ಅನಿಲ್ ಹೆಚ್.ಟಿ.

ಬಾಳೆಹೊನ್ನೂರು, ಡಿ. ೨೨ : ಕಾಫಿ ಕೃಷಿಕರಿಗೆ ತೀವ್ರ ಆತಂಕ ಸೃಷ್ಟಿಸಿರುವ ಸರ್ಫೇಸಿ ಕಾಯಿದೆಯನ್ನು ಹಿಂಪಡೆಯುವ ನಿಟ್ಟಿನಲ್ಲಿ ಕೇಂದ್ರ ವಾಣಿಜ್ಯ ಸಚಿವರೊಂದಿಗೆ ಚರ್ಚಿಸುವುದಲ್ಲದೇ, ಕಾಫಿ ಬೆಳೆಗಾರರ ಫಸಲು ಸಾಲದ ಬಡ್ಡಿ ದರವನ್ನು ಶೇ. ೩ಕ್ಕೆ ಇಳಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಕೈಗೊಳ್ಳುವುದಾಗಿ ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ. ಕುಮಾರಸ್ವಾಮಿ ಭರವಸೆ ನೀಡಿದರು.

ಬಾಳೆಹೊನ್ನೂರಿನಲ್ಲಿ ರಾಷ್ಟ್ರೀಯ ಕಾಫಿ ಸಂಶೋಧನಾ ಕೇಂದ್ರದ ಶತಮಾನೋತ್ಸವ ಸಮಾರೋಪ ಸಮಾರಂಭದಲ್ಲಿ ಕಾಫಿ ಕೈಪಿಡಿ ಲೋಕಾರ್ಪಣೆಗೊಳಿಸಿ ಮಾತ ನಾಡಿದ ಹೆಚ್.ಡಿ. ಕುಮಾರಸ್ವಾಮಿ, ಭಾರತೀಯ ಕಾಫಿ ಮಂಡಳಿ ಅಧ್ಯಕ್ಷ ದಿನೇಶ್ ದೇವವೃಂದ ಅವರು ಸಲ್ಲಿಸಿದ್ದ ಮನವಿಯ ಅಂಶಗಳನ್ನು ಪ್ರಸ್ತಾಪಿಸಿದರು.

ಸರ್ಫೇಸಿ ಕಾಯಿದೆ ಕಾಫಿ ಕೃಷಿಕರ ಪಾಲಿಗೆ ಆತಂಕ ಉಂಟು ಮಾಡಿರುವುದು ತನ್ನ ಗಮನಕ್ಕೂ ಬಂದಿದೆ. ನ್ಯಾಯ ಸಮ್ಮತವಲ್ಲದ ರೀತಿಯಲ್ಲಿ ಸಾಲಗಾರ ಕೃಷಿಕರ ಕಾಫಿ ತೋಟಗಳನ್ನು ವಿದೇಶಿಯರೂ ಹರಾಜಿನಲ್ಲಿ ಖರೀದಿಸುತ್ತಿರುವ ಬೆಳವಣಿಗೆ ಖಂಡಿತಾ ಸರಿಯಲ್ಲ. ಈ ನಿಟ್ಟಿನಲ್ಲಿ ಬೆಳೆಗಾರರ ನಿಯೋಗದೊಂದಿಗೆ ಕೇಂದ್ರದ ವಾಣಿಜ್ಯ ಸಚಿವರಾದ ನಿರ್ಮಲಾ ಸೀತಾರಾಮನ್ ಅವರ ಬಳಿ ತೆರಳಿ ಸರ್ಫೇಸಿ ಕಾಯಿದೆಯನ್ನು ಹಿಂಪಡೆಯಲು ಮುಂದಾಗುವುದಾಗಿ ಹೇಳಿದರು. ಕಾಫಿ ಬೆಳೆಗಾರರ ಫಸಲು ಸಾಲದ ಮೇಲಿನ ಬಡ್ಡಿ ದರವನ್ನು ಶೇ.೩ಕ್ಕೆ ಇಳಿಸುವ ನಿಟ್ಟಿನಲ್ಲಿಯೂ ಪ್ರಾಮಾಣಿಕ ಪ್ರಯತ್ನ ಕೈಗೊಳ್ಳುವುದಾಗಿ ಹೇಳಿದ ಕುಮಾರಸ್ವಾಮಿ, ವನ್ಯಜೀವಿಗಳ ದಾಳಿ ತಡೆಗೆ ತಾನು ಮುಖ್ಯಮಂತ್ರಿಯಾಗಿದ್ದಾಗ ಜಾರಿಗೆ ತಂದ ರೈಲ್ವೇ ಕಂಬಿ ಅಳವಡಿಕೆ ಯೋಜನೆಯನ್ನು ಈಗಿನ ರಾಜ್ಯ ಸರ್ಕಾರ ಸಮರ್ಪಕವಾಗಿ ಜಾರಿಗೆ ತರುತ್ತಿಲ್ಲ. ಈ ನಿಟ್ಟಿನಲ್ಲಿಯೂ ತಾನು ರಾಜ್ಯ ಹಾಗೂ ಕೇಂದ್ರ ಸರ್ಕಾರದ ಗಮನ ಸೆಳೆಯುವುದಾಗಿ ನುಡಿದರು. ವನ್ಯಜೀವಿಗಳಿಂದ ಮಾನವನ ಜೀವ ರಕ್ಷಣೆ ನಿಟ್ಟಿನಲ್ಲಿ ಸರ್ಕಾರಗಳು ವೈಜ್ಞಾನಿಕ ರೀತಿಯಲ್ಲಿ ಪರಿಹಾರ ಕಂಡುಕೊಳ್ಳಬೇಕಾದ ಅತ್ಯಗತ್ಯವಿದೆ ಎಂದೂ ಅವರು ಪ್ರತಿಪಾದಿಸಿದರು.

ಹಾಸನದಲ್ಲಿ ರಾಸಾಯನಿಕ ಗೊಬ್ಬರ ಉತ್ಪಾದನಾ ಘಟಕ ಪ್ರಾರಂಭಿಸಿದರೆ ಮಲೆನಾಡು ಜಿಲ್ಲೆಗಳ ರೈತಾಪಿಗಳಿಗೆ ಅನುಕೂಲವಾಗಲಿದೆ. ಈ ನಿಟ್ಟಿನಲ್ಲಿಯೂ ತಾನು ಪ್ರಯತ್ನಿಸುವುದಾಗಿ ಕುಮಾರಸ್ವಾಮಿ ಕಾಫಿ ಕೃಷಿಕರಿಗೆ ಭರವಸೆ ನೀಡಿದರು.

ಭಾರತದ ಆರ್ಥಿಕತೆಗೆ ಕಾಫಿ ಬೆಳೆಗಾರರ ಕೊಡುಗೆ ಬಹಳ ದೊಡ್ಡ ಮಟ್ಟದಲ್ಲಿದೆ ಎಂದು ಶ್ಲಾಘಿಸಿದ ಸಚಿವರು, ವಾರ್ಷಿಕ ೧೬ ಸಾವಿರ ಕೋಟಿ ರುಪಾಯಿ ರಫ್ತು ಕಾರಣವಾಗಿರುವ ಕಾಫಿ ಕೃಷಿಯ ಬೆಳೆಗಾರರಿಗೆ ಎಲ್ಲಾ ರೀತಿಯ ಸಹಕಾರವನ್ನು ಕೇಂದ್ರ ಸರ್ಕಾರದ ೪ಆರನೇ ಪುಟಕ್ಕೆ

(ಮೊದಲ ಪುಟದಿಂದ) ವತಿಯಿಂದ ನೀಡಲು ತಾನು ಬದ್ದನಿರುವುದಾಗಿ ಹೇಳಿದರು. ಅರಣ್ಯ ಇಲಾಖೆಯು ಅನಗತ್ಯವಾಗಿ ಒತ್ತುವರಿ ಹೆಸರಿನಲ್ಲಿ ಕಾಫಿ ಕೃಷಿಕರ ಭೂಮಿಯನ್ನು ವಶಪಡಿಸಿಕೊಳ್ಳುತ್ತಿರುವ ಬೆಳವಣಿಗೆ ಸರಿಯಲ್ಲ. ಅರಣ್ಯ ಇಲಾಖೆ ಪ್ರತೀ ವರ್ಷ ಕೋಟ್ಯಾಂತರ ರೂಪಾಯಿ ಲೆಕ್ಕ ತೋರಿಸಿ ನೆಟ್ಟಿರುವ ಸಸಿಗಳನ್ನು ಮೊದಲು ತೋರಿಸಿ ನಂತರ ಕೃಷಿಕರ ಭೂಮಿ ವಿಚಾರಕ್ಕೆ ಬರಲಿ ಎಂದು ಕುಮಾರಸ್ವಾಮಿ ಅರಣ್ಯಾಧಿಕಾರಿಗಳ ವಿರುದ್ದ ಆಕ್ರೋಷ ಹೊರಹಾಕಿದರು..

ಕಾಫಿ ಫಸಲಿಗೆ ಹವಾಮಾನ ವೈಪರೀತ್ಯವೂ ಪ್ರಮುಖ ಕಾರಣವಾಗುತ್ತಿರುವುದು ವಿಷಾಧನೀಯ ಎಂದು ಹೇಳಿದ ಕೇಂದ್ರ ಸಚಿವರು, ಪರಿಸರ ನಾಶವೂ ಈ ಪ್ರತಿಕೂಲ ಹವಾಮಾನ ವೈಪರೀತ್ಯಕ್ಕೆ ಕಾರಣವಾಗಿದೆ. ಈ ನಿಟ್ಟಿನಲ್ಲಿ ಕಾಫಿ ಕೃಷಿಕರು ಪರಿಸರ ಸಂರಕ್ಷಣೆಗೆ ಆದ್ಯತೆ ನೀಡಬೇಕೆಂದು ಕರೆ ನೀಡಿದರು.

ಭೂ ಒತ್ತುವರಿ ವಿಚಾರಕ್ಕೆ ಸಂಬAಧಿಸಿದAತೆ ಕಾಫಿ ಕೃಷಿಕರು ಇನ್ನೆರಡು ವರ್ಷಗಳ ಕಾಲ ತಾಳ್ಮೆಯಿಂದ ಕಾಯಿರಿ ಎಂದು ಹೇಳಿದ ಕುಮಾರಸ್ವಾಮಿ, ತನ್ನ ಜೀವವನ್ನು ದೇವರು ಐದು ಬಾರಿ ಉಳಿಸಿದ್ದಾನೆ. ಬಹುಷ ಜನರ ಅನೇಕ ಸಂಕಷ್ಟಗಳ ಪರಿಹಾರಕ್ಕಾಗಿ ನನ್ನ ಜೀವ ಉಳಿಸಿ ಆ ಕೆಲಸವನ್ನು ನನ್ನಿಂದ ಮಾಡಿಸುವ ಇಚ್ಚೆ ದೇವರಿಗೆ ಇರಬೇಕು. ಇನ್ನೆರಡು ವರ್ಷಗಳಲ್ಲಿ ದೇವರ ದಯೆಯಿದ್ದರೆ ಮುಖ್ಯಮಂತ್ರಿಯಾಗಿ ಜನರು ಮತ್ತು ಕೃಷಿಕರಿಗೆ ಅಗತ್ಯ ಅನುಕೂಲ ಕಲ್ಪಿಸುವುದಾಗಿಯೂ ಕುಮಾರಸ್ವಾಮಿ ಹೇಳಿದರು. ಎರಡು ಬಾರಿ ಮುಖ್ಯಮಂತ್ರಿಯಾಗುವುದೂ ನನ್ನ ಪ್ರಯತ್ನವಾಗಿರಲಿಲ್ಲ. ಜನರೂ ನನಗೆ ಮುಖ್ಯಮಂತ್ರಿಯಾಗಲು ಅಗತ್ಯ ಶಾಸಕ ಬಲ ನೀಡಿರಲಿಲ್ಲ. ಆದರೆ ದೈವೆಚ್ಚೆಯಿಂದ ಮುಖ್ಯಮಂತ್ರಿಯಾದೆ. ಹೀಗಿರುವಾಗ ದೇವರಿಚ್ಚೆ ಏನಿದೆಯೋ ಎಂದು ಕುಮಾರಸ್ವಾಮಿ ಮಾರ್ಮಿಕವಾಗಿ ನುಡಿದರು. ತನ್ನ ರಾಜಕೀಯ ಜೀವನ ಮುಗಿದೆ ಹೋಯಿತು ಎನ್ನುವವರಿಗೆ ಸೆಡ್ಡು ಹೊಡೆಯುವಂತ ಲಾಟರಿ ಹೊಡೆದಂತೆ ತಾನು ಕೇಂದ್ರದಲ್ಲಿ ಮಂತ್ರಿಯಾಗಿದ್ದಾಗಿಯೂ ಕುಮಾರಸ್ವಾಮಿ ಹೇಳಿದರು.

ರಾಜ್ಯ ಸರ್ಕಾರ ಪ್ರತೀ ಮಹಿಳೆಯರಿಗೆ ರೂ. ೨ ಸಾವಿರ ನೀಡುತ್ತಿರುವ ಬಗ್ಗೆ ಪ್ರಸ್ತಾಪಿಸಿದ ಕುಮಾರಸ್ವಾಮಿ, ಈ ೨ ಸಾವಿರದಲ್ಲಿ ಏನು ಮಾಡಲಾಗುತ್ತದೆ. ಯಾರಪ್ಪನ ಮನೆ ದುಡ್ಡಿದು ಎಂದು ಟೀಕಿಸಿದರಲ್ಲದೇ, ಗೌರವಯುತವಾಗಿ ಉದ್ಯೋಗದಿಂದ ಲಭಿಸುವ ಹಣದಲ್ಲಿ ಜೀವನ ಕಲ್ಪಿಸಬೇಕು. ಅದಕ್ಕೆ ತಕ್ಕಂತೆ ಜನರಿಗೆ ಉದ್ಯೋಗ ನೀಡಬೇಕೆಂದು ಸರ್ಕಾರಕ್ಕೆ ತಿವಿದರು. ಸಾಲಗಾರನಾಗದೇ ಸ್ವಾವಲಂಬಿ ಜೀವನ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರ ಜನರನ್ನು ರೂಪಿಸಬೇಕೆಂದು ಸಲಹೆ ನೀಡಿದರು.

ಭಾರತೀಯ ಕಾಫಿ ಮಂಡಳಿ ಅಧ್ಯಕ್ಷ ದಿನೇಶ್ ದೇವವೃಂದ ಮಾತನಾಡಿ, ಕಾಫಿ ಮಾರುಕಟ್ಟೆಯಲ್ಲಿ ಯೋಜನೆಯಂತೆಯೇ ಚಿಂತನೆಗಳೂ ಬದಲಾಗುತ್ತಿದೆ. ಕಾಫಿ ಕೃಷಿಕರು ಈ ನಿಟ್ಟಿನಲ್ಲಿ ಜಾಗ್ರತೆಯಿಂದ ಜೀವನೋಪಾಯ ಕಂಡುಕೊಳ್ಳಬೇಕಾಗಿದೆ ಎಂದು ಕಿವಿಮಾತು ಹೇಳಿದರು. ಮೊದಲಿನಂತೆ ಭಾರತ ಇತರ ದೇಶಗಳ ಬೇಡಿಕೆಯ ಮೇಲೆ ಅವಲಂಭಿತವಾಗದೇ ಕಾಫಿಯ ದರವನ್ನು ತಾನೇ ನಿರ್ಧರಿಸುವ ಹೊಣೆಗಾರ ದೇಶವಾಗಿ ಪರಿವರ್ತನೆಯಾಗಿದೆ ಎಂದೂ ದಿನೇಶ್ ಹೆಮ್ಮೆಯಿಂದ ನುಡಿದರು.

ಕಾಫಿ ಮಂಡಳಿ ಕಾರ್ಯದರ್ಶಿ ಎಂ. ಕೂರ್ಮಾರಾವ್ ಮಾತನಾಡಿ, ಕಾಫಿ ಸಂಶೋಧನಾ ಕೇಂದ್ರಗಳು ಕೇವಲ ಪ್ರಯೋಗಕ್ಕೆ ಸೀಮಿತವಾಗದೇ ಕ್ಷೇತ್ರ ಪ್ರಾತಕ್ಷಿಕೆಯ ಮೂಲಕ ಕೃಷಿಕರ ಸಲಹೆ ಆಧಾರದಲ್ಲಿಯೂ ಮಾರುಕಟ್ಟೆಯ ದೃಷ್ಟಿಯಲ್ಲಿ ನಾಗಾಲೋಟದಿಂದ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು.

ಶಾಸಕರಾದ ಟಿ.ಡಿ. ರಾಜುಗೌಡ, ಎಸ್.ಎಲ್. ಬೋಜೇಗೌಡ, ಹೆಚ್.ಕೆ. ಸುರೇಶ್, ಉಗಾಂಡ ದೇಶದ ಕಾಫಿ ಸಂಶೋದನಾ ವಿಭಾಗದ ಮುಖ್ಯಸ್ಥ ಜೆಫ್ರಿ, ಆಂಧ್ರದ ಅರಖು ಜಿಲ್ಲಾಧಿಕಾರಿ ದಿನೇಶ್ ಕುಮಾರ್, ಬಾಳೆಹೊನ್ನೂರು ಕಾಫಿ ಸಂಶೋಧನಾ ಕೇಂದ್ರದ ನಿರ್ದೇಶಕ ಡಾ.ಸೆಂಥಿಲ್ ಕುಮಾರ್ ವೇದಿಕೆಯಲ್ಲಿದ್ದರು.

ಕೊಡಗು ಜಿಲ್ಲೆಯ ಮೂಲೆಮನೆ ಎಸ್ಟೇಟ್‌ನ ಜಿ.ಜಿ. ಪದ್ಮಶ್ರೀ ಅವರಿಗೆ ಅಂತರಬೆಳೆಗಾಗಿ ಮೀಸಲಿದ್ದ ಅತ್ಯುತ್ತಮ ಕಾಫಿ ತೋಟ ಪ್ರಶಸ್ತಿ ಪ್ರಧಾನ ಮಾಡಲಾಯಿತು.

ಕಾಫಿ ಬೆಳೆಗಾರ ಪ್ರದೇಶಗಳಿಗೆ ಸೇರಿದ ಸಾವಿರಾರು ಕೃಷಿಕರು ಸಭಾಂಗಣದಲ್ಲಿ ಕಕ್ಕಿದಿದ್ದರು.