದು ಹೇಳಿದರು.

ಸರ್ಕಾರದ ಮಂಜೂರಾತಿ ಅದೇಶ, ಬೇಡಿಕೆ ಸಲ್ಲಿಕೆ ಮತ್ತು ಬಿಡುಗಡೆಯಾದ ಅನುದಾನ, ಮುಕ್ತಾಯವಾದ ಕಾಮಗಾರಿಗಳ ಪಟ್ಟಿಯ ದೃಢೀಕರಣ ವಿವರವನ್ನು ಶ್ವೇತಪತ್ರ ಎಂದು ಕರೆಯುತ್ತಾರೆ. ಬಿಳೆ ಹಾಳೆಯಲ್ಲಿ ಮುದ್ರಿಸಿದರೆ ಅದು ಅಧಿಕೃತವೇ ಎಂದು ಪ್ರಶ್ನಿಸಿದ ಅವರು, ಇನ್ನಾದರೂ ಕಾಂಗ್ರೆಸ್‌ನವರು ಹೇಳಿದ ೧೭೨೪ ಅನುದಾನದ ಶ್ವೇತಪತ್ರವನ್ನು ಹೊರಡಿಸುವಂತೆ ಒತ್ತಾಯಿಸಿದರು.

ಸೋಮವಾರಪೇಟೆ ಸಿಂಥೆಟಿಕ್ ಟರ್ಫ್ ಮೈದಾನ, ಮಡಿಕೇರಿ ಮೆಡಿಕಲ್ ಕಾಲೇಜು ಎಂ.ಆರ್.ಐ., ಪಾಲಿಟೆಕ್ನಿಕ್ ಕಾಲೇಜು ಅಭಿವೃದ್ಧಿ, ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ, ಹಾನಗಲ್ಲು, ಕುಶಾಲನಗರ, ಜಂಬೂರು, ಕೂಡಿಗೆ ವಿದ್ಯುತ್ ಉಪಕೇಂದ್ರ, ಹಸಿರು ಮಂಡಳಿ ಒಳಚರಂಡಿ ಕಾಮಗಾರಿ, ಕೊಡವ ಸಮಾಜಕ್ಕೆ ತಲಾ ೧೦ ಲಕ್ಷ ರೂ.ಗಳು, ಗ್ರಾಮೀಣ ಕುಡಿಯುವ ನೀರು ಯೋಜನೆ, ಜೆಜೆಎಂ ಕಾಮಗಾರಿ, ಕುಶಾಲನಗರ ಕಲಾ ಭವನ, ಕೆಎಸ್‌ಆರ್‌ಟಿ ಬಸ್ ನಿಲ್ದಾಣ ಇಂತಹ ಅನೇಕ ಕಾಮಗಾರಿಗಳ ಅನುದಾನ ಅಪ್ಪಚ್ಚು ರಂಜನ್ ಅಧಿಕಾರಾವಧಿಯಲ್ಲಿ ಮಂಜೂರಾಗಿವೆ. ಇದನ್ನು ಮುಚ್ಚಿಟ್ಟು ಕಾಂಗ್ರೆಸ್ ಜನತೆಗೆ ತಪ್ಪು ಮಾಹಿತಿ ರವಾನಿಸುತ್ತಿದೆ ಎಂದು ಆರೋಪಿಸಿದರು.

ಗೋಷ್ಠಿಯಲ್ಲಿ ಮಂಡಲ ಬಿಜೆಪಿ ಪದಾಧಿಕಾರಿಗಳಾದ ಎಸ್.ಆರ್. ಸೋಮೇಶ್, ದರ್ಶನ್ ಜೋಯಪ್ಪ, ಮೋಕ್ಷಿಕ್ ರಾಜ್ ಇದ್ದರು.