ಕಣಿವೆ, ಡಿ. ೨೨: ಕಲಿಕೆಗೆ ದಾಖಲಾಗದೇ ಶಾಲೆಯಿಂದ ಹೊರಗುಳಿವ ಆದಿವಾಸಿಗಳ ಮಕ್ಕಳನ್ನು ಶಾಲೆಯತ್ತ ಆಕರ್ಷಿಸುವ ಭಾಗವಾಗಿ ಶಾಲಾ ಮುಖ್ಯ ಶಿಕ್ಷಕಿ ಎಲಿಜಬೆತ್ ಅರಾನ್ಹ ಹಾಗೂ ಅರೆಕಾಲಿಕ ಶಿಕ್ಷಕಿ ಶಮ್ನಾ ಎಂಬವರು ಸೇರಿಕೊಂಡು ಆದಿವಾಸಿ ಮಕ್ಕಳಿಗೆ ಪ್ರವಾಸದ ಭಾಗ್ಯ ಹಮ್ಮಿಕೊಂಡರು.

ಪ್ರತಿ ದಿನವೂ ದೂರದ ಶಾಲೆಗೆ ಹರಸಾಹಸ ಪಟ್ಟು ಕಾವೇರಿ ನದಿಯನ್ನು ದಾಟಿ ಧಾವಿಸುವ ಈ ಶಿಕ್ಷಕಿಯರು ಶಾಲೆಯ ಬಾಗಿಲು ತೆರೆದು ಕಾದರೂ ಕೂಡ ಶಾಲಾ ಬ್ಯಾಗ್ ಹಿಡಿದು ಶಾಲೆಗೆ ಬರಲು ಹಿಂದೇಟು ಹಾಕುತ್ತಿದ್ದ ಮಕ್ಕಳ ಮನೆ ಬಾಗಿಲಿಗೆ ಹೋಗಿ ಚಾಕ್‌ಲೇಟ್, ಬಿಸ್ಕತ್ತು ಕೊಟ್ಟು ಅಪಾಯವನ್ನು ಲೆಕ್ಕಿಸದೇ ಉಪಾಯದಿಂದ ಶಾಲೆಗೆ ಕರೆದೊಯ್ದು ಓದು ಬರಹ ಕಲಿಸುವ ಶಿಕ್ಷಕಿಯರಿಗೆ ಹೊಸ ಉಪಾಯವೊಂದು ಹೊಳೆಯಿತು.

ಯಾವಾಗಲೂ ಕೂಲಿ ಕೆಲಸ ಅಂದುಕೊAಡು ಮಕ್ಕಳ ಶೈಕ್ಷಣಿಕ ಹಾಗೂ ಸಾಮಾಜಿಕ ಪ್ರಗತಿಯ ಬಗ್ಗೆ ಕನಸೇ ಕಾಣದ ಆದಿವಾಸಿ ಕುಟುಂಬಗಳ ಪೋಷಕರ ಮಕ್ಕಳನ್ನು ಶಾಲೆಯತ್ತ ಸೆಳೆಯಲು ಹೊಸ ಯೋಜನೆ ರೂಪಿಸಿದರು.

ಮಕ್ಕಳ ಪೋಷಕರ ಮನೆಗೆ ಖುದ್ದಾಗಿ ತೆರಳಿದ ಈ ಶಿಕ್ಷಕರು ಶಾಲೆಗೆ ತಪ್ಪದೇ ಬರುವ ಮಕ್ಕಳನ್ನು ಪ್ರವಾಸಕ್ಕೆ ಕರೆದೊಯ್ಯಲಾಗುವುದು.

ಕೇವಲ ಗುಡಿಸಲು, ಸಾಕಾನೆ ಶಿಬಿರದ ಪರಿಸರ, ನಿತ್ಯವೂ ಧಾವಿಸುವ ತರಹೇವಾರಿ ಪ್ರವಾಸಿಗರನ್ನು ನೋಡಿಕೊಂಡೇ ದಿನಗಳೆವ ಮಕ್ಕಳಿಗೆ ಹೊರ ಪ್ರಪಂಚದ ಅರಿವು ಮೂಡಿಸ ಬೇಕಿದೆ. ಹಾಗಾಗಿ ಬೇರೆಡೆಗೆ ಪ್ರವಾಸಕ್ಕೆ ಕರೆದೊಯ್ಯಲಾಗುವುದು ಎಂದು ಪೋಷಕರ ಮನವೊಲಿಸಿದರು. ಕೆಲವು ಪೋಷಕರು ಪ್ರವಾಸಕ್ಕೆ ಖರ್ಚಿಗೆ ಏನು ಮಾಡುವಿರಿ ಎಂದು ಶಿಕ್ಷಕರನ್ನು ವಿಚಾರಿಸಿ ತಮ್ಮ ಕೈಲಾದ ಧನ ಸಹಾಯ ಮಾಡಿದರು. ಶಾಲೆಯಲ್ಲಿ ದಾಖಲಾಗಿರುವ ೧೭ ವಿದ್ಯಾರ್ಥಿಗಳನ್ನು ಕರೆದೊಯ್ಯಲು ಒಂದು ದಿನದ ಪ್ರವಾಸಕ್ಕೆ ಉಚಿತವಾಗಿ ವಾಹನದ ವ್ಯವಸ್ಥೆಗೆ ಶಿಬಿರದ ಉಪವಲಯ ಅರಣ್ಯಾಧಿಕಾರಿಗಳು ಮುಂದೆ ಬಂದರು.

ಉಳಿದAತೆ ಒಂದು ದಿನದ ಊಟೋಪಚಾರದೊಂದಿಗೆ ಮಕ್ಕಳ ನಿರ್ವಹಣೆಗೆ ಶಾಲಾಭಿವೃದ್ಧಿ ಸಮಿತಿಯ ಸದಸ್ಯರನ್ನು ಕರೆದುಕೊಂಡು ಪ್ರವಾಸ ಹೊರಟೇ ಬಿಟ್ಟರು. ಹೀಗೆ ಪ್ರವಾಸ ತೆರಳಿದ ಆದಿವಾಸಿ ಮಕ್ಕಳನ್ನು ಕೊಡಗಿನ ನೆರೆಯ ತಾಲೂಕು ಪಿರಿಯಾಪಟ್ಟಣದ ವಾಟರ್ ಪಾರ್ಕ್ ಒಂದಕ್ಕೆ ಕರೆದೊಯ್ಯ ಲಾಯಿತು.

ಮಧ್ಯಾಹ್ನವಾಗುತ್ತಲೇ ಬಿಸಿಲು ರಣಕೇಕೆ ಹಾಕುವ ಕಾರಣ ಈ ಮಕ್ಕಳ ಮನ ತಣಿಸಲು ಅಲ್ಲಿನ ವಾಟರ್ ಪಾರ್ಕ್ನಲ್ಲಿ ಬಿಡಲಾಯಿತು. ಯಾವಾಗಲೂ ಕೆರೆ ಕಟ್ಟೆ ಕೊಲ್ಲಿಗಳಲ್ಲಿ ಈಜಾಡುತ್ತಿದ್ದ ಚಿಣ್ಣರು ಆಕರ್ಷಕ ಈಜು ಕೊಳ ಕಂಡು ಪುಳಕಿತರಾದರು. ಅಲ್ಲಿ ಮನಸೋಇಚ್ಛೆ ಆಡಿ ನಲಿದಾಡಿ ಸಂಭ್ರಮಿಸಿದ ಆದಿವಾಸಿ ಚಿಣ್ಣರು ಮೈಮರೆತು ಆನಂದಿಸಿದರು.

ಅವರ ಆನಂದಕ್ಕೆ ಪಾರವೇ ಇರಲಿಲ್ಲ. ಪೂರ್ವಾಹ್ನ ೧೧ ಗಂಟೆಯಿAದ ಸಂಜೆ ೪ ಗಂಟೆಯವರೆಗೆ ಸಂಭ್ರಮಿಸಿದ ಮಕ್ಕಳಿಗೆ ವಿಶೇಷ ಭೋಜನದ ವ್ಯವಸ್ಥೆಯನ್ನೂ ಕಲ್ಪಿಸಲಾಗಿತ್ತು. ಕೇವಲ ಪ್ರೌಢಶಾಲೆ ಹಾಗೂ ಕಾಲೇಜು ಮಕ್ಕಳು ಪ್ರವಾಸ ಹೋಗುವುದನ್ನು ನೋಡಿಯೂ ನೋಡದಂತೆ ನಮಗೆಲ್ಲಿಯ ಭಾಗ್ಯ ಎಂದು ನಿರಾಶರಾಗಿದ್ದ ಆದಿವಾಸಿ ಮಕ್ಕಳನ್ನು ಪ್ರವಾಸಕ್ಕೆ ಒಯ್ದ ಮೇಲೆ ಆ ಚಿಣ್ಣರ ಕಂಗಳಲ್ಲಿ ಕಾಂತಿ ತುಂಬಿತ್ತು. ಮನದಲ್ಲಿ ಸಂತೃಪ್ತಿಯ ಭಾವವಿತ್ತು.

ಎಲ್ಲೋ ಹೊರ ರಾಜ್ಯಕ್ಕೆ ಪ್ರವಾಸ ಹೋಗಿ ಬಂದ ಅನುಭವವಾಗಿತ್ತು. ಒಟ್ಟಾರೆ, ಪ್ರವಾಸ ಮುಗಿಸಿ ಮಕ್ಕಳು ಮನೆಗೆ ತಲುಪುವುದನ್ನೇ ಕಾದು ಕುಳಿತಿದ್ದ ಮಕ್ಕಳ ಶ್ರಮಿಕ ಪೋಷಕರಲ್ಲೂ ಕೂಡ ಏನೋ ಒಂದು ತರಹದ ಉಲ್ಲಾಸ. ತಾವು ಕಾಣಲಾರದ್ದು, ತಾವೂ ಕಲಿಯಲಾಗದ್ದು, ನೋಡಲಾರದ ಯಾವುದೋ ಹೊರ ದೇಶಕ್ಕೆ ತಮ್ಮ ಮಕ್ಕಳು ಹೋಗಿ ಬಂದರೆAಬ ಭಾವದಿಂದ ಮಕ್ಕಳ ಕಂಡು ನಿಟ್ಟುಸಿರು ಬಿಟ್ಟಿತು ಹೆತ್ತವರ ಜೀವ. ‘ಮುಂದಿನ ಸಾರಿ ನಮ್ ಮಕ್ಕಳನ್ನು ಇದೇ ಶಾಲೆಗೆ ಕಳಿಸಿದರೆ ನಮ್ ಮಕ್ಕಳು ಕೂಡ ಹೀಗೆಯೇ ಪ್ರವಾಸ ಹೋಗಿ ಬರ್ತಾರಲ್ವಾ’ ಎಂಬ ಆಸೆ ಇತರೇ ಆದಿವಾಸಿ ಪೋಷಕರ ಮನದಲ್ಲಿ ಮೂಡಿದರೆ ಅಚ್ಚರಿಯಲ್ಲ. ಏಕೆಂದರೆ ಶಾಲಾ ಮುಖ್ಯ ಶಿಕ್ಷಕಿ ಎಲಿಜಬೆತ್ ಅವರ ಯೋಜನೆಯೇ ಮಕ್ಕಳನ್ನು ಶಾಲೆಯತ್ತ ಸೆಳೆಯುವ ಪ್ರವಾಸ ಅದಾಗಿತ್ತು.

- ಕೆ.ಎಸ್. ಮೂರ್ತಿ