ಸಿದ್ದಾಪುರ, ಡಿ. ೧೧: ಬಿಟ್ಟಂಗಾಲ ಸಮೀಪದ ಪೆಗ್ಗರಿಕಾಡು ಎಂಬಲ್ಲಿ ಬ್ಯಾಗ್‌ನಲ್ಲಿ ನವಜಾತ ಶಿಶು ಪತ್ತೆಯಾಗಿದೆ.

ತಾ. ೧೦ ರಂದು ಬೆಳಿಗ್ಗೆ ೧೧.೩೦ರ ಸುಮಾರಿಗೆ ಸುಂದರಿ ಎಂಬವರ ಮನೆಯ ಮುಂಭಾಗದಲ್ಲಿ ಮಗು ಅಳುವ ಶಬ್ದ ಕೇಳಿ ಬಂದಿದೆ. ಅಂಗಳದಲ್ಲಿದ್ದ ಸೋಫಾದ ಕೆಳಗೆ ನೋಡಿದಾಗ ಬ್ಯಾಗ್‌ವೊಂದರಲ್ಲಿ ಮಗು ಇರುವುದು ಬೆಳಕಿಗೆ ಬಂದಿದೆ. ವಿಷಯವನ್ನು ಅಂಗನವಾಡಿ ಕಾರ್ಯಕರ್ತೆ ಐ.ಎಸ್. ಪೂವಮ್ಮ ಅವರಿಗೆ ತಿಳಿಸಿದ್ದು, ಅವರು ತೆರಳಿ ಮಗುವನ್ನು ರಕ್ಷಿಸಿ ಆಶಾ ಕಾರ್ಯಕರ್ತೆ ಗೌತಮಿ ಅವರೊಂದಿಗೆ ಆ್ಯಂಬ್ಯುಲೆನ್ಸ್ನಲ್ಲಿ ಮಡಿಕೇರಿ ಜಿಲ್ಲಾಸ್ಪತ್ರೆಯಲ್ಲಿ ದಾಖಲು ಮಾಡಿ ಮಕ್ಕಳ ಕಲ್ಯಾಣ ಸಮಿತಿಗೆ ಒಪ್ಪಿಸಿದ್ದಾರೆ. ಪೂವಮ್ಮ ನೀಡಿರುವ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡಿರುವ ವೀರಾಜಪೇಟೆ ಗ್ರಾಮಾಂತರ ಪೊಲೀಸರು ಪೋಷಕರ ಪತ್ತೆಗೆ ಕ್ರಮಕೈಗೊಂಡಿದ್ದಾರೆ.