ವೀರಾಜಪೇಟೆ, ಡಿ. ೧೨: ರಕ್ತದಾನ ಮಾಡುವುದರಿಂದ ಮತ್ತೊಂದು ಜೀವ ಉಳಿಸಬಹುದು ಎಂದು ನಗರ ವರ್ತಕರ ಸಂಘದ ಅಧ್ಯಕ್ಷ, ಜೆಡಿಎಸ್ ಪಕ್ಷದ ತಾಲೂಕು ಅಧ್ಯಕ್ಷ ಪಿ.ಎ. ಮಂಜುನಾಥ್ ಹೇಳಿದರು.
ಚಾಲೆಂಜಿAಗ್ ಸ್ಟಾರ್ ದರ್ಶನ್ ಅಭಿಮಾನಿ ಬಳಗದ ವತಿಯಿಂದ ಸಾಲುಮರದ ತಿಮ್ಮಕ್ಕ ಅವರ ಸ್ಮರಾಣಾರ್ಥ ವೀರಾಜಪೇಟೆಯ ಪುರಸಭೆ ಸಭಾಂಗಣದಲ್ಲಿ ನಡೆದ ರಕ್ತದಾನ ಶಿಬಿರವನ್ನು ಉದ್ದೇಶಿಸಿ ಮಾತನಾಡಿದ ಮಂಜುನಾಥ್, ಸಾಲುಮರದ ತಿಮ್ಮಕ್ಕ ಅವರು ಮರ-ಗಿಡಗಳನ್ನು ತನ್ನ ಮಕ್ಕಳಂತೆ ಸಲುಹಿದ ಮಹಾತಾಯಿ. ಅವರ ಸ್ಮರಾಣಾರ್ಥ ರಕ್ತದಾನ ಶಿಬಿರ ಆಯೋಜನೆ ಮಾಡಿ, ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಬಳಗದ ಕಾರ್ಯ ಶ್ಲಾಘನೀಯ.
ಅಪಘಾತ ಮತ್ತು ಇನ್ನಿತರ ಗಂಭೀರ ಸ್ವರೂಪದ ಕಾಯಿಲೆಗಳಿಗೆ ತುತ್ತಾಗಿ ರೋಗಿಗಳಿಗೆ ಚಿಕಿತ್ಸೆ ನೀಡುವ ಸಂದರ್ಭದಲ್ಲಿ ರಕ್ತದ ಅವಶ್ಯಕತೆ ಹೆಚ್ಚಿಗೆ ಇರುತ್ತದೆ.
ಮಾನವ ರಕ್ತಕ್ಕೆ ಪರ್ಯಾಯವಾಗಿ ಇನ್ನಿತರ ಅಂಶ ಇಲ್ಲದಿರುವುದರಿಂದ ರಕ್ತಕ್ಕೆ ರಕ್ತವೇ ಪರ್ಯಾಯವಾಗಿದೆ. ದಾನಿಗಳಿಂದ ಸಂಗ್ರಹಿಸಿದ ರಕ್ತವನ್ನು ಅವಶ್ಯಕ ರೋಗಿಗಳಿಗೆ ನೀಡಲಾಗುತ್ತದೆ. ಈ ನಿಟ್ಟಿನಲ್ಲಿ ಆಯೋಜಿಸಿರುವ ರಕ್ತದಾನ ಶಿಬಿರ ಸಮಾಜಕ್ಕೆ ಮಾದರಿ ಎಂದು ಹೇಳಿದರು.
ಸ್ಥಳೀಯರಾದ ಡಿಂಪಲ್ ನಾಚಪ್ಪ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿ, ಪ್ರತಿಯೊಬ್ಬರೂ ಸಾಮಾಜಿಕ ಕಳಕಳಿ ಮೈಗೂಡಿಸಿಕೊಳ್ಳಬೇಕೆಂದರು.
ವರ್ತಕರ ಸಂಘದ ಖಜಾಂಚಿ ಆರ್. ಸುರೇಶ್ ಮಾತನಾಡಿದರು. ಚಾಲೆಂಜಿAಗ್ ಸ್ಟಾರ್ ದರ್ಶನ್ ಅಭಿಮಾನಿ ಬಳಗದ ಅಧ್ಯಕ್ಷ ಯೋಗೇಶ್ ನಾಯ್ಡು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಾರ್ವಜನಿಕರು ರಕ್ತದಾನ ಶಿಬಿರದಲ್ಲಿ ಭಾಗವಹಿಸಿ ರಕ್ತದಾನ ಮಾಡಿದರು. ಈ ಸಂದರ್ಭದಲ್ಲಿ ಜನಾರ್ಧನ, ಬಳಗದ ಸದಸ್ಯರುಗಳು, ಮಡಿಕೇರಿ ರಕ್ತನಿಧಿ ಕೇಂದ್ರದ ಕೌನ್ಸಿಲರ್ ಕಾರ್ತಿಕ್, ವೈದ್ಯರುಗಳಾದ ದೀಪಕ್, ಡೆನ್ನಿಸ್, ತಾಂತ್ರಿಕ ಮೇಲ್ವಿಚಾರಕಿ ಪೂರ್ಣಿಮ, ಲ್ಯಾಬ್ ಟೆಕ್ನಿಷಿಯನ್ ರಿಕ್ಷಿತ್, ಡಯನಾ, ಕವಿತಾ ಹಾಗೂ ಸಾರ್ವಜನಿಕರು ಹಾಜರಿದ್ದರು.